ಕತೆಯೊಂದು ಶುರುವಾಗಿದೆ: ಹೊಸದಾದ ಪ್ರೀತಿ, ಪ್ರೇಮ, ಪ್ರಣಯ

Update: 2018-08-04 18:46 GMT
Editor : ಶಶಿ

ಚಿತ್ರದ ಹೆಸರು ಕಥೆಯೊಂದು ಶುರುವಾಗಿದೆ. ಆದರೆ ಚಿತ್ರ ನೋಡಿದವರಿಗೆ ಕತೆ ಮಾತ್ರವಲ್ಲ ಕತೆ ಹೇಳುವಲ್ಲಿನ ರೀತಿಯೂ ಹೊಸತಾಗಿ ಶುರುವಾಗಿದೆ ಅನಿಸದಿರದು. ಅದಕ್ಕೆ ಕಾರಣ ಖಂಡಿತವಾಗಿ ಚಿತ್ರಕ್ಕೆ ನೀಡಿರುವಂಥ ಟ್ರೀಟ್‌ಮೆಂಟ್ ಎಂದು ಹೇಳಲೇಬೇಕು.

ವಿದೇಶದಿಂದ ಮರಳಿ ಊರಲ್ಲೇ ನೆಲೆಕಾಣಲು ಯತ್ನಿಸುವ ಯುವಕ ತರುಣ್. ಹಾಗೆ ನೆಲೆಯೂರಲು ರೆಸಾರ್ಟ್ ಒಂದನ್ನು ನಡೆಸುತ್ತಿರುತ್ತಾನೆ. ಆದರೆ ಅದು ನಷ್ಟದಂಚಿಗೆ ತಲುಪಿರುತ್ತದೆ. ಈ ಸಮಯದಲ್ಲಿ ಮೈಸೂರಲ್ಲಿ ಹುಟ್ಟಿ ಉತ್ತರ ಭಾರತದಲ್ಲಿ ಬೆಳೆದಿರುವಂಥ ತಾನ್ಯಾ ಎಂಬಾಕೆ ಅಲ್ಲಿಗೆ ಅತಿಥಿಯಾಗಿ ಬರುತ್ತಾಳೆ. ಆಕೆಗೆ ಅತಿಥೇಯನಾಗಿ ತರುಣ್ ನೀಡುವ ಸೇವೆ ಹೇಗೆ ಪ್ರೇಮವಾಗುತ್ತದೆ ಎನ್ನುವುದು ಚಿತ್ರದ ಒಂದೆಳೆಯ ಕತೆ. ಆದರೆ ಚಿತ್ರದಲ್ಲಿ ಕತೆಯನ್ನು ದಾಟಿದ ಭಾವಗಳಿವೆ. ತರುಣ್ ಪಾತ್ರದಲ್ಲಿ ದಿಗಂತ್ ತಮ್ಮ ಈ ಹಿಂದಿನ ಎಲ್ಲ ಇಮೇಜ್‌ಗಳನ್ನು ಬಿಟ್ಟು ನಟಿಸಿದ್ದಾರೆ.

ಯೋಗರಾಜ್ ಭಟ್ಟರ ಚಿತ್ರಗಳಲ್ಲಿನ ಕೆನ್ನೆ ತುಂಬ ನಗುವಿನೊಂದಿಗೆ ನಳನಳಿಸಿ ಬಾಯ್ತುಂಬ ಮಾತನಾಡುವ ದಿಗಂತ್ ಇಲ್ಲಿಲ್ಲ. ತಾಯ್ನೆಡಿನ ವಾಸದ ಪ್ರೇಮದಿಂದ ವಿದೇಶದಲ್ಲಿ ಪ್ರೀತಿಸಿದ ಹುಡುಗಿಯನ್ನು ಬಿಟ್ಟು ಮರಳಿದಂಥ ಮೆಚ್ಯೂರ್ಡ್ ಯುವಕನ ಪಾತ್ರಕ್ಕೆ ದಿಗಂತ್ ನ್ಯಾಯ ಸಲ್ಲಿಸಿದ್ದಾರೆ. ನಾಯಕಿಯಾಗಿ ಕನ್ನಡಕ್ಕೆ ಹೊಸದಾಗಿ ಪರಿಚಿತಳಾಗಿರುವ ಪೂಜಾ ದೇವಾರಿಯಾ ತಾನ್ಯಾ ಪಾತ್ರಕ್ಕೆ ಜೀವಾಳವಾಗಿದ್ದಾರೆ. ಹೆಚ್ಚು ಕಡಿಮೆ ಪೂರ್ತಿ ಚಿತ್ರ ಒಂದೇ ಜಾಗದಲ್ಲಿ ನಡೆಯುತ್ತದೆ. ಆದರೆ ಆ ಜಾಗವನ್ನು ಕೂಡ ಲಾಂಗ್‌ಶಾಟ್‌ಗಳ ಮೂಲಕ ತೋರಿಸುವ ಗೋಜಿಗೆ ಹೋಗಿಲ್ಲ. ಕಾರಿನೊಳಗೆ ಕ್ಲೋಸಪ್‌ನಲ್ಲಿ ಸಾಗುವ ಸಂಭಾಷಣೆ, ರೆಸಾರ್ಟ್‌ನಲ್ಲಿ ನಡೆಯುವ ಘಟನೆಗಳು ನೈಜತೆಗೆ ಹೆಚ್ಚು ಸಮೀಪದಲ್ಲಿವೆ. ಸಂಭಾಷಣೆಗಳು ಅಷ್ಟೇ; ಸಹಜತೆಯಲ್ಲಿದ್ದುಕೊಂಡೇ ಹಾಸ್ಯರಸವನ್ನು ನೀಡುತ್ತವೆ. ಹಾಸ್ಯಕ್ಕಾಗಿ ಪಾತ್ರಗಳು ಅತಿಥಿಗಳಂತೆ ಬಂದು ನುಸುಳುವುದಿಲ್ಲ. ಬದಲಾಗಿ ನಾಯಕನ ಮಾಲಕತ್ವದ ರೆಸಾರ್ಟ್‌ನಲ್ಲಿರುವ ಡ್ರೈವರ್ ಪೆಡ್ರೋ ಮೂಲಕವೇ ಹಾಸ್ಯದ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಪೆಡ್ರೋ ಪಾತ್ರದಲ್ಲಿ ಅಶ್ವಿನ್‌ರಾವ್ ಪಲ್ಲಕ್ಕಿ ಗಮನ ಸೆಳೆದರೆ, ಪೆಡ್ರೋ ಪಾಲಿನ ಪ್ರೇಯಸಿ ರಿಸೆಪ್ಷನಿಸ್ಟ್ ಸ್ವರ್ಣ ಪಾತ್ರದಲ್ಲಿ ಶ್ರೇಯಾ ಅಂಚನ್ ಕಾಣಿಸಿಕೊಂಡಿದ್ದಾರೆ.

ಈ ಪಾತ್ರಗಳ ನಡುವೆ ಪರಿಪಕ್ವ ಪ್ರೀತಿ ವ್ಯಕ್ತಪಡಿಸುವ ಒಂದು ಹಿರಿಯ ಜೋಡಿಯೂ ಇದೆ. ‘ಮಫ್ತಿ’ ಖ್ಯಾತಿಯ ಬಾಬು ಹಿರಣ್ಣಯ್ಯ ಮತ್ತು ‘ಆಪರೇಶನ್ ಅಲಮೇಲಮ್ಮ’ ಖ್ಯಾತಿಯ ಅರುಣಾ ಬಾಲರಾಜ್ ಜೋಡಿ ಪಾತ್ರಗಳಾಗಿ ನಟಿಸಿದ್ದಾರೆ. ಅಡುಗೆಯ ಕುಟ್ಟಿಯಾಗಿ ಪ್ರಕಾಶ್ ಕೆ. ತೂಮಿನಾಡು ತಮ್ಮ ಮಂಗಳೂರು ಕರಾವಳಿಯ ಕನ್ನಡದಿಂದ ಗುರುತಿಸಲ್ಪಡುತ್ತಾರೆ. ಶ್ರೀರಾಜ್ ರವೀಂದ್ರನ್ ಕ್ಯಾಮರಾ ವರ್ಕ್ ಹಾಗೂ ಸಚಿನ್ ವಾರಿಯರ್ ಹಿನ್ನೆಲೆ ಸಂಗೀತ ಚಿತ್ರಕ್ಕೆ ಹೊಸದೊಂದು ಆಯಾಮವನ್ನೇ ನೀಡಿದೆ.

ಚಿತ್ರದ ವೇಗ ಸಾಧಾರಣ ಪ್ರೇಕ್ಷಕರಿಗೆ ಬೋರ್ ಹೊಡೆಸಿದರೆ ಅಚ್ಚರಿಯಿಲ್ಲ. ಆದರೆ ಸಿನಿ ರಸಾಸ್ವಾದಕರಿಗೆ ಚಿತ್ರ ಅಪ್ಯಾಯಮಾನ ಎನಿಸುತ್ತದೆ. ತಾಂತ್ರಿಕವಾಗಿ ಗಮನಿಸಿದರೆ ಚಿತ್ರ ಹಾಲಿವುಡ್ ಶೈಲಿಯ ಸಿನೆಮಾದಂತೆ ಅನಿಸುತ್ತದೆ. ಈ ಹಿಂದೆ ‘ಪ್ರೀತಿ-ಪ್ರೇಮ- ಪ್ರಣಯ’ ಎಂಬ ಚಿತ್ರದ ಮೂಲಕ ಕವಿತಾ ಲಂಕೇಶ್ ಮೂರು ಜನರೇಶನ್‌ಗಳ ಪ್ರೀತಿಯನ್ನು ತೋರಿಸಿದ್ದರು. ಪ್ರಸ್ತುತ ಜಾಗತೀಕರಣದ ಭರಾಟೆಯಲ್ಲಿ ಬದಲಾಗುತ್ತಿರುವ ಸಂದರ್ಭಕ್ಕೆ ತಕ್ಕ ಹಾಗೆ, ಬದಲಾಗುತ್ತಿರುವ ಕನ್ನಡ ಚಿತ್ರದ ಕುರುಹಾಗಿ ‘ಕಥೆಯೊಂದು ಶುರುವಾಗಿದೆ’ ಮೂಡಿ ಬಂದಿದೆ.

ತಾರಾಗಣ: ದಿಗಂತ್, ಪೂಜಾ ದೇವಾರಿಯಾ ನಿರ್ದೇಶನ: ಸೆನ್ನಾ ಹೆಗ್ಡೆ
ನಿರ್ಮಾಣ: ಪರಮ್ವ ಸ್ಟುಡಿಯೋಸ್, ಪುಷ್ಕರ್ ಫಿಲಮ್ಸ್

Writer - ಶಶಿ

contributor

Editor - ಶಶಿ

contributor

Similar News