ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಕೇರಳ ಸರ್ಕಾರ ನೆರವು

Update: 2018-08-05 04:14 GMT

ತಿರುವನಂತಪುರ, ಆ. 5: ತೃತೀಯ ಲಿಂಗಿಗಳು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದರೆ, ಚಿಕಿತ್ಸೆಯ ವೆಚ್ಚ ಭರಿಸುವ ನಿರ್ಧಾರವನ್ನು ಕೇರಳ ಸರ್ಕಾರ ಕೈಗೊಂಡಿದೆ.

ಲಿಂಗಪರಿವರ್ತನೆಗೆ ಒಳಗಾಗುವ ತೃತೀಯ ಲಿಂಗಿಗಳಿಗೆ 2 ಲಕ್ಷ ರೂಪಾಯಿ ಆಸ್ಪತ್ರೆ ವೆಚ್ಚವನ್ನು ಭರಿಸಲಾಗುವುದು. ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾದವರು ಕೂಡಾ ನೆರವಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಐತಿಹಾಸಿಕ ನಿರ್ಧಾರವನ್ನು ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಕಟಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, "ಪುರುಷ ಅಥವಾ ಮಹಿಳೆಯಾಗಿ ಜೀವಿಸಲು ಬಯಸುವ ತೃತೀಯ ಲಿಂಗಿಗಳಿಗೆ ಹಣಕಾಸು ಕೊರತೆ ಅಡ್ಡಿಯಾಗಬಾರದು ಎಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ತೃತೀಯ ಲಿಂಗಿಗಳ ಶಿಕ್ಷಣ ಮತ್ತು ಉದ್ಯೋಗದ ಹಕ್ಕನ್ನು ಖಾತ್ರಿಪಡಿಸಿರುವ ಸರ್ಕಾರ ಇದೀಗ ಲಿಂಗ ಪರಿವರ್ತನೆ ಚಿಕಿತ್ಸೆಯ ವೆಚ್ಚವನ್ನೂ ಭರಿಸಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ.

2015ರಲ್ಲಿ ತೃತೀಯ ಲಿಂಗಿಗಳ ನೀತಿಯನ್ನು ಘೋಷಿಸಿದ ಕೇರಳ, ಇಂಥ ನೀತಿ ಜಾರಿಗೆ ತಂದ ಮೊದಲ ರಾಜ್ಯ ಎನಿಸಿಕೊಂಡಿತ್ತು. ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಎರಡು ಸೀಟುಗಳನ್ನು ಇವರಿಗೆ ಮೀಸಲಿಡಲಾಗಿದೆ. ಸಾಮಾಜಿಕ ನ್ಯಾಯ ಇಲಾಖೆ ಇತ್ತೀಚೆಗೆ ತೃತೀಯ ಲಿಂಗಿಗಳಿಗಾಗಿ ಉದ್ಯೋಗ ಯೋಜನೆಯನ್ನು ಜಾರಿಗೆ ತಂದಿದೆ. ಕೊಚ್ಚಿನ್ ಮೆಟ್ರೊ ಕೂಡಾ ಹಲವು ಹುದ್ದೆಗಳಿಗೆ ಇವರನ್ನು ನೇಮಕ ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News