ವಿಲ್ ಅಥವಾ ಉಯಿಲನ್ನು ಆನ್‌ಲೈನ್‌ನಲ್ಲಿ ಸೃಷ್ಟಿಸುವುದು ಹೇಗೆ....?

Update: 2018-08-05 15:32 GMT

ಮಾನವನ ಬದುಕು ಅನಿಶ್ಚಿತತೆಗಳಿಂದ ತುಂಬಿದೆ. ಹುಟ್ಟಿದವನು ಒಂದಲ್ಲ ಒಂದು ದಿನ ಸಾಯಲೇಬೇಕು. ಸಾವು ಅನಿರೀಕ್ಷಿತ ಅನಪೇಕ್ಷಿತ ಅತಿಥಿ,ಅದು ಯಾವಾಗ ಬೇಕಾದರೂ ಬಂದು ತನ್ನ ಬಲಿಯನ್ನು ಪಡೆಯಬಹುದು. ಆದರೂ ಎಲ್ಲರೂ ತಾವು ಇಷ್ಟು ಬೇಗ ಸಾಯುವುದಿಲ್ಲ ಎಂದೇ ಭಾವಿಸಿರುತ್ತಾರೆ. ಹೀಗಾಗಿಯೇ ಆಸ್ತಿಪಾಸ್ತಿ ಇದ್ದವರೂ ವಿಲ್ ಅಥವಾ ಉಯಿಲು ಬರೆದಿಡುವ ಗೋಜಿಗೆ ಹೋಗುವುದಿಲ್ಲ.

ಆಸ್ತಿಗೆ ಒಬ್ಬನೇ ಉತ್ತರಾಧಿಕಾರಿಯಿದ್ದರೆ ಸಮಸ್ಯೆಯಿಲ್ಲ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರಾಧಿಕಾರಿಗಳಿದ್ದಾಗ ಯಾವುದೇ ಉಯಿಲು ಬರೆದಿಡದೆ ನಿರ್ಗಮಿಸಿದರೆ ಅದು ಹಲವಾರು ಸಮಸ್ಯೆಗಳನ್ನು ಸೃಷ್ಟಿಸಬಹುದು. ಹೀಗಾಗಿ ವ್ಯಕ್ತಿ ತಾನು ಸತ್ತ ನಂತರ ತನ್ನ ಆಸ್ತಿಯಲ್ಲಿ ಯಾರಿಗೆ ಎಷ್ಟು ಸಿಗಬೇಕು ಎನ್ನುವುದನ್ನು ಉಯಿಲಿನ ಮೂಲಕ ಮೊದಲೇ ನಿರ್ಧರಿಸಿಟ್ಟರೆ ಸಮಸ್ಯೆಗಳು ಎದುರಾಗುವುದಿಲ್ಲ ಮತ್ತು ಆತ ಸತ್ತ ನಂತರವೂ ಕುಟುಂಬ ಸದಸ್ಯರ ನಡುವಿನ ಅನ್ಯೋನ್ಯತೆಗೆ ಬಾಧೆಯುಂಟಾಗುವುದಿಲ್ಲ.

ಒಮ್ಮೆ ಉಯಿಲು ಬರೆದಿಟ್ಟರೆ ಅದೇ ಶಾಶ್ವತವಲ್ಲ. ಅದನ್ನು ಎಷ್ಟು ಸಲ ಬೇಕಾದರೂ ಬದಲಿಸಬಹುದು. ಸಣ್ಣಪುಟ್ಟ ತಿದ್ದುಪಡಿಗಳಿದ್ದರೆ ಉಯಿಲಿಗೆ ಅನುಬಂಧವನ್ನು ಸೇರಿಸಬಹುದು,ಆದರೆ ಫಲಾನುಭವಿಗಳನ್ನು ಬದಲಿಸುವಂತಹ ಪ್ರಮುಖ ಬದಲಾವಣೆಗಳನ್ನು ಮಾಡಲು ಉಯಿಲನ್ನು ಹೊಸದಾಗಿ ಬರೆಯಬೇಕಾಗುತ್ತದೆ.

ಕೈಯಿಂದ ಬರೆದ ಉಯಿಲು ಕಾನೂನಿನಡಿ ಸಿಂಧುವಾಗುತ್ತದೆ. ಆದರೂ ಅದು ಮುದ್ರಿತ ರೂಪದಲ್ಲಿದ್ದರೆ ಒಳ್ಳೆಯದು.

ಉಯಿಲು ಬರೆದ ನಂತರ ಆ ಬಗ್ಗೆ ನಿಮ್ಮ ಪ್ರೀತಿಪಾತ್ರರಿಗೆ ತಿಳಿಸಬೇಕು,ಆದರೆ ಅದರಲ್ಲಿಯ ವಿಷಯವನ್ನು ತಿಳಿಸುವ ಅಗತ್ಯವಿಲ್ಲ.

ಈಗ ಉಯಿಲನ್ನು ಆನ್‌ಲೈನ್ ಮೂಲಕವೂ ಸಿದ್ಧಪಡಿಸಬಹುದಾಗಿದೆ. ಆದರೆ ಜಂಟಿ ಉಯಿಲನ್ನು ಈ ವಿಧಾನದಲ್ಲಿ ಮಾಡಲು ಸಾಧ್ಯವಿಲ್ಲ.

ಆನ್‌ಲೈನ್‌ನಲ್ಲಿ ಉಯಿಲು ಸೃಷ್ಟಿಸಲು ನೆರವಾಗುವ ಹಲವಾರು ಕಾನೂನು ಸೇವಾ ಸಂಸ್ಥೆಗಳಿವೆ. ಆದರೆ ಅವುಗಳ ಸೇವೆಯನ್ನು ಪಡೆದುಕೊಳ್ಳುವ ಮೊದಲು ಅವುಗಳ ಅಸಲಿಯತ್ತನ್ನು ದೃಢಪಡಿಸಿಕೊಳ್ಳುವುದು ತುಂಬ ಮುಖ್ಯವಾಗಿದೆ. ಈ ಕೆಲಸವನ್ನು ಮಾಡಿದ ಬಳಿಕ ವಿಲ್ ಸೇವೆಯನ್ನು ಒದಗಿಸುವ ಇಂತಹ ಸಂಸ್ಥೆಯ ಜಾಲತಾಣದಲ್ಲಿ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್‌ನೊಂದಿಗೆ ನೋಂದಾಯಿಸಿಕೊಳ್ಳಬೇಕು. ಬಳಿಕ ಉಯಿಲು ಮಾಡುವ ವ್ಯಕ್ತಿಯ ವಿವರಗಳು,ಹೊಂದಿರುವ ಆಸ್ತಿಗಳು ಮತ್ತು ಫಲಾನುಭವಿಗಳ ವಿವರಗಳನ್ನು ಒದಗಿಸಬೇಕು. ಜಾಲತಾಣವು ತೋರಿಸುವ ಫಾರ್ಮ್ ಅನ್ನು ತುಂಬಿ ಸಲ್ಲಿಸುವ ಮೊದಲು ಅದನ್ನು ಪುನರ್‌ಪರಿಶೀಲಿಸುವುದು ಅಗತ್ಯ ಮತ್ತು ವ್ಯಕ್ತಿಯ ನಿಧನದ ಬಳಿಕ ಉಯಿಲನ್ನು ಕಾರ್ಯಗತಗೊಳಿಸುವ ನಂಬಿಕಸ್ಥ ಎಕ್ಸಿಕ್ಯೂಟರ್ ಹೆಸರನ್ನೂ ನಮೂದಿಬೇಕು. ಸೇವಾ ಸಂಸ್ಥೆಯ ಸೇವೆಗಳಿಗೆ ಶುಲ್ಕವನ್ನು ಆನ್‌ಲೈನ್ ಅಥವಾ ಆಫ್‌ಲೈನ್ (ಅವಕಾಶವಿದ್ದರೆ) ಮೂಲಕ ಪಾವತಿಸಬೇಕು.

ಸಂಸ್ಥೆಯ ವಕೀಲರು ನೀವು ಸಲ್ಲಿಸಿರುವ ಫಾರ್ಮನಲ್ಲಿಯ ಮಾಹಿತಿಗಳನ್ನು ಪರಿಶೀಲಿಸಿ ಮೊದಲು ಕರಡು ಉಯಿಲನ್ನು ಕಳುಹಿಸುತ್ತಾರೆ. ನೀವು ಅದನ್ನು ಪರಿಶೀಲಿಸಿ,ಎಲ್ಲ ನಿಮ್ಮ ಸೂಚನೆಯಂತೆಯೇ ಬರೆಯಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬಹುದು. ಅಗತ್ಯವಿದ್ದರೆ ಅದರಲ್ಲ್ಲಿ ಬದಲಾವಣೆಗಳನ್ನು ಮಾಡಬಹುದು.

ಕರಡು ಉಯಿಲಿನಲ್ಲಿ ಎರಡಕ್ಕಿಂತ ಹೆಚ್ಚಿನ ಬದಲಾವಣೆಗಳಿದ್ದರೆ ಅದಕ್ಕಾಗಿ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಬಹುದು. ಕರಡು ಅಂತಿಮಗೊಂಡ ಬಳಿಕ ಸೇವಾ ಸಂಸ್ಥೆಯು ಉಯಿಲನ್ನು ಅದನ್ನು ಮಾಡಿಸಿದ ವ್ಯಕ್ತಿಗೆ ಕಳುಹಿಸುತ್ತದೆ.

ಸಾಕ್ಷಿಗಳ ಉಪಸ್ಥಿತಿಯಲ್ಲಿ ಉಯಿಲಿಗೆ ಸಹಿ ಹಾಕಬೇಕಾಗುತ್ತದೆ. ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಉಯಿಲನ್ನು ನೋಂದಣಿ ಮಾಡಿಸಿದರೆ ಅದು ಹೆಚ್ಚು ಅಧಿಕೃತವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News