ನ್ಯಾಟೊ ಗಸ್ತುತಂಡದ ಮೇಲೆರಗಿದ ತಾಲಿಬಾನ್ ಆತ್ಮಹತ್ಯಾ ಬಾಂಬರ್ ಮೂವರು ಬಲಿ

Update: 2018-08-05 16:48 GMT

ಕಾಬೂಲ್, ಆ.5: ಪೂರ್ವ ಅಪಘಾನಿಸ್ತಾನದಲ್ಲಿ ನ್ಯಾಟೊ ಕಾಲ್ನಡಿಗೆಯ ಗಸ್ತುಪಡೆಯ ಮೇಲೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಗಸ್ತುಪಡೆಯ ಮೂವರು ಬಲಿಯಾಗಿದ್ದಾರೆ. ತಾಲಿಬಾನ್ ಈ ಘಟನೆಯ ಹೊಣೆ ಹೊತ್ತುಕೊಂಡಿದೆ ಎಂದು ವರದಿಗಳು ತಿಳಿಸಿವೆ.

 ಘಟನೆಯಲ್ಲಿ ನೇಟೊ ರೆಸೊಲ್ಯೂಟ್ ಸಪೋರ್ಟ್ ಸರ್ವಿಸ್ ತಂಡದ ಮೂವರು (ಒಬ್ಬ ಅಮೆರಿಕನ್, ಇಬ್ಬರು ಅಪಘಾನಿಸ್ತಾನೀಯರು) ಯೋಧರು ಬಲಿಯಾಗಿದ್ದಾರೆ. “ಇವರು ನಿರ್ವಹಿಸಿದ ಕರ್ತವ್ಯ ಮತ್ತು ಸೇವೆ ನಮ್ಮ ಮನದಲ್ಲಿ ಹಾಗೂ ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಾಗಿರುತ್ತದೆ ಮತ್ತು ಇದು ನಮ್ಮ ಸಂಕಲ್ಪವನ್ನು ಮತ್ತಷ್ಟು ದೃಢಗೊಳಿಸುತ್ತದೆ” ಎಂದು ನ್ಯಾಟೊ ರೆಸೊಲ್ಯೂಟ್ ಸಪೋರ್ಟ್ ಮತ್ತು ಅಪಘಾನಿಸ್ತಾನದಲ್ಲಿರುವ ಅಮೆರಿಕ ಸೇನಾಪಡೆಯ ಕಮಾಂಡರ್ ಜ ಜಾನ್ ನಿಕೋಲ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪರ್ವಾನ್ ಪ್ರಾಂತದ ರಾಜಧಾನಿ ಖಲಝೈ ಪ್ರದೇಶದ ಚರಿಕಾರ್ ಎಂಬಲ್ಲಿ ಬಾಂಬ್ ದಾಳಿ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ದೈನಂದಿನ ಕಾಲ್ನಡಿಗೆಯ ಗಸ್ತುಕಾರ್ಯದಲ್ಲಿ ನಿರತರಾಗಿರುವ ವಿದೇಶಿ ಯೋಧರನ್ನು ಗುರಿಯಾಗಿಸಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಲಾಗಿದೆ ಎಂದು ಪರ್ವಾನ್ ಪ್ರಾಂತದ ವಕ್ತಾರೆ ವಹೀದಾ ಶಾಕರ್ ತಿಳಿಸಿದ್ದಾರೆ. ತಾಲಿಬಾನ್ ಈ ಘಟನೆಯ ಹೊಣೆ ಹೊತ್ತುಕೊಂಡಿದೆ. ಯೋಜಿತ ಬಾಂಬ್‌ ದಾಳಿಯಲ್ಲಿ ಎಂಟು ಅಮೆರಿಕನ್ ಆಕ್ರಮಣಕಾರರನ್ನು ನಾವು ಕೊಂದು ಹಾಕಿದ್ದೇವೆ. ಆಕ್ರಮಣಕಾರರು ತಮ್ಮ ಪಡೆಗಳನ್ನು ರಕ್ಷಿಸಲು ಮೂರು ಹೆಲಿಕಾಪ್ಟರ್ ಆ್ಯಂಬುಲೆನ್ಸ್‌ಗಳನ್ನು ತರಬೇಕಾಯಿತು ಎಂದು ತಾಲಿಬಾನ್ ಸಂಘಟನೆಯ ವಕ್ತಾರ ಝಬಿಹುಲ್ಲಾ ಮುಜಾಹಿದ್ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News