×
Ad

ಬಾಂಗ್ಲಾ: ಅಮೆರಿಕ ರಾಯಭಾರಿಯ ವಾಹನಪಡೆಯ ಮೇಲೆ ದಾಳಿ

Update: 2018-08-05 22:21 IST

ಢಾಕ, ಆ.5: ಬಾಂಗ್ಲಾದೇಶದಲ್ಲಿ ಅಮೆರಿಕ ರಾಯಭಾರಿ ಮಾರ್ಸಿಯಾ ಬೆರ್ನಿಕಾಟ್ ಅವರ ವಾಹನಪಡೆಯ ಮೇಲೆ ಢಾಕಾದ ಮುಹಮ್ಮದ್‌ಪುರ ಎಂಬಲ್ಲಿ ಶನಿವಾರ ತಡರಾತ್ರಿ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಮಾರ್ಸಿಯಾ ಗಾಯಗಳಿಲ್ಲದೆ ಪಾರಾದರೂ ಅವರ ವಾಹನದ ಚಾಲಕ ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.

ಸರಕಾರೇತರ ಸಂಸ್ಥೆ (ಎನ್‌ಜಿಒ) ‘ದಿ ಹಂಗರ್ ಪ್ರೊಜೆಕ್ಟ್’ ಏರ್ಪಡಿಸಿದ್ದ ಬೀಳ್ಕೊಡುಗೆ ಔತಣಕೂಟದಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದಾಗ ಈ ದಾಳಿ ನಡೆದಿದೆ. ಎನ್‌ಜಿಒ ಸಂಸ್ಥೆಯ ಉಪಾಧ್ಯಕ್ಷ ಬದಿಯುಲ್ ಆಲಮ್ ಮಜೂಮ್ದಾರ್ ಹಾಗೂ ಸಂಸ್ಥೆಯ ಬಾಂಗ್ಲಾದೇಶ ಘಟಕದ ನಿರ್ದೇಶಕರೂ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಬಾಂಗ್ಲಾದೇಶದ ಮಾಜಿ ವಿದೇಶ ಸಚಿವ ಕಮಲ್ ಹೊಸೈನ್ ಕೂಡಾ ಇದರಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಢಾಕಾದಲ್ಲಿ ಸಂಚಾರ ವ್ಯವಸ್ಥೆಯ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಕಳೆದ ವಾರದಿಂದ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಡುತ್ತಿದ್ದಾರೆ. ಶನಿವಾರ ಅಮೆರಿಕ ರಾಯಭಾರಿಯ ವಾಹನಪಡೆಯ ಮೇಲೆ ನಡೆದ ದಾಳಿಗೂ ಪ್ರತಿಭಟನೆಗೂ ಸಂಬಂಧವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News