ಹಿರೋಶಿಮಾ-ನಾಗಸಾಕಿ: ಮರೆಯಲಾಗದ ಕ್ರೌರ್ಯ

Update: 2018-08-05 18:30 GMT

ಇಡೀ ಜಗತ್ತನ್ನು ತಮ್ಮ ಕಪಿಮುಷ್ಟಿಯ ಹಿಡಿತಕ್ಕೆ ಪಡೆಯಬೇಕು, ಲೂಟಿ ಹೊಡೆಯಬೇಕೆಂಬ ಸಾಮ್ರಾಜ್ಯಶಾಹಿ ಮನೋಭೂಮಿಕೆಯ ಕಾರಣಕ್ಕಾಗಿ ನಡೆದ ಎರಡು ಜಾಗತಿಕ ಮಹಾಯುದ್ಧಗಳು ಸೃಷ್ಟಿಸಿದ ಹಿಂಸೆ, ಸಾವು ನೋವುಗಳ ಸಮರ್ಥ ಲೆಕ್ಕವನ್ನು ಇಟ್ಟವರಾರು?

‘‘ಅಮೆರಿಕದ ಸೇನಾ ಪಡೆಗಳು ನಡೆಸುತ್ತಿದ್ದ ವೈಮಾನಿಕ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾವು ಬಹುತೇಕ ದಿನಗಳನ್ನು ಸೇನಾ ಬಂಕರ್‌ಗಳಲ್ಲಿ ಕಳೆಯುತ್ತಿದ್ದೆವು. ಬಹಳ ದಿನಗಳ ನಂತರಅಂದರೆ 1945 ಆಗಸ್ಟ್ 8ರ ರಾತ್ರಿ ನಾವು ನಮ್ಮ ಮನೆಯಲ್ಲಿ ನೆ್ಮುದಿಯಾಗಿ ಮಲಗಿದ್ದೆವು.

ಅದುಆಗಸ್ಟ್ 9ಬೆಳಗಿನ ಏಳು ಐವತ್ತರ ಸಮಯ ಅನ್ನಿಸುತ್ತದೆ, ಮನೆಯ ಮೇಲೆ ಹಾದು ಹೋದ ಅಮೆರಿಕ ವಿಮಾನವನ್ನು ನೋಡಿದ ನಮ್ಮ ತಾಯಿ ಅವಸರದಲ್ಲಿ ನಮ್ಮನ್ನು ಎಬ್ಬಿಸಿ ಮಕ್ಕಳೇ ನಮ್ಮ ಮೇಲೆ ಬಾಂಬ್ ಬೀಳುವ ಸಾಧ್ಯತೆ ಇದೆ. ನೀವು ಈ ಕೂಡಲೇ ಸೇನಾ ಬಂಕರ್ ಒಳಕ್ಕೆಹೋಗಿ.ಯಾರು ಏನೇ ಹೇಳಿದರೂ ಅಲ್ಲಿಂದ ಮನೆಯಕಡೆ ಬರಬೇಡಿ ಏನೂ ಸಮಸ್ಯೆ ಇಲ್ಲ ಅಂತಾದರೆ ನಾನೇ ಬಂದುಕರೆತರುತ್ತೇನೆ ಎಂದು ತಾಕೀತು ಮಾಡಿದಳು!
ನಾವು ಸೇನಾ ಬಂಕರ್ ಒಳಗೆ ಕುಳಿತಿದ್ದೆವು. ಹನ್ನೊಂದು ಗಂಟೆಯ ಸಮಯಕ್ಕೆ ಹೊರಗಡೆ ಭೀಕರ ಸದ್ದಾಯಿತು. ನಾನು ಜೋರಾಗಿ ಕೂಗಿಕೊಂಡದ್ದು ಮಾತ್ರ ನೆನಪಿದೆ. ಮತ್ತೆ ನನಗೆ ಪ್ರಜ್ಞೆ ಬಂದಾಗ ನಮ್ಮ ಬಂಕರ್‌ನಲ್ಲಿದ್ದ ಜನರ ಕಣ್ಣುಗುಡ್ಡೆಗಳು ಹೊರಕ್ಕೆ ಬಂದು ಮೂಗಿನ ಬಳಿ ಜೋತಾಡುತ್ತಿದ್ದವು...! ಅದೃಷ್ಟವಶಾತ್ ನನ್ನ ತಂಗಿ ಅಪಾಯದಿಂದ ಬಚಾವಾಗಿದ್ದಳು. ಆ ಕ್ಷಣ ನಮಗೆ ನಮ್ಮ ಅಮ್ಮನ ನೆನಪಾಯಿತು. ನಿಧಾನಕ್ಕೆ ಬಂಕರ್ ಹೊರಕ್ಕೆ ಬಂದು ಮನೆಯಕಡೆ ಓಡಿದೆವು. ...! ದಾರಿಯತುಂಬಾ ಶವಗಳ ರಾಶಿ...!
ಮನೆಯ ಒಳಗೆ ಅಮ್ಮ ಕುಳಿತಂತೆ ಕಾಣುತ್ತಿದ್ದಳು. ಅಳುತ್ತಾ ಹೋಗಿ ಆಕೆಯನ್ನು ಮುಟ್ಟಿದೆ ಅಷ್ಟೆ... ಆಕೆಯ ದೇಹ ಬೂದಿಯಾಗಿ ಉದುರಿ ಹೋಯಿತು...! ಆಕೆ ಕುಳಿತಲ್ಲಿಯೇ ಸುಟ್ಟು ಹೋಗಿದ್ದಳು’’

ಜಪಾನಿನ ನಾಗಸಾಕಿ ನಗರದ ಮೇಲೆ ಅಮೆರಿಕ 1945 ಆಗಸ್ಟ್ 9ನೇ ತಾರೀಕು ಅಣುಬಾಂಬ್ ಸಿಡಿಸಿದ ತಕ್ಷಣ ಸುಮಾರು 4,000 ಡಿಗ್ರಿಉಷ್ಣತೆ ಗಂಟೆಗೆ ಸಾವಿರ ಕಿಲೋಮಿಟರ್ ವೇಗದಲ್ಲಿ ಹರಡಿದ್ದರಿಂದ ಸುಟ್ಟುಕರಕಲಾದ ಅಮ್ಮನ ದೇಹವನ್ನು ಕಣ್ಣಾರೆ ನೋಡಿದ ಸಕೂಯಿ ಶಿಮೋಹಿರಾ ಅವರ ನೋವಿನ ಅನುಭವ ಇದು!
ಒಂದು ಅಂದಾಜಿನ ಪ್ರಕಾರ ಅಂದು ನಾಗಸಾಕಿ ನಗರದಲ್ಲಿ ಹೀಗೆ ಕ್ಷಣಾರ್ಧದಲ್ಲಿ ಸುಟ್ಟು ಧೂಳಾಗಿ ಹೋದ ಜನರ ಸಂಖ್ಯೆ 40,000 ಎಂದು ಅಂದಾಜಿಸಲಾಗಿದೆ...! ಇದರಜೊತೆ ಭೀಕರವಾಗಿ ಗಾಯಗೊಂಡವರು ಸುಮಾರುಒಂದು ಲಕ್ಷಜನ...! ಅಣ್ವಸ್ತ್ರದ ವಿಕಿರಣದ ಪರಿಣಾಮದಿಂದ ದೈಹಿಕ ಮಾನಸಿಕ ವೈಕಲ್ಯಕ್ಕೆ ಒಳಗಾದ ಜನರ ಸಂಖ್ಯೆ ಲೆಕ್ಕವಿಲ್ಲದಷ್ಟು.!
ಸಾಮ್ರಾಜ್ಯದಾಹಿ ಯುದ್ಧಗಳು ಹೇಗೆ ಮನುಷ್ಯನು ನೂರಾರು ವರ್ಷಗಳು ಶ್ರಮಪಟ್ಟು ರೂಪಿಸಿಕೊಂಡ ಸಾಮುದಾಯಿಕ ಬದುಕನ್ನು, ಕೌಟುಂಬಿಕ ಬಾಂಧವ್ಯವನ್ನು ನಿಮಿಷದಲ್ಲಿ ಬಲಿ ಪಡೆಯುತ್ತವೆ ಎಂಬುದನ್ನು ಸಕೂಯಿ ಶಿಮೋಹಿರಾ ಸ್ವ-ಅನುಭವ ನಿರೂಪಿಸುತ್ತದೆ.
ಅಂದಹಾಗೆ ಜಪಾನಿನ ಮೇಲೆ ಮೊದಲು ಅಣ್ವಸ್ತ್ರ ದಾಳಿ ನಡೆದದ್ದು 1945ರ ಆಗಸ್ಟ್ 6ರಂದು ಹಿರೋಶಿಮಾ ನಗರದ ಮೇಲೆ. ನಂತರ ಒಂಬತ್ತನೇ ತಾರೀಕು ನಾಗಸಾಕಿಯ ಮೇಲೆ. ಎರಡು ದಾಳಿಗಳಲ್ಲಿ ಸತ್ತಜನರ ಸಂಖ್ಯೆ ಸರಿಸುಮಾರು 2,10,000...! ಗಮನಿಸಬೇಕಾದ ಅಂಶ ಎಂದರೆ ಇವರಲ್ಲಿ ಬಹತೇಕರು ಸಾಮಾನ್ಯ ನಾಗರಿಕರಾಗಿದ್ದರು...! ಈ ಮಾರಣ ಹೋಮಕ್ಕೆ ಬಳಕೆಯಾಗಿದ್ದು ‘ಲಿಟ್ಲ್ ಬಾಯ್’ ಮತ್ತು‘ಫ್ಯಾಟ್ ಮ್ಯಾನ್’ ಹೆಸರಿನ ಎರಡು ಬಾಂಬುಗಳು ಮತ್ತು ಆ ಕಾಲದ ರಾಜಕೀಯ ನಾಯಕರ ದುಷ್ಟತನ ಮತ್ತು ಹುಂಬತನ.
ಇಡೀ ಜಗತ್ತನ್ನು ತಮ್ಮ ಕಪಿಮುಷ್ಟಿಯ ಹಿಡಿತಕ್ಕೆ ಪಡೆಯಬೇಕು, ಲೂಟಿ ಹೊಡೆಯಬೇಕೆಂಬ ಸಾಮ್ರಾಜ್ಯಶಾಹಿ ಮನೋಭೂಮಿಕೆಯ ಕಾರಣಕ್ಕಾಗಿ ನಡೆದ ಎರಡು ಜಾಗತಿಕ ಮಹಾಯುದ್ಧಗಳು ಸೃಷ್ಟಿಸಿದ ಹಿಂಸೆ, ಸಾವು ನೋವುಗಳ ಸಮರ್ಥ ಲೆಕ್ಕವನ್ನುಇಟ್ಟವರಾರು? ಇಪ್ಪತ್ತನೆಯ ಶತಮಾನದಲ್ಲಿ ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೈನ್, ಡೆನ್ಮಾರ್ಕ್, ಪೋರ್ಚುಗಲ್ ಮುಂತಾದ ಯುರೋಪಿಯನ್ ದೇಶಗಳು, ಅಲ್ಲದೆ ಅಮೆರಿಕ, ಜಪಾನ್‌ನಂತಹ ಸಾಮ್ರಾಜ್ಯಶಾಹಿ ದೇಶಗಳು ಇಡೀ ಜಗತ್ತನ್ನು ಹರಿದು ಗರಿಷ್ಠ ಮಟ್ಟದಲ್ಲಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿದ್ದವು. ತಮ್ಮ ದೇಶದಲ್ಲಿ ಉತ್ಪಾದನೆಯಾದ ಅಗಾಧ ಸರಕುಗಳಿಗೆ ವಿಶಾಲ ಮಾರುಕಟ್ಟೆಗಾಗಿ ತಹತಹಿಸುತ್ತಿದ್ದವು. ಅಗ್ಗದ ಇಲ್ಲವೇ ಬಿಟ್ಟಿ ಕಚ್ಚಾ ವಸ್ತುಗಳ ಹುಡುಕಾಟದಲ್ಲಿದ್ದವು. ಇಂತಹ, ದೇಶದೇಶಗಳನ್ನೇ ಕಬಳಿಸುವ ಸಾಮ್ರಾಜ್ಯದಾಹ, ಮಾರುಕಟ್ಟೆಯನ್ನು ವಿಸ್ತರಿಸುವ ಪೈಪೋಟಿಗಳೇ ಜಗತ್ತುಕಂಡಎರಡು ಮಹಾ ಭೀಕ ವಿಶ್ವಯುದ್ಧಗಳಿಗೆ ಕಾರಣವಾದವು.
ಹಿರೋಶಿಮಾ ಮತ್ತು ನಾಗಾಸಾಕಿ ವಿಷಯಕ್ಕೆ ಬಂದರೆ ಈ ಹಿಂಸೆಯ ಆರಂಭವನ್ನು ಜಪಾನ್ ಸೈನ್ಯ ಅಮೆರಿಕದ ಪ್ರಮುಖ ನೌಕಾ ನೆಲೆಯಾದ ಪರ್ಲ್ ಹಾರ್ಬರ್ ಮೇಲೆ 1941 ಡಿಸೆಂಬರ್ ತಿಂಗಳಲ್ಲಿ ನಡೆಸಿದ ಭೀಕರ ದಾಳಿ ಹಾಗೂ ಅಮೆರಿಕಎರಡನೇ ಮಹಾಯುದ್ಧಕ್ಕೆ ಧುಮುಕಿದ ಚಾರಿತ್ರಿಕ ಹಿನ್ನೆೆಯಲ್ಲಿ ನೋಡಬೇಕು ಅನ್ನಿಸುತ್ತದೆ.
ಆ ಅನಿರಿಕ್ಷಿತ ದಾಳಿಯಲ್ಲಿ ಅಮೆರಿಕದ 2,402 ಸೈನಿಕರು ಹತರಾಗಿದ್ದರು. ಆಗ ಹೆಪ್ಪುಗಟ್ಟಿದ ಜಪಾನ್ ವಿರುದ್ಧದ ಅಮೆರಿಕದ ಪ್ರತಿಕಾರದ ಸಿಟ್ಟು 1945ರಲ್ಲಿ ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳನ್ನು ನಾಶ ಮಾಡುವ ಮೂಲಕ ವ್ಯಕ್ತವಾಯಿತುಎಂದು ವಾದವಿದೆ.
ಆದರೆ ಅಮೆರಿಕದ ಚರಿತ್ರೆ ಬೇರೆಯದ್ದೆ ಕಥೆ ಹೇಳುತ್ತದೆ. ಆದರ ಪ್ರಕಾರ 1941ಕ್ಕೆ ದ್ವಿತೀಯ ಮಹಾಯುದ್ಧದ ಕಣಕ್ಕೆ ಧುಮುಕಿದ ಅಮೆರಿಕ ಸೈನ್ಯ1944ರ ಹೊತ್ತಿಗಾಗಲೇ ಪೆಸಿಫಿಕ್ ಸಾಗರದಲ್ಲಿ ಇರುವ ಮ್ಯಾರಿಯಾನ ನಡುಗಡ್ಡೆಯ ಮೇಲೆ ಏಕಸ್ವಾಮ್ಯವನ್ನು ಸಾಧಿಸಿತ್ತು. ಅಲ್ಲಿಂದ ಜಪಾನ್ ಮೇಲೆ ವೈಮಾನಿಕ ದಾಳಿಯನ್ನು ನಿರ್ವಹಿಸಲು ಸಾಕಷ್ಟು ರನ್ ವೇಗಳು ಅಮೆರಿಕ ಸೈನ್ಯಕ್ಕೆದೊರೆತವು. ಪರಿಣಾಮ ಸತತ ವೈಮಾನಿಕ ದಾಳಿಯ ಮೂಲಕ ಜಪಾನಿನ ಪ್ರಮುಖ ನಗರಗಳ ಮೇಲೆ ಬಾಂಬ್‌ದಾಳಿಯನ್ನು ಅಮೆರಿಕ ನಿರ್ವಹಿಸಿತು. ಅಧಿಕೃತ ಲೆಕ್ಕದ ಪ್ರಕಾರಜಪಾನಿನ ಸುಮಾರು 60 ಪ್ರಮುಖ ನಗರಗಳು ಈ ದಾಳಿಯಲ್ಲಿ ನಾಶವಾಗಿ ಹೋದವು. ಈ ತೀವ್ರ ದಾಳಿಯ ಕಾರಣಕ್ಕೆ ಸಾವಿರಾರು ಜನ ಪ್ರಾಣ ಕಳೆದುಕೊಂಡರು.
ಈ ದಾಳಿಯ ತೀವ್ರತೆಗೆ ಅಂಜಿ ಜಪಾನ್ ಶರಣಾಗುತ್ತದೆ ಎಂಬ ಅಮೆರಿಕದ ಊಹೆ ಸುಳ್ಳಾಯಿತು. ಈ ದಾಳಿಯನ್ನು ಎದುರಿಸಲು ಜಪಾನ್ ಸಂಪೂರ್ಣ ಯುದ್ಧ ಘೋಷಿಸಿ ಸೈನಿಕರು, ರೈತರು, ಯುವಕರು, ಮಹಿಳೆಯರು ಸೇರಿದಂತೆ ಲಕ್ಷಾಂತರ ಜನರನ್ನು ಆತ್ಮಹತ್ಯಾ ದಳವಾಗಿ ರೂಪಿಸುವ ಕೇಗ್ಸ್ ಗೊ ಎಂಬ ಅಪಾಯಕಾರಿ ಯುದ್ಧ ತಂತ್ರವನ್ನು ಯೋಜಿಸಿತು.

ಆಗಿನ ಅಮೆರಿಕದ ಅಧ್ಯಕ್ಷ ಟ್ರೂಮನ್ ಮತ್ತು ಸೈನ್ಯಾಧಿಕಾರಿಗಳ ಲೆಕ್ಕದಂತೆಒಂದು ವೇಳೆ ಅಮೆರಿಕ ಜಪಾನಿನ ಕೇಗ್ಸ್‌ಗೊರಣ ನೀತಿಯನ್ನು ಎದುರಿಸಲು ಸಾಂಪ್ರದಾಯಿಕ ಯುದ್ಧ ಕ್ರಮಕ್ಕೆಮುಂದಾದರೆ ಸುಮಾರು 1,00,000ಅಮೆರಿಕ ಸೈನಿಕರು ಸಾಯುವ ಪರಿಸ್ಥಿತಿ ಎದುರಾಗುತ್ತಿತ್ತು. ಆ ಕಾರಣಕ್ಕೆ ಸಾಂಪ್ರದಾಯಿಕ ಯುದ್ಧನೀತಿಗೆ ಬದಲಾಗಿ ನಾವು ತಂತ್ರಜ್ಞಾನ ಹಾಗೂ ಅಣ್ವಸ್ತ್ರ ಬಳಸಲು ನಿರ್ಧರಿಸಿದೆವು. ಇದರ ಹಿಂದಿನ ಉದ್ದೇಶ ಅಮೆರಿಕ ಪ್ರಜೆಗಳ ಪ್ರಾಣರಕ್ಷಣೆ ಅಷ್ಟೆ ಎನ್ನುತ್ತದೆ ಅಮೆರಿಕದ ಚರಿತ್ರೆ! ಜಗತ್ತಿನ ಬಹಳಷ್ಟು ಮಂದಿ ಇದನ್ನು ನಂಬಿದ್ದಾರೆ ಸಹ.
ಆದರೆ ಅಮೆರಿಕ, ರಶ್ಯ ಮತ್ತು ಜಪಾನ್ ದೇಶಗಳ ಚಾರಿತ್ರಿಕ ದಾಖಲೆಗಳನ್ನು ಸತತ ಹತ್ತು ವರ್ಷಗಳ ಕಾಲ ಅಧ್ಯಯನ ನಡೆಸಿರುವ ಪ್ರೊ. ತ್ಯೂಯೋಶಿಹಸೆಗಾವಾ ಅವರ ಪ್ರಕಾರ ಅಮೆರಿಕ ಈ ಯುದ್ಧವನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಮುಗಿಸಲು ಬಯಸುತ್ತಿತ್ತು. ಅದಕ್ಕಾಗಿ ಸೈದ್ಧಾಂತಿಕ ವಿರೋಧಿಯಾದ ಸೋವಿಯತ್ ಒಕ್ಕೂಟದೊಂದಿಗೆ ಒಪ್ಪಂದ ಮಾಡಿಕೊಂಡು ಎರಡೂ ದಿಕ್ಕಿನಿಂದ ಜಪಾನಿನ ಮೇಲೆ ಮುಗಿಬಿದ್ದು ಅದನ್ನು ಮಣಿಸಬೇಕು ಎಂಬ ಯೋಚನೆಯನ್ನು ಹೊಂದಿತ್ತು.
ಇದರ ಭಾಗವಾಗಿ ಜುಲೈ 1945ರ ಜುಲೈ ತಿಂಗಳಲ್ಲಿ ಅಮೆರಿಕದ ಅಧ್ಯಕ್ಷ ಟ್ರೂಮನ್ ಯುರೋಪಿನ ಮೇಲೆ ಯುದ್ಧದ ಪರಿಣಾಮ ಮತ್ತು ಪೆೆಸಿಫಿಕ್ ಸಾಗರದಲ್ಲಿ ಯುದ್ಧದ ಸ್ಥಿತಿಯನ್ನು ಅವಲೋಕಿಸಲು ಸೋವಿಯತ್‌ಯೂನಿಯನ್ ಮತ್ತು ಯುರೋಪ್ ನಾಯಕರ ಜೊತೆ ಜರ್ಮನಿಯ ರಾಜಧಾನಿ ಪಾಸ್ಟ್‌ಡ್ಯಾಂ ನಗದಲ್ಲಿ ಸಭೆಯೊಂದನ್ನು ಸೇರಿದ್ದನು.


ಅಲ್ಲಿ ಭಾಗವಹಿಸಿದ್ದ ಸೋವಿಯತ್‌ಒಕ್ಕೂಟದ ನಾಯಕ ಸ್ಟಾಲಿನ್‌ಜಪಾನ್ ವಿರುದ್ಧದ ಯುದ್ಧದಲ್ಲಿ ಆಗಸ್ಟ್ 15ರಿಂದ ಸೋವಿಯತ್‌ಒಕ್ಕೂಟದ ಸೈನ್ಯ ಅಮೆರಿಕವನ್ನು ಸೇರಲಿದೆ ಎಂದು ಘೋಷಿಸಿದನು. ಈ ನಡೆ ಅಮೆರಿಕದ ಅಧ್ಯಕ್ಷ ಟ್ರೂಮನ್ ಪಾಲಿಗೆ ಯುದ್ಧವನ್ನು ಬೇಗ ಮುಗಿಸುವ, ಜಪಾನನ್ನು ಮಣಿಸುವ ಮಹತ್ವದ ದಾರಿಯಾಗಿ ಕಂಡಿತು. ಇದನ್ನು ಸ್ವತಃ ಟ್ರೂಮನ್ ಅವರು ತಮ್ಮ ದಿನಚರಿಯಲ್ಲಿ ಬರೆದುಕೊಂಡಿದ್ದಾರೆ.
 ಸಂಶೋಧಕ ತ್ಯೂಯೋಶಿ ಹಸೆಗಾವಾ ಅವರ ಪ್ರಕಾರ ಜರ್ಮನಿಯ ರಾಜಧಾನಿ ಪಾಸ್ಟ್‌ಡ್ಯಾಂ ಸಭೆಯ ನಿರ್ಣಯಗಳ ಕುರಿತು ಆಮೆರಿಕನ್ನರು ಎರಡನೆಯ ಯೋಚನೆಯನ್ನು ಮಾಡಿದರು. ಈಗಾಗಲೇ ಪೂರ್ವ ಯುರೋಪಿನ ಹಲವಾರು ಭಾಗಗಳ ಮೇಲೆ ಹಿಡಿತ ಸಾಧಿಸಿ ಪ್ರಬಲವಾಗಿರುವ ಸೋವಿಯತ್‌ಒಕ್ಕೂಟ ಈ ಯುದ್ಧದಲ್ಲಿ ನಮ್ಮ ಜೊತೆ ಸೇರಿಕೊಂಡರೆ ಈ ಅವಕಾಶವನ್ನು ಬಳಸಿಕೊಂಡು ಖಂಡಿತ ಸ್ಟಾಲಿನ್ ಪಡೆ ಏಶ್ಯಾದ ಮೇಲೆ ಏಕಸ್ವಾಮ್ಯವನ್ನು ಸಾಧಿಸುತ್ತದೆ. ಇದು ಮುಂದೆ ಅಮೆರಿಕಕ್ಕೆ ಖಂಡಿತ ಅಪಾಯತರುತ್ತದೆ ಎಂಬುದು ಟ್ರೂಮನ್ ಮತ್ತುಆತನ ಸಲಹೆಗಾರರ ಮತ್ತೊಂದು ಆತಂಕವಾಗಿತ್ತು. ಆ ಕಾರಣಕ್ಕೆಟ್ರೂಮನ್‌ಆಗಸ್ಟ್ 15 ಅಂದರೆ ಸೋವಿಯತ್‌ಯೂನಿಯನ್‌ಅಮೆರಿಕವನ್ನು ಬೆಂಬಲಿಸುವ ಮೊದಲೇ ಜಪಾನ್‌ನ್ನು ಮಣಿಸುವ ಯೋಜನೆಗೆ ಮುಂದಾಗಿದ್ದರು ಎನ್ನುತ್ತಾರೆ ತ್ಯೂಯೋಶಿ ಹಸೆಗಾವಾ.
ಇದಕ್ಕೆ ಪೂರಕವೆಂಬಂತೆ ನ್ಯೂ ಮೆಕ್ಸಿಕೋದ ಮರುಭೂಮಿಯಲ್ಲಿ ನಡೆಸಲಾದ ಅಣ್ವಸ್ತ್ರ ಪರೀಕ್ಷೆಯ ವರದಿ 1945,ಜುಲೈ 21ಕ್ಕೆ ಟ್ರೂಮನ್ ಕೈ ಸೇರಿತ್ತು. ಆ ವರದಿಯಲ್ಲಿನ ಅಂಶಗಳು ಸೋವಿಯತ್‌ಒಕ್ಕೂಟದ ಸಹಾಯವನ್ನು ಪಡೆಯದೇ ಜಪಾನ್‌ನ್ನು ಮಣಿಸುವ ಟ್ರೂಮನ್ ಯೋಚನೆಗೆ ಬಲವನ್ನು ನೀಡಿದವು.

ಇದರ ಪರಿಣಾಮ ಟ್ರೂಮನ್ ತನ್ನ ಸಲಹೆಗಾರರಿಗೆ ಪಾಸ್ಟ್ ಡ್ಯಾಂ ಒಪ್ಪಂದ ಜಾರಿಗೊಳಿಸುವಂತೆ ಆದೇಶ ನೀಡಿದ್ದ. ಇದರಲ್ಲಿ ಜಪಾನ್ ಯಾವ ಷರತ್ತೂ ಇಲ್ಲದೆ ಸಂಪೂರ್ಣ ಶರಣಾಗತಿ ಆಗಬೇಕು. ಇಲ್ಲವಾದರೆ ಜಪಾನ್ ನಾಶಕ್ಕೆ ಸ್ವತಃ ಸಾಕ್ಷಿಯಾಗಬೇಕು ಎಂಬ ಎಚ್ಚರಿಕೆ ನೀಡಲಾಗಿತ್ತು! ಸಹಜವಾಗಿ ಜಪಾನ್ ನಾಯಕರು ಆ ಆದೇಶವನ್ನು ಅಪಹಾಸ್ಯ ಮಾಡಿದ್ದರು. ಪರಿಣಾಮ ಆಗಸ್ಟ್6 ಕ್ಕೆ ಅಂದರೆ ಸ್ಟಾಲಿನ್ ಸೇನೆ ಅಮೆರಿಕವನ್ನು ಸೇರಿಕೊಳ್ಳುವ ಒಂಬತ್ತು ದಿನ ಮುಂಚಿತವಾಗಿ ಅಮೆರಿಕದ ಯುದ್ಧ ವಿಮಾನ ‘ಲಿಟ್ಲ್‌ಬಾಯ್’ ಹೆಸರಿನ ಮೊದಲ ಅಣ್ವಸ್ತ್ರವನ್ನು ಹಿರೋಶಿಮಾದ ಮೇಲೆ ಇಳಿಸಿಯಾಗಿತ್ತು! ಭೂಮಿಯಿಂದ 2,000 ಸಾವಿರ ಅಡಿ ಮೇಲೆಯೇ ಸಿಡಿದ ‘ಲಿಟ್ಲ್ ಬಾಯ್’ ನೋಡು ನೋಡುತ್ತಿದ್ದಂತೆಯೇ 50ಸಾವಿರ ಜನರನ್ನು ಕೊಂದುಹಾಕಿದ್ದ!

ಈ ಕ್ರಮ ಸ್ಟಾಲಿನ್ ಕೋಪಕ್ಕೆ ಕಾರಣವಾಗಿತ್ತು. ಆದರೆ ಆ ದಿನ ರಾತ್ರಿಜಪಾನ್ ಸರಕಾರ ಯುದ್ಧದಲ್ಲಿ ತನ್ನನ್ನು ಬೆಂಬಲಿಸುವಂತೆ ಕೋರಿದ ಪತ್ರ ಸ್ಟಾಲಿನ್ ಕೈ ಸೇರಿತ್ತು. ಇದರಿಂದ ಜಪಾನ್ ಹಿರೋಶಿಮಾ ದಾಳಿಯ ಕಾರಣಕ್ಕೆ ಶರಣಾಗುವ ಸ್ಥಿತಿಯಲ್ಲಿ ಇಲ್ಲ ಎಂಬುದನ್ನು ಅರಿತ ಸ್ಟಾಲಿನ್ ಅಮೆರಿಕಕ್ಕೆ ಕೊಟ್ಟ ಗಡುವಿಗಿಂತ ಮುಂಚೆಯೇ ಅಂದರೆ ಆಗಸ್ಟ್ 15ಕ್ಕಿಂತ ಮುಂಚಿತವಾಗಿ, ಆಗಸ್ಟ್ 7ರ ಸುಮಾರಿಗೆ ತಕ್ಷಣವೇ ತನ್ನ ಸೇನೆಗೆ ಜಪಾನ್ ಮೇಲೆ ದಾಳಿ ನಡೆಸುವಂತೆಆದೇಶವನ್ನು ರವಾನಿಸಿಬಿಟ್ಟ!
ಮಂಚೂಲಿಯಾ ಕಡೆಯಿಂದ ಜಪಾನ್‌ನ್ನು ಮುತ್ತಿದ 15 ಲಕ್ಷ ಸ್ಟಾಲಿನ್ ಕೆಂಪು ಸೇನೆ ಕಡಿಮೆ ಸಮಯದಲ್ಲಿ ಜಪಾನ್ ಸೈನಿಕರನ್ನು ನಿರ್ನಾಮ ಮಾಡಿದರು. ಆ ದಾಳಿಯ ಎಷ್ಟು ವೇಗ ಮತ್ತು ತೀವ್ರವಾಗಿತ್ತು ಎಂದರೆ ಕೆಲವೇ ದಿನಗಳಲ್ಲಿ ಕೆಂಪು ಸೇನೆ ಜಪಾನ್‌ನ್ನು ವಶಪಡಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳು ಸ್ಪಷ್ಟವಾಗಿದ್ದವು!
ಅಷ್ಟರಲ್ಲಿ ಆಗಸ್ಟ್ ಒಂಬತ್ತನೇ ತಾರೀಕು ಅಮೆರಿಕ ನಾಗಸಾಕಿಯ ಮೇಲೆ ಮತ್ತೊಂದು ಅಣ್ವಸ್ತ್ರ ಪ್ರಯೋಗ ನಡೆಸಿಬಿಟ್ಟಿತ್ತು. ಆಗಲೂ ಜಪಾನಿ ನಾಯಕರು ಬೇಷರತ್ ಶರಣಾಗತಿಗೆ ಸಿದ್ಧವಿರಲಿಲ್ಲ. ಆದರೆ ಆ ನಿಮಿಷದಲ್ಲಿ ತೀರ್ಮಾನ ಕೈಗೊಳ್ಳಬೇಕಿದ್ದ ಜಪಾನಿನ ಸಾಮ್ರಾಟನಿಗೆ ಅಮೆರಿಕ ಷರತ್ತುಗಳನ್ನು ಒಪ್ಪಿ ಶರಣಾದರೆ ಕನಿಷ್ಠ ಅವರೊಂದಿಗೆ ತನ್ನ ಅಸ್ತಿತ್ವವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು. ಒಂದು ವೇಳೆ ಸಾಮ್ರಾಜ್ಯಶಾಹಿ ವ್ಯವಸ್ಥೆಯ ಕಡು ವಿರೋಧಿ ಕಮ್ಯುನಿಸ್ಟ್ ಸಿದ್ಧಾಂತದ ಸೋವಿಯತ್‌ಒಕ್ಕೂಟ ಜಪಾನಿನ ಮೇಲೆ ಏಕಸ್ವಾಮ್ಯ ಸಾಧಿಸಿದರೆ ತನಗೆ ಖಂಡಿತ ಉಳಿಗಾಲವಿಲ್ಲ ಎಂಬುದುಅರ್ಥವಾಗಿ ಹೋಗಿತ್ತು!
ಅಂತಿಮವಾಗಿ ಸಾಮ್ರಾಜ್ಯಶಾಹಿ ಜಪಾನ್ ಬಂಡವಾಳಶಾಹಿ ವ್ಯವಸ್ಥೆಯ ಅಮೆರಿಕದ ಷರತ್ತುಗಳನ್ನು ಒಪ್ಪಿಕೊಂಡು ಆಗಸ್ಟ್ 15ರಂದು ಪಾಸ್ಟ್‌ಡ್ಯಾಂಒಪ್ಪಂದಂತೆ ಬೇಷರತ್ ಶರಣಾಗತಿಯನ್ನು ಘೋಷಿಸಿತು.
ಸಂಶೋಧಕ ತ್ಯೂಯೋಶಿ ಹಸೆಗಾವಾ ಅವರು ಜಪಾನ್ ಸಾಮ್ರಾಟನ ಶರಣಾಗತಿಗೆ ಮುಖ್ಯ ಕಾರಣ ಅಮೆರಿಕದ ಅಣ್ವಸ್ತ್ರ ದಾಳಿಗಿಂತ ಹೆಚ್ಚಾಗಿ ಸ್ಟಾಲಿನ್ ನೇತೃತ್ವದ ಸೋವಿಯತ್‌ಒಕ್ಕೂಟದ ಕಮ್ಯುನಿಸ್ಟ್ ಸಿದ್ಧಾಂತದಿಂದ ತನ್ನ ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ಎಷ್ಟು ಸಾಧ್ಯವೋ ಅಷ್ಟು ಉಳಿಸಿಕೊಳ್ಳುವ ಕ್ರಮದ ಭಾಗವಾಗಿತ್ತು. ಇಲ್ಲಿ ಸಾಮ್ರಾಟನ ಪಾಲಿಗೆ ಜಪಾನಿ ನಾಗರಿಕರ ಸ್ವಾಯತ್ತತೆ, ಸ್ವಾತಂತ್ರವು ಮಹತ್ವವಾಗಲಿಲ್ಲಎನ್ನು್ತಾರೆ!
ಯಾವುದೇ ಅಗತ್ಯವಿಲ್ಲದಿದ್ದರೂ ಅಮೆರಿಕ ಎರಡನೇ ಅಣ್ವಸ್ತ್ರವನ್ನು ನಾಗಸಾಕಿಯ ಮೇಲೆ ಪ್ರಯೋಗಿಸಿ ಲಕ್ಷಾಂತರ ನಿರ್ದೋಷಿ ಜನರನ್ನು ಕೊಲ್ಲುವ ಮೂಲಕ ತಂತ್ರಜ್ಞಾನ ಮತ್ತು ಬಾಂಬುಗಳ ಮೂಲಕ ತನ್ನ ಶಕ್ತಿಯನ್ನು ಸೋವಿಯತ್‌ಒಕ್ಕೂಟಕ್ಕೆ ತೋರಿಸಲು ಹೊರಟಿತ್ತು. ಭವಿಷ್ಯದ ಜಗತ್ತಿನಲ್ಲಿ ತಾನೊಂದು ಸೂಪರ್ ಪವರ್ ಎಂದು ಇಡೀ ಜಗತ್ತನ್ನು ಬೆದರಿಸುವ ದುಷ್ಟ ತಂತ್ರವೂ ಅಮೆರಿಕದ್ದಾಗಿತ್ತು. ಈ ಯೋಚನೆಯ ಹಿಂದೆಯೂ ಸಾಮಾನ್ಯ ಜನರ ಹಕ್ಕುಗಳನ್ನು ಗಾಳಿಗೆ ತೂರಲಾಗಿತ್ತು ಎನ್ನುತ್ತಾರೆ ಚಿಂತಕ ಬರ್ಟನ್.
 
‘ಆರ್ಯ ಶ್ರೇಷ್ಠತೆ’ಯಕ್ರೂರ, ರಾಕ್ಷಸಿ ಸಿದ್ಧಾಂತದೊಂದಿಗೆ, ಫ್ಯಾಸಿಸ್ಟ್ ಇಟಲಿ ಹಾಗೂ ಜಪಾನಿನೊಡಗೂಡಿ ಇಡೀ ಜಗತ್ತನ್ನು ಕಬಳಿಸುವುದು ಜರ್ಮನ್ ಸರ್ವಾಧಿಕಾರಿ ನಾಜಿವಾದಿ ಹಿಟ್ಲರ್‌ನ ಕನಸಾಗಿತ್ತು. ಪರಸ್ಪರ ದಾಳಿ ಮಾಡಬಾರದೆನ್ನುವ ಒಪ್ಪಂದವಿದ್ದುದರಿಂದ ಎರಡನೆಯ ಮಹಾಯುದ್ಧದಲ್ಲಿಒಂದು ಹಂತದವರೆಗೆ ಜರ್ಮನಿ ಸೋವಿಯತ್‌ಒಕ್ಕೂಟದ ಮೇಲೆ ದಾಳಿ ಮಾಡಿರಲಿಲ್ಲ ಮತ್ತು ಸೋವಿಯತ್‌ಒಕ್ಕೂಟವೂ ಯುದ್ಧರಂಗ ಪ್ರವೇಶಿಸಿರಲಿಲ್ಲ. ಆದರೆ ಒಪ್ಪಂದವನ್ನು ಉಲ್ಲಂಘಿಸಿ ಯಾವಾಗ ಹಿಟ್ಲರ್‌ತನ್ನ ಸೇನೆಯನ್ನು ಸೋವಿಯತ್‌ರಾಜಧಾನಿ ಮಾಸ್ಕೋವರೆಗೆ ಮುನ್ನುಗ್ಗಿ ಸಿದನೋ ಆಗ ಸೋವಿಯತ್‌ಒಕ್ಕೂಟವು ಯುದ್ಧರಂಗ ಪ್ರವೇಶಿಸುವುದು ಅನಿವಾರ್ಯವಾಯಿತು. ತನ್ನ ದೇಶದೊಳಕ್ಕೆ ನುಗ್ಗಿದ್ದ ಫ್ಯಾಸಿಸ್ಟ್ ಸೈನ್ಯವನ್ನು ಸದೆಬಡಿದು ಹಿಮ್ಮೆಟ್ಟಿಸಿದ್ದು ಮಾತ್ರವಲ್ಲ ಫ್ಯಾಸಿಸ್ಟ್‌ಸರ್ವಾಧಿಕಾರಿಗಳು ವಶಪಡಿಸಿಕೊಂಡಿದ್ದ ಪೂರ್ವಯುರೋಪಿನ ದೇಶಗಳನ್ನು ಅವರ ಹಿಡಿತದಿಂದ ವಿವೋಚನೆಗೊಳಿಸಿದ್ದು ಸೋವಿಯತ್‌ಒಕ್ಕೂಟದ ಕೆಂಪು ಸೇನೆ. ಮನುಕುಲವನ್ನು ಉಳಿಸುವ ಈ ಮಹಾ ಹೋರಾಟದಲ್ಲಿ ಸೋವಿಯತ್‌ಒಕ್ಕೂಟದ ಎರಡು ಕೋಟಿ ಸೈನಿಕರು ಹುತಾತ್ಮರಾದರು ಎಂಬುದನ್ನು ಇಡಿೀಜಗತ್ತು ಎಂದಿಗೂ ಮರೆಯುವಂತಿಲ್ಲ.
ಅಪಾರ ತ್ಯಾಗ ಬಲಿದಾನದಿಂದ ಕೆಚ್ಚಿನಿಂದ ಸೋವಿಯತ್ ಸೈನ್ಯ ಜರ್ಮನ್ನರ ನಾಜಿ ಸೈನ್ಯವನ್ನು ಹಿಮ್ಮೆಟ್ಟಿಸುತ್ತಿರುವ ಘಟ್ಟದಲ್ಲಿ ಅನಗತ್ಯವಾಗಿ ಜಪಾನ್‌ನ ಹಿರೋಶಿಮಾ, ನಾಗಸಾಕಿ ನಗರಗಳ ಮೇಲೆ ಅಣುಬಾಂಬ್‌ಗಳನ್ನು ಹಾಕಲಾಯಿತು. ಈ ಮೂಲಕ ನಾಗರಿಕರ ಮೇಲೆ ಅಣುಬಾಂಬ್ ಪ್ರಯೋಗ ಮಾಡಿ ಲಕ್ಷಾಂತರ ಜನರನ್ನು ಸಾಮೂಹಿಕವಾಗಿ ಹತ್ಯೆಗೈದ ಏಕೈಕ ದೇಶವೆಂಬ ಕಳಂಕ ಶಾಶ್ವತವಾಗಿ ಅಮೆರಿಕಕ್ಕೆ ಅಂಟಿಕೊಂಡಿತು.
ಸಾಮ್ರಾಜ್ಯಶಾಹಿಗಳ ಸಾಮ್ರಾಜ್ಯ ವಿಸ್ತರಣೆಯದಾಹ ಹೇಗೆ ಲಕ್ಷಾಂತರ ಜನ ಅಮಾಯಕರ ಸಾವಿಗೆ ಕಾರಣವಾಗುತ್ತದೆ ಎಂಬುದಕ್ಕೆ ಈ ಘಟನೆಗಳು ಸಾಕ್ಷಿಯಾಗಿವೆ. ಹಿರೋಶಿಮಾ ಮತ್ತು ನಾಗಸಾಕಿ ಘಟನೆಗಳು ಮತ್ತು ಅವುಗಳ ಹಿಂದಿನ ರಾಜಕೀಯದಿಂದ ನಾವು ಕಲಿಯಬೇಕಿರುವುದು ಏನು? ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ಅದಕ್ಕೆ ಉತ್ತರವಾಗಿ ಅಣ್ವಸ್ತ್ರ ದಾಳಿಯಲ್ಲಿ ತನ್ನ ದೇಹದ ಬಹುತೇಕ ಭಾಗವನ್ನು ಕಳೆದುಕೊಂಡ, ಆ ಕಾರಣಕ್ಕೆ ಅಪಮಾನಗಳನ್ನು ಅನುಭವಿಸಿದ ಜಪಾನಿ ನಾಗರಿಕ ಹೇಳಿದ ‘‘ನಾನು ಈ ವಿಶ್ವ ಅಣ್ವಸ್ತ್ರ ಮುಕ್ತವಾಗುವುದನ್ನು ನೋಡಲು ಬದುಕಬೇಕಿದೆ, ಅಣ್ವಸ್ತ್ರಯುದ್ಧದಚರ್ಚೆಬಂದಾಗಲೆಲ್ಲ ನನ್ನದೇಹದ ಸ್ಥಿತಿಯನ್ನು ತೋರಿಸಿ ಅದನ್ನು ನಿಲ್ಲಿಸುವಕಾರಣಕ್ಕಾಗಿ ನಾನು ಬದುಕಬೇಕಿದೆ’’ ಎಂಬ ಮಾತುಗಳು ಉತ್ತರವಾಗಿ ಸಿಗುತ್ತದೆ!

Writer - ಡಾ.ಕಿರಣ್ ಎಂ.ಗಾಜನೂರು

contributor

Editor - ಡಾ.ಕಿರಣ್ ಎಂ.ಗಾಜನೂರು

contributor

Similar News

ಜಗದಗಲ
ಜಗ ದಗಲ