ಆಧಾರ್ ಕಾಯ್ದೆ ಮತ್ತು ಮಾಹಿತಿ ರಕ್ಷಣೆ ಕಾಯ್ದೆ ಜತೆಜತೆಗೆ ಇರಬಲ್ಲವೇ?

Update: 2018-08-05 18:31 GMT

ಶ್ರೀ ಕೃಷ್ಣ ಸಮಿತಿಯು ಯುಐಡಿ ಪ್ರಾಜೆಕ್ಟ್‌ನ ಸಿಂಧುತ್ವ ಸಾಚಾತನದ ಬಗ್ಗೆ ಪರಿಶೀಲಿಸಿತ್ತು. ಆಗ ಸರಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ತನ್ನ ಹೇಳಿಕೆಯಲ್ಲಿ ತಾನು ಮಾಹಿತಿ ರಕ್ಷಣೆ ಹಾಗೂ ಖಾಸಗಿತನದ ರಕ್ಷಣೆಗೆ ಸಂಬಂಧಿಸಿ ಕಾನೂನುಗಳನ್ನು ತರಲು ಉದ್ದೇಶಿಸಿರುವುದಾಗಿ ಹೇಳಿತ್ತು.

2017ರ ನವೆಂಬರ್ 6ಕ್ಕೆ, ಶ್ರೀಕೃಷ್ಣ ಸಮಿತಿಯ ರಚನೆಯನ್ನು ಅಂತಿಮವಾಗಿ ಪ್ರಕಟಿಸಿದ ಬಳಿಕ, ವಿಶೇಷವಾಗಿ ಆಧಾರ್‌ಗೆ ಸಂಬಂಧಿಸಿದಂತೆ ಸಮಿತಿಯ ಸದಸ್ಯರ ನಡುವೆಯೇ ಹಿತಾಸಕ್ತಿಯ ತಿಕ್ಕಾಟಗಳ ಸಾಧ್ಯತೆ ಇದೆ ಎಂದು ಹಲವಾರು ನ್ಯಾಯ ತಜ್ಞರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದರು.
ಶ್ರೀಕೃಷ್ಣ ಸಮಿತಿಯು ಒಂದು ಶ್ವೇತ ಪತ್ರವನ್ನು ಪ್ರಕಟಿಸಿತು. ಇದು ಸಮಿತಿ ಪ್ರಕಟಿಸಿದ ಮೊದಲ ಸಾರ್ವಜನಿಕ ದಾಖಲೆ. ಇದನ್ನು ಇಂಗ್ಲಿಷ್‌ನಲ್ಲಿ ಮಾತ್ರ ಪ್ರಕಟಿಸಲಾಯಿತು. ಕುತೂಹಲದ ವಿಷಯವೆಂದರೆ ಆಧಾರ್ ಕಾಯ್ದೆಯನ್ನು ಸಿದ್ಧಪಡಿಸುವಲ್ಲಿ ಯಾವ್ಯಾವ ತಲೆಗಳು ಯಾವ ಥಿಂಕ್‌ಟ್ಯಾಂಕ್ ಒಳಗೊಂಡಿತ್ತೋ ಅದೇ ಥಿಂಕ್‌ಟ್ಯಾಂಕ್ ಶ್ರೀಕೃಷ್ಣ ಸಮಿತಿಯ ಚರ್ಚೆಗಳಲ್ಲೂ ಒಳಗೊಂಡಿತ್ತು, ಆ ಚರ್ಚೆಗಳಲ್ಲಿ ಪ್ರಮುಖವಾದ ಒಂದು ಪೋಷಕ ಪಾತ್ರ ವಹಿಸಿತ್ತು ಎಂಬುದು ತಡವಾಗಿ ಬೆಳಕಿಗೆ ಬಂತು.
ಇತ್ತೀಚೆಗೆ, 150 ಮಂದಿ ನಾಗರಿಕರು ಸಮಿತಿಯ ಕಾರ್ಯ ವಿಧಾನದಲ್ಲಿ ಇನ್ನಷ್ಟು ಹೆಚ್ಚಿಗೆ ಪಾರದರ್ಶಕತೆ ಹಾಗೂ ಉತ್ತರ ದಾಯಿತ್ವ ಬೇಕಾಗಿದೆ ಎಂದು ಹೇಳಿ ಮತ್ತೊಮ್ಮೆ ಸಮಿತಿಗೆ ತಮ್ಮ ಮನವಿಯನ್ನು ಸಲ್ಲಿಸಿದರು. ಆದರೆ ಸಮಿತಿ ಇದ್ಯಾವುದಕ್ಕೂ ಉತ್ತರ ಕೊಡದೆ ದಿವ್ಯಮೌನ ತಾಳಿತು. ಸಮಿತಿಯು ತರಲಿದ್ದ ಕರಡು ಮಸೂದೆಗೆ ಸಂಬಂಧಿಸಿ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಲು ಅವಕಾಶವನ್ನೇ ನೀಡಲಿಲ್ಲ. ಸಮಿತಿಗೆ ಸಲ್ಲಿಸಲಾದ ಟಿಪ್ಪಣಿಗಳನ್ನು ಹಾಗೂ ವಿನಂತಿಗಳನ್ನು ಅದು ಪರಿಗಣಿಸಲೇ ಇಲ್ಲ. ಈಗ ತನ್ನ ಅಂತಿಮ ವರದಿಯಲ್ಲಿ ಸಮಿತಿಯು ‘‘ಖಾಸಗಿತನದ ರಕ್ಷಣೆಗಾಗಿ ಮತ್ತು ಯುಐಡಿಎಐಯ ಸ್ವಾಯತ್ತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಆಧಾರ್ ಕಾಯ್ದೆಯನ್ನು ಮಹತ್ವಪೂರ್ಣವಾಗಿ ತಿದ್ದುಪಡಿ ಮಾಡುವ ಅಗತ್ಯವಿದೆ’’ ಎಂದು ಹೇಳಿದೆ. ಆಧಾರ್ ಯೋಜನೆಗೆ ಸಂಬಂಧಿಸಿ ವ್ಯಕ್ತವಾದ ಆತಂಕಗಳು (ಸಮಾಜ) ಕಲ್ಯಾಣ ಕಾರ್ಯಕ್ರಮಗಳು ಮತ್ತು ಖಾಸಗಿತನದ ಸುತ್ತ ವ್ಯಕ್ತವಾದವುಗಳು. ಇವುಗಳಲ್ಲಿ ಬೇಹುಗಾರಿಕೆ, ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳಲ್ಲದೆ, ಮಾಹಿತಿ ವಾಣಿಜ್ಯೀಕರಣ, ಬಲಾತ್ಕಾರ/ಬಲವಂತ ಪಡಿಸುವಿಕೆ ಮತ್ತು ಆಯ್ಕೆಯ ಪ್ರಶ್ನೆಗಳಿವೆ.
ಮೊದಲ ನೋಟಕ್ಕೆ ಮಾಹಿತಿ ರಕ್ಷಣೆಯ ಕರಡು ಕಲ್ಯಾಣ ಕಾರ್ಯಕ್ರಮಗಳಿಗೆ ಭಾರೀ ವಿನಾಯಿತಿ ನೀಡಿರುವಂತೆ ತೋರುತ್ತದೆ. ಕರಡಿನ 13ನೇ ಸೆಕ್ಷನ್ ಸಂಸತ್ ಅಥವಾ ರಾಜ್ಯ ಶಾಸಕಾಂಗದ ಯಾವುದೇ ಕೆಲಸಕ್ಕೆ ವ್ಯಕ್ತಿಯೊಬ್ಬನ ಅನುಮತಿ ಇಲ್ಲದೆ ವೈಯಕ್ತಿಕ ಮಾಹಿತಿ ಪಡೆಯುವುದನ್ನು ಸಾಧ್ಯವಾಗಿಸುತ್ತದೆ. ಯಾವುದೇ ಕೆಲಸಕ್ಕೆ ಅಗತ್ಯವಾದಲ್ಲಿ ಸೇವೆಗಳ ವಿತರಣೆ ಅಥವಾ ಸವಲತ್ತುಗಳ ನೀಡಿಕೆಗೆ ಓರ್ವನ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಈ ಸೆಕ್ಷನ್ ಅವಕಾಶ ನೀಡುತ್ತದೆ. ಆದರೆ ನಮ್ಮ ಬದುಕಿನ ಹಲವಾರು ಮುಖಗಳನ್ನು, ಹಲವಾರು ಅಂಶಗಳನ್ನು (ಕಲ್ಯಾಣ ಕಾರ್ಯಕ್ರಮಗಳು ಆದಾಯ ತೆರಿಗೆ ರಿಟರ್ನ್ಸ್, ಆರೋಗ್ಯ ಸೇವೆ ಸಬ್ಸಿಡಿಗಳು, ಸಿಮ್ ಕಾರ್ಡ್‌ಗಳು ಇತ್ಯಾದಿ) ಆಧಾರ್ ಆವರಿಸಿಕೊಂಡಿರುವಾಗ ಈ ಸೆಕ್ಷನ್ ತುಂಬಾ ಅಪಾಯಕಾರಿ, ಆತಂಕಕಾರಿ ಅನ್ನಿಸುತ್ತದೆ. ಯಾಕೆಂದರೆ ಆಧಾರ್ ಅಥವಾ ಆಧಾರ್ ದೃಢೀಕರಣವು ಸರಕಾರದ ಯಾವುದೇ ಕೆಲಸ ನಿರ್ವಹಿಸಲು ಖಂಡಿತವಾಗಿಯೂ ಅವಶ್ಯಕವೇ? ಅನಿವಾರ್ಯವೇ?
ಕರಡು ಮಸೂದೆಯಲ್ಲಿ ನಾವು ಈ ಪ್ರಶ್ನೆ ಕೇಳಲು ಅವಕಾಶವಿದೆ. ಯಾಕೆಂದರೆ ಪ್ರೊ. ರಿತಿಕಾ ಖೇರಾ ಹೇಳುವಂತೆ, ‘‘ಒಂದು ಮೀನಿಗೆ ಒಂದು ಸೈಕಲ್‌ನ ಅಗತ್ಯವಿರುವ ಹಾಗೆ ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ಅಗತ್ಯವಿದೆ.’’ ಮಹಿಳೆಯೊಬ್ಬಳಿಗೆ ತನ್ನ ಪಿಂಚಣಿ ಪಡೆಯಲು ಆಧಾರ್ ಅಥವಾ ಆಧಾರ್ ದೃಢೀಕರಣ ಯಾಕೆ ಬೇಕು?
ಆಧಾರ್ ಯೋಜನೆಯ ಟೀಕಾಕಾರರು ಯೋಜನೆಯ ಆರಂಭದಿಂದಲೂ ಅದರ ವಿಪರೀತ ವ್ಯಾಪ್ತಿಯ ಬಗ್ಗೆ ಸರಕಾರದ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಸಹಾಯಧನ ಸವಲತ್ತುಗಳು ಮತ್ತು ಸೇವೆಗಳ ಸಮರ್ಪಕ ಪಾರದರ್ಶಕ ವಿತರಣೆಯೇ ಆಧಾರ್ ಕಾಯ್ದೆಯ ಉದ್ದೇಶವೆಂದು ಹೇಳಲಾಗಿತ್ತಾದರೂ ಬೇಕಾಬಿಟ್ಟಿಯಾಗಿ ಹಾಗೂ ಅನಿಯಂತ್ರಿತವಾಗಿ ಅದನ್ನು ಇತರ ಹಲವಾರು ಕ್ಷೇತ್ರಗಳಿಗೆ ವಿಸ್ತರಿಸಲಾಗಿದೆ. ಅಲ್ಲದೆ ಆಧಾರ್ ದೃಢೀಕರಣ, ಅದರ ಬಯೋಮೆಟ್ರಿಕ್ ವ್ಯವಸ್ಥೆ ಕೂಡ ವಿವಾದಾಸ್ಪದವಾಗಿದೆ. ಪಡಿತರ ಅಂಗಡಿಗೆ ಹೋದಾಗ ಅಲ್ಲಿರುವ ಯಂತ್ರ ನನ್ನ ಬೆರಳಚ್ಚನ್ನು ಪರೀಕ್ಷಿಸಿ ನಾನು ಹೇಳುವ ವ್ಯಕ್ತಿ ನಾನೇ ಹೌದು ಎಂದು ನಿರ್ಧರಿಸಿದಲ್ಲಿ ಮಾತ್ರ ನನಗೆ ಪಡಿತರ ದೊರಕುತ್ತದೆ. ಯಾಂತ್ರಿಕ ದೋಷದಿಂದಲೋ, ಇನ್ಯಾವುದೋ ಕಾರಣದಿಂದಲೋ ಅದು ನಾನು ನಾನಲ್ಲ ಎಂದರೆ ನನಗೆ ಪಡಿತರ ದೊರಕುವುದಿಲ್ಲ. ವ್ಯಕ್ತಿಯ ಗುರುತನ್ನು ದೃಢೀಕರಿಸುವ ಇತರ ಹಲವಾರು ವಿಧಾನಗಳು, ದಾಖಲೆಗಳು ಲಭ್ಯವಿರುವಾಗ ಆಧಾರ್‌ಗೇ ನಾವು ಯಾಕೆ ಜೋತು ಬೀಳಬೇಕು? ಈಗ ಸಮಿತಿಯ ಕರಡು ಮಸೂದೆ ಒಂದು ಹೊಸ ಆಫ್‌ಲೈನ್ ವೆರಿಫಿಕೇಷನ್ (ದೃಢೀಕರಣ) ಬಗ್ಗೆ ಪ್ರಸ್ತಾಪಿಸಿದೆ. ಈ ವ್ಯವಸ್ಥೆ ಏನೆಂದು ಇನ್ನೂ ಸ್ಪಷ್ಟವಾಗಿಲ್ಲವಾದರೂ ಆಧಾರ ವ್ಯವಸ್ಥೆ ಎಷ್ಟು ಮುರಿದು ಬಿದ್ದಿದೆ ಎಂಬುದನ್ನು ಇದು ಸೂಚಿಸುತ್ತದೆ.
ಅದೇನಿದ್ದರೂ ಮಾಹಿತಿ ರಕ್ಷಣೆಯ ಕರಡು ಮಸೂದೆ ಕಾಯ್ದೆಯಾದಾಗ ಆಧಾರ್ ಕಾಯ್ದೆ ಮತ್ತು ಮಾಹಿತಿ ರಕ್ಷಣೆ ಕಾಯ್ದೆ ಅದು ಹೇಗೆ ಏಕಕಾಲದಲ್ಲಿ ಜೊತೆಜೊತೆಯಾಗಿ ಅಸ್ತಿತ್ವದಲ್ಲಿ ಇರಬಲ್ಲದು ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ ಒಂದಂತೂ ಸ್ಪಷ್ಟ. ಯಾರ ಮೇಲೆ ಕಾಯ್ದೆ ಪರಿಣಾಮ ಬೀರುತ್ತದೋ ಅವರ ಅಭಿಪ್ರಾಯಗಳನ್ನು ಒಳಗೊಳ್ಳದೆ ಮಾಹಿತಿ ರಕ್ಷಣೆಯ ಸುತ್ತ ನಡೆಯುವ ಚರ್ಚೆ ಅಪೂರ್ಣವಾಗಿಯೇ ಉಳಿಯುತ್ತದೆ.
ಕೃಪೆ: thewire.in

 

Writer - ಪ್ರಾವಿತ

contributor

Editor - ಪ್ರಾವಿತ

contributor

Similar News

ಜಗದಗಲ
ಜಗ ದಗಲ