200 ರೂ. ದುಡಿಯುತ್ತಿದ್ದ ಆಟೊ ಚಾಲಕ ಈಗ ಮೇಯರ್

Update: 2018-08-06 10:07 GMT

ಮುಂಬೈ, ಆ.6: ಆಟೋ ಚಾಲಕರೊಬ್ಬರು ಪಿಂಪ್ರಿ-ಚಿಂಚ್ವಾಡ್ ನಗರದ ಮೇಯರ್ ಆದ ಕಥೆಯಿದು. ರಾಹುಲ್ ಜಾಧವ್ ಎಂಬ ಈ ಆಟೋ ಚಾಲಕನ ಜೀವನಗಾಥೆ ಆಸಕ್ತಿದಾಯಕ ಹಾಗೂ ಸ್ಫೂರ್ತಿದಾಯಕ. ಹತ್ತು ವರ್ಷಗಳ ಹಿಂದೆ ಕೇವಲ 200 ರೂ. ಆದಾಯದೊಂದಿಗೆ ದಿನದೂಡುತ್ತಿದ್ದ ರಾಹುಲ್ ಜೀವನಗತಿಯೇ ಒಂದು ದಶಕದೊಳಗೆ ಬದಲಾಗಿ ಹೋಗಿದೆ.

ಶನಿವಾರ ಪಿಂಪ್ರಿ-ಚಿಂಚ್ವಾಡ್ ನಗರದ ಮೇಯರ್ ಆಗಿ 36 ವರ್ಷದ ರಾಹುಲ್ ಜಾಧವ್ ಆಯ್ಕೆಯಾದ ಸಂದರ್ಭ ಅವರು  ಸಮಾಜ ಸುಧಾರಕ ಜ್ಯೋತಿಭಾ ಫುಲೆ ಧರಿಸುತ್ತಿದ್ದಂತಹುದೇ ವಸ್ತ್ರ ಧರಿಸಿದ್ದರು.

ಹತ್ತನೇ ತರಗತಿಯಲ್ಲಿರುವಾಗಲೇ ಶಿಕ್ಷಣ ತ್ಯಜಿಸಿದ ಅವರು 1997ರಿಂದ 2002ರ ತನಕ ಐದು ವರ್ಷಗಳ ಕಾಲ  ಆರು ಸೀಟುಗಳ ಆಟೋರಿಕ್ಷಾ ಚಾಲಕರಾಗಿ ಚಿಖ್ಲಿ, ಭೊಸರಿ ಹಾಗೂ ಮೋಶಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಅವರು ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು 2007ರಲ್ಲಿ ಸೇರಿದ್ದರು. ಮುಂದೆ  ಸೇನೆಯ ಪ್ರತಿನಿಧಿಯಾಗಿ ಪಿಂಪ್ರಿ ಚಿಂಚ್ವಾಡಿ ಮುನಿಸಿಪಲ್ ಕೌನ್ಸಿಲ್ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.

ಮುಂದೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ತೊರೆದು 2017ರ ಮುನಿಸಿಪಲ್ ಚುನಾವಣೆ ವೇಳೆ ಬಿಜೆಪಿಯನ್ನು ಸೇರಿ ಜಾಧವವಾಡಿ ವಾರ್ಡ್ ನಿಂದ 3000 ಮತಗಳ ಅಂತರದಿಂದ ಗೆದ್ದಿದ್ದರು. ಶನಿವಾರದ ಮೇಯರ್ ಚನಾವಣೆಯಲ್ಲಿ ಜಾಧವ್ ಅವರು 80 ಮತಗಳನ್ನು ಪಡೆದರೆ ಎನ್‍ಸಿಪಿ ಅಭ್ಯರ್ಥಿ ವಿನೋದ್ ನಧೆ 33 ಮತಗಳನ್ನು ಪಡೆದಿದ್ದರು.

ಕೈಗಾರಿಕಾ ನಗರಿಯಾದ ಪಿಂಪ್ರಿ-ಚಿಂಚ್ವಾಡ್ ಮೇಯರ್ ಆಗಿ ಜಾಧವ್ ಒಂದು ವರ್ಷ ಸೇವೆ ಸಲ್ಲಿಸಲಿದ್ದಾರೆ. ಉಪಮೇಯರ್ ಆಗಿ ಬಿಜೆಪಿಯ  ಸಚಿನ್ ಚಿಂಚ್ವಾಡೆ  ಆಯ್ಕೆಯಾಗಿದ್ದಾರೆ. ``ಆಟೋ ಚಾಲಕರಂತಹ ಜನಸಾಮಾನ್ಯರ ನೋವು ನನಗರ್ಥವಾಗುತ್ತದೆ, ನನ್ನ ಮೇಯರ್ ಅವಧಿಯಲ್ಲಿ ಬಡವರ ಉದ್ಧಾರಕ್ಕೆ ಶ್ರಮಿಸುತ್ತೇನೆ,'' ಎಂದು ಜಾಧವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News