‘ಎಬಿಪಿ’ ನ್ಯೂಸ್ ನಿಂದ ಪ್ರಸೂನ್ ಬಾಜಪೈ ಹೊರನಡೆದದ್ದೇಕೆ?, ಅವರು ಎದುರಿಸಿದ ಒತ್ತಡ, ಬೆದರಿಕೆಗಳೇನು?

Update: 2018-08-06 15:11 GMT

ಎಬಿಪಿ ನ್ಯೂಸ್ ಚಾನೆಲ್ ನ ಪ್ರೈಮ್ ಟೈಮ್ ಶೋ ‘ಮಾಸ್ಟರ್ ಸ್ಟ್ರೋಕ್’ನಲ್ಲಿ ಸರಕಾರದ ನೀತಿಗಳನ್ನು ಟೀಕಿಸುವಾಗ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಅಥವಾ ಉಲ್ಲೇಖಗಳನ್ನು ಬಳಸಬಾರದು ಎಂದು ತನಗೆ ನ್ಯೂಸ್ ಚಾನಲ್ ನ ಪ್ರಧಾನ ಸಂಪಾದಕ ಸೂಚಿಸಿದ್ದರು ಎಂದು ಪತ್ರಕರ್ತ ಪುಣ್ಯ ಪ್ರಸೂನ್ ಬಾಜಪೈ ಆರೋಪಿಸಿದ್ದಾರೆ. ಈ ಬಗ್ಗೆ ಅವರು Thewire.inಗೆ ಲೇಖನ ಬರೆದಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಫೋಟೊ ಅಥವಾ ವಿಡಿಯೋಗಳನ್ನು ಕೂಡ ಬಳಸದಂತೆ ತನ್ನ ತಂಡಕ್ಕೂ ಸೂಚಿಸಲಾಗಿತ್ತು ಎಂದವರು ಆರೋಪಿಸಿದ್ದಾರೆ.

ಕೇಂದ್ರ ಸರಕಾರದ ಯೋಜನೆಯಿಂದ ತನ್ನ ಆದಾಯ ದ್ವಿಗುಣವಾಗಿದೆ ಎಂದು ಹೇಳಲು ಛತ್ತೀಸ್ ಗಢದ ಮಹಿಳೆಯೊಬ್ಬಳಿಗೆ ತರಬೇತಿ ನೀಡಲಾಗಿತ್ತು ಎಂಬ ವರದಿ ಪ್ರಸಾರವಾದ ನಂತರ ಆಡಳಿತ ಪಕ್ಷದ ಸಚಿವರಿಂದ ಚಾನೆಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆನಂತರ ಎಬಿಪಿ ನ್ಯೂಸ್ ಮ್ಯಾನೇಜಿಂಗ್ ಎಡಿಟರ್ ಮಿಲಿಂದ್ ಖಂಡೇಕರ್ ರಾಜೀನಾಮೆ ನೀಡಿದ್ದು, ಈ ಬೆಳವಣಿಗೆಯ ನಂತರ ಬಾಜಪೈ ಈ ಆರೋಪ ಮಾಡಿದ್ದಾರೆ.

ಈ ವರದಿ ಪ್ರಸಾರವಾದ ನಂತರ ಸರಕಾರಿ ಅಧಿಕಾರಿಗಳಿಂದ ತನಗೆ ಕರೆಗಳು ಬಂದಿದ್ದು, ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಲಾಗಿತ್ತು ಎಂದವರು ಆರೋಪಿಸಿದ್ದಾರೆ. ಆನಂತರ ಎಬಿಪಿ ನ್ಯೂಸ್ ಹಲವು ಸಮಸ್ಯೆಗಳನ್ನು ಎದುರಿಸಿತು. ಸ್ಯಾಟಲೈಟ್ ಸಿಗ್ನಲ್ ಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿತು. ಜಾಹೀರಾತುದಾರರಿಗೂ ಬೆದರಿಕೆಯೊಡ್ಡಲಾಯಿತು ಎಂದವರು ಹೇಳಿದ್ದಾರೆ.

ತನ್ನ ರಾಜೀನಾಮೆಯ ನಂತರ ಸ್ಯಾಟಲೈಟ್ ಸಿಗ್ನಲ್ ಗಳು ಸರಿಯಾದವು. ಜಾಹೀರಾತುಗಳೂ ಬರಲು ಆರಂಭಿಸಿದವು. ಜುಲೈ 14ರಂದು ಪ್ರಧಾನ ಸಂಪಾದಕರೊಂದಿಗಿನ ಮಾತುಕತೆಯನ್ನೂ ಬಾಜಪೈ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

“ನರೇಂದ್ರ ಮೋದಿಯವರ ಹೆಸರನ್ನು ಬಳಸದೇ ಇರಲು ಸಾಧ್ಯವೇ?, ನಿಮಗೆ ಬೇಕಿದ್ದರೆ ಅವರ ಸಚಿವರ ಹೆಸರುಗಳನ್ನು ಬಳಸಿ, ಸರಕಾರದ ನೀತಿಯಲ್ಲಿನ ತಪ್ಪುಗಳನ್ನು ನೀವು ವರದಿ ಮಾಡಬಹುದು. ಸಚಿವರ ಹೆಸರನ್ನೂ ಬಳಸಬಹುದು. ದಯವಿಟ್ಟು ನರೇಂದ್ರ ಮೋದಿಯವರ ಹೆಸರನ್ನು ಉಲ್ಲೇಖಿಸಬೇಡಿ”.

“ಎಲ್ಲಾ ಯೋಜನೆಗಳನ್ನು ಪ್ರಧಾನಿಯೇ ಘೋಷಿಸುತ್ತಿದ್ದರೆ, ಎಲ್ಲಾ ಸಚಿವರ ಕೆಲಸದೊಂದಿಗೆ ಸಂಬಂಧ ಹೊಂದಿದ್ದರೆ, ಯಾವುದೇ ಸರಕಾರಿ ಯೋಜನೆ ಅಥವಾ ನೀತಿಗಳನ್ನು ಉಲ್ಲೇಖಿಸುವಾಗ ಎಲ್ಲಾ ಸಚಿವರು ಪ್ರಧಾನಿಯ ಹೆಸರನ್ನೇ ಹೇಳುತ್ತಿದ್ದರೆ, ಯಾರಾದರೂ ಅವರ ಹೆಸರನ್ನು ಉಲ್ಲೇಖಿಸದೆ ಇರಲು ಸಾಧ್ಯವೇ?”

“ಕೆಲದಿನಗಳ ನಂತರ ಏನು ನಡೆಯಬಹುದು ಎನ್ನುವುದನ್ನು ನೋಡಿ. ನೀವು ಸರಿಯಾದದ್ದನ್ನೇ ಮಾಡುತ್ತಿದ್ದೀರಿ. ಆದರೆ ಸದ್ಯಕ್ಕೆ ಸುಮ್ಮನಿರಿ”

‘ಮಾಸ್ಟರ್ ಸ್ಟ್ರೋಕ್’ನಲ್ಲಿ ಛತ್ತೀಸ್ ಗಢದ ವರದಿ ಪ್ರಸಾರವಾದ ನಂತರ ರೇಟಿಂಗ್ಸ್ ಹೆಚ್ಚುತ್ತಾ ಹೋಯಿತು. ಆದರೆ ಬಿಜೆಪಿ ದೇಶಾದ್ಯಂತ ಚಾನೆಲನ್ನು ಬಹಿಷ್ಕರಿಸಲು ಆರಂಭಿಸಿತು ಎಂದು ಬಾಜಪೈ ಆರೋಪಿಸಿದ್ದಾರೆ. ಚಾನೆಲ್ ನ ವಾರ್ಷಿಕ ಸಮ್ಮೇಳನದಿಂದಲೂ ದೂರವುಳಿಯಲು ಬಿಜೆಪಿ ಹಾಗು ಸರಕಾರ ನಿರ್ಧರಿಸಿತು ಎಂದವರು ಹೇಳಿದರು.

“ಸರಕಾರವನ್ನು ವಿರೋಧಿಸಿದರೆ ಚಾನೆಲ್ ನ ಉದ್ಯಮಕ್ಕೆ ಹೊಡೆತ ಬೀಳಲಿದೆ ಎಂದು ಈ ಬೆಳವಣಿಗೆ ಎಲ್ಲಾ ನ್ಯೂಸ್ ಚಾನೆಲ್ ಗಳಿಗೂ ಸಂದೇಶ ರವಾನಿಸಿದೆ. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶದ ಸರಕಾರವು ಪ್ರಜಾಪ್ರಭುತ್ವದ ಕತ್ತು ಹಿಸುಕಲು ಆರಂಭಿಸಿದೆ. ಆದ್ದರಿಂದ ಯಾವ ನ್ಯೂಸ್ ಚಾನೆಲ್ ಗಳೂ ಕೂಡ ಸರಕಾರವನ್ನು ಹೊಗಳುವುದರಿಂದ ದೂರ ಸರಿಯುವುದಿಲ್ಲ” ಎಂದು ಬಾಜಪೈ ತಿಳಿಸಿದ್ದಾರೆ.

ಎಬಿಪಿ ಪ್ರಸಾರ ಮಾಡಿದ್ದ ವರದಿ ಸುಳ್ಳು ಎಂದು ಸರಕಾರ ವಾದಿಸಿತ್ತು. ಚಾನೆಲ್ ವಿರುದ್ಧ ಸಚಿವರು ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಚಾನೆಲ್ ಮತ್ತೊಮ್ಮೆ ಮಹಿಳೆಯ ಸಂದರ್ಶನ ನಡೆಸಲು ವರದಿಗಾರನನ್ನು ಕಳುಹಿಸಿತ್ತು. ಜುಲೈ 9ರಂದು ಅದರ ಫಾಲೋಅಪ್ ವರದಿ ಪ್ರಸಾರವಾಗಿತ್ತು. ಈ ಸಂದರ್ಭ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ನ್ಯೂಸ್ ಚಾನೆಲ್ ಗಳ ಮೇಲ್ವಿಚಾರಣೆ ನಡೆಸುತ್ತಿದ್ದ ತಂಡದ ಅಧಿಕಾರಿಯೊಬ್ಬರು ಬಾಜಪೈಗೆ ಕರೆ ಮಾಡಿದ್ದರು. “ಈಗ ಏನು ಬೇಕಾದರೂ ಸಂಭವಿಸಬಹುದು” ಎಂದು ಎಚ್ಚರಿಸಿದ್ದರು ಎಂದು ಬಾಜಪೈ ಆರೋಪಿಸಿದ್ದಾರೆ.

ಈ ಕರೆಯ ಮರುದಿನ ಚಾನೆಲ್ ನ ಸ್ಯಾಟಲೈಟ್ ಲಿಂಕ್ ಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡವು. ರಾತ್ರಿ 9 ಗಂಟೆಯಿಂದ 10 ಗಂಟೆಯವರೆಗೆ ಸಮಸ್ಯೆ ಮುಂದುವರಿಯಿತು. ಇದೇ ಸಮಯದಲ್ಲಿ ‘ಮಾಸ್ಟರ್ ಸ್ಟ್ರೋಕ್’ ಪ್ರಸಾರವಾಗುತ್ತದೆ.

ಇದೇ ಸಮಸ್ಯೆ ಮೂರು ದಿನಗಳ ಕಾಲ ಮುಂದುವರಿದಾಗ ಈ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಬೇಕೆಂದು ಚಾನೆಲ್ ನಿರ್ಧರಿಸಿತು. ಆದರೆ ಗಂಟೆಗಳೊಳಗಾಗಿ ಮ್ಯಾನೇಜ್ ಮೆಂಟ್ ಅದನ್ನು ತೆಗೆದು ಹಾಕಿತು. “ಚಾನೆಲ್ ನ ಪ್ರಸಾರಕ್ಕೆ ಸಮಸ್ಯೆ ಮಾತ್ರ ಒತ್ತಡವಲ್ಲ. ಇದರ ಮಾಹಿತಿ ಹೊರಹೋಗದಂತೆಯೂ ಒತ್ತಡವಿತ್ತು” ಎಂದವರು ಆರೋಪಿಸಿದ್ದಾರೆ.

“ವಿದೇಶಿ ಬ್ರಾಂಡ್ ಗಳ ವಿರುದ್ಧ ಹೋರಾಟ ನಡೆಸುವುದಾಗಿ ಹೇಳುವ ಜಾಹೀರಾತುದಾರರು ಸೇರಿ ಕೆಲ ಜಾಹೀರಾತುದಾರರು ಅವರ ಜಾಹೀರಾತುಗಳನ್ನು ಹಿಂಪಡೆಯತೊಡಗಿದರು. ‘ಅಗೋಚರ ಶಕ್ತಿಗಳು’ ಜಾಹೀರಾತುದಾರರನ್ನೂ ಬೆದರಿಸಿವೆ ಎನ್ನುವ ಮಾಹಿತಿಗಳೂ ಇವೆ” ಎಂದವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News