×
Ad

ದೇಶದ ಪುತ್ರಿಯರನ್ನು ಬಿಜೆಪಿ ಶಾಸಕರಿಂದ ರಕ್ಷಿಸಬೇಕಿದೆ: ರಾಹುಲ್ ಗಾಂಧಿ

Update: 2018-08-07 23:17 IST

ಹೊಸದಿಲ್ಲಿ, ಆ.7: ಪ್ರಧಾನಿ ಮೋದಿ ವಿವಿಧ ವಿಷಯಗಳ ಬಗ್ಗೆ ಭಾಷಣ ಬಿಗಿಯುತ್ತಾರೆ. ಆದರೆ ಮಹಿಳೆಯರ ಮೇಲೆ ಹಲ್ಲೆಯಾದಾಗ, ಬಿಹಾರ ಮತ್ತು ಉ.ಪ್ರದೇಶದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣ ವರದಿಯಾದಾಗ ಅವರು ತುಟಿ ಬಿಚ್ಚುವುದಿಲ್ಲ. ಭಾರತದ ಪುತ್ರಿಯರನ್ನು ಬಿಜೆಪಿಯ ಶಾಸಕರಿಂದ ರಕ್ಷಿಸಬೇಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ನಡೆದ ಮಹಿಳಾ ಅಧಿಕಾರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪುರುಷರು ಮಾತ್ರ ದೇಶವನ್ನು ಆಳಬೇಕೆಂಬುದು ಬಿಜೆಪಿಯ ಚಿಂತನೆಯಾಗಿದೆ. ಬಿಜೆಪಿಯ ಮಾತೃಸಂಸ್ಥೆಯಾಗಿರುವ ಆರೆಸ್ಸೆಸ್‌ನ ಇತಿಹಾಸದಲ್ಲಿಯೇ ಯಾವುದೇ ಮಹಿಳೆಗೆ ಅಧಿಕಾರದಲ್ಲಿರಲು ಅವಕಾಶ ನೀಡಲಾಗಿಲ್ಲ. ಆದರೆ ಕಾಂಗ್ರೆಸ್ ಹಾಗಲ್ಲ, ಕಾಂಗ್ರೆಸ್ ಪಕ್ಷ ಮಹಿಳೆಯರ ಬಗ್ಗೆ ಗೌರವದ ಭಾವನೆ ಹೊಂದಿದೆ. ಎರಡೂ ಪಕ್ಷಗಳ ಸಿದ್ಧಾಂತದ ನಡುವಿರುವ ಅತೀ ದೊಡ್ಡ ಭಿನ್ನತೆ ಇದಾಗಿದೆ ಎಂದು ಹೇಳಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಳ್ಳಲು ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಪುನರುಚ್ಚರಿಸಿದ ಅವರು, ಈ ಸರಕಾರಕ್ಕೆ ಸಾಧ್ಯವಾಗದಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮಸೂದೆಗೆ ಅನುಮೋದನೆ ಪಡೆಯುತ್ತೇವೆ ಎಂದರು. ಆರೆಸ್ಸೆಸ್ ಮತ್ತು ಬಿಜೆಪಿ ಒಟ್ಟುಸೇರಿ ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳಾದ ಚುನಾವಣಾ ಆಯೋಗ, ನ್ಯಾಯಾಂಗ, ಪತ್ರಿಕಾರಂಗದ ಮೇಲೆ ದಾಳಿನಡೆಸುತ್ತಿವೆ. ಈ ಸಂಸ್ಥೆಗಳನ್ನು ರಕ್ಷಿಸುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ, ಅದರಲ್ಲೂ ಮಹಿಳಾ ಸದಸ್ಯರ ಮೇಲಿದೆ ಎಂದು ರಾಹುಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News