ಖಾಸಗಿ ವಲಯಗಳಲ್ಲೂ ಮೀಸಲಾತಿ ಜಾರಿಗೆ ಬರಲಿ

Update: 2018-08-07 18:41 GMT

‘‘ದೇಶದಲ್ಲಿ ಯುವಕರಿಗೆ ಉದ್ಯೋಗವೇ ಇಲ್ಲ’’ ಎನ್ನುವುದನ್ನು ಬಿಜೆಪಿ ಮುಖಂಡ, ಕೇಂದ್ರ ಸಚಿವ ನಿತಿನ್ ಗಡ್ಕರಿ ಒಪ್ಪಿಕೊಂಡಿದ್ದಾರೆ. ಮರಾಠರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎನ್ನುವ ಕೂಗಿಗೆ ಅವರು ಸ್ಪಷ್ಟೀಕರಣ ನೀಡುವ ಸಂದರ್ಭದಲ್ಲಿ ‘‘ದೇಶದಲ್ಲಿ ಉದ್ಯೋಗವೇ ಇಲ್ಲದಿರುವಾಗ, ಇನ್ನು ಮೀಸಲಾತಿ ನೀಡುವ ಪ್ರಶ್ನೆ ಎಲ್ಲಿ ಬಂತು?’’ ಎಂದು ಮಾಧ್ಯಮ ಮಿತ್ರರಿಗೆ ಕೇಳಿದ್ದಾರೆ. ಮರಾಠರಿಗೆ ಮೀಸಲಾತಿ ನೀಡುವುದು ಸರಿಯೋ ತಪ್ಪೋ ಎನ್ನುವುದು ಆನಂತರದ ಪ್ರಶ್ನೆ. ದೇಶದಲ್ಲಿ ಉದ್ಯೋಗವೇ ಇಲ್ಲ ಎನ್ನುವ ಹೇಳಿಕೆ ಮೀಸಲಾತಿ ನೀಡದೇ ಇರುವುದಕ್ಕೆ ಹೇಗೆ ಸಮರ್ಥನೆಯಾಗುತ್ತದೆ? ಎನ್ನುವುದೇ ಇಲ್ಲಿನ ಮುಖ್ಯ ಪ್ರಶ್ನೆ. ಈ ದೇಶದ ಯುವಕರಿಗೆ ಉದ್ಯೋಗಗಳನ್ನು ದುಪ್ಪಟ್ಟುಗೊಳಿಸುತ್ತೇವೆ ಎಂದು ಭರವಸೆ ನೀಡಿ ಅಧಿಕಾರ ಹಿಡಿದ ಸರಕಾರವೇ, ಇದೀಗ ‘‘ದೇಶದಲ್ಲಿ ಉದ್ಯೋಗವೇ ಇಲ್ಲ’’ ಎಂದು ಹೇಳಿ ಕೈ ಚೆಲ್ಲಿ ಕೂರುವುದು ಎಷ್ಟು ಸರಿ? ಇದು ವೈಫಲ್ಯವನ್ನು ಒಪ್ಪಿಕೊಂಡಂತಲ್ಲವೆ? ಮೋದಿ ಅಧಿಕಾರ ಹಿಡಿದ ಬೆನ್ನಿಗೇ ಉದಾರೀಕರಣದ ಹೆಬ್ಬಾಗಿಲನ್ನೇ ವಿದೇಶಿಯರಿಗಾಗಿ ತೆರೆದುಕೊಟ್ಟರು.

ಮೇಕ್ ಇನ್ ಇಂಡಿಯಾ ಇತ್ಯಾದಿಗಳ ಹೆಸರಿನಲ್ಲಿ ಯುವ ಜನರನ್ನು ಮಂಕು ಮರುಳು ಮಾಡುತ್ತಾ, ದೇಶದಲ್ಲಿ ಉದ್ಯೋಗಗಳು ಹೆಚ್ಚಲಿವೆ ಎನ್ನುವುದನ್ನು ಇತ್ತೀಚಿನವರೆಗೆ ನಂಬಿಸುತ್ತಾ ಬಂದಿದ್ದಾರೆ. ಆದರೆ ನೋಟು ನಿಷೇಧದ ಬಳಿಕ ದೇಶದ ಯುವಜನರ ಸ್ಥಿತಿ ಚಿಂತಾಜನಕವಾಗಿದೆ. ಸರಕಾರಿ ಉದ್ಯೋಗಗಳು ಪಕ್ಕಕ್ಕಿರಲಿ, ಸಣ್ಣ ಪುಟ್ಟ ಉದ್ದಿಮೆಗಳೇ ನೆಲಕಚ್ಚಿವೆ. ಗ್ರಾಮೀಣ ಕೃಷಿ ಉದ್ಯಮಗಳು ನೆಲೆ ಕಳೆದುಕೊಂಡು ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆೆ. ಆದರೂ ಇವೆಲ್ಲವುಗಳನ್ನು ಮುಚ್ಚಿಟ್ಟು, ದೇಶದಲ್ಲಿ ಅಚ್ಛೇದಿನ್ ಬಂದೇ ಬಿಟ್ಟಿದೆ ಎನ್ನುವುದನ್ನು ಮಾಧ್ಯಮಗಳ ಮೂಲಕ ಬಿಂಬಿಸುತ್ತಾ ಇದ್ದಾರೆ. ಆದರೆ ಯಾವಾಗ ಮರಾಠರು ಮೀಸಲಾತಿಗಾಗಿ ಬೀದಿಗಿಳಿದರೋ, ಆಗ ದೇಶದ ನಿಜವಾದ ಸ್ಥಿತಿಯನ್ನು ಮುಂದಿಟ್ಟು ತಮ್ಮನ್ನು ತಾವು ರಕ್ಷಿಸಲು ಹೊರಟಿದ್ದಾರೆ. ದೇಶದಲ್ಲಿ ಉದ್ಯೋಗಗಳು ಸಂಪೂರ್ಣ ಇಳಿಮುಖವಾಗಿದೆಯಾದರೆ, ನರೇಂದ್ರ ಮೋದಿಯವರು ಘೋಷಿಸಿರುವ ಅಚ್ಛೇದಿನ್ ಬಂದಿರುವುದು ಯಾರಿಗೆ?

ಈ ದೇಶದಲ್ಲಿ ಮರಾಠರು ಮಾತ್ರವಲ್ಲ, ಜಾಟರು, ಠಾಕೂರರು, ಪಟೇಲರು...ಹೀಗೆ ಬಲಾಢ್ಯ ವರ್ಗಗಳೆಲ್ಲ ಮೀಸಲಾತಿಗಾಗಿ ಬೀದಿಗಿಳಿದಿವೆೆ. ಈ ಸಮುದಾಯಗಳು ಈಗಾಗಲೇ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮ ಪ್ರಾಬಲ್ಯಗಳನ್ನು ಹೊಂದಿವೆ. ಅಂಕಿಅಂಶಗಳನ್ನು ನೋಡಿದರೆ, ಇವರ ಪಾಲು ರಾಜಕೀಯದಲ್ಲಿ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ದೊಡ್ಡದಿದೆ. ಮೀಸಲಾತಿಯನ್ನು ನೀಡಿ ಇವರನ್ನು ಮೇಲೆತ್ತಬೇಕಾದಂತಹ ಸ್ಥಿತಿ ಭಾರತದಲ್ಲಿ ಇಲ್ಲ. ಮೀಸಲಾತಿಯ ಉದ್ದೇಶ, ಜನಸಂಖ್ಯೆಯ ಬಲದ ಆಧಾರದಲ್ಲಿ ಮೀಸಲಾತಿಯನ್ನು ನೀಡುವುದಲ್ಲ. ಬದಲಿಗೆ ಜಾತಿಯ ಕಾರಣದಿಂದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತುಳಿಯಲ್ಪಟ್ಟ ಸಮುದಾಯವನ್ನು ಮೇಲೆತ್ತುವುದಕ್ಕಾಗಿ ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಇಂದು ಈ ದೇಶದ ದಲಿತರು ಮತ್ತು ಶೋಷಿತ ಹಿಂದುಳಿದ ವರ್ಗಗಳಿಗೆ ಇನ್ನೂ ಈ ಮೀಸಲಾತಿ ಸರಿಯಾಗಿ ತಲುಪಿಲ್ಲ. ಅವರನ್ನು ಪೂರ್ಣ ಪ್ರಮಾಣದಲ್ಲಿ ಮೇಲೆತ್ತುವುದಕ್ಕೆ ಸಾಧ್ಯವಾಗಿಲ್ಲ. ಮೀಸಲಾತಿಯನ್ನು ಶೋಷಿತ ವರ್ಗದ ತಳಸ್ತರದವರೆಗೆ ಪರಿಣಾಮಕಾರಿಯಾಗಿ ತಲುಪಿಸುವ ಪ್ರಯತ್ನ ಮಾಡುವುದರ ಬದಲಿಗೆ, ಮೀಸಲಾತಿಯನ್ನು ರದ್ದುಗೊಳಿಸ ಬೇಕು ಎಂದು ಕೂಗೆದ್ದಿದೆ. ಮೀಸಲಾತಿಯಿಂದಾಗಿ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ ಎಂಬ ಸುಳ್ಳನ್ನು ಹರಡಲಾಗುತ್ತಿದೆ. ಮೀಸಲಾತಿಯನ್ನು ರದ್ದುಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮೇಲ್ವರ್ಗದ ಜನರು ಅಡ್ಡ ದಾರಿ ಹಿಡಿದಿದ್ದಾರೆ. ಬಲಾಢ್ಯ ಶೂದ್ರರನ್ನು ಶೋಷಿತ ಸಮುದಾಯದ ವಿರುದ್ಧ ಎತ್ತಿ ಕಟ್ಟುವ ರಾಜಕೀಯ ನಡೆಯುತ್ತಿದೆ.

ಇಂದು ಮೀಸಲಾತಿಗಾಗಿ ಬೀದಿಗಿಳಿದಿರುವ ಮೇಲ್ವರ್ಗದ ಅಂತಿಮ ಉದ್ದೇಶ, ತಮಗಿಂತ ಕೆಳಗಿರುವ ಜಾತಿಗಳು ಮೀಸಲಾತಿ ಸೌಲಭ್ಯ ಪಡೆದು ತಮ್ಮ ಮಟ್ಟಕ್ಕೆ ಮುಟ್ಟಬಾರದು ಎನ್ನುವುದೇ ಆಗಿದೆ. ಒಂದು ವೇಳೆ ಈ ಮೀಸಲಾತಿಯನ್ನು ಬಲಾಢ್ಯ ಶೂದ್ರವರ್ಗಗಳಿಗೆ ವಿಸ್ತರಿಸಿದರೆ, ತೋಳಗಳಿಗೆ ಇನ್ನಷ್ಟು ಕೋರೆಹಲ್ಲುಗಳನ್ನು ಜೋಡಿಸಿದಂತಾಗುತ್ತದೆ. ಈ ಮೂಲಕ ಶೋಷಿತರು ಇನ್ನಷ್ಟು ಶೋಷಣೆಗೆ ಒಳಗಾಗಬೇಕಾಗುತ್ತದೆ ಮತ್ತು ಶೋಷಕರಿಗೆ ಶೋಷಿಸಲು ಇನ್ನಷ್ಟು ಶಕ್ತಿಯನ್ನು ನೀಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಪಟೇಲರು, ಜಾಟರಂತಹ ಮೇಲ್ಜಾತಿಗಳಿಗೆ ಯಾವ ಕಾರಣಕ್ಕೂ ಮೀಸಲಾತಿ ನೀಡಬಾರದು. ಮತ್ತು ದಲಿತರು, ಕೆಳಸ್ತರದಲ್ಲಿರುವ ಶೂದ್ರರು ಮತ್ತು ನವ ದಲಿತರೆಂದೇ ಹಣೆಪಟ್ಟಿ ಕಟ್ಟಿಕೊಂಡಿರುವ ಈ ದೇಶದ ಶೋಷಿತ ಮುಸ್ಲಿಮರನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮೇಲೆತ್ತಲು ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಬಳಸಬೇಕು. ದುರದೃಷ್ಟವಶಾತ್, ಮೀಸಲಾತಿಯ ಉದ್ದೇಶವನ್ನೇ ಅರ್ಥ ಮಾಡಿಕೊಳ್ಳದ ಗಡ್ಕರಿಯವರು ಬೇಜವಾಬ್ದಾರಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ಗಡ್ಕರಿ ಹೇಳಿರುವುದರಲ್ಲಿ ಸುಳ್ಳೇನೂ ಇಲ್ಲ. ಸರ್ವವೂ ಖಾಸಗೀಕರಣಗೊಳ್ಳುತ್ತಿರುವ ದಿನಗಳು ಇವು.

ಸರಕಾರಿ ಕ್ಷೇತ್ರಗಳ ಉದ್ಯೋಗಗಳ ಮೇಲೆ ಇದು ಸಹಜವಾಗಿಯೇ ಪರಿಣಾಮವನ್ನು ಬೀರುತ್ತದೆೆ. ಸರಕಾರಿ ಉದ್ಯೋಗಗಳು ದಿನದಿನದಿಂದ ದಿನಕ್ಕೆ ಇಳಿಮುಖವಾಗುತ್ತಿವೆ. ಹೀಗಿರುವಾಗ, ದುರ್ಬಲರಿಗಾಗಿ ಜಾರಿಗೊಳಿಸಿರುವ ಮೀಸಲಾತಿಯಿಂದ ಅವರಿಗೆ ಏನು ಲಾಭ? ಸರಕಾರಿ ಸಂಸ್ಥೆಗಳೆಲ್ಲ ಖಾಸಗೀಕರಣಗೊಳ್ಳುತ್ತಿರುವಾಗ, ಹೆಸರಿಗಷ್ಟೇ ಮೀಸಲಾತಿಯ ತುಪ್ಪವನ್ನು ಅವರ ಮೂಗಿಗೆ ಸವರಿ ‘‘ಎಲ್ಲ ಸವಲತ್ತುಗಳನ್ನು ಬಾಚಿಕೊಳ್ಳುತ್ತಿದ್ದಾರೆ’’ ಎಂಬ ಆರೋಪವನ್ನು ಮಾಡಲಾಗುತ್ತಿದೆ. ಆದುದರಿಂದ, ಮೀಸಲಾತಿಯನ್ನು ಖಾಸಗಿ ವಲಯಗಳಿಗೂ ವಿಸ್ತರಿಸುವ ಅಗತ್ಯವನ್ನು, ಸ್ವತಃ ಗಡ್ಕರಿಯವರ ಮಾತುಗಳೇ ಎತ್ತಿ ಹಿಡಿಯುತ್ತವೆ. ಇಲ್ಲವಾದರೆ, ಈ ಮೀಸಲಾತಿ ಹೆಸರಿಗಷ್ಟೇ ಅಸ್ತಿತ್ವದಲ್ಲಿರುತ್ತದೆ. ಇಂದು ಖಾಸಗಿ ಸಂಸ್ಥೆಗಳ ಮೇಲಿನ ಹಿಡಿತವೂ ಮೇಲ್ವರ್ಗದವರ ಕೈಯಲ್ಲಿವೆ.

ಖಾಸಗಿ ಸಂಸ್ಥೆಗಳಲ್ಲೂ ಇಂದು ಜಾತೀಯತೆ ಮತ್ತು ಹಣ ತನ್ನ ಪ್ರಭಾವವನ್ನು ಬೀರುತ್ತಿದೆ. ದೇಶದಲ್ಲಿ ಜಾತೀಯತೆ ಇನ್ನೂ ಆಳವಾಗಿ ಅಸ್ತಿತ್ವದಲ್ಲಿದೆ ಎನ್ನುವುದನ್ನು, ದಲಿತರು ಮತ್ತು ಮುಸ್ಲಿಮರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳೇ ಹೇಳುತ್ತಿವೆ. ರಾಷ್ಟ್ರಪತಿಯೊಬ್ಬ ದಲಿತ ಸಮುದಾಯದಿಂದ ಬಂದ ಕಾರಣಕ್ಕಾಗಿ ಆತನಿಗೆ ದೇವಸ್ಥಾನದಲ್ಲಿ ಪ್ರವೇಶ ಸಿಗದಂತಹ ಸ್ಥಿತಿ ನಮ್ಮಲ್ಲಿರುವಾಗ, ಒಬ್ಬ ದಲಿತ ಐಟಿ, ಬಿಟಿಯಂತಹ ಕಂಪೆನಿಯಲ್ಲಿ ಸುಲಭವಾಗಿ ಪ್ರವೇಶಪಡೆಯಲು ಸಾಧ್ಯವೇ? ಈ ನಿಟ್ಟಿನಲ್ಲಿ, ಮೀಸಲಾತಿಯನ್ನು ಖಾಸಗಿ ವಲಯಕ್ಕೆ ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಗಡ್ಕರಿಯವರು ಕ್ರಮ ತೆಗೆದುಕೊಳ್ಳಬೇಕು. ಖಾಸಗಿ ವಲಯದಲ್ಲಿ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಿಲ್ಲವಾದರೆ, ಮೀಸಲಾತಿ ಇದ್ದೂ ಇಲ್ಲದಂತೆಯೇ ಸರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News