ಆಧುನಿಕ ತಮಿಳುನಾಡಿನ ಚರಿತ್ರೆ ಬರೆದ ಮುತ್ತುವೇಲ್ ಕರುಣಾನಿಧಿ

Update: 2018-08-08 05:44 GMT

1920 ಮತ್ತು 30ರ ದಶಕದಲ್ಲಿ ತಮಿಳುನಾಡಿನಲ್ಲಿ ಬೃಹತ್ ಪ್ರಮಾಣದ ಚಳವಳಿಯೊಂದು ನಡೆಯುತ್ತಿತ್ತು. ‘ಪೆರಿಯಾರ್’ ಎಂದೇ ಕರೆಯಲ್ಪಡುತ್ತಿದ್ದ ಸಾಮಾಜಿಕ ಕಾರ್ಯಕರ್ತ ಇ.ವಿ. ರಾಮಸ್ವಾಮಿ ಒಗ್ಗಟ್ಟಿನಿಂದ ಜಾತಿ ವ್ಯವಸ್ಥೆ ಮತ್ತು ಬ್ರಾಹ್ಮಣರ ಶೋಷಕ ವ್ಯವಸ್ಥೆಯ ವಿರುದ್ಧ ಹೋರಾಡುವಂತೆ ಹಿಂದುಳಿದ ಜಾತಿಗಳ ಜನರ ಮನವೊಲಿಸುತ್ತಿದ್ದರು.

ಇದೇ ಅವಧಿಯಲ್ಲಿ, ಅಂದರೆ 1924ರಲ್ಲಿ ಮುತ್ತುವೇಲ್ ಕರುಣಾನಿಧಿ ಚೆನ್ನೈನಿಂದ ದಕ್ಷಿಣಕ್ಕೆ ಸುಮಾರು 300 ಕಿ.ಮೀ. ದೂರದಲ್ಲಿರುವ ತಿರುಕ್ಕುವಳೈ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದರು. ದೇವಸ್ಥಾನವನ್ನು ಅವಲಂಬಿಸಿರುವ ಇಸೈ ವೆಲ್ಲಲಾರ್ ಎಂಬ ಜಾತಿಯ ಬಡ ಕುಟುಂಬವೊಂದರಲ್ಲಿ ಅವರ ಜನನವಾಯಿತು. ಶ್ರೇಣೀಕೃತ ಹಿಂದೂ ಸಮಾಜ ವ್ಯವಸ್ಥೆಯಲ್ಲಿ ಈ ಜಾತಿಯು ಶೂದ್ರ ವರ್ಗದ ಒಂದು ಜಾತಿಯಾಗಿತ್ತು.

ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಕೆಳ ಜಾತಿಯಲ್ಲಿ ಹುಟ್ಟಿದರೆ ಅನುಭವಿಸಬೇಕಾದ ಕಷ್ಟಗಳೇನು ಎಂಬುದನ್ನು ಅವರು ಕಿರು ವಯಸ್ಸಿನಲ್ಲೇ ಅರಿತುಕೊಂಡರು. ಹಾಗಾಗಿ, 14ರ ವಯಸ್ಸಿನಲ್ಲೇ ಅವರು ಪೆರಿಯಾರ್‌ರ ‘ಆತ್ಮಗೌರವ’ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಉತ್ತರ ಭಾರತೀಯರು ಮತ್ತು ದಕ್ಷಿಣದಲ್ಲಿ ಬ್ರಾಹ್ಮಣರ ದಬ್ಬಾಳಿಕೆಯನ್ನು ಪ್ರತಿಭಟಿಸುವಂತೆ ಈ ಚಳವಳಿಯು ದ್ರಾವಿಡ ಸಮುದಾಯವನ್ನು ಒತ್ತಾಯಿಸುತ್ತಿತ್ತು.

ರಾಜಕೀಯ ಸವಾಲುಗಾರ
1950ರ ದಶಕದಲ್ಲಿ, ತಮಿಳುನಾಡು ರಾಜಕೀಯದಲ್ಲಿ ಕಾಂಗ್ರೆಸ್ ಇನ್ನೂ ಪ್ರಾಬಲ್ಯ ಹೊಂದಿತ್ತು. ಆದರೆ, ಒಂದು ದಶಕದ ಅವಧಿಯಲ್ಲೇ ಪರಿಸ್ಥಿತಿಯಲ್ಲಿ ಭಾರೀ ಬದಲಾವಣೆಯಾಯಿತು. ಹಿಂದಿ ಹೇರಿಕೆ ವಿರುದ್ಧ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳಾದವು. 1967ರಲ್ಲಿ ಮೊದಲ ಕಾಂಗ್ರೆಸೇತರ ಪಕ್ಷವಾಗಿ ಡಿಎಂಕೆ ಅಧಿಕಾರಕ್ಕೆ ಬಂತು. ಆ ಬಳಿಕ, ಕಾಂಗ್ರೆಸ್‌ಗೆ ಮರಳಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ.

ಅಣ್ಣಾದುರೈ ರಾಜ್ಯದ ಮುಖ್ಯಮಂತ್ರಿಯಾದರು ಹಾಗೂ ಕರುಣಾನಿಧಿ ಲೋಕೋಪಯೋಗಿ ಸಚಿವರಾದರು. 1969ರಲ್ಲಿ ಅಣ್ಣಾದುರೈ ನಿಧನರಾದಾಗ ಕರುಣಾನಿಧಿ ಎಲ್ಲರನ್ನೂ ಹಿಂದಿಕ್ಕಿ ಮುಖ್ಯಮಂತ್ರಿಯಾದರು.

1970ರ ದಶಕದ ಆದಿಭಾಗದಲ್ಲಿ ಸಿನೆಮಾ ದಂತಕತೆ ಎಂ.ಜಿ. ರಾಮಚಂದ್ರನ್ ಮಂತ್ರಿ ಪದವಿ ಸಿಗದ ಕಾರಣಕ್ಕಾಗಿ ಕರುಣಾನಿಧಿಯೊಂದಿಗೆ ಮುನಿಸಿಕೊಂಡು ಪಕ್ಷದಿಂದ ಹೊರನಡೆದರು. ಪಕ್ಷ ಇಬ್ಭಾಗವಾಯಿತು.

ತನ್ನ ಅಗಾಧ ಅಭಿಮಾನಿಗಳ ಬಲದೊಂದಿಗೆ ರಾಮಚಂದ್ರನ್ ಎಐಎಡಿಎಂಕೆ ಸ್ಥಾಪಿಸಿದರು. ಎಐಎಡಿಎಂಕೆ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಅದು ಭಾರೀ ವಿಜಯವನ್ನು ಗಳಿಸಿತು. ಬಳಿಕ ಎಂಜಿಆರ್ ಜೀವಂತವಿರುವವರೆಗೂ ಎಐಎಡಿಎಂಕೆ ಪಕ್ಷವೇ ಅಧಿಕಾರಕ್ಕೆ ಬಂತು.
ಎಂಜಿಆರ್ ನಿಧನದ ಬಳಿಕ, ಎಐಎಡಿಎಂಕೆ ವಿಭಜನೆಗೊಂಡ ಬಳಿಕವಷ್ಟೇ ಡಿಎಂಕೆ ಮತ್ತೆ ಅಧಿಕಾರಕ್ಕೆ ಬಂತು.
2011ರ ಬಳಿಕ ಡಿಎಂಕೆ ಅಧಿಕಾರದಿಂದ ಹೊರಗಿದ್ದರೂ ಪಕ್ಷವನ್ನು ಅಧಿಕಾರಕ್ಕೆ ತರಲು ಕರುಣಾನಿಧಿ ಇಳಿವಯಸ್ಸಿನಲ್ಲೂ ಹೋರಾಡುತ್ತಿದ್ದರು.


ಸೂಕ್ಷ್ಮಗ್ರಾಹಿ ಓದುಗ, ಅತ್ಯುತ್ತಮ ಸಾಹಿತಿ

ತಮಿಳು ಸಾಹಿತ್ಯದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಕರುಣಾನಿಧಿ ಕವಿತೆ, ಕಾದಂಬರಿ, ಚಿತ್ರಕಥೆ, ಜೀವನಚರಿತ್ರೆ, ರಂಗಕೃತಿ, ಗೀತೆ, ಸಂಭಾಷಣೆ .. ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಓರ್ವ ಸೂಕ್ಷ್ಮಗ್ರಾಹಿ ಓದುಗರಾಗಿದ್ದ ಅವರು ಅತ್ಯುತ್ತಮ ಕೃತಿಗಳನ್ನೂ ರಚಿಸಿದ್ದಾರೆ. ಅವರ ಸಾಮಾಜಿಕ ಮತ್ತು ಐತಿಹಾಸಿಕ ಕೃತಿಗಳು ಪ್ರಸಿದ್ಧಿ ಪಡೆದಿದ್ದವು. ತಮಿಳಿನ ಖ್ಯಾತ ಸಾಹಿತಿ ಇಳಂಗೊ ಅಡಿಗಳ್ ಬರೆದಿರುವ ‘ಸಿಲಪಟ್ಟಿಕಾರಮ್’ ಕೃತಿಯಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕರುಣಾನಿಧಿ 1964ರಲ್ಲಿ ‘ಪೂಂಪುಹಾರ್’ ಎಂಬ ಸಿನಿಮಾಕ್ಕೆ ಬರೆದಿದ್ದ ಚಿತ್ರಕಥೆಯಲ್ಲಿ ಈ ಕೃತಿಯ ಪ್ರಭಾವ ಗಾಢವಾಗಿ ಎದ್ದುತೋರುತ್ತಿತ್ತು. ಅದುವರೆಗೆ ಅಜ್ಞಾತವಾಗುಳಿದಿದ್ದ ಪೂಂಪುಹಾರ್ ಎಂಬ ಸಮುದ್ರತೀರದ ಊರಲ್ಲಿ ಪಾವೈ ಮಂದರಂ ಎಂಬ ಚಿತ್ರಪ್ರದರ್ಶನದ ಗ್ಯಾಲರಿ, ಸಿಲಪಟ್ಟಿಕಾರ ಕಲೈಕೂಟಂ ಎಂಬ ಕಲಾಶಾಲೆಯನ್ನು ಆರಂಭಿಸಲಾಯಿತು. ಇಲ್ಲಿ ತಮಿಳು ಸಾಹಿತ್ಯದ ಶ್ರೀಮಂತಿಕೆಯನ್ನು ಬಿಂಬಿಸುವ ವಿಚಾರಸಂಕಿರಣಗಳನ್ನು ನಿರಂತರ ಹಮ್ಮಿಕೊಳ್ಳಲಾಗುತ್ತಿದೆ. ತಾನು ಮುಖ್ಯಮಂತ್ರಿಯಾಗಿದ್ದಾಗಲೇ ವಿಶ್ವತಮಿಳು ಸಮಾವೇಶವನ್ನು ನಡೆಸಬೇಕೆಂಬ ಅವರ ಮಹದಾಸೆ ಕಡೆಗೂ ಈಡೇರಲಿಲ್ಲ. ಆದರೆ 2010ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೊಯಂಬತ್ತೂರಿನಲ್ಲಿ ಪ್ರಥಮ ಶಾಸ್ತ್ರೀಯ ವಿಶ್ವ ತಮಿಳು ಸಮಾವೇಶವನ್ನು ಆಯೋಜಿಸಲಾಗಿದೆ.


ಕತೆ ಬರೆದರು
ಕರುಣಾನಿಧಿ ರಾಜಕೀಯಕ್ಕೆ ಸೇರುವ ಮೊದಲು ನಾಟಕ ಮತ್ತು ಚಿತ್ರಗಳಿಗೆ ಕತೆ ಬರೆಯುವ ಮೂಲಕ ಹೆಸರು ಮಾಡಿದರು. ಹತ್ತನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ಬಳಿಕ ಅವರು, ವೃತ್ತಿಪರ ನಾಟಕ ಕಂಪೆನಿಗಳಿಗೆ ಕತೆ ಬರೆಯಲು ಕೊಯಂಬತ್ತೂರ್‌ಗೆ ಹೊರಟರು. ಆದರೆ, ಅವರ ಮಾತಿನ ಶೈಲಿ ಪೆರಿಯಾರ್‌ರನ್ನು ಆಕರ್ಷಿಸಿತು. ಅವರು ಕರುಣಾನಿಧಿಯನ್ನು ಅವರು ಸ್ಥಾಪಿಸಿದ ಪಕ್ಷ ದ್ರಾವಿಡರ್ ಕಳಗಮ್‌ನ ಪತ್ರಿಕೆಯ ಸಂಪಾದಕರನ್ನಾಗಿ ನೇಮಿಸಿದರು.

ಸ್ವಾತಂತ್ರಾನಂತರ ದ್ರಾವಿಡರ್ ಕಳಗಮ್ ಎರಡು ಭಾಗಗಳಾಗಿ ವಿಭಜನೆಗೊಂಡ ಬಳಿಕ ಕರುಣಾನಿಧಿ ಸಿ.ಎನ್. ಅಣ್ಣಾದುರೈ ನೇತೃತ್ವದ ವಿಭಜಿತ ಬಣಕ್ಕೆ ಸೇರಿದರು.

1950ರ ದಶಕದ ವೇಳೆ ಕರುಣಾನಿಧಿ ಖ್ಯಾತ ಚಿತ್ರಕತೆ ಬರಹಗಾರರಾಗಿದ್ದರು. ಅವರು ನಾಟಕಗಳಿಂದ ಸಿನೆಮಾಗಳಿಗೆ ಹೋಗಿದ್ದರು.
ಡಿಎಂಕೆಯು ರಾಜಕೀಯ ಸಂಘಟನೆಗಾಗಿ ಸಿನೆಮಾವನ್ನು ಬಳಸಿಕೊಂಡಿತು.

ಡಿಎಂಕೆ ಆರಂಭದಲ್ಲಿ ಮಿಂಚಿದ್ದು ತನ್ನ ಚಿತ್ರ ಬರಹಗಾರರ ಮೂಲಕ. ಸಾಮಾಜಿಕ ಸುಧಾರಣೆಯನ್ನು ತರುವ ಪ್ರಯತ್ನವಾಗಿ ಪಕ್ಷದ ಸ್ಥಾಪಕ ಅಣ್ಣಾದುರೈ ಹಲವಾರು ನಾಟಕಗಳು ಮತ್ತು ಚಿತ್ರಗಳನ್ನು ಬರೆದರು. ಅದೇ ದಾರಿಯಲ್ಲಿ ಕರುಣಾನಿಧಿ ಸಾಗಿದರು. 1952ರಲ್ಲಿ ಅವರ ಚಿತ್ರ ‘ಪರಾಸಕ್ತಿ’ ಭಾರಿ ಜನಪ್ರಿಯವಾಯಿತು ಹಾಗೂ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News