ದ್ರಾವಿಡ ಸೂರ್ಯ ಅಸ್ತಂಗತ

Update: 2018-08-08 06:58 GMT

ಗ್ರಾಹಿ ಓದುಗ, ಅತ್ಯುತ್ತಮ ಸಾಹಿತಿ ತಮಿಳು ಸಾಹಿತ್ಯದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಕರುಣಾನಿಧಿ ಕವಿತೆ, ಕಾದಂಬರಿ, ಚಿತ್ರಕಥೆ, ಜೀವನಚರಿತ್ರೆ, ರಂಗಕೃತಿ, ಗೀತೆ, ಸಂಭಾಷಣೆ... ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಓರ್ವ ಸೂಕ್ಷ್ಮಗ್ರಾಹಿ ಓದುಗರಾಗಿದ್ದ ಅವರು ಅತ್ಯುತ್ತಮ ಕೃತಿಗಳನ್ನೂ ರಚಿಸಿದ್ದಾರೆ. ಅವರ ಸಾಮಾಜಿಕ ಮತ್ತು ಐತಿಹಾಸಿಕ ಕೃತಿಗಳು ಪ್ರಸಿದ್ಧಿ ಪಡೆದಿದ್ದವು. ತಮಿಳಿನ ಖ್ಯಾತ ಸಾಹಿತಿ ಇಳಂಗೊ ಅಡಿಗಳ್ ಬರೆದಿರುವ ‘ಸಿಲಪ್ಪಾದಿಗಾರಮ್’ ಕೃತಿಯಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕರುಣಾನಿಧಿ 1964ರಲ್ಲಿ ‘ಪೂಂಪುಹಾರ್’ ಎಂಬ ಸಿನೆಮಾಕ್ಕೆ ಬರೆದಿದ್ದ ಚಿತ್ರಕಥೆಯಲ್ಲಿ ಈ ಕೃತಿಯ ಪ್ರಭಾವ ಗಾಢವಾಗಿ ಎದ್ದುತೋರುತ್ತಿತ್ತು. ಅದುವರೆಗೆ ಅಜ್ಞಾತವಾಗುಳಿದಿದ್ದ ಪೂಂಪುಹಾರ್ ಎಂಬ ಸಮುದ್ರತೀರದ ಊರಲ್ಲಿ ಪಾವೈ ಮಂದರಂ ಎಂಬ ಚಿತ್ರಪ್ರದರ್ಶನದ ಗ್ಯಾಲರಿ, ಸಿಲಪ್ಪದಿಗಾರ ಕಲೈಕೂಡಂ ಎಂಬ ಕಲಾಶಾಲೆಯನ್ನು ಆರಂಭಿಸಲಾಯಿತು. ಇಲ್ಲಿ ತಮಿಳು ಸಾಹಿತ್ಯದ ಶ್ರೀಮಂತಿಕೆಯನ್ನು ಬಿಂಬಿಸುವ ವಿಚಾರಸಂಕಿರಣಗಳನ್ನು ನಿರಂತರ ಹಮ್ಮಿಕೊಳ್ಳಲಾಗುತ್ತಿದೆ. ತಾನು ಮುಖ್ಯಮಂತ್ರಿಯಾಗಿದ್ದಾಗಲೇ ವಿಶ್ವತಮಿಳು ಸಮಾವೇಶವನ್ನು ನಡೆಸಬೇಕೆಂಬ ಅವರ ಮಹದಾಸೆ ಕಡೆಗೂ ಈಡೇರಲಿಲ್ಲ. ಆದರೆ 2010ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೊಯಂಬತ್ತೂರಿನಲ್ಲಿ ಪ್ರಥಮ ಶಾಸ್ತ್ರೀಯ ವಿಶ್ವ ತಮಿಳು ಸಮಾವೇಶವನ್ನು ಆಯೋಜಿಸಲಾಗಿದೆ.

ಭಾರತದ ಯಾವ ರಾಜಕಾರಣಿಯೂ ಕರುಣಾನಿಧಿಯಂತಹ ವಾಕ್ಪಟುತ್ವ ಹೊಂದಿರಲಿಲ್ಲ. ಕ್ಯಾಸೆಟ್‌ಗಳಲ್ಲಿ ದಾಖಲಾಗಿರುವ ಅವರ ರಾಜಕೀಯ ಭಾಷಣಗಳು ಕೂಡಾ ತಮಿಳು ಚಿತ್ರಗೀತೆಗಳಷ್ಟೇ ಜನಪ್ರಿಯ.
ಮುತ್ತುವೇಲ್ ಕರುಣಾನಿಧಿ (ಮು ಕಾ ಎಂದೂ ಕರೆಯಲಾಗುತ್ತಿದ್ದರೂ ಕಲೈಞರ್ ಎಂದೇ ಪರಿಚಿತರಾಗಿದ್ದರು), ದೇಶ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲೊಬ್ಬರು. ಅವರ ಹೆಸರು ಅರ್ಧಶತಮಾನದ ಕಾಲ ಅವರ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ)ಗೆ ಅಥವಾ ತಮಿಳುನಾಡಿಗೆ ಮಾತ್ರ ಸೀಮಿತವಾಗಿರಲಿಲ್ಲ. ತಮಿಳು ಸಾಹಿತ್ಯ ಜಗತ್ತು ಮತ್ತು ಸಂಸ್ಕೃತಿಗೂ ಪರಿಚಿತ. ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯಹಕ್ಕುಗಳ ಪ್ರತಿಪಾದಕಾಗಿದ್ದ ಅವರು, ರಾಷ್ಟ್ರರಾಜಕಾರಣದಲ್ಲೂ ಪ್ರಭಾವ ಹೊಂದಿದ್ದರು.
1924ರ ಜೂನ್ 3ರಂದು ನಾಗಪಟ್ಟಣಂ ಜಿಲ್ಲೆ ತಿರುಕುವಲೈಯರ್‌ನಲ್ಲಿ ಮುತ್ತುವೇಲು ಮತ್ತು ಅಂಜುಗಂ ಅಮ್ಮಾಳ್ ಮಗನಾಗಿ ಹುಟ್ಟಿದ ಅವರು ಹದಿಹರೆಯದಲ್ಲೇ ದ್ರಾವಿಡ ಚಳವಳಿಯಿಂದ ಉತ್ತೇಜಿತರಾದವರು. 1930ರ ದಶಕದ ಕೊನೆಯಲ್ಲಿ ಕಾಂಗ್ರೆಸ್ ನೇತೃತ್ವದ ಪ್ರಾಂತೀಯ ಸರಕಾರ, ಶಾಲೆಗಳಲ್ಲಿ ಹಿಂದಿ ಭಾಷೆ ಕಲಿಸುವ ನಿರ್ಧಾರ ಕೈಗೊಂಡಿದ್ದನ್ನು ವಿರೋಧಿಸಿ ಪೆರಿಯಾರ್ ಆರಂಭಿಸಿದ ಹಿಂದಿ ವಿರೋಧಿ ಚಳವಳಿಯತ್ತ್ತ ಕರುಣಾನಿಧಿ ಆಕರ್ಷಿತರಾದದ್ದು ಅವರ ತಮಿಳು ಪ್ರೇಮದ ಕಾರಣದಿಂದ. 14ನೇ ವಯಸ್ಸಿನಲ್ಲೇ ಅವರು ಕೈಬರಹದ ಪತ್ರಿಕೆಯನ್ನು ಬರೆದು ದ್ರಾವಿಡ ಚಳವಳಿಯ ಸದಸ್ಯರಿಗೆ ಹಂಚುತ್ತಿದ್ದರು. ಡಿಎಂಕೆಯ ಅಧಿಕೃತ ಮುಖವಾಣಿ ಮುರಸೊಳಿಯ ಮೂಲ ಇವರ ಕೈಬರಹದ ಪ್ರಯತ್ನದಷ್ಟು ಹಿಂದಕ್ಕೆ ಹೋಗುತ್ತದೆ. ಹಿಂದಿ ವಿರೋಧಿ ಹೋರಾಟದ ಅವಧಿಯ ತೀರಾ ಸಾಂಕೇತಿಕ ಪ್ರತಿಭಟನೆಯೆಂದರೆ ದಾಲ್ಮಿಯಾಪುರಂ ಹೆಸರನ್ನು ಕಲ್ಲಗುಡಿ ಎಂದು ಮರು ನಾಮಕರಣ ಮಾಡಿದ್ದು. ಇದು ದಾಲ್ಮಿಯಾ ಸಿಮೆಂಟ್ ಉತ್ಪಾದನೆಯಾಗುತ್ತಿದ್ದ ಪಟ್ಟಣ. ದಾಲ್ಮಿಯಾ ಎನ್ನುವುದು ಹಿಂದಿ ಹೆಸರಾದ ಹಿನ್ನೆಲೆಯಲ್ಲಿ ಈ ಮರುನಾಮಕರಣ ಮಾಡಲಾಗಿತ್ತು. ಹೋರಾಟದ ಭಾಗವಾಗಿ ಅವರು ರೈಲು ಹಳಿಯಲ್ಲಿ ನಿದ್ದೆ ಮಾಡಿದ್ದರು. ಅಂತಿಮವಾಗಿ ಅವರು ಇದರಲ್ಲಿ ಯಶಸ್ವಿಯಾಗಿ ಕಲ್ಲಗುಡಿಯ ರಾಜ ಎಂದೇ ಅವಿಸ್ಮರಣೀಯರಾದರು.
ದ್ರಾವಿಡ ರಾಜಕೀಯದ ಉದಯ ಸೂರ್ಯ
ಡಿಎಂಕೆಯ ಮೂಲ ಸೌತ್ ಇಂಡಿಯನ್ ಲಿಬರಲ್ ಅಸೋಸಿಯೇಶನ್‌ನಲ್ಲಿದೆ. ಜನ ಇದನ್ನು ಜಸ್ಟೀಸ್ ಪಾರ್ಟಿ ಎಂದು ಕರೆಯುತ್ತಿದ್ದರು.ಇದರ ಮೂಲಭೂತ ತತ್ವಗಳು ನ್ಯಾಯ ಮತ್ತು ಸಮಾನತೆ. ಬ್ರಿಟಿಷ್ ಆಡಳಿತದ ವೇಳೆ ಜಸ್ಟೀಸ್ ಪಾರ್ಟಿ ಪ್ರಾಂತೀಯ ಸರಕಾರದ ಭಾಗವಾಗಿತ್ತು.ಬ್ರಾಹ್ಮಣೇತರ ಚಿಂತಕರ ಪಕ್ಷವಾಗಿ ಬ್ರಾಹ್ಮಣ ಪ್ರಾಬಲ್ಯವನ್ನು ತಡೆಯುವ ಉದ್ದೇಶದಿಂದ ಆರಂಭವಾಯಿತು. ಬಳಿಕ ಪೆರಿಯಾರ್ ಜಸ್ಟೀಸ್ ಪಾರ್ಟಿ ಸೇರಿದ ಬಳಿಕ ಪ್ರಾಜ್ಞ ನಾಯಕತ್ವದ ಸ್ವರೂಪದ ಬಗ್ಗೆ ಜಾಗೃತಿ ಮೂಡಿಸಿದರು. 1944ರಲ್ಲಿ ಪಕ್ಷವನ್ನು ವಿಸರ್ಜಿಸಿ, ದ್ರಾವಿಡಾರ್ ಕಳಗಂ (ದ್ರಾವಿಡರ ಒಕ್ಕೂಟ) ರಚಿಸಲಾಯಿತು.ಸಿ.ಎನ್.ಅಣ್ಣಾ ದೊರೈಅವರು ಡಿಕೆಯ ಪ್ರಧಾನ ಕಾರ್ಯದರ್ಶಿಯಾದರು ಮತ್ತು ಈ ಸಂದೇಶವನ್ನು ಸಾರ್ವಜನಿಕರಿಗೆ ಒಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು.
ಐದು ವರ್ಷಗಳ ಬಳಿಕ, ಡಿಕೆ ಪಕ್ಷದ ತೀರಾ ಚಿಂತನಶೀಲ ಮತ್ತು ನಾಸ್ತಿಕ ತತ್ವಗಳಿಗೆ ಬದ್ಧರಾಗಿರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಣ್ಣಾ ದೊರೈ ಮತ್ತು ಅವರ ಐದು ಮಂದಿ ಕಾಮ್ರೇಡ್‌ಗಳು ಪಕ್ಷದಿಂದ ಸಿಡಿದು ಡಿಎಂಕೆ ರಚಿಸಿದರು. ಹೊಸ ಪಕ್ಷವು 1949ರ ಸೆಪ್ಟ್ಟಂಬರ್ 17ರಂದು ಚೆನ್ನೈನ ರಾಬಿನ್ಸನ್ ಪಾರ್ಕ್‌ನಲ್ಲಿ ಉದ್ಘಾಟನೆಯಾಯಿತು.ಆಗ 25 ವರ್ಷ ವಯಸ್ಸಿನ ಕರುಣಾನಿಧಿ, ಡಿಎಂಕೆಯ ಸ್ಥಾಪಕ ಸದಸ್ಯರಾಗಿರಲಿಲ್ಲ. ಆದರೆ ಅವರ ಸಾಂಸ್ಥಿಕ ಕೌಶಲ ಮತ್ತು ರಾಜಕೀಯ ಚಾಕಚಕ್ಯತೆಯ ಕಾರಣದಿಂದ ಪಕ್ಷದಲ್ಲಿ ಪ್ರಮುಖ ಸ್ಥಾನ ಪಡೆದರು. 1957ರಲ್ಲಿ ಅವರು ಮದ್ರಾಸ್ ವಿಧಾನಸಭೆೆ ಸದಸ್ಯರಾಗಿ ಕುಲ್ತಿಹಲೈ ಕ್ಷೇತ್ರದಿಂದ ಆಯ್ಕೆಯಾದರು.ಆ ಬಳಿಕ ಸ್ಪರ್ಧಿಸಿದ ಎಲ್ಲ ಚುನಾವಣೆಗಳಲ್ಲೂ ಗೆಲ್ಲುತ್ತಾ ಬಂದರು.ಈ ಸಾಧನೆಯನ್ನು ಯಾರೂ ಮಾಡಲು ಸಾಧ್ಯವಾಗಿಲ್ಲ. ರಾಜೀವ್ ಗಾಂಧಿ ಹತ್ಯೆಯ ಬಳಿಕ 1991ರಲ್ಲಿ ಎಐಎಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ಭರ್ಜರಿ ವಿಜಯ ಸಾಧಿಸಿದಾಗ ಡಿಎಂಕೆ ಕೇವಲ ಎರಡು ಸ್ಥಾನಕ್ಕೆ ಕುಸಿದಿತ್ತು. ಹಾರ್ಬರ್ ಕ್ಷೇತ್ರದಿಂದ ಕರುಣಾನಿಧಿ ಹಾಗೂ ಎಗ್ಮೋರ್ ಕ್ಷೇತ್ರದಿಂದ ಪೃಥ್ವಿ ಇಳಂವಳುತಿ ಜಯ ಸಾಧಿಸಿದ್ದರು.
1961ರಲ್ಲಿ ಕರುಣಾನಿಧಿ ಡಿಎಂಕೆ ಕೋಶಾಧ್ಯಕ್ಷರಾಗಿ ಆಯ್ಕೆಯಾದರು. ಮರು ವರ್ಷ ರಾಜ್ಯ ವಿಧಾನಸಭೆೆಯಲ್ಲಿ ವಿರೋಧ ಪಕ್ಷದ ಉಪನಾಯಕರಾದರು. 1967ರಲ್ಲಿ ಡಿಎಂಕೆ ಅಧಿಕಾರ ಸೂತ್ರ ಹಿಡಿದಾಗ, ಲೋಕೋಪಯೋಗಿ ಖಾತೆ ಸಚಿವರಾದರು. 1969ರಲ್ಲಿ ಅಣ್ಣಾದೊರೈ ಅವರ ಉಚ್ಚಾಟನೆಯ ಬಳಿಕ, ಹಿರಿಯ ಮುತ್ಸದ್ಧಿ ವಿ.ಆರ್. ನೆಡುಂಚೆಳಿಯನ್ ಅವರನ್ನು ಎಂ.ಜಿ.ರಾಮಚಂದ್ರನ್ (ಎಂಜಿಆರ್) ನೆರವಿನೊಂದಿಗೆ ಮುಖ್ಯಮಂತ್ರಿಯಾಗಿಸಿದರು.
ಮುಖ್ಯಮಂತ್ರಿಯಾಗಿ ಕರುಣಾನಿಧಿಯವರ ಮೊದಲ ಅವಧಿ 1969ರ ಫೆಬ್ರವರಿಯಿಂದ 1976ರಲ್ಲಿ ತುರ್ತು ಪರಿಸ್ಥಿತಿ ವೇಳೆ ರಾಷ್ಟ್ರಪತಿ ಆಳ್ವಿಕೆ ಹೇರಿಕೆವರೆಗೂ ಮುಂದುವರಿಯಿತು.ಕೊಳೆಗೇರಿ ನಿರ್ಮೂಲನೆ ಯೋಜನೆ, ಕೈಗಾಡಿಗಳ ನಿಷೇಧ ಮತ್ತು ವಿದ್ಯುದ್ದೀಕರಣದಿಂದ ಸಾಕಷ್ಟು ಕೀರ್ತಿ ಸಂಪಾದಿಸಿದರು. ಅವರ ಆಡಳಿತಾವಧಿಯಲ್ಲಿ ಭ್ರಷ್ಟಾಚಾರದ ಆರೋಪಗಳೂ ಕೇಳಿಬಂದವು. 1972ರಲ್ಲಿ ಡಿಎಂಕೆಯಿಂದ ಹೊರ ಬಂದು ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ ಸ್ಥಾಪಿಸಿದ ಎಂಜಿಆರ್ ಈ ವಿವಾದವನ್ನು ಹುಟ್ಟುಹಾಕಿದರು.


1977, 1980 ಮತ್ತು 1984ರ ವಿಧಾನಸಭಾ ಚುನಾವಣೆಗಳಲ್ಲಿ ಎಂಜಿಆರ್ ಪಕ್ಷ ಅಧಿಕಾರದ ಸೂತ್ರ ಹಿಡಿದ ಕಾರಣ 13 ವರ್ಷಗಳನ್ನು ಕರುಣಾನಿಧಿ ವಿರೋಧ ಪಕ್ಷದಲ್ಲಿ ಕಳೆಯಬೇಕಾಯಿತು. 1989ರಲ್ಲಿ ಡಿಎಂಕೆ ನಾಯಕ ತಮಿಳುನಾಡಿನ ಮುಖ್ಯಮಂತ್ರಿಯಾದದ್ದು ಮಾತ್ರವಲ್ಲದೇ, ನ್ಯಾಷನಲ್ ಫ್ರಂಟ್ ರೂಪಿಸುವಲ್ಲಿ ಹಾಗೂ ವಿ.ಪಿ.ಸಿಂಗ್ ಪ್ರಧಾನಿಯಾಗುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಮಂಡಲ್ ಆಯೋಗ ವರದಿಯ ಶಿಫಾರಸುಗಳ ಅನುಷ್ಠಾನಕ್ಕೆ ಕಾರಣವಾಯಿತು.ಇದನ್ನು ಸಾಮಾಜಿಕ ನ್ಯಾಯವನ್ನು ವಾಸ್ತವಗೊಳಿಸುವ ನಿಟ್ಟಿನಲ್ಲಿ ದೊಡ್ಡ ರಾಜಕೀಯ ಪ್ರಯತ್ನ ಎಂದು ಸಂದರ್ಶನವೊಂದರಲ್ಲಿ ಕರುಣಾನಿಧಿ ವಿಶ್ಲೇಷಿಸಿದ್ದರು. 1991ರ ಜನವರಿಯಲ್ಲಿ ರಾಜೀವ್‌ಗಾಂಧಿ ನೇತೃತ್ವದ ಕಾಂಗ್ರೆಸ್ ಬೆಂಬಲದೊಂದಿಗೆ ಪ್ರಧಾನಿಯಾಗಿದ್ದ ಚಂದ್ರಶೇಖರ್ ನೇತೃತ್ವದ ಕೇಂದ್ರ ಸರಕಾರ ಕರುಣಾನಿಧಿ ಸರಕಾರವನ್ನು ವಜಾ ಮಾಡಿತು. ಶ್ರೀಲಂಕಾದ ತಮಿಳು ಪ್ರತ್ಯೇಕತಾವಾದಿಗಳು ಹಿಂಸಾತ್ಮಕ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಕಾರಣ ನೀಡಿ ಸರಕಾರ ವಜಾ ಮಾಡಲಾಗಿತ್ತು. ಬಳಿಕ ನಡೆದ ಚುನಾವಣೆಯಲ್ಲಿ ಎಐಎಡಿಎಂಕೆ ಭರ್ಜರಿ ಗೆಲುವು ಸಾಧಿಸಿತು.
ಕರುಣಾನಿಧಿ 1996ರಲ್ಲಿ ಅಧಿಕಾರಕ್ಕೆ ಮರಳಿದರು. ಈ ಐದು ವರ್ಷಗಳ ಅವಧಿಯಲ್ಲಿ ದಕ್ಷಿಣ ತಮಿಳುನಾಡಿನಲ್ಲಿ ಸಾಕಷ್ಟು ಜಾತಿ ಸಂಘರ್ಷಗಳು ನಡೆದವು. ಕೊಯಮತ್ತೂರಿನಲ್ಲಿ ಕೋಮುಗಲಭೆಯೂ ನಡೆಯಿತು. ಪದೇ ಪದೇ ಇಂತಹ ಜಾತಿ ಸಂಘರ್ಷಗಳು ರಾಜ್ಯದಲ್ಲಿ ಉಗ್ರವಾದಿ ದಲಿತ ರಾಜಕೀಯದ ಉಗಮದ ಪರಿಣಾಮ. ಹಿಂಸೆತಡೆಗಾಗಿ ಕರುಣಾನಿಧಿ ರಾಜ್ಯಾದ್ಯಂತ ಸಮತ್ವಪುರಂ ಅಥವಾ ಸಮಾನತೆಯ ಗ್ರಾಮಗಳನ್ನು ನಿರ್ಮಿಸಿದರು. ಇದು ಜಾತಿ ಸಂಘರ್ಷಗಳು ಗಣನೀಯವಾಗಿ ಕಡಿಮೆಯಾಗಲು ಕಾರಣವಾಯಿತು. ಆದರೆ ಕೋಮು ಸಾಮರಸ್ಯ ಸಾಧಿಸಲು ಸಾಧ್ಯವಾಗಲಿಲ್ಲ.
2001ರಿಂದ 2006ರವರೆಗೆ ಅಧಿಕಾರದಿಂದ ಹೊರಗಿದ್ದ ಕರುಣಾನಿಧಿ ಹಾಗೂ ಡಿಎಂಕೆ ಪಕ್ಷ, 2006ರಲ್ಲಿ ಗದ್ದುಗೆ ಹಿಡಿದರೂ ಹಲವು ಆಂತರಿಕ ಕಚ್ಚಾಟ ಮತ್ತು ಸಂಘರ್ಷವನ್ನು ಕಾಣಬೇಕಾಯಿತು. ಕರುಣಾನಿಧಿ ಪುತ್ರ ಎಂ.ಕೆ.ಸ್ಟಾಲಿನ್ ಹಾಗೂ ಎಂ.ಕೆ.ಅಳಗಿರಿ ನಡುವಿನ ಕಚ್ಚಾಟ ಕೊನೆಯ ಅವಧಿಯಲ್ಲಿ ತೀವ್ರವಾಯಿತು. ಶ್ರೀಲಂಕಾದಲ್ಲಿ ನಾಗರಿಕ ಯುದ್ಧ ಕೊನೆಗೊಂಡದ್ದು ಕರುಣಾನಿಧಿ ಸರಕಾರದ ಪಾಲಿಗೆ ಮುಳ್ಳಾಯಿತು. ಕೇಂದ್ರ ಸರಕಾರದ ಭಾಗವಾಗಿದ್ದೂ, ಕೊಲಂಬೋ ಮೇಲೆ ಪ್ರಭಾವ ಬೀರುವಂತೆ ಕರುಣಾನಿಧಿ ಕೇಂದ್ರ ಸರಕಾರದ ಮೇಲೆ ಒತ್ತಡ ತರುತ್ತಿಲ್ಲ ಎಂದು ಹಲವು ಮಂದಿ ತಮಿಳು ರಾಷ್ಟ್ರೀಯವಾದಿ ಗುಂಪುಗಳ ಮುಖಂಡರು ಆಪಾದಿಸಿದರು.


2011 ಮತ್ತು 2016ರಲ್ಲಿ ಎಐಎಡಿಎಂಕೆ ವಿರುದ್ಧ ಕರುಣಾನಿಧಿ ಹಿನ್ನಡೆ ಸಾಧಿಸಿದರು. ವೃದ್ಧಾಪ್ಯ, ಅನಾರೋಗ್ಯದ ಹೊರತಾಗಿಯೂ ಕರುಣಾನಿಧಿ 2011ರ ಚುನಾವಣೆಯಲ್ಲಿ ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಿದರು. 2015ರಲ್ಲಿ ಕೂಡಾ ಹಲವು ಸಾರ್ವಜನಿಕ ಸಭೆೆಗಳಲ್ಲಿ ಮಾತನಾಡಿದರು. ನಿಧಾನ ವಾಗಿ ನಾಯಕತ್ವ ವನ್ನು ಸ್ಟಾಲಿನ್‌ಗೆ ವಹಿಸಿದ ಕರುಣಾನಿಧಿ, ಮಗನನ್ನು 2011ರಲ್ಲಿ ಉಪ ಮುಖ್ಯ ಮಂತ್ರಿಯಾಗಿ ಮಾಡಿದರು.
ಕರುಣಾನಿಧಿ ರಾಜ್ಯ ಸ್ವಾಯತ್ತತೆ ಯ ಪ್ರಬಲ ಪ್ರತಿಪಾದಕ ರಾಗಿದ್ದರು ಹಾಗೂ ರಾಜ್ಯದ ವಿಚಾರದಲ್ಲಿ ಕೇಂದ್ರದ ಹಸ್ತಕ್ಷೇಪದ ವಿರುದ್ಧ ಪ್ರಬಲ ಧ್ವನಿ ಎತ್ತುತ್ತಲೇ ಬಂದಿದ್ದರು. ಅವರ ರಾಜಕೀಯ ವೃತ್ತಿಯ ಒಂದು ಪ್ರಧಾನ ಆಯಾಮವೆಂದರೆ ಹಲವು ಹಿನ್ನಡೆ, ಸೋಲು, ವಿಭಜನೆಯ ಹೊರತಾ ಗಿಯೂ ಪಕ್ಷವನ್ನು ಒಗ್ಗಟ್ಟಾಗಿ ಇರಿಸಿಕೊಳ್ಳುವ ಸಾಮರ್ಥ್ಯ. 1972ರಲ್ಲಿ ಎಂಜಿಆರ್ ನಿರ್ಗಮನ, 1994ರಲ್ಲಿ ವೈಕೋ ಪಕ್ಷದಿಂದ ನಿರ್ಗಮಿಸಿ ಸ್ವಂತ ಪಕ್ಷ ಸ್ಥಾಪಿಸಿದ್ದು, 13 ವರ್ಷಗಳ ಕಾಲ ನಿರಂತರವಾಗಿ ಡಿಎಂಕೆ ಅಧಿಕಾರದಿಂದ ಹೊರಗಿದ್ದ ಘಟನೆಗಳ ಹೊರತಾಗಿಯೂ ಕರುಣಾನಿಧಿ ಪಕ್ಷವನ್ನು ಮುನ್ನಡೆಸಿಕೊಂಡು ಬಂದಿದ್ದರು.
ಭಾರತದ ಯಾವ ರಾಜಕಾರಣಿಯೂ ಕರುಣಾನಿಧಿಯಂತಹ ವಾಕ್ಪಟುತ್ವ ಹೊಂದಿರಲಿಲ್ಲ.ಕ್ಯಾಸೆಟ್‌ಗಳಲ್ಲಿ ದಾಖಲಾಗಿರುವ ಅವರ ರಾಜಕೀಯ ಭಾಷಣಗಳು ಕೂಡಾ ತಮಿಳು ಚಿತ್ರಗೀತೆಗಳಷ್ಟೇ ಜನಪ್ರಿಯ. ಅವುಗಳು ಔರಲ್ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ರೂಪು ಗೊಂಡಿವೆ.ಅವರ ಭಾಷಣ ಗಳನ್ನು ನಿರಂತರ ವಾಗಿ ಸಾರ್ವಜನಿಕ ಸಭೆಗಳಲ್ಲಿ ಪ್ಲೇ ಮಾಡಲಾಗುತ್ತದೆ. 1960ರ ದಶಕದಿಂದ 1980ರ ದಶಕದವರೆಗೂ ಅಂದರೆ ಮೂರು ದಶಕಗಳ ಕಾಲ ಇದು ಸಾರ್ವಜನಿಕ ಜನಜೀವನದ ಅವಿಭಾಜ್ಯ ಅಂಗವಾಗಿ ಬೆಳೆದಿತ್ತು. ತೀಕ್ಷ್ಣ ಬುದ್ಧಿ ಮತ್ತು ಚುಚ್ಚುಮಾತಿಗೆ ಹೆಸರಾಗಿದ್ದ ಕರುಣಾನಿಧಿಯವರ ಪತ್ರಿಕಾ ಗೋಷ್ಠಿಗಳು ಲವಲವಿಕೆಯಿಂದ ಕೂಡಿರುತ್ತಿದ್ದವು ಹಾಗೂ ಮುತ್ಸದ್ದಿ ರಾಜಕಾರಣಿಯ ಲಘು ಮುಖವನ್ನು ಪ್ರದರ್ಶಿಸುತ್ತಿದ್ದವು.
ಸಾಹಿತ್ಯಕ ಮತ್ತು ರಾಜಕೀಯ ಕ್ಷೇತ್ರಗಳ ಪಯಣ
ಕರುಣಾನಿಧಿ ತಮಿಳುನಾಡಿನ ರಾಜಕೀಯ ವೇದಿಕೆಗಳಲ್ಲಿ ಮಿಂಚಿದ್ದರಿಂದ ಹಲವು ಮಂದಿ ಅವರು ಸಾಹಿತ್ಯಲೋಕದ ದಿಗ್ಗಜ ಎನ್ನುವುದನ್ನು ಮರೆತಿದ್ದಾರೆ. ಸಾಹಿತ್ಯ, ಸಂಗೀತ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯಹೊಂದಿದ್ದ ಕಾರಣಕ್ಕೆ ಅವರನ್ನು ಮುತಮಿಳಅರಿಂಗರ್ ಎನ್ನಲಾಗುತ್ತಿತ್ತು. ಆಕರ್ಷಕ ಚಿತ್ರಗೀತೆಗಳನ್ನು ರಚನೆ ಮಾಡಿದ್ದ ಅವರು, 1963ರಲ್ಲಿ ಕಂಚಿತಲೈವನ್ ಚಿತ್ರಕ್ಕೆ ರಚಿಸಿದ್ದ ‘ವೆಲ್ಗ ನಾಡುವೆಲ್ಗನಾಡು ’ ಹಾಡು ಅತ್ಯಂತ ಜನಪ್ರಿಯವಾಗಿತ್ತು. 75ಕ್ಕೂ ಹೆಚ್ಚು ಚಿತ್ರಗಳಿಗೆ ಚಿತ್ರಕಥೆಯನ್ನೂ ಅವರು ಬರೆದಿದ್ದರು.


ಅಪಾರ ವಾಕ್ಪಟುತ್ವ ಹೊಂದಿದ್ದ ಅವರ ಮಾತಿನ ಶೈಲಿಯನ್ನು 1960 ಮತ್ತು 70ರ ದಶಕದಲ್ಲಿ ಯುವಕರು ಅನುಕರಿಸುತ್ತಿದ್ದರು. ಅವರ ಪ್ರಭಾವ ಎಷ್ಟಿತ್ತು ಎಂದರೆ ಯುವಕರು ಅವರಂತೆ ದಿರಿಸುಗಳನ್ನು ತೊಟ್ಟು ಕಪ್ಪುಕನ್ನಡಕ ಹಾಕಿಕೊಳ್ಳುತ್ತಿದ್ದರು. ಕರುಣಾನಿಧಿ ಉತ್ತಮ ಲೇಖಕರೂ ಆಗಿದ್ದು, ಹಲವು ಕೃತಿಗಳನ್ನೂ ರಚಿಸಿದ್ದಾರೆ.ಅವರ ನೆನಪುಗಳ ಬುತ್ತಿ ನೆಂಜುಕ್ಕು ನೀತಿ ಆರು ಸಂಪುಟಗಳಲ್ಲಿ ಹೊರಬಂದಿದೆ. 2010ರಲ್ಲಿ ಅವರು ವಿಶ್ವ ಶಾಸ್ತ್ರೀಯ ತಮಿಳು ಸಮ್ಮೇಳನವನ್ನು ಕೊಯಮತ್ತೂರಿನಲ್ಲಿ ಆಯೋಜಿಸಿದ್ದರು. ತಮಿಳು ಭಾಷೆ ಹಾಗೂ ರಾಜಕೀಯಕ್ಕೆ ಅವರ ಕೊಡುಗೆ ಅನನ್ಯ.
ಡಿಎಂಕೆ ತನ್ನ ಅಧಿಕಾರಾವಧಿಯ ಮೊದಲ ದಶಕದಲ್ಲಿ ರಸ್ತೆಗಳ ಹೆಸರಿನಿಂದ ಹಿಡಿದು, ಸಾಹಿತ್ಯ ಕಣ್ಮಣಿಗಳ ಪ್ರತಿಮೆ ಸ್ಥಾಪನೆವರೆಗೆ ತಮಿಳುನಾಡಿನ ದೃಶ್ಯಾವಳಿಯನ್ನೇ ಬದಲಿಸಿತು. ದ್ರಾವಿಡ ಸೌಂದರ್ಯ ಪ್ರಜ್ಞೆ ಅದರಲ್ಲೂ ಮುಖ್ಯವಾಗಿ ಪೋಸ್ಟರ್, ಕಟೌಟ್ ಹಾಗೂ ಫ್ಲೆಕ್ಸ್ ಬೋರ್ಡ್‌ಗಳ ಪ್ರಚಾರ ಸಂಸ್ಕೃತಿ, ಇಡೀ ಭಾರತದಲ್ಲಿ ರೂಢಿಯಾಗಿ ಬೆಳೆಯಿತು. ದೃಶ್ಯ ಮತ್ತು ಶ್ರವ್ಯ ಆರ್ಥಿಕತೆಯಲ್ಲಿ ಅವರ ಹೂಡಿಕೆಗಳು, ಡಿಎಂಕೆಗೆ ತಮಿಳುನಾಡು ರಾಜಕೀಯದಲ್ಲಿ ಪ್ರಾಬಲ್ಯ ತಂದುಕೊಟ್ಟವು.
ಡಿಎಂಕೆಯ ಹೂಡಿಕೆ ಸಂಕೇತಗಳ ಮುಂದುವರಿದ ಭಾಗವಾಗಿ ಕರುಣಾನಿಧಿ ವಳ್ಳುವರ್ ಕೊತ್ತಂನನ್ನು ತಮಿಳು ಕವಿ ತಿರುವಳ್ಳವರ್ ಗೌರವಾರ್ಥ ನಿರ್ಮಿಸಿದರು. ಆದರೆ 1977ರ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಅದನ್ನು ಉದ್ಘಾಟಿಸಲು ಸಾಧ್ಯವಾಗಲಿಲ್ಲ. ಆದರೆ ವಲ್ಲುವರ್ ಕೊತ್ತಂಗೆ ಮುಖ್ಯಮಂತ್ರಿಯಾಗಿಯೇ ಕಾಲಿಡುವುದಾಗಿ ಪ್ರತಿಜ್ಞೆ ಕೈಗೊಂಡ ಅವರು, ಒಂದು ದಶಕದ ಕಾಲ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸದ ಬಳಿಕ 1989ರಲ್ಲಿ ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಅಲ್ಲಿ ಆಯೋಜಿಸಿದರು. ಸಾಂಕೇತಿಕ ಹೂಡಿಕೆಯ ಮತ್ತೊಂದು ಸಂಕೇತವಾಗಿ 2010ರಲ್ಲಿ ಕರುಣಾನಿಧಿ, ಹಿಂದೂ ಮಹಾಸಾಗರ, ಅರಬ್ಬಿ ಸಮುದ್ರಮತ್ತು ಬಂಗಾಳಕೊಲ್ಲಿಯ ಸಂಗಮ ಕ್ಷೇತ್ರವಾದ ಕನ್ಯಾಕುಮಾರಿಯಲ್ಲಿ 133 ಅಡಿ ಎತ್ತರದ ತಿರುವಳ್ಳವರ್ ಪ್ರತಿಮೆ ಸ್ಥಾಪನೆಮಾಡಿದರು.ದ್ರಾವಿಡಶೈಲಿಯರಾಜಕೀಯ ಪ್ರಚಾರಕ್ಕೆಅನುಗುಣವಾಗಿ, ಜೀವಂತವ್ಯಕ್ತಿಗಿಂತ ದೊಡ್ಡಗಾತ್ರದ ಪ್ರತಿಮೆಗಳನ್ನು ಸ್ಥಾಪಿಸುವ ಸಂಸ್ಕೃತಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‌ಗಳಲ್ಲಿ ಬೆಳೆದಿದೆ.

ಅರ್ಧ ದಶಕಕ್ಕೂ ಹೆಚ್ಚು ಕಾಲ ತಮಿಳು ರಾಜಕೀಯದಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದ ಎರಡು ಪ್ರಮುಖ ರಾಜಕೀಯ ವ್ಯಕ್ತಿತ್ವಗಳನ್ನು ಮತ್ತು ಎಐಎಡಿಎಂಕೆ ಹಾಗೂ ಡಿಎಂಕೆ ಪಕ್ಷಗಳನ್ನು ಕೇವಲ ಎರಡು ವರ್ಷಗಳ ಕಿರು ಅಂತರದಲ್ಲಿ ತಮಿಳುನಾಡು ಕಳೆದುಕೊಂಡಿದೆ. ರಾಜ್ಯದ ಸರ್ವಶ್ರೇಷ್ಠ ನಾಯಕರಾದ ಜಯಲಲಿತಾ ಅವರ ಸಾವು ಹಾಗೂ ಕರುಣಾನಿಧಿಯವರ ಅನಾರೋಗ್ಯದ ಬಳಿಕದ ಅಗಲಿಕೆ, ರಾಜ್ಯದಲ್ಲಿ ದೊಡ್ಡಮಟ್ಟದ ರಾಜಕೀಯ ಶೂನ್ಯ ವಾತಾವರಣವನ್ನು ಸೃಷ್ಟಿಸಿದೆ. ಪಕ್ಷದ ಸಿದ್ಧಾಂತ ಬಹಳಷ್ಟು ಹಿಂದೆಯೇ ಎರಡನೇ ದರ್ಜೆಗೆ ಕುಸಿದಿದೆ. ಈ ಇಬ್ಬರು ನಾಯಕರ ಅಗಲಿಕೆ ದ್ರಾವಿಡ ರಾಜಕೀಯ ಶೈಲಿಯ ಅಂತ್ಯ ಸನ್ನಿಹಿತವಾಗಿರುವ ಸಂಕೇತ. ಹೊಸದಾಗಿ ರೂಪುಗೊಳ್ಳುತ್ತಿರುವ ನಟರಾದ ರಜನೀಕಾಂತ್ ಮತ್ತು ಕಮಲ್‌ಹಾಸನ್ ಅವರು ದ್ರಾವಿಡೋತ್ತರ ಶೈಲಿಯ ರಾಜಕೀಯದ ಲಾಭ ಪಡೆಯುವ ಹುನ್ನಾರದಲ್ಲಿದ್ದಾರೆ.
ಎಂ.ಕರುಣಾನಿಧಿಯವರು ಪತ್ನಿಯರಾದ ದಯಾಳು ಅಮ್ಮಾಳ್ ಮತ್ತು ರಜತಿ ಅಮ್ಮಾಳ್ ಹಾಗೂ ಮಕ್ಕಳಾದ ಮುತ್ತು, ಅಳಗಿರಿ, ಸ್ಟಾಲಿನ್, ತಮಿಳರಸು, ಸೆಲ್ವಿ ಮತ್ತು ಕಣಿಮೋಳಿಯನ್ನು ಅಗಲಿದ್ದಾರೆ.

ಚಿತ್ರಕಥೆ ಬದುಕಿನ ಮೆಲುಗಲ್ಲುಗಳು


ಕೇವಲ ರಾಜಕಾರಣಿಯಾಗಿ ಮಾತ್ರವಲ್ಲ, ಅತ್ಯುತ್ತಮ ಚಿತ್ರಕಥೆ ರಚನೆಯಲ್ಲೂ ಕರುಣಾನಿಧಿ ಖ್ಯಾತಿ ಪಡೆದಿದ್ದರು.
 ರಾಜಕುಮಾರಿ: ತಮ್ಮ 23ನೇ ವಯಸ್ಸಿನಲ್ಲಿ (1947ರಲ್ಲಿ) ಚಿತ್ರಕಥೆ ಬರೆದ ‘ರಾಜಕುಮಾರಿ’ ಸಿನೆಮಾದಲ್ಲಿ ಎಂಜಿಆರ್‌ರೊಂದಿಗೆ ಸ್ನೇಹವಾಯಿತು.
 ♦ ಮಂತ್ರಿ ಕುಮಾರಿ(1950): ತಮಿಳು ಪುರಾಣಕಾವ್ಯ ‘ಕುಂಡಲಕೇಸಿ’ಯನ್ನಾಧರಿಸಿದ ಈ ಚಿತ್ರದಲ್ಲಿ ಎಂಜಿಆರ್ ನಾಯಕ ನಟರಾಗಿದ್ದರು. ಆ ಕಾಲದಲ್ಲಿ ತಮಿಳುನಾಡಿನ ಅತ್ಯಂತ ಯಶಸ್ವೀ ಸಿನೆಮಾ ಇದಾಗಿದ್ದು ದಾಖಲೆ ಪ್ರದರ್ಶನ ಕಂಡಿತ್ತು.
 ♦ ಪರಾಸಕ್ತಿ: ಶಿವಾಜಿ ಗಣೇಶನ್ ಮತ್ತು ಎಸ್.ಎಸ್.ರಾಜೇಂದ್ರನ್ ಅವರು ಈ ಸಿನೆಮಾವನ್ನು ಸ್ಮರಣೀಯವಾಗಿಸಿದರು. ‘ಕಳೆದುಹೋಗುವ, ಮರಳಿ ಸಿಗುವ’ ನಿರೂಪಣಾ ವಿಷಯದ ಅತ್ಯಂತ ಜನಪ್ರಿಯ ಸಿನೆಮಾವಾಗಿ ಇದು ಮಾನ್ಯವಾಗಿದೆ. ಮೂವರು ಸಹೋದರರು ಹಾಗೂ ಅವರ ಸಹೋದರಿಯರ ಸುತ್ತ ಹೆಣೆದ ಈ ಚಿತ್ರಕಥೆಯ ಬಗ್ಗೆ ಮಹಿಳಾ ಸಂಸ್ಥೆಗಳು ಹಾಗೂ ಸಾಮಾನ್ಯ ಜನರಿಂದ ಭಾರೀ ಟೀಕೆ ಎದುರಾಯಿತು.
 ♦ ಮನೋರಮಾ(1954): ಇದು ಕೂಡಾ ಪುರಾಣಕಥೆ ಆಧರಿಸಿದ ಸಿನೆಮಾ. ಅತ್ಯಂತ ಸುದೀರ್ಘವಾದ ಸಂಭಾಷಣೆಯಿಂದ ಇದು ಇಂದಿಗೂ ನೆನಪಿನಲ್ಲಿ ಉಳಿಯುವ ಸಿನೆಮಾವಾಗಿದೆ.
 ♦ ರಂಗೂನ್ ರಾಧ(1956): ಶಿವಾಜಿ ಗಣೇಶನ್ ಪ್ರಮುಖ ಪಾತ್ರದಲ್ಲಿದ್ದ ಸಿನೆಮಾ. ದೈನಂದಿನ ಜೀವನದಲ್ಲಿ ಬಳಸುವ ಸಂಭಾಷಣೆಗಾಗಿ ಈ ಸಿನೆಮಾ ಹೆಸರಾಗಿತ್ತು.
 ♦ ಇರುವರ್ ಉಲ್ಲಂ(1963): ಇದೊಂದು ಪ್ರೇಮಕಥೆ ಹೊಂದಿರುವ ಸಿನೆಮಾವಾಗಿತ್ತು.
 ♦ ಪಿಳ್ಳೈಯೊ ಪಿಳ್ಳೈ(1972): ಗುರುತನ್ನು ತಪ್ಪಾಗಿ ತಿಳಿದುಕೊಂಡಾಗ ಆಗುವ ಅನಾಹುತವನ್ನು ಈ ಚಿತ್ರಕಥೆಯಲ್ಲಿ ಕರುಣಾನಿಧಿ ಸಮರ್ಥವಾಗಿ ರೂಪಿಸಿದ್ದಾರೆ.
 ♦ ನ್ಯಾಯ ತರಾಸು(1989): ಈ ಸಿನೆಮಾದಲ್ಲಿ ನಟಿ ರಾಧಾ ಪೆರೋಲ್ ಮೇಲೆ ಬಿಡುಗಡೆಗೊಂಡಿರುವ ನಕ್ಸಲ್ ಕಾರ್ಯಕರ್ತೆಯ ಪಾತ್ರ ನಿರ್ವಹಿಸಿದ್ದಾರೆ. ಭಾರತೀಯ ಸಮಾಜದ ಹಲವು ಸಮಸ್ಯೆಗಳ್ತ ಕರುಣಾನಿಧಿ ಬೆಳಕು ಚೆಲ್ಲಿದ್ದಾರೆ.
 ♦ಊಳಿಯನ್ ಓಸೈ(2008): ಚಾರಿತ್ರಿಕ ಘಟನೆಯನ್ನಾಧರಿಸಿದ ಈ ಸಿನೆಮಾ ಹೊಸ ತಲೆಮಾರಿನ ಜನರಿಗೆ ಇಷ್ಟವಾಗಲಿಲ್ಲ. ಆದರೂ ಸಿನೆಮಾದ ಸಂಭಾಷಣೆ ಗಮನ ಸೆಳೆಯಲು ಶಕ್ತವಾಗಿತ್ತು.
 ♦ ಪೊನ್ನಾರ್ ಶಂಕರ್(2011): ಕರುಣಾನಿಧಿ ಚಿತ್ರಕಥೆ ಬರೆದಿರುವ ಕೊನೆಯ ಸಿನೆಮಾ ಇದು. ಅವಳಿ ಸಹೋದರರ ಕುರಿತ ಈ ಸಿನೆಮಾದಲ್ಲಿ ನಟ ಪ್ರಶಾಂತ್ ಪ�

Writer - ಕಾರ್ತಿಕೇಯನ್ ದಾಮೋದರನ್

contributor

Editor - ಕಾರ್ತಿಕೇಯನ್ ದಾಮೋದರನ್

contributor

Similar News

ಜಗದಗಲ
ಜಗ ದಗಲ