ರನ್‌ವೇ ಮೀರಿ ಕಾಂಪೌಂಡ್‌ಗೆ ಢಿಕ್ಕಿ ಹೊಡೆದ ವಿಮಾನ!

Update: 2018-08-08 03:59 GMT

ಜೈಪುರ, ಆ.8: ಏಳು ಮಂದಿ ಪ್ರಯಾಣಿಕರನ್ನು ಹೊಂದಿದ್ದ ಸೆಸ್ನಾ ವಿಮಾನಯಾನ ಕಂಪೆನಿಯ ವಿಮಾನವೊಂದು ಏರ್‌ಸ್ಟ್ರಿಪ್ ಮೀರಿ ಆವರಣ ಗೋಡೆಗೆ ಢಿಕ್ಕಿ ಹೊಡೆದ ಘಟನೆ ರಾಜಸ್ಥಾನದ ಶ್ರೀಗಂಗಾ ನಗರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.

"ಜೈಪುರದ ಸಂಗನೇರ್ ವಿಮಾನ ನಿಲ್ದಾಣದಿಂದ ಲಾಲ್‌ಗಢಕ್ಕೆ ಆಗಮಿಸಿದ ವಿಮಾನ, ಲ್ಯಾಂಡಿಂಗ್ ಆಗುವ ವೇಳೆ ಈ ಘಟನೆ ಸಂಭವಿಸಿದೆ" ಎಂದು ಲಾಲ್‌ಗಢ ಠಾಣಾಧಿಕಾರಿ ತೇಜವಂತ್ ಸಿಂಗ್ ಹೇಳಿದ್ದಾರೆ. ಎಲ್ಲ ಪ್ರಯಾಣಿಕರು, ಪೈಲಟ್ ಹಾಗೂ ಸಹಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಲ್ಯಾಂಡಿಂಗ್ ವೇಳೆ ವಿಮಾನ ರನ್‌ವೇಯಿಂದ ಮುಂದಕ್ಕೆ ಚಾಚಿ ಕಾಂಪೌಂಡ್‌ಗೆ ಢಿಕ್ಕಿ ಹೊಡೆದಿದ್ದು, ಸಂಜೆ 5:55ಕ್ಕೆ ಘಟನೆ ಸಂಭವಿಸಿದೆ. ಏರ್‌ಸ್ಟ್ರಿಪ್‌ನಲ್ಲಿ ಹಕ್ಕಿಗಳು ಇದ್ದ ಹಿನ್ನೆಲೆಯಲ್ಲಿ ಸಮರ್ಪಕವಾಗಿ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ರನ್‌ವೇ ಮೀರಿ ಆವರಣ ಗೋಡೆಗೆ ಢಿಕ್ಕಿ ಹೊಡೆದಿದೆ ಎಂದು ಸುಪ್ರೀಂ ಏರ್‌ಲೈನ್ಸ್‌ನ ಪ್ರತಿನಿಧಿ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಅಂತಾರಾಜ್ಯ ವಿಮಾನಯಾನ ಸೇವೆ ಯೋಜನೆಯಡಿ ಜೈಪುರ ಮತ್ತು ಶ್ರೀಗಂಗಾ ನಗರ ನಡುವಿನ ವಿಮಾನಯಾನ ಕಳೆದ ತಿಂಗಳು ಆರಂಭವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News