ದಲಿತ ಅಡುಗೆಯಾಳು ನೇಮಕ ವಿವಾದ: ಈಗ ವಿದ್ಯಾರ್ಥಿಗಳಿಂದ ವಿಷಾಹಾರ ದೂರು
ಕೊಯಮತ್ತೂರು,ಆ.8: ಮಧ್ಯಾಹ್ನದ ಬಿಸಿಯೂಟ ತಯಾರಿಕೆಗೆ ದಲಿತ ಮಹಿಳೆಯ ನೇಮಕದಿಂದ ವಿವಾದದ ಸುಳಿಯಲ್ಲಿ ಸಿಲುಕಿರುವ ತಿರುಪುರ ಜಿಲ್ಲೆಯ ಸರಕಾರಿ ಶಾಲೆಯೊಂದರ ಕೆಲವು ವಿದ್ಯಾರ್ಥಿಗಳು ಶಂಕಿತ ವಿಷಾಹಾರ ಸೇವನೆಯ ಬಳಿಕ ಅಸ್ವಸ್ಥಗೊಂಡಿದ್ದು, ಇದು ತನ್ನನ್ನು ಕೆಲಸದಿಂದ ಕಿತ್ತೊಗೆಯಲು ನಡೆಸಿರುವ ಷಡ್ಯಂತ್ರ ಎಂದು ಅಡಿಗೆಯಾಳು ಆರೋಪಿಸಿದ್ದಾರೆ.
ತಿರುಮಲೈಗೌಂಡನಪಾಳ್ಯಂ ಶಾಲೆಯ 12 ವಿದ್ಯಾರ್ಥಿಗಳು ಮಂಗಳವಾರ ಮಧ್ಯಾಹ್ನ ಬಿಸಿಯೂಟ ಸೇವನೆಯ ಬಳಿಕ ವಾಂತಿಯಾಗುತ್ತಿದೆ ಎಂದು ದೂರಿಕೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ.
ಆಹಾರದಲ್ಲಿ ಮೃತ ಹಲ್ಲಿ ಪತ್ತೆಯಾಗಿದೆ ಎಂದು ಮಕ್ಕಳ ಪೋಷಕರು ಆರೋಪಿಸಿದ್ದು,ಈ ಹಿನ್ನೆಲೆಯಲ್ಲಿ ಶಾಲಾ ಮುಖ್ಯಶಿಕ್ಷಕಿ ಶಶಿಕಲಾ ಅವರು ಕರ್ತವ್ಯದಲ್ಲಿ ನಿರ್ಲಕ್ಷಕ್ಕಾಗಿ ಅಡುಗೆಯಾಳು ಪಿ.ಪಾಪ್ಪಾಳ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಆದರೆ,ತಾನು ಮತ್ತು ತನ್ನ ಪುತ್ರಿಯೂ ಅದೇ ಆಹಾರವನ್ನು ಸೇವಿಸಿದ್ದೆವು ಎಂದು ಹೇಳಿದ ಪಾಪ್ಪಾಳ್,ವಿಷಾಹಾರದ ಆರೋಪವು ತನ್ನನ್ನು ಕೆಲಸದಿಂದ ಕಿತ್ತು ಹಾಕುವ ಸಂಚಿನ ಭಾಗವಾಗಿದೆ ಎಂದಿದ್ದಾಳೆ.
ತನ್ನ ಕುಟುಂಬದ ಸುರಕ್ಷತೆಯ ಬಗ್ಗೆ ಕಳವಳಗೊಂಡಿದ್ದ ಪಾಪ್ಪಾಳ್ ಪತಿ ಪೊಲೀಸ್ ರಕ್ಷಣೆಯನ್ನು ಕೋರಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ ಒಂದು ದಿನದ ಬಳಿಕ ಈ ಘಟನೆ ನಡೆದಿದೆ.
ಪಾಪ್ಪಾಳ್ ನೇಮಕವನ್ನು ವಿರೋಧಿಸಿದ್ದ ಗೌಂಡರ್ ಸಮುದಾಯದ ಮಕ್ಕಳ ಪೋಷಕರು ಆಕೆಯ ಎತ್ತಂಗಡಿಗಾಗಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದ ಬಳಿಕ ಕಳೆದ ತಿಂಗಳು ಇನ್ನೊಂದು ಶಾಲೆಗೆ ವರ್ಗಾವಣೆಗೊಳಿಸಲಾಗಿತ್ತು. ಆದರೆ ಈ ವಿಷಯವು ಹಿರಿಯ ಅಧಿಕಾರಿಗಳ ಕಿವಿಗೆ ಬಿದ್ದಬಳಿಕ ಆಕೆಯನ್ನು ಇದೇ ಶಾಲೆಗೆ ಮರು ವರ್ಗಾವಣೆಗೊಳಿಸಲಾಗಿತ್ತು ಮತ್ತು ಘಟನೆಗೆ ಸಂಬಂಧಿಸಿದಂತೆ 87 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವೂ ಈ ವಿಷಯವನ್ನು ತನ್ನ ಗಮನಕ್ಕೆ ತೆಗೆದುಕೊಂಡಿದ್ದು,ದಲಿತ ಮಹಿಳೆಗೆ ಮಾಡಲಾಗಿರುವ ಅವಹೇಳನದ ಬಗ್ಗೆ ವಿವರಣೆಯನ್ನು ಕೇಳಿದೆ.
ಮುಖ್ಯ ಶಿಕ್ಷಣಾಧಿಕಾರಿ ಎಸ್.ಶಾಂತಿ,ಹಿರಿಯ ಜಿಲ್ಲಾಡಳಿತ,ಆರೋಗ್ಯ ಮತ್ತು ಪೊಲೀಸ್ ಅಧಿಕಾರಿಗಳು ಶಂಕಿತ ವಿಷಾಹಾರ ಘಟನೆಯ ಬಗ್ಗೆ ವಿಚಾರಣೆ ನಡೆಸಿದ್ದು,ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.