ಹೆಚ್ಚುತ್ತಿರುವ ಹಸಿವಿನ ಸಾವುಗಳಿಗೆ ಯಾರು ಹೊಣೆಗಾರರು?

Update: 2018-08-08 18:31 GMT

ಇತ್ತೀಚೆಗೆ ಹೊಸದಿಲ್ಲಿಯ ಹೃದಯಭಾಗದ ಬಡಾವಣೆಯೊಂದರಲ್ಲಿ ಮೂವರು ಹೆಣ್ಣುಮಕ್ಕಳು ಹಸಿವಿನಿಂದ ಸಾವಿಗೀಡಾದರೆಂಬ ದಾರುಣ ಸುದ್ದಿಯು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ: ಸ್ವಾತಂತ್ರ್ಯ ಬಂದು 70 ವರ್ಷಗಳಾದ ಮೇಲೂ ಪ್ರಭುತ್ವವು ತನ್ನ ನಾಗರಿಕರನ್ನು ಹಸಿವಿನಿಂದ ರಕ್ಷಿಸಲು ವಿಫಲವಾಗುತ್ತಿರುವುದರ ಬಗ್ಗೆ ಮಾತ್ರವಲ್ಲದೆ ಭಾರತವು ಅನುಸರಿಸುತ್ತಿರುವ ಅಭಿವೃದ್ಧಿ ಮಾದರಿಯ ಬಗ್ಗೆಯೂ ಕೂಡಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಜುಲೈ 24ರಂದು ಆ ಮೂರು ಮಕ್ಕಳನ್ನು, ಎಂಟು ವಯಸ್ಸಿನ ಮಾನ್ಸಿ, ನಾಲ್ಕು ವಯಸ್ಸಿನ ಶಿಖಾ ಮತ್ತು ಎರಡು ವಯಸ್ಸಿನ ಪರುಲ್, ಆಸ್ಪತ್ರೆಗೆ ತರುವ ವೇಳೆಗಾಗಲೇ ಪ್ರಾಣಹೋಗಿಯಾಗಿತ್ತು. ನಂತರ ನಡೆದ ಮರಣೋತ್ತರ ಪರೀಕ್ಷೆಯು ಅವು ಹಸಿವಿನಿಂದ ಸಂಭವಿಸಿದ ಸಾವುಗಳೆಂಬುದನ್ನು ಬಯಲುಗೊಳಿಸಿತು. ಅವರ ತಂದೆ ಕಣ್ಮರೆಯಾಗಿದ್ದು, ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿದ್ದ ಅವರ ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.
ಭಾರತವು ಒಂದು ಕೈಗಾರಿಕಾ ಬಂಡವಾಳ ಸಮಾಜದಿಂದ ಗ್ರಾಹಕ ಬಂಡವಾಳ ವ್ಯವಸ್ಥೆಯೆಡೆಗೆ ಸಾಗುತ್ತಿದೆಯೆಂಬ ವರದಿಗಳು ಸಂದರ್ಭದ ವಿಪರ್ಯಾಸಕ್ಕೆ ಕನ್ನಡಿ ಹಿಡಿಯುತ್ತಿದೆ. ಹಾಗಿದ್ದಲ್ಲಿ ಎದುರಾಗುವ ಪ್ರಶ್ನೆಯೇನೆಂದರೆ: ಗ್ರಾಹಕರಾಗಿರುವವರು ಯಾರು? ಮತ್ತು ಅವರು ಎಷ್ಟು ಖರೀದಿ ಮಾಡುತ್ತಿದ್ದಾರೆ?. ಆಹಾರ ಮತ್ತು ಸೇವಾ ಉದ್ಯಮಗಳಲ್ಲಿ ಆಗುತ್ತಿರುವ ಹೆಚ್ಚಳವು ಸಮಾಧಾನಕರವಾಗಿದೆಯೆಂದು ಹೇಳುತ್ತದೆ. ಆದರೆ ಗ್ರಾಹಕ ಭಾರತಕ್ಕೆ ಈ ಹಸಿವಿನ ಸಾವುಗಳ ಬಗ್ಗೆ ಅರಿವಿದೆಯೇ?
ಈ ಮೂರು ಮಕ್ಕಳ ಸಾವಿಗೆ ಮುಂಚೆ, ವಿಶೇಷವಾಗಿ ಕಳೆದ ಆರು ತಿಂಗಳಿಂದಲೂ ನಿರ್ದಿಷ್ಟವಾಗಿ ಜಾರ್ಖಂಡ್ ರಾಜ್ಯದಿಂದ ಹಸಿವಿನ ಸಾವಿನ ಸರಣಿಗಳೇ ವರದಿಯಾಗುತ್ತಿವೆ. ಇದರ ಜೊತೆಗೆ ಕರ್ನಾಟಕ, ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳಿಂದಲೂ ಹಸಿವಿನ ಸಾವುಗಳ ವರದಿಗಳಾಗಿವೆ. ಇಂಥಾ ಪ್ರತಿಯೊಂದು ಪ್ರಕರಣಗಳಲ್ಲೂ, ವ್ಯವಸ್ಥೆಯು ಸಂತ್ರಸ್ತ ಕುಟುಂಬಗಳಿಗೆ ದಕ್ಕಬೇಕಾದ ಸೌಲಭ್ಯಗಳನ್ನು ದೊರಕಿಸುವಲ್ಲಿ ವಿಫಲವಾಗಿವೆ ಎಂಬುದನ್ನು ದಿನಪತ್ರಿಕೆಗಳ ವರದಿಗಳು ಮತ್ತು ಸತ್ಯ ಶೋಧನಾ ತಂಡಗಳ ವರದಿಗಳು ಬಯಲುಮಾಡಿವೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯು (ಎನ್‌ಎಫ್‌ಎಸ್‌ಎ) ಸಾರ್ವಜನಿಕ ಪಡಿತರ ಪದ್ಧತಿಯ ಮೂಲಕ ರಿಯಾಯತಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವುದನ್ನು, ಶಾಲಾ ಮಕ್ಕಳಿಗೆ ಬಿಸಿಯೂಟವನ್ನು ಪೂರೈಸುವುದನ್ನೂ, ಗರ್ಭಿಣಿಯರಿಗೆ ಪೋಷಕಾಂಶವನ್ನು ನೀಡುವ ಯೋಜನೆಯನ್ನು ಹಾಗೂ ಅಂಗನವಾಡಿಗಳ ಮೂಲಕ ಮಕ್ಕಳಿಗೆ ಪೂರಕ ಪೌಷ್ಟಿಕಾಂಶವನ್ನು ಒದಗಿಸುವ ಯೋಜನೆಗಳನ್ನು ಹೊಂದಿದೆ. ದಿಲ್ಲಿಯ ಪ್ರಕರಣದಲ್ಲಿ, ಮೃತಪಟ್ಟ ಮಕ್ಕಳಲ್ಲಿ ಹಿರಿಯವಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಖಾತರಿಗೊಳಿಸುವ ಕಾಯ್ದೆಯ ಪ್ರಕಾರ ಶಾಲೆಯಲ್ಲಿ ಭರ್ತಿಯಾಗಿ ನಿಯಮಿತವಾಗಿ ಮಧ್ಯಾಹ್ನದ ಬಿಸಿಯೂಟವನ್ನು ಪಡೆಯುತ್ತಿರಬೇಕಿತ್ತು. ಇನ್ನೆರೆಡು ಮಕ್ಕಳಿಗೆ ಅಂಗನವಾಡಿ ಕೇಂದ್ರದ ಮೂಲ ಪೂರಕ ಪೌಷ್ಟಿಕಾಂಶಗಳು ದೊರೆಯುತ್ತಿರಬೇಕಿತ್ತು. ದಿಲ್ಲಿಯ ‘ರೋಜಿ-ರೋಟಿ ಅಧಿಕಾರ್ ಅಭಿಯಾನ್’ ಸಂಸ್ಥೆಯು ಈ ಪ್ರಕರಣದ ಬಗ್ಗೆ ನಡೆಸಿದ ಸತ್ಯಶೋಧನಾ ವರದಿಯು ಹೇಳುವ ಪ್ರಕಾರ ಈ ಸವಲತ್ತುಗಳು ಆ ಮಕ್ಕಳಿದ್ದ ಪ್ರದೇಶದಲ್ಲಿ ಲಭ್ಯವಿದ್ದರೂ ಆ ಮಕ್ಕಳ ಸಾವು ಸಂಭವಿಸಿದ ತಿಂಗ ಮುಂಚಿನಿಂದಲೂ ಆ ಮಕ್ಕಳಿಗಾಗಲೀ, ಅವರ ಪೋಷಕರಿಗಾಗಲೀ ದೊರೆಯುತ್ತಿರಲಿಲ್ಲ. ಅವರು ವಲಸೆ ಬಂದವರಾಗಿದ್ದರಿಂದ ಮತ್ತು ಅವರ ಬಳಿ ಸೂಕ್ತವಾದ ದಾಖಲೆ ಪತ್ರಗಳಿರದಿದ್ದರಿಂದ ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ನೋಂದಾವಣೆ ಮಾಡಿಕೊಳ್ಳುವುದೇ ಕಷ್ಟಕರವಾಗಿತ್ತು ಅಥವಾ ಪ್ರಾಯಶಃ ದಿಲ್ಲಿಗೆಂದು ನಿಗದಿಯಾಗಿದ್ದ ಪಡಿತರ ಚೀಟಿಗಳ ವಿತರಣೆಯು ಮುಗಿದುಹೆಗಿದ್ದೂ ಇದಕ್ಕೆ ಕಾರಣವಿರಬಹುದು.


 ಪ್ರಕರಣದ ಹಿಂದಿನ ನಿರ್ದಿಷ್ಟ ಕಾರಣಗಳ ಬಗ್ಗೆ ಇನ್ನೂ ತನಿಖೆ ನಡೆಸಲಾಗುತ್ತಿದ್ದರೂ ಹಸಿವಿನ ಸಾವುಗಳೆಂದು ಈವರೆಗೆ ವರದಿಯಾಗಿರುವ ಇಂತಹ ಎಲ್ಲಾ ಪ್ರಕರಣಗಳಲ್ಲೂ ಅಧಿಕಾರಶಾಹಿಯು ಮುಂದೊಡ್ಡುವ ಅಡ್ಡಿಗಳಿಂದಾಗಿ ಅಥವಾ ಸರಕಾರವು ಹೇರಿರುವ ಸಂಪನ್ಮೂಲಗಳ ಮೇಲಿನ ನಿರ್ಬಂಧಗಳಿಂದಾಗಿ ಆಹಾರ ಭದ್ರತಾ ಕಾಯ್ದೆ ಅಥವಾ ಇತರ ಸಾಮಾಜಿಕ ಭದ್ರತಾ ಪಿಂಚಣಿಗಳ (ವೃದ್ಧಾಪ್ಯ ವೇತನ, ನಿರಾಶ್ರಿತ ಮಹಿಳಾ ವೇತನ) ಸೌಲಭ್ಯಗಳು ಸಂತ್ರಸ್ತರಿಗೆ ನಿರಾಕರಿಸಲ್ಪಟ್ಟಿವೆ. ಸುದೀರ್ಘ ಕಾಲದ ಹಸಿವಿನ ಹಿನ್ನೆಲೆಯಿಂದ ಆಗಿರುವ ಈ ಸಾವುಗಳು ದೇಶದಲ್ಲಿ ಹಲವಾರು ಬಗೆಯ ಮತ್ತು ವಿಶಾಲ ವ್ಯಾಪ್ತಿಯುಳ್ಳ ಸಾಮಾಜಿಕ ಭದ್ರತಾ ಯೋಜನೆಗಳು ಲಭ್ಯವಿದ್ದರೂ ಅತ್ಯಂತ ಅಂಚಿನಲ್ಲಿ ಬದುಕುತ್ತಿರುವ ಜನರು ಮಾತ್ರ ಅದರ ವ್ಯಾಪ್ತಿಯಿಂದ ಹೊರಗಡೆಯೇ ಉಳಿದಿದ್ದಾರೆಂಬ ವಾಸ್ತವವನ್ನು ಮತ್ತೊಮ್ಮೆ ಸಾಬೀತು ಪಡಿಸುತ್ತಿವೆ. ಹೀಗಾಗಿ ಅಸ್ತಿತ್ವದಲ್ಲಿರುವ ಯೋಜನೆಗಳ ಅನುಷ್ಠಾನವನ್ನು ಇನ್ನಷ್ಟು ಬಿಗಿಯಾಗಿ ಮಾಡುವ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಜೊತೆಗೆ ದೇಶದ ಇತರ ಭಾಗಗಳಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಿ ಉತ್ತಮ ಫಲಿತಾಂಶಗಳನ್ನು ಕಂಡಿರುವ ಕಾರ್ಯಕ್ರಮಗಳಾದ ನಗರ ಪ್ರದೇಶಗಳಲ್ಲಿ ಸಮುದಾಯ ಅಡುಗೆ ಮನೆಗಳು, ಪಡಿತರ ಪದ್ಧತಿಯ ಮೂಲಕ ವಿಶೇಷವಾಗಿ ಬುಡಕಟ್ಟು ಪ್ರದೇಶಗಳಲ್ಲಿ ಪ್ರದೇಶವಾರು ವೈವಿಧ್ಯವುಳ್ಳ ಆಹಾರ ಧಾನ್ಯಗಳ ವಿತರಣೆ, ರಜಾ ದಿನಗಳಲ್ಲೂ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದ ವಿತರಣೆಯಂತಹ ಯೋಜನೆಗಳನ್ನೂ ದೇಶಾದ್ಯಂತ ಜಾರಿಗೆ ತರುವ ಜರೂರಿದೆ. ಅಷ್ಟೇ ಮುಖ್ಯವಾಗಿ, ಇಂತಹ ಬಹುಪಾಲು ಪ್ರಕರಣಗಳಲ್ಲಿ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಯಾಗಲು ಆಧಾರ್ ಕಾರ್ಡನ್ನು ಕಡ್ಡಾಯ ಮಾಡುವಂಥ ಕ್ರಮಗಳೇ ಸಾವಿಗೆ ಕಾರಣವಾಗಿವೆ. ಇದನ್ನು ಕೂಡಲೇ ನಿಲ್ಲಿಸಬೇಕು. ಅತ್ಯಂತ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿರುವ ಸಮುದಾಯಗಳಿಗೆ ಅಗತ್ಯ ಸವಲತ್ತುಗಳನ್ನು ತಲುಪಿಸಲು ವಿಶೇಷ ಗಮನ ನೀಡುವಂಥ ನಿಜವಾದ ಅರ್ಥದಲ್ಲಿ ಸಾರ್ವತ್ರಿಕ ಸಾಮಾಜಿಕ ಭ್ರತಾ ವ್ಯವಸ್ಥೆಯು ಜಾರಿಯಾಗಬೇಕಿದೆ.
ಪ್ರಭುತ್ವವು ಕೊಡಮಾಡುತ್ತಿರುವ ಸವಲತ್ತುಗಳನ್ನು ಜಾರಿಮಾಡುವ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಅಗತ್ಯವಿದೆ. ಹಾಗೆಯೇ ಈ ದೇಶವು ಎರಡು ದಶಕಗಳ ಕಾಲ ತೀವ್ರ ಅರ್ಥಿಕ ಅಭಿವೃದ್ಧಿಯನ್ನು ಕಂಡ ನಂತರವೂ ಜನರು ಹಸಿವಿನಿಂದ ಸಾಯುವ ಪರಿಸ್ಥಿತಿ ಏಕೆ ಉಂಟಾಗುತ್ತಿದೆಯೆಂಬ ಬಗ್ಗೆಯೂ ಆಳವಾದ ಅವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಹಾಲಿ ನಾವು ಅನುಸರಿಸುತ್ತಿರುವ ಆರ್ಥಿಕ ಅಭಿವೃದ್ಧಿ ಮಾದರಿಯು ಅಪಾರವಾದ ಅಸಮಾನತೆಯನ್ನು ಹುಟ್ಟುಹಾಕುತ್ತಿದೆ. ಇದು ಕೆಲವರಿಗೆ ಮಾತ್ರ ಹೆಚ್ಚು ಲಾಭದಾಯಕವಾಗಿದೆ ಮತ್ತು ಅದೇ ಕಾರಣದಿಂದಾಗಿ ಹಲವರನ್ನು ಮೂಲಭೂತ ಜೀವನ ಭದ್ರತೆ ಮತ್ತು ಘನತೆಯುಳ್ಳ ಉದ್ಯೋಗಗಳನ್ನು ಪಡೆಯುವ ಅವಕಾಶದಿಂದಲೂ ವಂಚಿತರನ್ನಾಗಿ ಮಾಡುತ್ತಿದೆಯೆಂಬುದನ್ನು ಒಪ್ಪಿಕೊಳ್ಳಲೇ ಬೇಕಿದೆ. ಜೀವನೋಪಾಯಗಳ ಭದ್ರತೆಯಿಲ್ಲದ ಕಾರಣದಿಂದಾಗಿ ಅತ್ಯಂತ ಅತಂತ್ರ ಬದುಕನ್ನು ಸಾಗಿಸುತ್ತಿರುವ ಲಕ್ಷಾಂತರ ಜನರ ಬದುಕಿನ ಅತಂತ್ರತೆಯನ್ನು ದಿಲ್ಲಿಯಲ್ಲಿ ಸಂಭವಿಸಿರುವ ಆ ಹಸಿವಿನ ಸಾವುಗಳು ಬಯಲುಗೊಳಿಸಿದೆ. ಅ ಮೂವರು ಮಕ್ಕಳ ನೆರೆಹೊರೆಯವರಿಗೆ ಆ ಕುಟುಂಬವು ಬಿಕ್ಕಟ್ಟನ್ನು ಎದುರಿಸುತ್ತಿದೆಯೆಂದು ತಿಳಿದಿದ್ದರೂ ಅದು ಆ ಮಕ್ಕಳನ್ನು ಸಾವಿಗೇ ದೂಡಿಬಿಡಬಹುದೆಂಬ ಕಲ್ಪನೆಯೂ ಪ್ರಾಯಶಃ ಇದ್ದಿರಲಿಕ್ಕಿಲ್ಲ. ಸರಕಾರವಂತೂ ಸಂಪೂರ್ಣವಾಗಿ ನಾಪತ್ತೆಯಾಗಿದೆ. ಇದು ಪ್ರಾಯಶಃ ಈ ದೇಶದ ಇತರ ಕೋಟ್ಯಂತರ ಜನರ ಅತಂತ್ರದ ಕಥೆಯೂ ಹೌದು.
 ಹೀಗಾಗಿ ದೇಶದ ಸಂಪತ್ತಿನ ಸಮಾನ ಹಂಚಿಕೆಯ ಬಗ್ಗೆ ಒಂದು ರಾಷ್ಟ್ರೀಯ ಚರ್ಚೆಯಾಗುವ ಅಗತ್ಯವಿದೆ. ಈ ಸಾವುಗಳು ಹಸಿವಿನಿಂದ ಸಂಭವಿಸಿದೆಯೋ ಇಲ್ಲವೋ ಎಂದು ಸಾಬೀತುಮಾಡಲು ತಮ್ಮ ಶಕ್ತಿಯನ್ನು ವ್ಯಯ ಮಾಡುವ ಬದಲಿಗೆ ಪ್ರಭುತ್ವ ಮತ್ತು ರಾಜಕಿಯ ಪಕ್ಷಗಳು ಈ ಸಮಸ್ಯೆಯ ಬಗ್ಗೆ ಕನಿಷ್ಠ ಚರ್ಚೆಯನ್ನಾದರೂ ನಡೆಸಿ ಕಾರ್ಯಸಾಧುವಾದ ಸೃಜನಶೀಲ ಪರಿಹಾರಗಳನ್ನು ಹುಡುಕಲು ಮುಂದಾಗಬೇಕು. ಈ ಎಲ್ಲಾ ಪ್ರಕರಣಗಳಲ್ಲೂ ಸ್ಪಷ್ಟವಾಗುವ ಒಂದು ಸಂಗತಿಯೇನೆಂದರೆ ಸಾವಿಗೀಡಾದ ಈ ಎಲ್ಲರೂ ಅತ್ಯಂತ ದಾರುಣ ಬಡತನದಲ್ಲಿ ಬದುಕುತ್ತಿದ್ದರು ಮತ್ತು ಹಲವಾರು ಕಾರಣಗಳಿಂದಾಗಿ ಅವರಿಗೆ ಆಹಾರ, ಪೌಷ್ಟಿಕಾಂಶಗಳು ಮತ್ತು ಆರೋಗ್ಯ ಸೇವೆಗಳು ದೊರೆಯುತ್ತಿರಲಿಲ್ಲ. ಈ ದಾರುಣ ಪರಿಸ್ಥಿತಿಗೆ ಹೊಣೆಗಾರರು ಯಾರೆಂಬುದು ನಿಗದಿಯಾಗಲೇ ಬೇಕು. ಪರಿಸ್ಥಿತಿಗಳು ಹೀಗೆಯೇ ಮುಂದುವರಿದುಕೊಂ ಡು ಹೋಗಲು ಖಂಡಿತಾ ಬಿಡಬಾರದು.
Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ