ಹೈದರಾಬಾದ್ ವಿವಿಯಲ್ಲಿ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ

Update: 2018-08-09 04:07 GMT

ಹೈದರಾಬಾದ್, ಆ. 9: ಎರಡನೇ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದ 20 ದಿನಗಳಲ್ಲೇ, ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ವಿಷಯದಲ್ಲಿ ಪ್ರಥಮ ಎಂಎ ಅಧ್ಯಯನ ಮಾಡುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉತ್ತರಕಾಶಿ ಜಿಲ್ಲೆಯ ರಜನೀಶ್ ಪರ್ಮಾರ್ ಎಂಬ ವಿದ್ಯಾರ್ಥಿ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಪರ್ಮಾರ್ ಕೊಠಡಿಗೆ ಕೆಲ ವಿದ್ಯಾರ್ಥಿಗಳು ತೆರಳಿ ಬಾಗಿಲು ಬಡಿದರು. ಬಹಳಷ್ಟು ಹೊತ್ತು ಕಾದರೂ ಬಾಗಿಲು ತೆರೆಯದಿದ್ದಾಗ ವಿದ್ಯಾರ್ಥಿಗಳು ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಾಗಿಲು ಒಡೆದು ನೋಡಿದಾಗ ಪರ್ಮಾರ್ ಮೃತದೇಹ ಫ್ಯಾನ್‌ನಲ್ಲಿ ನೇತಾಡುತ್ತಿತ್ತು ಎಂದು ಹೇಳಲಾಗಿದೆ.

ವಿದ್ಯಾರ್ಥಿಯ ಕೊಠಡಿಯಲ್ಲಿ ದಿನಚರಿ ಪುಸ್ತಕ ಪತ್ತೆಯಾಗಿದ್ದು, ಈತ ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆ ಅದರಲ್ಲಿ ದಾಖಲಿಸಿದ್ದಾನೆ ಎಂದು ಕೊಠಡಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಹೇಳಿದ್ದಾರೆ. ಪರ್ಮಾರ್ ತನ್ನ ಸಮಸ್ಯೆಗಳನ್ನು ವಿಶ್ವವಿದ್ಯಾನಿಲಯದಲ್ಲಾಗಲೀ, ಕುಟುಂಬದವರಲ್ಲಾಗಲೀ ಹೇಳಿಕೊಳ್ಳುತ್ತಿರಲಿಲ್ಲ. ಏಕೆಂದರೆ ಯಾರೂ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಿರಲಿಲ್ಲ ಎಂದು ಪರ್ಮಾರ್ ಬರೆದಿದ್ದಾನೆ. ಹಾಸ್ಟೆಲ್ ವಾರ್ಡನ್ ಅವರನ್ನು ಉದ್ದೇಶಿಸಿ ಆಗಸ್ಟ್ 8ರ ದಿನಾಂಕದಲ್ಲಿ ಬರೆದ ಪತ್ರವೊಂದು ಲಭ್ಯವಾಗಿದೆ.

ವಿಶ್ವವಿದ್ಯಾನಿಲಯದಿಂದ ನನ್ನ ಪ್ರವೇಶಾತಿಯನ್ನು ವಾಪಾಸು ಪಡೆದಿದ್ದು, ಹಾಸ್ಟೆಲ್ ಬಿಡುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾನೆ. ಹಾಸ್ಟೆಲ್ ಬಿಡಲು ಮತ್ತು ಎಲ್ಲ ಸಾಮಾನು ಸರಂಜಾಮುಗಳನ್ನು ಒಯ್ಯಲು ಅನುಮತಿ ನೀಡಬೇಕು ಎಂದು ಕೋರಿದ್ದಾನೆ. ಕಳೆದ ಜುಲೈ 17ರಂದು ಈತ ವಿಶ್ವವಿದ್ಯಾನಿಲಯ ಪ್ರವೇಶ ಪಡೆದಿದ್ದ ಎಂದು ಡಿಸಿಪಿ ಎ.ವೆಂಕಟೇಶ್ವರ ರಾವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News