ಆಶ್ವಾಸನೆ ನೀಡಿದಂತೆ ಕ್ಯಾಶ್ ಬ್ಯಾಕ್ ನೀಡದ ಭೀಮ್ ಆ್ಯಪ್: ಗ್ರಾಹಕರಿಂದ ದೂರುಗಳ ಮಹಾಪೂರ

Update: 2018-08-09 10:22 GMT

ಹೊಸದಿಲ್ಲಿ, ಆ.9: ಈ ವರ್ಷದ ಎಪ್ರಿಲ್ ತಿಂಗಳಲ್ಲಿ ಭೀಮ್ ಆ್ಯಪ್ ಜಾಹೀರಾತಿನಲ್ಲಿ ಹೊಸ ಗ್ರಾಹಕರು ಸೇರಿದಂತೆ ಎಲ್ಲಾ ಬಳಕೆದಾರರಿಗೂ ಕ್ಯಾಶ್ ಬ್ಯಾಕ್ ಆಫರ್ ಘೋಷಿಸಲಾಗಿತ್ತು. ಆದರೆ ಇದೀಗ ಭೀಮ್ ಆ್ಯಪ್ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ದೂರಿನ ಪ್ರವಾಹವನ್ನೇ ಹರಿಸುತ್ತಿದ್ದು, ಒಂದು ತಿಂಗಳಿನಿಂದ ತಮಗೆ ಕ್ಯಾಶ್ ಬ್ಯಾಕ್ ಗಳು ಬಾಕಿಯಿವೆ ಎನ್ನುತ್ತಿದ್ದಾರೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ವಿನ್ಯಾಸಗೊಳಿಸಿರುವ ಈ ಭಾರತ್ ಇಂಟರ್ ಫೇಸ್ ಫಾರ್ ಮನಿ (ಭೀಮ್)  ಆ್ಯಪ್ ತನ್ನ ಜಾಹೀರಾತಿನಲ್ಲಿ ಘೋಷಿಸಲಾಗಿರುವ ಆಶ್ವಾಸನೆಗಳನ್ನು ಈಡೇರಿಸಿಲ್ಲ ಎಂದು ಹಲವರು ದೂರಿದ್ದಾರೆ. ಜೂನ್ ತಿಂಗಳ ವ್ಯವಹಾರಗಳಿಗೆ ಜುಲೈ 10ರೊಳಗೆ ಕ್ಯಾಶ್ ಬ್ಯಾಕ್ ದೊರೆಯಬೇಕಿದ್ದರೂ ಹಾಗಾಗಿಲ್ಲ ಎಂದು ದೂರಲಾಗಿದೆ. ಇದು ಸಾಲದೆಂಬಂತೆ ಭೀಮ್ ಆ್ಯಪ್  ದೂರು ನಿವಾರಣಾ ಸಹಾಯವಾಣಿಯನ್ನು ತಲುಪಲು ಸಾಧ್ಯವೇ ಆಗುತ್ತಿಲ್ಲ ಎಂಬ ಆರೋಪವೂ ಇದೆ.

ಮೇ ತಿಂಗಳ ಕ್ಯಾಶ್ ಬ್ಯಾಕ್ ಜೂನ್ ತಿಂಗಳ ಗಡುವು ಮುಗಿದ ನಂತರ ಅದು ಕೂಡ ಹಲವಾರು ದೂರುಗಳನ್ನು ನೀಡಿದ ನಂತರ ದೊರಕಿದ್ದನ್ನು ಹಲವರು ಹೇಳಿಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ಜೂನ್ ತಿಂಗಳಿಗೆ ದೊರಕಬೇಕಿದ್ದ ರೂ 600 ಕ್ಯಾಶ್ ಬ್ಯಾಕ್ ಜುಲೈ 10ರೊಳಗೂ ದೊರೆಯದೇ ಇದ್ದಾಗ ದೂರು ನೀಡಿದ್ದರು. ಜುಲೈ 16ರೊಳಗೆ ಜಮೆಯಾಗುವುದೆಂದು ಹೇಳಲಾಗಿದ್ದರೂ  ಹಾಗಾಗಿಲ್ಲ. ಈ ನಿರ್ದಿಷ್ಟ ಗ್ರಾಹಕರು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಹಾಗೂ ಐಟಿ ಸಚಿವಾಲಯಕ್ಕೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.

ಭೀಮ್ ಆ್ಯಪ್ ಜಾಹೀರಾತಿನಲ್ಲಿ ಈ ಆ್ಯಪ್ ಮೂಲಕ ಮಾಡಲಾಗುವ ಮೊದಲ ಟ್ರಾನ್ಸಾಕ್ಷನ್ ಗೆ 51 ರೂ. ಕ್ಯಾಶ್ ಬ್ಯಾಕ್ ನೀಡಲಾಗುವುದು, ಗ್ರಾಹಕರಿಗೆ ಪ್ರತಿ ತಿಂಗಳು ರೂ 750 ಕ್ಯಾಶ್ ಬ್ಯಾಕ್ ದೊರೆಯುವುದು ಹಾಗೂ ವರ್ತಕರಿಗೆ ರೂ 1000 ಕ್ಯಾಶ್ ಬ್ಯಾಕ್ ದೊರೆಯುವುದೆಂದು ಹೇಳಲಾಗಿತ್ತು.

ದೂರುಗಳಿಗೆ ಸ್ಪಂದಿಸಿ ಟ್ವೀಟ್ ಮಾಡಿದ ಭೀಮ್ ಆ್ಯಪ್, ಜುಲೈ 1ರಿಂದ ಬ್ಯಾಕ್ ಆಫರ್ ಗಳು ಹೊಸ  ಗ್ರಾಹಕರಿಗೆ ಮಾತ್ರ ಲಭ್ಯವೆಂದು ಹೇಳಿದೆ. ಆದರೂ ಜೂನ್ ತಿಂಗಳ ಕ್ಯಾಶ್ ಬ್ಯಾಕ್ ಏಕೆ ಜಮೆಯಾಗಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ನವೆಂಬರ್ 2016ರಲ್ಲಿ ಪ್ರಧಾನಿ ನೋಟು ಅಮಾನ್ಯೀಕರಣವನ್ನು ಘೋಷಿಸಿದ ನಂತರ ಅದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ಜಾರಿಯಾಗಿದ್ದ ಭೀಮ್ ಆ್ಯಪ್, ಡಿಜಿಟಲ್ ವ್ಯವಹಾರಗಳತ್ತ ಜನರನ್ನು ಆಕರ್ಷಿಸುವ ಉದ್ದೇಶ ಹೊಂದಿದೆ. ಜೂನ್ 29, 2018ರ ತನಕ  ಈ ಆ್ಯಪ್ ಅನ್ನು 3 ಕೋಟಿಗೂ ಅಧಿಕ ಮಂದಿ ಡೌನ್‍ಲೋಡ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News