ಭಾರತ ಕ್ರಿಕೆಟ್ ತಂಡ ಆಯ್ಕೆ ಸಮಿತಿ ಸದಸ್ಯರ ವೇತನದಲ್ಲಿ ಭಾರೀ ಹೆಚ್ಚಳ

Update: 2018-08-09 18:00 GMT

ಮುಂಬೈ, ಆ.9: ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸದಸ್ಯರ ವೇತನ ಹೆಚ್ಚಳಕ್ಕೆ ಹಸಿರು ನಿಶಾನೆ ತೋರಿದೆ. ಆಯ್ಕೆ ಸಮಿತಿಯ ಮುಖ್ಯಸ್ಥರಿಗೆ 20 ಲಕ್ಷ ರೂ. ಹಾಗೂ ಆಯ್ಕೆ ಸಮಿತಿ ಸದಸ್ಯರುಗಳಿಗೆ ತಲಾ 30 ಲಕ್ಷ ರೂ. ಏರಿಕೆಗೆ ಸಿಒಎ ಅನುಮತಿ ನೀಡಿದೆ. ವೇತನ ಹೆಚ್ಚಳದ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿಯ ಸದಸ್ಯರುಗಳು ಪ್ರತಿ ವರ್ಷ 60 ಲಕ್ಷ ರೂ. ಬದಲಿಗೆ 90 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ. ಆಯ್ಕೆ ಸಮಿತಿಯು ಅಧ್ಯಕ್ಷರು ಪ್ರತಿ ವರ್ಷ 80 ಲಕ್ಷ ರೂ. ಬದಲಿಗೆ 1 ಕೋ.ರೂ. ಮನೆಗೆ ಒಯ್ಯಲಿದ್ದಾರೆ.

ಪ್ರಸ್ತುತ ಭಾರತದ ಮಾಜಿ ವಿಕೆಟ್‌ಕೀಪರ್ ಎಂಎಸ್‌ಕೆ ಪ್ರಸಾದ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇವಂಗ್ ಗಾಂಧಿ ಹಾಗೂ ಸರನ್‌ದೀಪ್ ಸಿಂಗ್ ಇತರ ಇಬ್ಬರು ಸದಸ್ಯರುಗಳಾಗಿದ್ದಾರೆ.

ಆಯ್ಕೆ ಸಮಿತಿಯಲ್ಲಿ ಮೂವರು ಸದಸ್ಯರು ಇರಬೇಕು. ಸದಸ್ಯರು ಟೆಸ್ಟ್ ಕ್ರಿಕೆಟ್ ಆಡಿದವರಾಗಿರಬೇಕು ಎಂದು ಲೋಧಾ ಸಮಿತಿ ತನ್ನ ಶಿಫಾರಸಿನಲ್ಲಿ ಕಡ್ಡಾಯಗೊಳಿಸಿದ್ದ ಹಿನ್ನೆಲೆಯಲ್ಲಿ ಗಗನ್ ಘೋಡ ಹಾಗೂ ಜತಿನ್ ಪರಾಂಜಪೆ ಅವರನ್ನು ಕಳೆದ ವರ್ಷ ಆಯ್ಕೆ ಸಮಿತಿಯಿಂದ ಹೊರಗಿಡಲಾಗಿತ್ತು.

ಇದೇ ವೇಳೆ, ಜೂನಿಯರ್ ಆಯ್ಕೆ ಸಮಿತಿಯ ಸದಸ್ಯರುಗಳ ವೇತನದಲ್ಲೂ ಏರಿಕೆ ಮಾಡಲಾಗಿದೆ. ಸಮಿತಿಯ ಅಧ್ಯಕ್ಷರು ವರ್ಷಕ್ಕೆ 65 ಲಕ್ಷ ರೂ. ವೇತನ ಪಡೆಯಲಿದ್ದಾರೆ.

ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸದಸ್ಯರ ವೇತನವನ್ನೂ ಹೆಚ್ಚಿಸಲಾಗಿದೆ. ಸದಸ್ಯರುಗಳು ಇನ್ನು ಮುಂದೆ ಪ್ರತಿ ವರ್ಷ 25 ಲಕ್ಷ ರೂ. ಹಾಗೂ ಆಯ್ಕೆ ಸಮಿತಿಯ ಅಧ್ಯಕ್ಷರು 30 ಲಕ್ಷ ರೂ. ಸ್ವೀಕರಿಸಲಿದ್ದಾರೆ.

ಮಾಜಿ ಸಿಎಜಿ ಮುಖ್ಯಸ್ಥ ವಿನೋದ್ ರಾಯ್ ಹಾಗೂ ಭಾರತದ ಮಾಜಿ ಮಹಿಳಾ ನಾಯಕಿ ಡಿಯಾನಾ ಎಡುಲ್ಜಿ ಈ ಹಿಂದೆ ಅಂತರ್‌ರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟಿಗರಲ್ಲದೆ ಬಿಸಿಸಿಐ ಅಂಪೈರ್‌ಗಳು, ಕ್ಯುರೇಟರ್‌ಗಳು, ಸ್ಕೋರರ್‌ಗಳು ಹಾಗೂ ವೀಡಿಯೊ ವಿಶ್ಲೇಷಕರ ವೇತನ ದ್ವಿಗುಣಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News