ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ 20 ಅಭ್ಯರ್ಥಿಗಳು!

Update: 2018-08-09 18:07 GMT

ಹೊಸದಿಲ್ಲಿ, ಆ.9: ಭಾರತ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಆಹ್ವಾನಿಸಿರುವ ಅರ್ಜಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತದ ಮಾಜಿ ಸ್ಪಿನ್ನರ್‌ಗಳಾದ ಸುನೀಲ್ ಜೋಶಿ ಹಾಗೂ ರಮೇಶ್ ಪೊವಾರ್ ಸಹಿತ 20 ಅಭ್ಯರ್ಥಿಗಳು ಶುಕ್ರವಾರ ಮುಂಬೈನಲ್ಲಿ ನಡೆಯುವ ಸಂದರ್ಶನದಲ್ಲಿ ಹಾಜರಾಗಲಿದ್ದಾರೆ.

  ಭಾರತದ ಮಾಜಿ ವಿಕೆಟ್‌ಕೀಪರ್‌ಗಳಾದ ಅಜಯ್ ರಾತ್ರಾ ಹಾಗೂ ವಿಜಯ್ ಯಾದವ್, ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಮತಾ ಮಾಬೆನ್ ಹಾಗೂ ಮಾಜಿ ಸಹಾಯಕ ಕೋಚ್ ಸುಮನ್ ಶರ್ಮಾ ಸಂದರ್ಶನಕ್ಕೆ ಹಾಜರಾಗಲಿರುವ ಪ್ರಮುಖರಾಗಿದ್ದಾರೆ.

 ನ್ಯೂಝಿಲೆಂಡ್‌ನ ಪರ 2 ಟೆಸ್ಟ್ ಹಾಗೂ 51 ಏಕದಿನ ಪಂದ್ಯಗಳನ್ನು ಆಡಿರುವ ಮರಿಯಾ ಫಾಹೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. 34ರ ಹರೆಯದ ಮರಿಯಾ ಪ್ರಸ್ತುತ ಗುಂಟೂರ್‌ನಲ್ಲಿರುವ ಎಸಿಎ ಅಕಾಡಮಿಯಲ್ಲಿ ಕೋಚ್ ಆಗಿದ್ದಾರೆ.

 ಜೋಶಿ ಹಾಗೂ ಪೊವಾರ್ ಕೋಚ್ ಹುದ್ದೆಗೆ ಪ್ರಬಲ ಸ್ಪರ್ಧಿಗಳಾಗಿ ಪರಿಗಣಿಸಲ್ಪಟ್ಟಿದ್ದಾರೆ. ಪೊವಾರ್‌ಗೆ ಭಾರತದ ಪರ 2 ಟೆಸ್ಟ್ ಹಾಗೂ 31 ಏಕದಿನ ಪಂದ್ಯಗಳನ್ನು ಆಡಿದ ಅನುಭವವಿದೆ. ಪ್ರಸ್ತುತ ಅವರು ಮಹಿಳಾ ತಂಡದ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆಟಗಾರ ಹಾಗೂ ಕೋಚ್ ಆಗಿ ಬಹಳಷ್ಟು ಅನುಭವ ಪಡೆದಿರುವ ಜೋಶಿ ಅವರನ್ನು ನಿರ್ಲಕ್ಷಿಸುವಂತಿಲ್ಲ. ಎಡಗೈ ಸ್ಪಿನ್ನರ್ ಆಗಿದ್ದ ಅವರು ಭಾರತದ ಪರ 15 ಟೆಸ್ಟ್ ಹಾಗೂ 69 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಒಮನ್ ಹಾಗೂ ಇತ್ತೀಚೆಗೆ ಬಾಂಗ್ಲಾದೇಶ ತಂಡಕ್ಕೆ ಕೋಚ್ ಆಗಿದ್ದರು. 160 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಜೋಶಿ ಜಮ್ಮು-ಕಾಶ್ಮೀರ, ಅಸ್ಸಾಂ ಹಾಗೂ ಹೈದರಾಬಾದ್ ರಾಜ್ಯ ತಂಡಗಳಿಗೆ ಕೋಚಿಂಗ್ ನೀಡಿದ್ದಾರೆ.

ಸಿಒಎ ಸದಸ್ಯೆ ಡಿಯಾನ ಎಡುಲ್ಜಿ, ಬಿಸಿಸಿಐ ಅಧಿಕಾರಿಗಳಾದ ಸಾಬಾ ಕರೀಮ್ ಹಾಗೂ ಪ್ರಭಾರಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಕೋಚ್ ಹುದ್ದೆಯ ಆಕಾಂಕ್ಷಿಗಳ ಸಂದರ್ಶನ ನಡೆಸಲಿದ್ದಾರೆ.

ತುಷಾರ್ ಅರೋಥೆ ವಿವಾದಾತ್ಮಕ ರೀತಿಯಲ್ಲಿ ಕೋಚ್ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಬಿಸಿಸಿಐ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಕರೆದಿತ್ತು. ತಂಡ ವಿಶ್ವಕಪ್ ಫೈನಲ್‌ಗೆ ತಲುಪಲು ಮಾರ್ಗದರ್ಶನ ನೀಡಿದ್ದ ಒಂದು ವರ್ಷದ ಬಳಿಕ ತುಷಾರ್ ಹಾಗೂ ಹಿರಿಯ ಆಟಗಾರ್ತಿಯರ ಮಧ್ಯೆ ಭಿನ್ನಾಭಿಪ್ರಾಯ ತಲೆ ಎತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News