ಪಾಕಿಸ್ತಾನ: ಪರದೆ ಸರಿದಾಗ

Update: 2018-08-09 18:26 GMT

ಸೇನಾ ಆಡಳಿತಗಾರರು ಸೃಷ್ಟಿಸಿದ ಒಂದು ಸುಳ್ಳು ಹಿರಿಮೆಯು(ಸುಪೀರಿಯಾರಿಟಿ), ತಾವು ಭಾರತಕ್ಕಿಂತ ಹೆಚ್ಚು ಬಲಿಷ್ಠವೆಂಬ ಒಂದು ಭಾವನೆಯ ಆಧಾರದಲ್ಲಿ ಪಾಕಿಸ್ತಾನ ಮುಂದುವರಿಯಿತು. ಭ್ರಮೆಗಳು, ಒಣಜಂಬ ಪಾಕಿಸ್ತಾನವನ್ನು ದಶಕಗಳ ಕಾಲ ಕಾಡಿತು. ತನ್ನ ದೇಶದ ಪೂರ್ವ ಭಾಗ ನಷ್ಟವಾದ ಬಳಿಕವಷ್ಟೇ ಪಾಕಿಸ್ತಾನಿ ಬುದ್ಧಿಜೀವಿಗಳು, ಮಾಧ್ಯಮಗಳು ಮತ್ತು ಶಿಕ್ಷಣ ತಜ್ಞರು ನಿಜವಾದ ಆತ್ಮ ನಿರೀಕ್ಷಣೆಗೆ ತೊಡಗಿದರು.

ಗಸ್ಟ್ 11ರಂದು ಕ್ರಿಕೆಟಿಗ ಇಮ್ರಾನ್‌ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ, ಪಾಕಿಸ್ತಾನವು ಒಂದು ನಾಗರಿಕ ಸರಕಾರದಿಂದ ಇನ್ನೊಂದು ನಾಗರಿಕ ಸರಕಾರದತ್ತ ಹೊರಳುವುದು ಕೇವಲ ಎರಡನೆಯ ಬಾರಿಗೆ. ಪಾಕಿಸ್ತಾನದ ಸೃಷ್ಟಿಯಾಗಿ ಕಳೆದ 70 ವರ್ಷಗಳಲ್ಲಿ ಅದು ಅನೇಕ ಏಳು ಬೀಳುಗಳನ್ನು ಕಂಡಿದೆ. ಈ ಅವಧಿಯಲ್ಲಿ ಅಲ್ಲಿ ನಾಲ್ಕು ಸೇನಾಡಳಿತಗಳು ಮತ್ತು ಸಂವಿಧಾನದ ಮೂರು ಅಮಾನತುಗಳು ಆಗಿ ಹೋಗಿವೆ. 1970 ದಶಕದ ಆದಿಯಲ್ಲಿ ಝುಲ್ಫಿಕರ್ ಅಲಿ ಭುಟ್ಟೊರವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಸ್ವಲ್ಪಸಮಯದ ಬಳಿಕ ಕರಾಚಿಯ ಗೋಡೆಯೊಂದರ ಮೇಲೆ ಕಾಣಿಸಿಕೊಂಡಿದ್ದ ಗೋಡೆ ಬರಹವೊಂದು ಪಾಕಿಸ್ತಾನದ ರಾಜಕೀಯ ವಾಸ್ತವವನ್ನು ಚೆನ್ನಾಗಿ ಅಭಿವ್ಯಕ್ತಿಸಿತು: ‘‘ಪ್ರಜಾತಂತ್ರದ ಮಧ್ಯಂತರಕ್ಕಾಗಿ ವಿಷಾದಗಳು. ಸದ್ಯದಲ್ಲೇ ಮಿಲಿಟರಿ ಆಡಳಿತವನ್ನು ಪುನಃ ಸ್ಥಾಪಿಸಲಾಗುವುದು.’’

ಭಾರತದ ಪಾಲಿಗೆ ದೊರಕಿದಂತಹ ನೆಹರೂ, ಗಾಂಧಿ, ಅಂಬೇಡ್ಕರ್ ಪಟೇಲ್ ಮತ್ತು ಆಝಾದ್‌ರಂತಹ ದಾರ್ಶನಿಕ ನಾಯಕರನ್ನು ಪಡೆಯುವ ಭಾಗ್ಯ ಪಾಕಿಸ್ತಾನದ್ದಾಗಿರಲಿಲ್ಲ. ಅದಕ್ಕೆ ಭದ್ರ ತಳಪಾಯ ಹಾಕಿ, ದೀರ್ಘಕಾಲ ಬಾಳುವಂತಹ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ರೂಪಿಸುವಷ್ಟು ಸಮಯ ಅದರ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಬದುಕಲಿಲ್ಲ. ಹೀಗಾಗಿ ಅದಕ್ಷ ಹಾಗೂ ಭ್ರಷ್ಟ ನಾಗರಿಕ ಆಡಳಿತಗಾರರನ್ನು ಬದಿಗೆ ತಳ್ಳಿ ಅಲ್ಲಿ ಸೇನೆಯೇ ಆಡಳಿತ ನಡೆಸುವುದು ಮಾಮೂಲಿಯಾಯಿತು. ನೂರಾರು ಮೈಲುಗಳ ದೂರದಲ್ಲಿ ಎಸೆಯಲ್ಪಟ್ಟಂತೆ ಇದ್ದ ಪೂರ್ವ ಪಾಕಿಸ್ತಾನ ಹಾಗೂ ಪಶ್ಚಿಮ ಪಾಕಿಸ್ತಾನಗಳನ್ನು ಒಂದಾಗಿ ಜೋಡಿಸಿಡುವಲ್ಲಿ ಇಸ್ಲಾಂ ಪರಿಣಾಮಕಾರಿಯಾಗಲಿಲ್ಲ. ಪಂಜಾಬಿ ಪ್ರಾಬಲ್ಯದ ಒಂದು ಸೇನೆ ಮತ್ತು ಉರ್ದು ಭಾಷೆಯ ಹೇರುವಿಕೆ ದೇಶದ ಎರಡು ಭಾಗಗಳ ಕಂದಕವನ್ನು ಇನ್ನಷ್ಟು ಅಗಲಗೊಳಿಸಿತ್ತು. 1971ರಲ್ಲಿ ಪೂರ್ವ ಭಾಗ ಬೇರೆಯಾಗಿ ಬಾಂಗ್ಲಾ ದೇಶವಾಯಿತು. ಸೇನಾ ಆಡಳಿತಗಾರರು ಸೃಷ್ಟಿಸಿದ ಒಂದು ಸುಳ್ಳು ಹಿರಿಮೆಯು(ಸುಪೀರಿಯಾರಿಟಿ), ತಾವು ಭಾರತಕ್ಕಿಂತ ಹೆಚ್ಚು ಬಲಿಷ್ಠವೆಂಬ ಒಂದು ಭಾವನೆಯ ಆಧಾರದಲ್ಲಿ ಪಾಕಿಸ್ತಾನ ಮುಂದುವರಿಯಿತು. ಭ್ರಮೆಗಳು, ಒಣಜಂಬ ಪಾಕಿಸ್ತಾನವನ್ನು ದಶಕಗಳ ಕಾಲ ಕಾಡಿತು. ತನ್ನ ದೇಶದ ಪೂರ್ವ ಭಾಗ ನಷ್ಟವಾದ ಬಳಿಕವಷ್ಟೇ ಪಾಕಿಸ್ತಾನಿ ಬುದ್ಧಿಜೀವಿಗಳು, ಮಾಧ್ಯಮಗಳು ಮತ್ತು ಶಿಕ್ಷಣ ತಜ್ಞರು ನಿಜವಾದ ಆತ್ಮ ನಿರೀಕ್ಷಣೆಗೆ ತೊಡಗಿದರು.


ಮಿಲಿಟರಿ ಆಡಳಿತ ಮತ್ತು ನಾಗರಿಕ ಸರ್ವಾಧಿಕಾರದ ನಡುವೆ ಓಲಾಡುತ್ತಿದ್ದಂತೆಯೇ ಪಾಕಿಸ್ತಾನ ತನ್ನ ಪ್ರಾಥಮಿಕವಾದ ಕಾಯಿಲೆಗೆ ಔಷಧ ನೀಡಲು ವಿಫಲವಾಯಿತು. ಪ್ರಜಾಪ್ರಭುತ್ವದ ಕತ್ತು ಹಿಸುಕಿ ಜೀತ ಪದ್ಧತಿ, ಬಾಲ ಕಾರ್ಮಿಕರು, ನಿರಕ್ಷರತೆ, ಲಿಂಗ ಅಸಮಾನತೆ ಮತ್ತು ತೀವ್ರವಾದ ಆರ್ಥಿಕ ಅಸಮಾನತೆಯಂತಹ ಅನಿಷ್ಟಗಳನ್ನು ಪೋಷಿಸಿ ಬೆಳೆಸುವ ಊಳಿಗಮಾನ್ಯ ಪದ್ಧತಿಯೇ ಆ ಕಾಯಿಲೆ. ಇದರ ಜೊತೆಗೆ ಮತೀಯ ಮೂಲಭೂತವಾದ, ಧಾರ್ಮಿಕ ತೀವ್ರಗಾಮಿತ್ವ ಮತ್ತು ಅಫ್ಘಾನಿಸ್ತಾನ ಹಾಗೂ ಕಾಶ್ಮೀರದಲ್ಲಿ ಜಿಹಾದ್‌ನ ಕನಸು ಕಾಣುವ ಭಯೋತ್ಪಾದನೆ ಕೂಡ ಪಾಕಿಸ್ತಾನವನ್ನು ಕಾಡಲಾರಂಭಿಸಿದವು. ಧರ್ಮನಿಂದನೆಯಂತಹ ಕಾನೂನುಗಳ ಹಾಗೂ ಅಹ್ಮದಿಗಳನ್ನು ಮುಸ್ಲಿಮೇತರರು ಎಂಬ ಘೋಷಣೆಯ ಮೂಲಕ ಅಧಿಕಾರದ ಹಜಾರಗಳನ್ನು ತಲುಪಿದ ಶ್ರೀಮಂತರು ಮತೀಯ, ಪಂಥೀಯ ಪರಿಗಣನೆಗಳನ್ನು ಸೇರಿಸಿ ದೇಶದ ರಾಜಕಾರಣವನ್ನು ಮತ್ತಷ್ಟು ಹದಗೆಡಿಸಿದರು.


ಧಾರ್ಮಿಕ ವಿಚಾರಗಳೊಂದಿಗೆ ಆಟವಾಡುವ ವಿಷಯಕ್ಕೆ ಬರುವಾಗ ಜನರಿಂದ ಚುನಾಯಿತರಾದ ನಾಯಕರು ಹಾಗೂ ಅಧಿಕಾರವನ್ನು ಬಲವಂತವಾಗಿ ತಮ್ಮ ಕೈಗೆ ಪಡೆದುಕೊಂಡವರ ನಡುವೆ ವ್ಯತ್ಯಾಸವೇ ಕಾಣಿಸಲಿಲ್ಲ. ಭುಟ್ಟೊರವರ ಆಡಳಿತದಲ್ಲಿ ಒಂದು ಶಾಸನದ ಮೂಲಕ ಅಹ್ಮದೀಯರನ್ನು ಸಮಾಜಭ್ರಷ್ಟರನ್ನಾಗಿಸಲಾಯಿತು. ಎಕ್ಸ್ ಕಮ್ಯುನಿಕೇಟ್ ಮಾಡಲಾಯಿತು. ಜನರಲ್ ಝಿಯಾ ವುಲ್ ಹಕ್‌ರವರ ಆಡಳಿತದಲ್ಲಿ ಧರ್ಮನಿಂದನೆ ಕಾನೂನುಗಳನ್ನು ತರಲಾಯಿತು. ಪಾಕಿಸ್ತಾನದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ನಾಯಕರು ಸರ್ವಾಧಿಕಾರಿಗಳಂತೆ ವರ್ತಿಸಿದ್ದಾರೆ. ಮಿಲಿಟರಿ ಆಡಳಿತಗಾರರು ನಾಗರಿಕ ಆಡಳಿತ ನೀಡಲು ಹೆಣಗಾಡಿದ್ದಾರೆ. ಭುಟ್ಟ್ಟೊ ಮತ್ತು ಬೆನಝೀರ್ ಇಬ್ಬರು ತೀರಾ ಅಹಂಕಾರದಿಂದ ವರ್ತಿಸಿ ರಾಷ್ಟ್ರವನ್ನು ತಮ್ಮ ಒಂದು ಖಾಸಗಿ ವೈಯಕ್ತಿಕ ಜಮೀನ್ದಾರಿ ಆಸ್ತಿ ಎಂಬಂತೆ ಮಾಡಲು ಪ್ರಯತ್ನಿಸಿದರು. ನವಾಝ್ ಮತ್ತು ಶಾಬಾಝ್‌ದ್ವಯರಿಗೆ, ಆಸಿಫ್ ಜರ್ದಾರಿಗೆ ವೈಯಕ್ತಿಕ ಸಂಪತ್ತಿನ ಶೇಖರಣೆಯೇ ಮುಖ್ಯವಾಯಿತು ಜನರಲ್ ಪರ್ವೇಝ್ ಮುಷರ್ರಫ್‌ರ ಕೈಯಲ್ಲಿ ನ್ಯಾಯಾಂಗ ಒಂದು ಅಣಕು ಆಯಿತು. ಹೀಗೆ ಅಲ್ಲಿನ ರಾಜಕೀಯ ವ್ಯವಸ್ಥೆ ಹೊಗಳುಭಟರ ಅಥವಾ ರಕ್ತದಾಹಿ ಶತ್ರುಗಳ ಪಡೆಯನ್ನೇ ನಿರ್ಮಿಸಿತು. ಅಭಿವೃದ್ಧಿ ಮತ್ತು ಯೋಜನೆಗಳು ಹಿಂದಿನ ಸ್ಥಾನಕ್ಕೆ ಸರಿದವು. ಒಮ್ಮೆ ಅಧಿಕಾರ ಕಳೆದುಕೊಂಡರೆೆಂದರೆ ಆ ನಾಯಕರು, ಸ್ವದೇಶ ಭ್ರಷ್ಟ ರಾಜಕಾರಣಿಗಳಿಗೆ ಈಗಾಗಲೇ ಪ್ರಸಿದ್ಧ ತಾಣಗಳಾಗಿರುವ ದುಬೈ, ಇಂಗ್ಲೆಂಡ್ ಅಥವಾ ಸೌದಿ ಅರೇಬಿಯಾಕ್ಕೆ ದೌಡಾಯಿಸುತ್ತಾರೆ.


ಪಾಕಿಸ್ತಾನದಲ್ಲಿ ಸೇನೆಯ ಪ್ರಭಾವ ಸರ್ವವ್ಯಾಪಿಯಾಗಿದೆ. ಪಾಕಿಸ್ತಾನದ ನಗರಗಳಲ್ಲಿರುವ ರಕ್ಷಣಾ ಪಡೆಯ ಕಾಲನಿಗಳು ಸಕಲ ಸುಖಭೋಗಗಳಿರುವ ಅದ್ದೂರಿಯ ಇಂದ್ರ ಲೋಕಗಳಾಗಿವೆ. ದೇಶದ ಬಜೆಟ್‌ನ ಮೂರನೇ ಒಂದು ಭಾಗ ರಕ್ಷಣಾ ಪಡೆಗಳಿಗೆ ಹೋಗುತ್ತದೆ. ನಾಗರಿಕ ಸರಕಾರದ ನಾಯಕರು ಕೂಡ ಮಿಲಿಟರಿ ಜನರಲ್‌ಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಲು ಕಲಿತಿದ್ದಾರೆ ಎಂಬುದು ಕಳೆದ ದಶಕದ ನಾಗರಿಕ ಆಡಳಿತವನ್ನು ನೋಡಿದರೆ ತಿಳಿಯುತ್ತದೆ. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಎಂಬುದು ಪಾಕಿಸ್ತಾನದಲ್ಲಿ ದೂರದ ಒಂದು ಕನಸು. ಶಿಕ್ಷೆಯಿಂದ ವಿನಾಯಿತಿ ವ್ಯವಸ್ಥೆಯ ಒಂದು ಅಂಗವೇ ಆಗಿದೆ. ರಾಜಕಾರಣಿಗಳನ್ನು ಉತ್ತರದಾಯಿಗಳನ್ನಾಗಿ ಮಾಡುವ ಸಂಸ್ಥೆಗಳನ್ನು ಅಲ್ಲಿ ವ್ಯವಸ್ಥಿತವಾಗಿ ಬುಡಮೇಲು ಮಾಡಲಾಗಿದೆ. ಪೂರ್ವ ಪಾಕಿಸ್ತಾನ ಯಾಕೆ ಕೈತಪ್ಪಿಹೋಯಿತು ಎಂಬ ಬಗ್ಗೆ ನ್ಯಾಯಮೂರ್ತಿ ಹಮೂದುರ್ರಹ್ಮಾನ್ ಆಯೋಗ ವರದಿ ಬಹಿರಂಗವಾಗಲೇ ಇಲ್ಲ. ಅಧ್ಯಕ್ಷ ಜ. ಝಿಯಾ ವುಲ್ ಹಕ್‌ರವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೆ ಏನು ಕಾರಣವೆಂದು ಇನ್ನೂ ತಿಳಿದಿಲ್ಲ. ಎಂಟು ಸಾವಿರಕ್ಕಿಂತಲೂ ಹೆಚ್ಚು ಅಧಿಕಾರಿಗಳು, ಬ್ಯಾಂಕರ್‌ಗಳು ಹಾಗೂ ರಾಜಕಾರಣಿಗಳನ್ನು, ಬೆನಝೀರ್ ಮತ್ತು ಜರ್ದಾರಿ ಸೇರಿದಂತೆ-ಅವರ ಮೇಲಿದ್ದ ಭ್ರಷ್ಟಾಚಾರ ಅಪರಾಧಗಳಿಂದ ಅವರನ್ನು ಮುಕ್ತಗೊಳಿಸಲಾಗಿದೆ. 1986ರಿಂದ 1999ರ ನಡುವಿನ ಅವಧಿಯಲ್ಲಿ ಇವರ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಲಾಗಿತ್ತು. ನಂತರ ಅವರಿಗೆ ಶಿಕ್ಷೆಯಿಂದ ವಿನಾಯಿತಿ ನೀಡಲಾಯಿತು.

ಇಮ್ರಾನ್ ಖಾನ್ ಎಲ್ಲವೂ ಅಸ್ತವ್ಯಸ್ತವಾಗಿರುವ ಒಂದು ರಾಷ್ಟ್ರದ ಪ್ರಧಾನಿಯಾಗುತ್ತಿದ್ದಾರೆ. ಅವರ ಎದುರಿರುವ ಸವಾಲುಗಳನ್ನು ಅವರು ಎದುರಿಸಿಯಾರೇ? ಎಂಬುೇ ಒಂದು ದೊಡ್ಡ ಪ್ರಶೆ.

Writer - ಎಂ. ಎ. ಸಿರಾಜ್

contributor

Editor - ಎಂ. ಎ. ಸಿರಾಜ್

contributor

Similar News

ಜಗದಗಲ
ಜಗ ದಗಲ