ಹಿಂದೀ ರಾಜಕಾರಣದ ಗೊಂದಲ

Update: 2018-08-09 18:32 GMT

ಭಾಗ-5

1924 ಮೇ 29ರ ಯಂಗ್ ಇಂಡಿಯಾದ ಅಂಕಣದಲ್ಲಿ ಹಿಂದೂ-ಮುಸ್ಲಿಂ ದಂಗೆಯ ಬಗ್ಗೆ ಬರೆಯುತ್ತಾ ಗಾಂಧಿ, ಹೀಗೆ ವಿಚಾರ ವ್ಯಕ್ತಪಡಿಸಿದ್ದಾರೆ. ‘‘ಇಂದು ನಾನು ಸುತ್ತಲೂ ಕಾಣುತ್ತಿರುವುದು ಅಹಿಂಸೆಯ ವಿರೋಧದ ಪ್ರತಿಕ್ರಿಯೆ.. ಹಿಂಸೆಯ ಅಲೆಯೊಂದೆದ್ದಿರುವುದು ಭಾಸವಾಗುತ್ತಿದೆ. ಹಿಂದೂ-ಮುಸ್ಲಿಂ ಕ್ಷೋಭೆ ಉತ್ತುಂಗಕ್ಕೇರಿದೆ.

ದೇಶದೆದುರು ನಾನೆಂದೂ ಅಹಿಂಸೆಯ ಆತ್ಯಂತಿಕ ಸ್ವರೂಪವನ್ನು ತೆರೆದಿಟ್ಟಿಲ್ಲ; ಆ ಪುರಾತನ ಸಂದೇಶವನ್ನು ಪುನಃ ಸಾರತಕ್ಕ ಯೋಗ್ಯತೆ ನನ್ನಲಿಲ್ಲ. ನನ್ನ ಬುದ್ಧಿಶಕ್ತಿಗೆ ನಿಲುಕುವಂತಿದ್ದರೂ, ಗೃಹೀತವಿದ್ದರೂ, ಅದಿನ್ನೂ ನನ್ನೊಳಗೆ ಸೇರಿಲ್ಲ. ನನ್ನ ಕರ್ಮವೇ ನನ್ನ ಬೋಧನೆ. ಕೋಮುಗಳ ನಡುವೆ ಸೌಹಾರ್ದ ಸೆಲೆಸುವಂತಾಗಲು ಮತ್ತು ಸ್ವರಾಜ್ಯ ಸ್ಥಾಪಿಸಲು, ನಾನಿಂದು ಅಹಿಂಸೆಯನ್ನೇ ತಮ್ಮ ಮತವಾಗಿ ಸ್ವೀಕರಿಸುವಂತೆ ದೇಶಬಾಂಧವರನ್ನು ಕೇಳುತ್ತಿದ್ದೇನೆ. ಹಿಂದೂ, ಮುಸ್ಲಿಮ್, ಕ್ರೈಸ್ತ, ಸಿಖ್ಖ, ಪಾರಸೀಯರು ಪರಸ್ಪರ ಹಿಂಸಾತ್ಮಕ ಕಲಹದಲ್ಲಿ ತೊಡಗಬಾರದು ಮತ್ತು ಸ್ವರಾಜ್ಯವನ್ನು ಅಹಿಂಸೆಯಿಂದಲೇ ಗಳಿಸಬೇಕು.

ಕಳ್ಳಕಾಕರೊಡನೆ ಅಥವಾ ದೇಶವನ್ನಾಕ್ರಮಿಸ ಬರುವ ಪರದೇಶಿಗಳೊಡನೆ ಅಹಿಂಸೆ ಪಾಲಿಸಿ, ಎಂದೇನೂ ನಾನು ಹೇಳುತ್ತಿಲ್ಲ. ಆದರೆ ಆ ಕ್ಷಮತೆಗಾಗಿ ನಾವು ಸಂಯಮವನ್ನು ಪಾಲಿಸಬೇಕು. ಕ್ಷುಲ್ಲಕ ಕಾರಣಕ್ಕೆ ಕೈಯಲ್ಲಿ ಕೋವಿ ತೆಗೆದುಕೊಳ್ಳುವುದು ದೌರ್ಬಲ್ಯದ ಲಕ್ಷಣ. ಕೈ ಕೈ ಮಿಲಾಯಿಸುವುದರಿಂದ ನಪುಂಸಕತನ ಬೆಳೆಯುತ್ತದೆ. ನನ್ನ ಅಹಿಂಸಾ ಮಾರ್ಗದಿಂದ ಎಂದೂ ಶಕ್ತಿಯ ನಾಶವಾಗದು, ಬದಲಿಗೆ ಸಮಯ ಬಂದಾಗ ದೇಶ ಬಯಸಿದರೆ, ಶಿಸ್ತು, ಒಗ್ಗಟ್ಟಿನ ಹೋರಾಟ ಸಾಧ್ಯವಾಗುವುದು’’.

ಮೇಲಿನ ಲೇಖನದಲ್ಲಿ ವ್ಯಕ್ತವಾದ ಅವರ ಹಳೆಯ ವಿಚಾರಕ್ಕೂ ಮತ್ತು ಇಂದು ಅವರು ಮಂಡಿಸಿದ ವಿಚಾರಕ್ಕೂ ಎಷ್ಟು ವ್ಯತ್ಯಾಸ ಇದೆಯೆಂಬುದನ್ನು ಹೇಳಬೇಕಿಲ್ಲ. ಈ ವ್ಯತ್ಯಾಸ ಯಾಕಾಯ್ತೆಂಬುದು ಅತ್ಯಂತ ಉತ್ಬೋಧಕವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ನಮಗನಿಸುವಂತೆ, ಈ ಪರಿವರ್ತನೆಗೆ ಮಹತ್ವದ ಕಾರಣ, ಅವರಿಗೆ ಹಿಂದೂಸ್ಥಾನದ ನಾಯಕನೆನ್ನುವುದು ಕಡಿಮೆ ಪ್ರತಿಷ್ಠೆಯದಾಗಿ ಕಂಡು, ಅದಕ್ಕಿಂತ ಜಗತ್ತಿನ ಉದ್ಧಾರಕನೆಂದು ಮೆರೆವ ಅಹಂಭಾವ ಉತ್ಪನ್ನವಾದುದು. ಗಾಂಧಿ ಅವರಿಗೆ ಪ್ರಸಿದ್ಧಿ ಮತ್ತು ದೊಡ್ಡತನದ ಹಸಿವು ಎಷ್ಟೊಂದಿದೆ ಎಂಬುದನ್ನು ಅವರ ಭಕ್ತಗಣ ಒಪ್ಪದಿದ್ದರೂ, ಇದು ಅವರಿಗೆಲ್ಲ ತಿಳಿದಿರುವ ವಿಷಯವೇ ಆಗಿದೆ. ನಿಶ್ಯಸ್ತ್ರ ಪ್ರತೀಕಾರದ ಅಮೂಲ್ಯ ಅಮೃತ ಬಳ್ಳಿಯನ್ನು ತಾನು ಶೋಧಿಸಿದೆನೆಂದು ಅವರಿಗೆ ಅನಿಸುತ್ತಿದೆ. ಇದು ಹಿಂದೂಸ್ಥಾನದ ಅಷ್ಟೇ ಏಕೆ, ಜಗತ್ತಿನ ಉದ್ಧಾರಕ್ಕೂ ಉಪಯುಕ್ತವಾಗುವುದೆಂದು ಅವರ ಮಹತ್ವಾಕಾಂಕ್ಷೆ. ಹಿಂದೂಸ್ಥಾನದ ಮೇಲೆ ಅದನ್ನು ಪ್ರಯೋಗಿಸಿ, ಜಗತ್ತಿಗೇ ಅದರ ಸಿದ್ಧಿಯನ್ನು ತೋರುವ ಇಚ್ಛೆ, ಅವರದು. ಹಾಗಾದರೆ, ಜಗತ್ತಿನಲ್ಲೇ ಅದ್ವಿತೀಯ ಪುರುಷರೆಂಬ ಕೀರ್ತಿ ತಮ್ಮದಾಗುವುದು ಎಂಬ ಮನೋಕಾಮನೆ ಅವರದು. ಜಗದ ಉದ್ಧಾರಕರ್ತನಾಗುವ ಆಸೆಯೇ ಅಹಿಂಸೆಯ ವಿಷಯದಲ್ಲಿ ಅವರ ವಿಚಾರದಲ್ಲಿ ಬದಲಾವಣೆಯಾಗಲು ಕಾರಣ.

1922ರ ಫೆಬ್ರವರಿ 23ರ ‘‘ಯಂಗ್ ಇಂಡಿಯಾ’’ದ ಅಂಕಣ ಲೇಖನ ‘‘ನನ್ನ ದುಃಖಕ್ಕೆ ಕೊನೆಯಿಲ್ಲ’’, ಇದುವೇ ಇದಕ್ಕೆ ಸಾಕ್ಷಿ. ಬಾರ್ಡೋಲಿ ಕಾಯ್ದೆ ಭಂಗ ಕಾರ್ಯಕ್ರಮವನ್ನು ಮುಂದೂಡಬೇಕಾಗಿ ಬಂದ ಬಗ್ಗೆ, ಮಿ. ಪೌಲ್ ರಿಚರ್ಡ್ ಅವರೊಡನೆ ನಡೆದ ಚರ್ಚೆಯಲ್ಲಿ ಗಾಂಧಿ ಅವರು ಹೀಗೆಂದರು; ‘‘ನಾನು ಹಿಂದೂಸ್ಥಾನದ ಸ್ವಾತಂತ್ರಕ್ಕಾಗಿ ದುಡಿಯುತ್ತಿಲ್ಲ, ಜಗತ್ತಿನಲ್ಲಿ ಅಹಿಂಸೆ ನೆಲೆಸಲೆಂದು ದುಡಿಯುತ್ತಿದ್ದೇನೆ. ತಿಲಕರಿಗೂ, ನನಗೂ ಅದೇ ವ್ಯತ್ಯಾಸ. ಮಿ. ತಿಲಕರು ದೇಶದ ಸ್ವಾತಂತ್ರಕ್ಕಾಗಿ ಸತ್ಯವನ್ನೂ ತ್ಯಜಿಸುವುದಾಗಿ ಹೇಳಿದ್ದಾರೆ. ಆದರೆ, ನಾನು ಸತ್ಯಕ್ಕಾಗಿ ದೇಶದ ಸ್ವಾತಂತ್ರವನ್ನೂ ತ್ಯಜಿಸಬಲ್ಲೆ’’.

ಮಿ.ರಿಚರ್ಡ್ ಅವರು ಅಂದಿನ ‘ಲೋಕಮಾನ್ಯ’ ವೃತ್ತ ಪತ್ರಿಕೆಯ ಪ್ರತಿನಿಧಿಯೊಡನೆ ಈ ಬಗ್ಗೆ ಮಾತನಾಡುತ್ತಾ, ಗಾಂಧಿ ಅವರಿಗೆ ‘‘ಹಿಂದೂಸ್ಥಾನಕ್ಕಿಂತ ಜಗತ್ತಿನ ನಾಯಕನಾಗುವ ಇಚ್ಛೆ ಹೆಚ್ಚು, ಹೌದೇ’’ ಎಂಬ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರವಾಗಿ ಗಾಂಧಿ ಅವರು ಆ ಲೇಖನ ಬರೆಯತೊಡಗಿದರು ಮತ್ತು ಕಷ್ಟದಿಂದಲೇ, ‘‘ಮಿ. ರಿಚರ್ಡ್ ಅವರು ನನ್ನಿಂದ ಹೊರಪಡಿಸಿದ ಆ ಶಬ್ದದ ಅಂತರ್ಯದಲ್ಲಿರುವ ಸತ್ಯವನ್ನು ನಾನು ಅಲ್ಲಗೆಳೆಯಲಾರೆ’’, ಎಂದರು.

ಗಾಂಧಿ ಅವರು ಈ ದೇಶದ ಬಹಿರಂಗ ಮಾನಹಾನಿಗಾಗಿ ಕೈಗೊಂಡ ಉಪಕ್ರಮಗಳಲ್ಲಿ ಇದೊಂದು. ಮತಾಂಧರಾಗಿ ತಮ್ಮ ಪತ್ನಿಯರ ಬಹಿರಂಗ ಮಾನಹಾನಿ ಮಾಡುವ ಗಂಡಸರು ಎಲ್ಲೆಡೆ ಸಿಗುವರು. ಆದರೆ ದೇಶದ ಮಾನಹಾನಿ ಮಾಡುವವರು, ಹಿಂದೂಸ್ಥಾನದ ಹೊರಗೆ ಎಲ್ಲೂ ಸಿಗಲಾರರು. ಮಹಾತ್ಮನಾಗುವ ಪಿಪಾಸೆ ಮದ್ಯದಷ್ಟೇ ಮದವೇರಿಸುತ್ತದೆ ಎಂಬುದನ್ನು ಗಾಂಧಿ ಅವರು ಸಿದ್ಧ ಮಾಡಿ ತೋರಿಸಿದ್ದಾರೆ.

ಯುದ್ಧದಲ್ಲಿ ಸಹಾಯ ಮಾಡುವವರ ಮೂರು ಪಂಥಗಳು
ಹಿಂದೂಸ್ಥಾನ ಮತ್ತು ಇಂಗ್ಲಿಷರ ಸಂಬಂಧ ಎಷ್ಟು ಅನ್ಯೋನ್ಯವಾಗಿದೆಯೆಂದರೆ, ಯುದ್ಧ ಆರಂಭವಾದೊಡನೆ, ಯುದ್ಧದಲ್ಲಿ ಇಂಗ್ಲಿಷರಿಗೆ ಸಹಾಯ ಮಾಡಬೇಕೇ, ಬೇಡವೇ ಎಂಬ ಪ್ರಶ್ನೆ ಈ ದೇಶದ ಜನರೆದುರು ಎದ್ದು ನಿಲ್ಲುವುದು ಅಪರಿಹಾರ್ಯ. ಆದರೆ, ಈ ಮಹತ್ವದ ವಿಷಯದ ಬಗ್ಗೆ ಈವರೆಗೆ ಈ ಜನರಲ್ಲಿ ಐಕ್ಯಮತ ಉಂಟಾಗಲಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಯುದ್ಧ ಆರಂಭವಾದಂದಿನಿಂದ ಇದುವರೆಗೆ ಕಳೆದ ಜೂನ್ ತಿಂಗಳ ತನಕ ಯುದ್ಧದಲ್ಲಿ ಸಹಾಯ ಮಾಡಬೇಕೇ ಬೇಡವೇ ಎಂಬ ಬಗ್ಗೆ ಎರಡು ಪಂಥಗಳು ಹುಟ್ಟಿಕೊಂಡಿವೆ.

ಯುದ್ಧದಲ್ಲಿ ಬ್ರಿಟಿಷರಿಗೆ ಬೇಶರತ್ ಸಹಾಯ ಮಾಡುವ ವಿಚಾರದ ಪಂಥ, ಒಂದು. ಸ್ವತಂತ್ರ ಲೇಬರ್ ಪಕ್ಷ ಮತ್ತು ನೇಮಸ್ತರ ಪಕ್ಷ ಇಂಥವು. ಸ್ವತಂತ್ರ ಲೇಬರ್ ಪಕ್ಷದ ಕಡೆಯಿಂದ ನಾವು 1939ರ ಸೆಪ್ಟಂಬರ್ 13ರಂದು ಒಂದು ಪತ್ರಿಕೆ ಹೊರಡಿಸಿ ಇಂಗ್ಲಿಷ್ ಸರಕಾರದ ಕೈಯಿಂದ ಹಿಂದೂಸ್ಥಾನದ ಹಿತದೃಷ್ಟಿಯಿಂದ ಸಾಕಷ್ಟು ನಿರ್ಲಕ್ಷ್ಯವಾಗಿದೆ, ಮತ್ತು ದೇಶದ ಸಂರಕ್ಷಣೆಯ ದೃಷ್ಟಿಯಿಂದಲೂ ಸಾಕಷ್ಟು ಉಪೇಕ್ಷೆ ಮಾಡಲಾಗಿದೆ ಎಂದು ಸಾರಲಾಯಿತು. ಬ್ರಿಟಿಷರೊಂದಿಗಿನ ಸಂಘರ್ಷ ಯುದ್ಧಾನಂತರ ಮುಂದುವರಿಸಬಹುದು; ಅದರೆ ಈಗ ಈ ಸಹಾಯದ ಬಗ್ಗೆ ಶರತ್ತುಗಳೇನೂ ಇರಬಾರದು ಎಂಬಂತಹ ಪತ್ರವನ್ನು ಲಿಬರಲ್ ಪಕ್ಷದ ವತಿಯಿಂದ ಸರ್ ಚಿಮಣ್‌ಲಾಲ್ ಸೆಟೆಲ್‌ವಾಡ್ ಅವರು 1939ರ ಸೆಪ್ಟಂಬರ್ 11ರಂದು ಪ್ರಕಟಿಸಿದರು. ಬ್ರಿಟಿಷರ ವಿರುದ್ಧ ಈ ದೇಶದಲ್ಲಿ ಅನೇಕ ತಕರಾರುಗಳಿದ್ದರೂ ತೆರೆದ ಹೃದಯದಿಂದ ಯುದ್ಧದಲ್ಲಿ ಸಹಾಯ ಮಾಡಬೇಕು ಎಂಬ ಆಶಯದ ಪತ್ರವದು.

ಷರತ್ತುಗಳೊಂದಿಗೆ ಸಹಾಯ ಮಾಡಬೇಕೆನ್ನುವವರು ಇನ್ನೊಂದು ಪಂಥ. ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ಇವೆರಡೂ ಇದರಲ್ಲಿ ಸೇರುತ್ತವೆ. ಮುಸ್ಲಿಮ್ ಲೀಗ್, ತನ್ನ ಕಾರ್ಯಕಾರಿ ಮಂಡಳಿಯ ಸಭೆ ಕರೆದು, 1939 ಸೆಪ್ಟಂಬರ್ 19ರಂದು ತನ್ನ ಭೂಮಿಕೆಯನ್ನು ಸ್ಪಷ್ಟ ಪಡಿಸಿತ್ತು. ಸದ್ಯ ಯೋಜಿತವಾದ ಆದರೆ ಇನ್ನೂ ಜಾರಿಗೆ ಬಂದಿರದಿದ್ದ ಫೆಡರೇಶನ್ ಆಳಿಸಿ ಹಾಕಿ, ರಾಜ್ಯ ಸಂವಿಧಾನ ಯಾವ ರೀತಿಯದ್ದಾಗಿರಬೇಕೆಂದು ವಿಚಾರ ನಡೆಸಿ, ಇನ್ನು ರೂಪುಗೊಳ್ಳಲಿರುವ ಸಂವಿಧಾನವು ಮುಸಲ್ಮಾನರ ಸಮ್ಮತಿ ವಿರುದ್ಧ ಆಗಬಾರದೆಂದೂ, ಬ್ರಿಟಿಷರು ಈ ಷರತ್ತನ್ನು ಒಪ್ಪಿಕೊಂಡರೆ ಮಾತ್ರ ಯುದ್ಧದಲ್ಲಿ ಸಹಾಯ ನೀಡುವುದೆಂದೂ ನಿರ್ಧಾರಕ್ಕೆ ಬರಲಾಯಿತು. ಮುಸ್ಲಿಂ ಲೀಗ್‌ನಂತೆಯೇ ಕಾಂಗ್ರೆಸ್ ಕೂಡ ತನ್ನ ಷರತ್ತನ್ನು 1939 ಸೆಪ್ಟಂಬರ್ 15ರಂದು ಹೊರಪಡಿಸಿದ ಠರಾವಿನಲ್ಲಿ ಪ್ರಕಟಿಸಿತು. ಅದರಲ್ಲಿ ಬ್ರಿಟಿಷರು ಯುದ್ಧದಲ್ಲಿ ತಮ್ಮ ಧ್ಯೇಯ ಏನೆಂದು ಸ್ಪಷ್ಟಪಡಿಸಬೇಕೆಂದೂ ಮತ್ತು ಆ ಧ್ಯೇಯ ಹಿಂದೂಸ್ಥಾನಕ್ಕೆ ಹೇಗೆ ಅನ್ವಯಿಸುತ್ತದೆಂದು ತಿಳಿಸುವಂತೆಯೂ ಹೇಳಲಾಯಿತು. ಹಾಗೆಯೇ, ಹಿಂದೂಸ್ಥಾನವು ಸ್ವತಂತ್ರ ದೇಶವಾಗಿದ್ದು, ಇಲ್ಲಿನ ರಾಜ್ಯ ಸಂವಿಧಾನ ರೂಪಿಸುವ ಹಕ್ಕು, ಇಲ್ಲಿನ ಜನರಿಗೇ ಸೇರಿದ್ದು, ಈ ದೇಶವು ಆರಿಸಿ ತಂದ ನಿರ್ಣಾಯಕ ಮಂಡಳಿಯಿಂದ ರೂಪುಗೊಳ್ಳುವುದೆಂದೂ ಮತ್ತು ಪಾರ್ಲಿಮೆಂಟ್ ಅದನ್ನು ಮಾನ್ಯ ಮಾಡುವುದೆಂದೂ ಇಂಗ್ಲಿಷರು ಒಪ್ಪಿ ಪ್ರಕಟಪಡಿಸಿದರೆ ಮಾತ್ರ, ಕಾಂಗ್ರೆಸ್ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಲು ಸಿದ್ಧವಾಗುವುದು ಎಂದು ಸಾರಿತು.

ಬಹುಜನ ಸಮಾಜದ ಮನವೂ ನಿಶ್ಶರ್ತ ಸಹಾಯ ಮಾಡುವುದು ಬೇಡ, ಅನ್ನುವವರ ಕಡೆಗಿದೆ. ಇದನ್ನು ಅಲ್ಲಗೆಳೆಯುವಂತಿಲ್ಲ.
ಆದ್ದರಿಂದಲೇ ಈ ಭೂಮಿಕೆಯನ್ನು ಪರಿಶೀಲಿಸಬೇಕು. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್, ಇವೆರಡರ ಭೂಮಿಕೆಯೂ ಒಂದೇ ಉದ್ದೇಶವಾಗಿದ್ದಾಗಿದ್ದರೂ, ಮುಸ್ಲಿಂ ಲೀಗ್‌ನ ಭೂಮಿಕೆಯ ವಿಚಾರ ಮಾಡಬೇಕಾದ ಕಾರಣವಿಲ್ಲ. ಫೆಡರೇಶನ್, ಯಾರಿಗೂ ಬೇಡ. ಮುಸ್ಲಿಂ ಲೀಗ್‌ಗೆ ಬೇಡದಂತೆ ಕಾಂಗ್ರೆಸ್‌ಗೂ ಬೇಡ. ಮುಸ್ಲಿಂ ಲೀಗ್‌ನ ಸಮ್ಮತಿಯಿಲ್ಲದೆ ಹೊಸ ರಾಜ್ಯ ಸಂವಿಧಾನ ಜಾರಿಗೆ ಬರಬಾರದೆಂಬ ಷರತ್ತಿನಲ್ಲೂ ಅಂತಹ ಸಮಸ್ಯೆಯೇನೂ ಇದೆಯೆಂದು ನಮಗನ್ನಿಸುವುದಿಲ್ಲ. ಇಂಗ್ಲಿಷ್ ಸರಕಾರದಿಂದ ಇಂತಹ ಆಶ್ವಾಸನೆ ಬೇಡುವ ಮುನ್ನ, ಕಾಂಗ್ರೆಸ್, ಅಲ್ಪಸಂಖ್ಯಾತರ ಸಂರಕ್ಷಣೆಯ ಷರತ್ತು ಇಲ್ಲದ ರಾಜ್ಯ ಸಂವಿಧಾನವನ್ನು ಕಾಂಗ್ರೆಸ್ ಮಾನ್ಯ ಮಾಡದೆಂದು ಎಲ್ಲ ಅಲ್ಪಸಂಖ್ಯಾತರಿಗೂ ಆಶ್ವಾಸನೆಯಿತ್ತಿತು. ಹಿಂದೂ ಬಹುಜನ ಸಮಾಜದ ಹೊರತು ಮತ್ತೆಲ್ಲ ಮನೋವೃತ್ತಿ, ಕಾಂಗ್ರೆಸ್‌ನ ಭೂಮಿಕೆಯತ್ತ ಇದೆ. ಮುಸ್ಲಿಂ ಲೀಗ್‌ನ ಷರತ್ತಿಗೆ ಹಿಂದೂಗಳ ವಿರೋಧವಿದೆ. ಕಾರಣ, ಈ ಷರತ್ತನ್ನು ಬ್ರಿಟಿಷ್ ಸರಕಾರದ ವಿರುದ್ಧವಿರದೆ, ಹಿಂದೂಗಳ ವಿರುದ್ಧವಿದೆಯೆಂಬುದು ಕಾಂಗ್ರೆಸ್‌ನ ಭೂಮಿಕೆಯಿಂದ ತಿಳಿಯುತ್ತದೆ. ದೇಶದ ಜನರು ಆರಿಸಿ ತಂದ ನಿರ್ಣಾಯಕ ಮಂಡಳಿ, ರಾಜ್ಯ ಸಂವಿಧಾನ ಸಿದ್ಧಗೊಳಿಸಲೆಂಬ ಷರತ್ತು, ಹಿಂದೂಸ್ಥಾನದಲ್ಲಿ ಕಾಂಗ್ರೆಸ್‌ನವರನ್ನು ಬಿಟ್ಟರೆ ಬೇರಾರಿಗೂ ಮಾನ್ಯವಾಗಿಲ್ಲ. ಎಲ್ಲೆಡೆಯಿಂದ ಇದಕ್ಕೆ ವಿರೋಧ ಬಂದುದರಿಂದ ಗಾಬರಿಯಾಗಿ ಕಾಂಗ್ರೆಸ್, ಪುನಃ ಈ ಷರತ್ತನ್ನು ಮುಂದು ಮಾಡದೆ ಸುಮ್ಮನಾಯ್ತೆಂದು ಕಾಣುತ್ತದೆ. ಸ್ವಾತಂತ್ರದ ವಿಷಯದಲ್ಲೂ ಹೆಚ್ಚು ಕಡಿಮೆ ಹೀಗೇ ಆಗಿದೆಯೆನ್ನಲು ಯಾವ ಅಡ್ಡಿಯೂ ಇಲ್ಲ.

ಇತ್ತೀಚೆಗೆ ಕಾಂಗ್ರೆಸ್‌ನ ಡೆಪ್ಯುಟಿ ಮಹತ್ಮಾ ಶ್ರೀ ರಾಜಗೋಪಾಲಾಚಾರಿ ಅವರು ಮಾಡಿದ ಭಾಷಣದಲ್ಲಿ, ‘‘ಹಿಂದೂಸ್ಥಾನವು ಇಂದಿನಿಂದ ಸ್ವತಂತ್ರವಾಗಿದೆ ಎಂಬ ಬೇಡಿಕೆಯನ್ನು ನಾವೆಂದೂ ಬ್ರಿಟಿಷರೆದುರು ಇಟ್ಟಿಲ್ಲ. ನಾವು ಬೇಡುತ್ತಿರುವುದು ಇಷ್ಟೇ; ಹಿಂದೂಸ್ಥಾನಕ್ಕೆ ಹಿಂದೆ ಮುಂದೆ ಎಂದಾದರೂ ಸ್ವತಂತ್ರವಾಗುವ ಹಕ್ಕು ಇದೆ, ಎಂದಷ್ಟೇ ಇಂಗ್ಲಿಷರು ಒಪ್ಪಿಕೊಳ್ಳಬೇಕು. ಇದಕ್ಕಿಂತ ಹೆಚ್ಚಿನದೇನನ್ನೂ ಕಾಂಗ್ರೆಸ್ ಇಂದು ಬೇಡಿಕೊಳ್ಳುತ್ತಿಲ್ಲ’’. ಎಂದು ಸ್ಪಷ್ಟ ಪಡಿಸಿದ್ದಾರೆ.

ಹುಲಿಯು ತನ್ನ ಮರಿಯನ್ನು ತಾನೇ ತಿನ್ನುವಂತೆ, ಕಾಂಗ್ರೆಸ್ ತನ್ನ ಶರತ್ತನ್ನು ತಾನೇ ನುಂಗಿತು. ಹಾಗಿದ್ದೂ, ಹಿಂದೂ ಬಹುಜನ ಸಮಾಜವು ನಿಶ್ಶರ್ತವಾಗಿ ಸಹಾಯ ಮಾಡಲು ಸಿದ್ಧವಿಲ್ಲವೆಂಬುದು ಸ್ಪಷ್ಟವಿದೆ. ಹಿಂದೂ ಸಮಾಜದ ಈ ಭಾವನೆಗೆ ಯಾರಿಗೂ ಆಶ್ಚರ್ಯವಾಗಬೇಕಿಲ್ಲ. ಬ್ರಿಟಿಷ್ ಸಮ್ರಾಜ್ಯದ ಬಹುಭಾಗ, ಇಂದು ಇಂಗ್ಲಿಷರ ಸಹಾಯಕ್ಕೆ ಧಾವಿಸುತ್ತಿರುವಂತೆ, ಈ ದೇಶದ ಜನರೂ ಧಾವಿಸುವರೆಂದುಕೊಳ್ಳುವುದು ವ್ಯರ್ಥವಷ್ಟೇ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News