ಪುರುಷರಿಗೆ ಕುಂಬಳಕಾಯಿ ಬೀಜಗಳಿಂದ ದೊರೆಯುವ ಆರೋಗ್ಯಲಾಭಗಳು

Update: 2018-08-10 11:15 GMT

ಉತ್ತಮ ದೇಹದಾರ್ಢ್ಯ ಮತ್ತು ಆರೋಗ್ಯವನ್ನು ಹೊಂದಲು ಬಯಸುವ ಪುರುಷರ ಮೊದಲ ಆಯ್ಕೆ ಜಿಮ್ ಆಗಿದೆ. ಆದರೆ ಇದಕ್ಕಾಗಿ ಇತರ ಮಾರ್ಗಗಳೂ ಇವೆ. ನೈಸರ್ಗಿಕವಾದ,ಅವರಿಗೆ ಸೂಕ್ತವಾದ ಪರಿಪೂರ್ಣ ಆಹಾರಗಳ ಸೇವನೆ ಇವುಗಳಲ್ಲೊಂದಾಗಿದೆ. ಈ ವಿಷಯದಲ್ಲಿ ಕುಂಬಳಕಾಯಿ ಬೀಜಗಳು ಪುರುಷರ ಆಪ್ತಮಿತ್ರ ಎಂದೇ ಹೇಳಬಹುದು.

ಪೌಷ್ಟಿಕಾಂಶಗಳು

ಕುಂಬಳಕಾಯಿ ಬೀಜಗಳು ಸಾಮಾನ್ಯವಾಗಿ ಕಡುಹಸಿರು ಬಣ್ಣವನ್ನು ಹೊಂದಿರುತ್ತವೆ. ಕುಂಬಳಕಾಯಿ ವರ್ಷವಿಡೀ ದೊರೆಯುತ್ತದೆ. ಕುಂಬಳಕಾಯಿ ಬೀಜಗಳಲ್ಲಿ ಪುರುಷರ ಆರೋಗ್ಯಕ್ಕೆ ಲಾಭಕರವಾದ ಹಲವಾರು ಪೌಷ್ಟಿಕಾಂಶಗಳಿವೆ.

ಕುಂಬಳಕಾಯಿ ಬೀಜಗಳು ಸತುವು, ಮ್ಯಾಗ್ನೀಷಿಯಂ, ಮ್ಯಾಂಗನೀಸ್, ತಾಮ್ರ, ಕಬ್ಬಿಣ,ಸೆಲೆನಿಯಂ,ಕ್ಯಾಲ್ಸಿಯಂ ಮತ್ತು ರಂಜಕಗಳ ಸಮೃದ್ಧ ಮೂಲಗಳಾಗಿವೆ. ಪ್ರೋಟೀನ್,ಒಮೆಗಾ-3 ಕೊಬ್ಬಿನಾಮ್ಲ,ಬಿ ವಿಟಾಮಿನ್‌ಗಳು,ಬೀಟಾ ಕ್ಯಾರೊಟಿನ್ ಮತ್ತು ವಿಟಾಮಿನ್ ಎ ಕೂಡ ಇವುಗಳಲ್ಲಿ ಹೇರಳವಾಗಿವೆ.

ಸಿಪ್ಪೆ ತೆಗೆದ 28 ಗ್ರಾಂ ಕುಂಬಳಕಾಯಿ ಬೀಜಗಳು ಕೊಬ್ಬು ಮತ್ತು ಪ್ರೋಟಿನ್‌ಗಳ ಸಹಿತ 151 ಕ್ಯಾಲರಿಗಳನ್ನು ಹೊಂದಿವೆ. ಸುಮಾರು 1.7 ಗ್ರಾಂ ನಾರಿನಂಶ ಮತ್ತು 5 ಗ್ರಾಂ ಕಾರ್ಬೊಹೈಡ್ರೇಟ್‌ಗಳಿವೆ.

ಈ ಬೀಜಗಳಲ್ಲಿರುವ ಮ್ಯಾಗ್ನೀಷಿಯಂ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಕ್ರಮಬದ್ಧಗೊಳಿಸುತ್ತದೆ. ಅಲ್ಲದೆ ನಿದ್ರೆ ಮತ್ತು ಜೀರ್ಣಕ್ರಿಯೆಗಳನ್ನು ಉತ್ತಮಗೊಳಿಸುತ್ತದೆ. ಒಮೆಗಾ-3 ಕೊಬ್ಬಿನಾಮ್ಲಗಳು ಹಾರ್ಮೋನ್‌ಗಳ ಸಮತೋಲನಕ್ಕೆ ನೆರವಾಗುವ ಜೊತೆಗೆ ತುಂಬ ಹೊತ್ತು ಹಸಿವೆಯಾಗದಂತೆ ನೋಡಿಕೊಳ್ಳುತ್ತವೆೆ. ಇತರ ವಿಟಾಮಿನ್‌ಗಳು ಮತ್ತು ಖನಿಜಾಂಶಗಳು ಮೂಳೆಗಳನ್ನು ಸದೃಢಗೊಳಿಸಲು ನೆರವಾಗುವ ಜೊತೆಗೆ ಕೆಂಪು ರಕ್ತಕಣಗಳನ್ನು ಉತ್ಪಾದಿಸುತ್ತವೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತವೆ.

ಆರೋಗ್ಯಲಾಭಗಳು

►ಪ್ರಾಸ್ಟೇಟ್‌ನ ಆರೋಗ್ಯವನ್ನು ಹೆಚ್ಚಿಸುತ್ತದೆ

ಕುಂಬಳಕಾಯಿ ಬೀಜಗಳ ಸೇವನೆಯಿಂದ ಪ್ರಾಸ್ಟೇಟ್‌ನ ಆರೋಗ್ಯ ಹೆಚ್ಚುತ್ತದೆ ಎನ್ನುವುದನ್ನು ಇಂಡಿಯನ್ ಜರ್ನಲ್ ಆಫ್ ಯುರಾಲಜಿಯಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯೊಂದು ಬಹಿರಂಗಗೊಳಿಸಿದೆ. ಪ್ರಾಸ್ಟೇಟ್ ಗ್ರಂಥಿಯನ್ನು ಬಲಗೊಳಿಸುತ್ತದೆ ಮತ್ತು ಪುರುಷರಲ್ಲಿ ಆರೋಗ್ಯಕರ ಹಾರ್ಮೋನ್‌ಗಳ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಪ್ರಾಸ್ಟೇಟ್ ಗ್ರಂಥಿಯು ದೊಡ್ಡದಾಗುವುದರಿಂದ ಮೂತ್ರ ವಿಸರ್ಜನೆಗೆ ತೊಂದರೆಯನ್ನುಂಟು ಮಾಡುವ ಸ್ಥಿತಿಯಾದ ಬಿಪಿಎಚ್ ಸಮಸ್ಯೆಯನ್ನು ನಿವಾರಿಸಲೂ ಅದು ನೆರವಾಗಬಹುದು.

► ಮಾಂಸಖಂಡಗಳ ಆರೋಗ್ಯಕ್ಕೆ ಒಳ್ಳೆಯದು

 ಮಾಂಸಖಂಡಗಳು ರೂಪುಗೊಳ್ಳಲು ಮತ್ತು ಅವುಗಳಿಗೆ ಹಾನಿಯುಂಟಾದಾಗ ಸುಸ್ಥಿತಿಗೆ ಮರಳಿಸಲು ಪ್ರೋಟಿನ್ ಅಗತ್ಯವಾಗಿದೆ ಮತ್ತು ಇದು ಕುಂಬಳಕಾಯಿ ಬೀಜಗಳಲ್ಲಿ ಹೇರಳ ಪ್ರಮಾಣದಲ್ಲಿದೆ. 100 ಗ್ರಾಂ ಕುಂಬಳಕಾಯಿ ಬೀಜಗಳಲ್ಲಿ 23.33 ಗ್ರಾಂ ಪ್ರೋಟಿನ್ ಇರುತ್ತದೆ.

► ಫಲವಂತಿಕೆಯನ್ನು ಹೆಚ್ಚಿಸುತ್ತದೆ

ಕುಂಬಳಕಾಯಿ ಬೀಜಗಳಲ್ಲಿ ಸಮೃದ್ಧವಾಗಿರುವ ಸತುವು ಪುರುಷರಲ್ಲಿ ವೀರ್ಯದ ಗುಣಮಟ್ಟ ಮತ್ತು ಫಲವಂತಿಕೆಯನ್ನು ಹೆಚ್ಚಿಸುತ್ತದೆ. ಟೆಸ್ಟೋಸ್ಟಿರಾನ್ ಹಾರ್ಮೋನ್‌ಗಳ ಆರೋಗ್ಯಕರ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಸತುವು ಪ್ರಮುಖ ಪಾತ್ರವನ್ನು ಹೊಂದಿದೆ. ಪುರುಷರಲ್ಲಿ ಲೈಂಗಿಕ ಆರೋಗ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪೌಷ್ಟಿಕಾಂಶಳಾದ ಪ್ರೋಟಿನ್, ಮ್ಯಾಗ್ನೀಷಿಯಂ, ಮ್ಯಾಂಗನೀಸ್,ರಂಜಕ,ಕಬ್ಬಿಣ,ಸತುವು ಮತ್ತು ಪೊಟ್ಯಾಷಿಯಂ ಈ ಬೀಜಗಳಲ್ಲಿ ಸಮೃದ್ಧವಾಗಿವೆ.

► ಇತರ ಆರೋಗ್ಯಲಾಭಗಳು

ಕುಂಬಳಕಾಯಿ ಬೀಜಗಳಲ್ಲಿ ತುಂಬಿರುವ ಸತುವು ಹೊಸ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುವ ಜೊತೆಗೆ ಅವು ಹಾನಿಗೀಡಾದರೆ ಸುಸ್ಥಿತಿಗೆ ಮರಳಿಸಲು ನೆರವಾಗುತ್ತದೆ. ಈ ಬೀಜಗಳು ಆರೋಗ್ಯಕರ,ಹೊಳೆಯುವ ತಲೆಗೂದಲು ಹೊಂದಲೂ ಪೂರಕವಾಗಿವೆ. ಅವುಗಳಲ್ಲಿರುವ ರಂಜಕವು ಚಯಾಪಚಯವನ್ನು ಹೆಚ್ಚಿಸಿ ಶರೀರಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಅವು ಉರಿಯೂತ ನಿರೋಧಕ ಗುಣಗಳನ್ನು ಹೊಂದಿರುವ ಜೊತೆಗೆ ಅಜೀರ್ಣವನ್ನು ತಡೆಯುತ್ತವೆ.

ಆದರೆ ಕುಂಬಳಕಾಯಿ ಬೀಜಗಳು ಅಧಿಕ ನಾರಿನಂಶವನ್ನೂ ಹೊಂದಿವೆ. ಹೀಗಾಗಿ ಅವುಗಳನ್ನು ಅತಿಯಾಗಿ ತಿನ್ನುವುದರಿಂದ ವಾಯು ಮತ್ತು ಹೊಟ್ಟೆಯುಬ್ಬರ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಒಂದೇ ಸಲ ಅತಿಯಾದ ಪ್ರಮಾಣದಲ್ಲಿ ತಿಂದರೆ ಮಲಬದ್ಧತೆಗೂ ಕಾರಣವಾಗಬಹುದು. ಹೀಗಾಗಿ ಅವುಗಳನ್ನು ಆಗಾಗ್ಗೆ ಸೀಮಿತ ಪ್ರಮಾಣದಲ್ಲಿ ತಿನ್ನುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News