ಅಳಿಲು ಮರಿಯಿಂದ ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ವ್ಯಕ್ತಿ!

Update: 2018-08-11 08:14 GMT

ಬರ್ಲಿನ್, ಆ.11: ತನ್ನನ್ನೇ ಹಿಂಬಾಲಿಸಿಕೊಂಡು ಬರುತ್ತಿದ್ದ ಅಳಿಲು ಮರಿಯಿಂದ ಬೆದರಿದ ವ್ಯಕ್ತಿಯೊಬ್ಬ ತನ್ನ ರಕ್ಷಣೆಗೆ ಪೊಲೀಸರ ಮೊರೆ ಹೋದ ಸ್ವಾರಸ್ಯಕರ ಘಟನೆ ಜರ್ಮನಿಯಲ್ಲಿ ನಡೆದಿದೆ.

ಜರ್ಮನಿಯ ಕಾರ್ಲ್ಸ್‌ರುಹೆ ನಗರದಲ್ಲಿ ಈ ಘಟನೆ ನಡೆದಿದ್ದು ತನ್ನನ್ನು ಅಳಿಲುಮರಿಯಿಂದ ರಕ್ಷಿಸುವಂತೆ ಗಾಬರಿಯಿಂದ ಕರೆ ಮಾಡಿದ್ದ ವ್ಯಕ್ತಿಗೆ ಜರ್ಮನಿ ಪೊಲೀಸರು ತಕ್ಷಣವೇ ಸ್ಪಂದಿಸಿದ್ದಾರೆ. ಪೊಲೀಸರು ವ್ಯಕ್ತಿ ಕರೆ ಮಾಡಿದ ಸ್ಥಳಕ್ಕೆ ಧಾವಿಸಿದಾಗ ವ್ಯಕ್ತಿಯನ್ನು ಅಳಿಲು ಮರಿ ಹಿಂಬಾಲಿಸಿಕೊಂಡು ಬರುತ್ತ್ತಿರುವ ದೃಶ್ಯ ಕಂಡುಬಂದಿತು.

ವ್ಯಕ್ತಿಯನ್ನು ಹಿಂಬಾಲಿಸಿ ಸುಸ್ತಾಗಿದ್ದ ಅಳಿಲುಮರಿ ನಿದ್ದೆಗೆ ಜಾರುವ ಮೂಲಕ ಅಳಿಲು-ವ್ಯಕ್ತಿಯ ನಡುವಿನ ನಾಟಕಕ್ಕೆ ತೆರೆ ಬಿತ್ತು. ಮರಿ ಅಳಿಲನ್ನು ಕಾರ್ಲ್ಸ್‌ರುಹೆ ಪೊಲೀಸ್ ಇಲಾಖೆಯೇ ದತ್ತು ಪಡೆದುಕೊಂಡಿದ್ದು, ನ್ಯೂ ಮಾಸ್ಕೊಟ್ ಎಂದು ಹೆಸರಿಟ್ಟಿದೆ.

ಮರಿ ಅಳಿಲು ಬಹುಶಃ ತಾಯಿಯಿಂದ ಬೇರ್ಪಟ್ಟ ಕಾರಣ, ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಬಂದಿದೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.

‘‘ಅಳಿಲು ಮರಿಗಳು ತನ್ನ ತಾಯಿಯಿಂದ ತಪ್ಪಿಸಿಕೊಂಡರೆ ಬೇರೊಂದು ಕಡೆ ಆಶ್ರಯ ಪಡೆಯಲು ಹವಣಿಸುವುದು ಸಾಮಾನ್ಯ. ಹೀಗಾಗಿ ಅಳಿಲು ಮರಿ ವ್ಯಕ್ತಿಯ ಹಿಂದೆ ಬಿದ್ದಿರಬಹುದು’’ ಎಂದು ಜರ್ಮನಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News