ಸಾಮಾಜಿಕ ಜಾಲತಾಣದಲ್ಲೀಗ ಈ 96ರ ಅಜ್ಜಿ ಸೆಲೆಬ್ರಿಟಿ!

Update: 2018-08-11 17:01 GMT

ತಿರುವನಂತಪುರಂ, ಆ.11: ತನ್ನ 96ರ ಹರೆಯದಲ್ಲಿ ನಾಲ್ಕನೇ ತರಗತಿ ಸಮನಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಕೇರಳದ ವೃದ್ಧೆ ಮಹೀಂದ್ರಾ ಸಮೂಹ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಸೇರಿದಂತೆ ಸಾವಿರಾರು ಜನರಿಗೆ ಆದರ್ಶಪ್ರಾಯರಾಗಿದ್ದಾರೆ.

ಕೇರಳದ ಅಲಪುಳದ ನಿವಾಸಿಯಾಗಿರುವ ಅಜ್ಜಿ ಕಾತ್ಯಾಯಿನಿ ಅಮ್ಮ ಕೇರಳ ಸಾಕ್ಷರತೆ ಅಭಿಯಾನದ ಅಕ್ಷರಲಕ್ಷಂ ಯೋಜನೆಯಡಿ ಶಿಕ್ಷಣ ಪಡೆದು ಪರೀಕ್ಷೆ ಬರೆದಿದ್ದರು. ರವಿವಾರ ನಡೆದ ಪರೀಕ್ಷೆಯಲ್ಲಿ ಅಜ್ಜಿ ಪೂರ್ಣ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಸದ್ಯ ಆಕೆ ಸ್ಥಳೀಯ ತಾರೆಯಾಗಿ ಬದಲಾಗಿದ್ದಾರೆ. ಟ್ವಿಟರ್‌ನಲ್ಲಿ ಕಾತ್ಯಾಯಿನಿ ಅಮ್ಮನನ್ನು ‘ಚಮತ್ಕಾರಿ ಮಹಿಳೆ’ ಎಂದು ಬಣ್ಣಿಸಲಾಗಿದೆ. ಈಕೆಯ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಟ್ವೀಟ್ ಮಾಡಿದ ಮಹೀಂದ್ರಾ ಸಂಸ್ಥೆ ಮುಖ್ಯಸ್ಥ ಆನಂದ್ ಮಹೀಂದ್ರಾ, ಈ ಸುದ್ದಿ ನಿಜವಾಗಿದ್ದರೆ ಆಕೆಯೇ ನನ್ನ ಆದರ್ಶ ವ್ಯಕ್ತಿ. ಆಕೆಯಂತೆ ನಾನೂ ಕಲಿಯುವ ಹಸಿವನ್ನು ಹೊಂದಿದ್ದರೆ ನನ್ನ ಮೆದುಳು ಕೂಡಾ ಜೀವಂತವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಜನವರಿಯಲ್ಲಿ ಕಾತ್ಯಾಯಿನಿ ಅಮ್ಮ ಸಾಕ್ಷರತಾ ಅಭಿಯಾನದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಸದ್ಯ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಆಕೆ ಮುಂದಿನ ವರ್ಷ ನಾಲ್ಕನೇ ತರಗತಿಗೆ ಪ್ರವೇಶ ಪಡೆಯಲಿದ್ದಾರೆ. ಇಡೀ ದೇಶವೇ ಆಕೆಯ ಸಾಧನೆಯನ್ನು ಕೊಂಡಾಡುತ್ತಿರುವಾಗ ಅಜ್ಜಿ ಮಾತ್ರ ಸಂತುಷ್ಟವಾದಂತೆ ಕಾಣುತ್ತಿಲ್ಲ. ನಾನು ಕಲಿತ ಎಲ್ಲವನ್ನೂ ಪರೀಕ್ಷೆಯಲ್ಲಿ ಕೇಳಲಿಲ್ಲ. “ನಾನು ಅನಗತ್ಯವಾಗಿ ಹೆಚ್ಚು ಓದಬೇಕಾಯಿತು” ಎಂದು ಆಕೆ ಬೇಸರ ವ್ಯಕ್ತಪಡಿಸುತ್ತಾರೆ ಎಂದು ಆಕೆಗೆ ಪಾಠ ಮಾಡಿದ ಶಿಕ್ಷಕಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News