×
Ad

ರಸೆಲ್ ಆಲ್‌ರೌಂಡ್ ಆಟ: ಜಮೈಕಾಕ್ಕೆ ಜಯ

Update: 2018-08-11 23:57 IST

ಜಮೈಕಾ, ಆ.11: ವೆಸ್ಟ್‌ಇಂಡೀಸ್ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ನೀಡಿದ ಶ್ರೇಷ್ಠ ಆಲ್‌ರೌಂಡ್ ಆಟದ ನೆರವಿನಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್)ನಲ್ಲಿ ಜಮೈಕಾ ತಲ್ಲವಾಸ್ ತಂಡ ಟ್ರಿನ್‌ಬಾಗೊ ನೈಟ್ ರೈಡರ್ಸ್ ವಿರುದ್ಧ ಕೊನೆಯ ಓವರ್‌ನಲ್ಲಿ ರೋಚಕ ಜಯ ಸಾಧಿಸಿದೆ.

ಸಿಪಿಎಲ್‌ನಲ್ಲಿ ವೇಗದ ಶತಕ, ಹ್ಯಾಟ್ರಿಕ್ ವಿಕೆಟ್ ಹಾಗೂ ಆಕರ್ಷಕ ಕ್ಯಾಚ್ ಪಡೆದು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಮಿಂಚಿದ ರಸೆಲ್ ಜಮೈಕಾ ತಂಡಕ್ಕೆ 4 ವಿಕೆಟ್‌ಗಳ ಗೆಲುವು ತಂದುಕೊಟ್ಟರು.

ಜಮೈಕಾ ನಾಯಕ ರಸೆಲ್ ಟಾಸ್ ಜಯಿಸಿ ನೈಟ್ ರೈಡರ್ಸ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಎದುರಾಳಿ ತಂಡದ ಅಪಾಯಕಾರಿ ಆಟಗಾರ ಕ್ರಿಸ್ ಲಿನ್‌ರನ್ನು ಆಕರ್ಷಕ ಕ್ಯಾಚ್ ಮೂಲಕ ಪೆವಿಲಿಯನ್‌ಗೆ ಅಟ್ಟಿದ ರಸೆಲ್ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಬ್ರೆಂಡನ್ ಮೆಕಲಮ್, ಡರೆನ್ ಬ್ರಾವೊ ಹಾಗೂ ದಿನೇಶ್ ರಾಮ್ದಿನ್ ವಿಕೆಟ್ ಕಬಳಿಸಿ ಸಿಪಿಎಲ್‌ನಲ್ಲಿ ಮೊದಲ ಬಾರಿ ಹ್ಯಾಟ್ರಿಕ್ ಪೂರೈಸಿದರು.

  ಗೆಲ್ಲಲು 224 ರನ್ ಕಠಿಣ ಗುರಿ ಪಡೆದ ಜಮೈಕಾ ತಂಡ ಒಂದು ಹಂತದಲ್ಲಿ 41 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ ಅನುಭವ ಹೊಂದಿರುವ ರಸೆಲ್ ಕೇವಲ 40 ಎಸೆತಗಳಲ್ಲಿ 12 ಸಿಕ್ಸರ್, 3 ಬೌಂಡರಿ ನೆರವಿನಿಂದ ಸಿಪಿಎಲ್ ಟೂರ್ನಿಯಲ್ಲಿ ವೇಗದ ಶತಕ ಸಿಡಿಸಿದರು. 49 ಎಸೆತಗಳಲ್ಲಿ 13 ಸಿಕ್ಸರ್, 6 ಬೌಂಡರಿ ಸಹಿತ ಔಟಾಗದೆ 121 ರನ್ ಗಳಿಸಿದ ರಸೆಲ್ ತಂಡಕ್ಕೆ ಇನ್ನೂ ಮೂರು ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿ ಗೆಲುವು ತಂದರು.

ವೀರೋಚಿತ ಪ್ರದರ್ಶನ ನೀಡಿದ ರಸೆಲ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ರಸೆಲ್ ಸಾಹಸದಿಂದ ಜಮೈಕಾ ತಂಡ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಜಯ ಸಾಧಿಸಿತು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ನೈಟ್ ರೈಡರ್ಸ್ ತಂಡ ಕಾಲಿನ್ ಮುನ್ರೊ(61) ಹಾಗೂ ಮೆಕಲಮ್(56) ದಾಖಲಿಸಿದ ಅರ್ಧಶತಕದ ಸಹಾಯದಿಂದ 6 ವಿಕೆಟ್‌ಗೆ 223 ರನ್ ಗಳಿಸಿತು. ಆದರೆ, ರಸೆಲ್ ಒನ್‌ಮ್ಯಾನ್ ಶೋ ಎದುರು ಇವರಿಬ್ಬರ ಶ್ರಮ ವ್ಯರ್ಥವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News