ಮನೆಯೇ ರಂಗಮಂದಿರವಾದ ‘ರಂಗಮನೆ’

Update: 2018-08-11 18:34 GMT

ನೆಯಂಗಳವನ್ನೇ ರಂಗಭೂಮಿಯ ವೇದಿಕೆಯಾಗಿಸಿ, ಮನೆಯಲ್ಲಿಯೇ ಕಲೆಸಂಸ್ಕೃತಿಯ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ರೂಪುಗೊಂಡ ಸುಳ್ಯದ ರಂಗಮನೆ ಇಂದು ಕರ್ನಾಟಕದ ಸಾಂಸ್ಕೃತಿಕ ಕಲಾಕೇಂದ್ರವಾಗಿ ಬೆಳೆದು ನಿಂತಿದೆ. ಸದಾ ನಾಟಕ, ಯಕ್ಷಗಾನ, ಸಂಗೀತ, ನೃತ್ಯ,ಜಾದೂ ಪ್ರದರ್ಶನ, ಪ್ರಸಾದನ-ಮುಖವಾಡ ಕಾರ್ಯಾಗಾರ, ಚಿಣ್ಣರ ಮೇಳ, ನಾಟಕ,ಯಕ್ಷಗಾನ ತರಬೇತಿ ಹೀಗೆ ನಿರಂತರ ಒಂದಿಲ್ಲೊಂದು ರಂಗ ಚಟುವಟಿಕೆಗಳಿಂದ ತನ್ನದೇ ಆದ ಸದಭಿರುಚಿಯ ಕಲಾಸಕ್ತನ್ನು ರಂಗಮನೆ ಸೃಷ್ಟಿಸಿಕೊಂಡಿದೆ.

ರಂಗಮನೆ ಅಸಾಧಾರಣ ಕಲಾಪ್ರತಿಭೆ, ಸದಾ ಕ್ರಿಯಾಶೀಲ, ರಂಗದಶಾವತಾರಿಯೆಂದೇ ಹಿರಿಮೆಗೆ ಪಾತ್ರರಾದ ಜೀವನ್ರಾಂ ಅವರ ಕನಸಿನ ಕೂಸು. ಹದಿನೇಳು ವರ್ಷದ ಹಿಂದೆ ಹುಟ್ಟಿದ ರಂಗಮನೆ ಜೀವನ್ರಾಂ ಅವರ ಬದ್ಧತೆ, ಕಲಾಪ್ರಜ್ಞೆ, ಸಂಘಟನಾ ಸೂಕ್ಷ್ಮತೆಯಿಂದ ಇಂದಿಗೂ ಅದೇ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಸದಾ ಹೊಸತನಕ್ಕೆ ತುಡಿಯುತ್ತಾ, ತಮ್ಮ ಕಲಾಪ್ರೌಢಿಮೆ, ಪರಿಶ್ರಮಗಳಿಂದ ಹೊಸಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಾ ರಂಗಮನೆಯಲ್ಲಿ ಕಲಾಸಕ್ತ ಪ್ರೇಕ್ಷಕರ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ವಾಗಿಸಿದ್ದು ಜೀವನರಾಂ ಅವರ ಜಾಣ್ಮೆ.
ಇಡೀ ರಂಗಮನೆಯ ಪರಿಸರದಲ್ಲಿ ಸಂಸ್ಕೃತಿಯ ರಿಂಗಣ. ಕಿಟಕಿ, ಗೋಡೆ, ಬಾಗಿಲು, ಗೇಟುಗಳಲ್ಲಿ ಮಾಂತ್ರಿಕ ಸ್ಪರ್ಶ. ಅಂಗಳದ ಒಂದು ಬದಿಯಲ್ಲಿ ಯಕ್ಷಲೋಕದ ದಂತಕತೆ ಬಣ್ಣದ ಮಾಲಿಂಗರ ಮಹಿರಾವಣ ವೇಷದ ಆಳೆತ್ತರದ ಪ್ರತಿಮೆ. ಇನ್ನೊಂದು ಬದಿಯಲ್ಲಿ ನಟರಾಜನ ಬೃಹತ್ ಮೂರ್ತಿ. ಮನೆಯ ಪಕ್ಕದಲ್ಲಿಯೇ ಸುಸಜ್ಜಿತ ರಂಗವೇದಿಕೆ. ಮನೆಯವರೆಲ್ಲರೂ ಸ್ವತಃ ಕಲಾವಿದರು, ಕಲಾರಾಧನೆಯ ಮನಸ್ಥಿತಿಯುಳ್ಳವರು. ಇಷ್ಟು ಸಾಕಲ್ಲವೇ, ಮನೆಯೊಂದು ಸಂಸ್ಕೃತಿಯ ತಾಣವಾಲು, ಕಲೆಯ ಮೆರುಗು ಹೊಂದಲು.
ರಂಗಮನೆ ಚಿಣ್ಣರ ಮೇಳ:
ರಂಗಮನೆಯ ಬೇಸಿಗೆ ಶಿಬಿರಚಿಣ್ಣರ ಮೇಳ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಆರಂಭದಲ್ಲಿ ಬೇರೆ ಬೇರೆಯವರ ಮನೆಯಂಗಳದಲ್ಲಿ ನಡೆಯುತ್ತಿದ್ದ ಈ ಶಿಬಿರ ಇಂದು ರಂಗಮನೆಯ ಪರಿಸರದಲ್ಲೇ ನಡೆಯುತ್ತಿದೆ. ನಾಟಕ, ನೃತ್ಯ, ಸಂಗೀತ, ಅಭಿನಯ, ಪ್ರಸಾದನದ ಜೊತೆಗೆ ಜಾದೂ, ಕಸದಿಂದ ರಸ, ಮಾತು, ಹರಟೆ, ತೋಟ, ಕಾಡು ಸುತ್ತಾಟ ಹೀಗೆ ಏಳೆಂಟು ದಿನ ನಡೆಯುವ ಈ ಶಿಬಿರಕ್ಕೆ ಇಡೀ ಕರ್ನಾಟಕದಿಂದ ಮಕ್ಕಳು ಶಿಬಿರಾರ್ಥಿಗಳಾಗಿ ಹಾಜರಿರುತ್ತಾರೆ. ಮೊದಲಿಗೆ ಮೂವತ್ತು ಜನರಿದ್ದ ಮಕ್ಕಳು ಈಗ ಮುನ್ನೂರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುತ್ತಾರೆ. ಜೀವನ್ರಾಂ ಅವರ ಗರಡಿಯಲ್ಲಿ ಪಳಗಿದ ಸಾವಿರಾರು ಮಕ್ಕಳು ಇಂದು ದೇಶಾದ್ಯಂತ ಒಂದಿಲ್ಲೊಂದು ಕಲೆಯ ಮೂಲಕ ತಮ್ಮನ್ನು ತೊಡಗಿಸಿಕೊಂಡು, ರಂಗಮನೆಯ ಛಾಪು ಮೂಡಿಸುತ್ತಿದ್ದಾರೆ.

ರಂಗಮನೆ ಹುಟ್ಟಿದ್ದು ಹೇಗೆ?

‘‘2002ರ ಸಮಯಕ್ಕೆ ರಂಗಮನೆ ಹುಟ್ಟಿತು. ಅಂದಿನ ಸಮಯಕ್ಕೆ ರಂಗಮನೆಯ ಹುಟ್ಟು ಅನಿವಾರ್ಯವಾಗಿತ್ತು. ದೀರ್ಘ ಕಾಲದ ತಂದೆಯ ಅನಾರೋಗ್ಯ ನನ್ನನ್ನು ಕಂಗೆಡಿಸಿತ್ತು. ಮೂಲತಃ ಯಕ್ಷಗಾನ ಕಲಾವಿದರಾದ ಅವರು, 36 ವರ್ಷ ಮೇಳದ ಕಲಾವಿದರಾಗಿ ತಿರುಗಾಟ ಮಾಡಿದವರು. ಇದ್ದಕ್ಕಿದ್ದಂತೆ ಪಾರ್ಶ್ವವಾಯುಪೀಡಿತರಾಗಿ ಹಾಸಿಗೆ ಹಿಡಿದರು. ಯಾವ ಮದ್ದು, ಮಾಟ, ಮಂತ್ರ ಅವರ ರೋಗವನ್ನು ಶಮನ ಮಾಡಲಿಲ್ಲ. ಆದರೆ ಸಾಂಸ್ಕೃತಿಕವಾಗಿ ಮಾತನಾಡಿದಾಗ, ಯಕ್ಷಗಾನದ ಬಗ್ಗೆ ಮಾತನಾಡುತ್ತಿದ್ದಾಗ, ಯಕ್ಷಗಾನ ಕಲಾವಿದರು ಬಂದು ಮಾತನಾಡಿಸುತ್ತಿದ್ದಾಗ ಅವರಲ್ಲಿ ಚೈತನ್ಯ ಮೂಡುತ್ತಿತ್ತು. ಯಾವುದೇ ಮದ್ದಿನಿಂದಾಗದ ಪ್ರತಿಕ್ರಿಯೆ ಈ ಸಂದರ್ಭ ಅವರಲ್ಲಿ ಆಗುತ್ತಿತ್ತು. ಇದನ್ನು ಗಮನಿಸಿದ ನಾನು ಆ ವಾತಾವರಣವನ್ನು ಬದಲಾಯಿಸುವ ನಿರ್ಧಾರ ಕೈಗೊಂಡು, ಇದ್ದ ಸ್ವಲ್ಪಜಾಗವನ್ನು ಮಾರಿ ಬೇರೆ ಮನೆ ಕಟ್ಟಿದೆ. ಮನೆ ಕಟ್ಟುವಾಗ ಅಪ್ಪ ಪ್ರೀತಿಸುತ್ತಿದ್ದ ಕಲೆ, ಚಿತ್ರಕಲೆಯನ್ನು ಒಳಗೊಳ್ಳುವಂತೆ ಕಟ್ಟಿದೆ. ಮನೆಯಲ್ಲಿಯೇ ಸದಾ ಸಾಂಸ್ಕೃತಿಕ ವಾತಾವರಣ ಬೆಳೆಯುವಂತೆ ಮಾಡಿದೆ. ಪ್ರಾರಂಭದಲ್ಲಿ ತಂದೆಯೊಂದಿಗೆ ಪಾತ್ರಮಾಡಿದ ಕಲಾವಿದರನ್ನು ಕರೆಸಿ ಮನೆಯ ಪರಿಸರದಲ್ಲೇ ಇರುವ ಸ್ಥಳದಲ್ಲಿ ಅವರಿಂದ ಕಾರ್ಯಕ್ರಮ ಮಾಡಿಸಿದೆ.
 ಒಂದು ಕಾರ್ಯಕ್ರಮದಿಂದಾಗಿ ಅವರಲ್ಲಿ ಅಲ್ಲಿಯತನಕ ಕಾಣದ ಬದಲಾವಣೆಯನ್ನು ಕಾಣುವಂತಾಯಿತು. ಅದನ್ನು ಸೂಕ್ಷ್ಮವಾಗಿ ಗಮನಿಸಿದ ನಾನು, ನಿರಂತರ ಹತ್ತು ತಿಂಗಳು ಕಾರ್ಯಕ್ರಮ ಆಗುವಂತೆ ಮಾಡಿದೆ. ಇದು ಅವರಲ್ಲಿ ಮಹತ್ತರವಾದ ಬದಲಾವಣೆಯನ್ನು ಮಾಡಿತು. ಹೊರ ಪ್ರಪಂಚದ ಸಂಪರ್ಕವಿಲ್ಲದೆ ಹತ್ತು ವರ್ಷ ಹಾಸಿಗೆ ಹಿಡಿದು ಮಲ, ಮೂತ್ರ ಮಾಡಲೂ ಇನ್ನೊಬ್ಬರನ್ನು ಆಶ್ರಯಿಸುತ್ತಿದ್ದ ಅವರು, ಮಲಗಿದಲ್ಲಿಂದ ತೆವಳಿದರು, ಕುಂಟುತ್ತಾ ನಡೆದರು, ಓಡಾಡಿದರು, ಮಾತನಾಡದಿದ್ದವರು ಮಾತನಾಡಲು ಶುರು ಮಾಡಿದರು. ಅವರಿಗೇ ತಿಳಿಯದೆ ಮದ್ದು, ತಾಯಿತ, ಭಸ್ಮ ಅವರ ಕೋಣೆಯಿಂದ ಮಾಯವಾಯಿತು. ರಂಗಮನೆ ಅವರಿಗೆ ಮರು ಜನ್ಮ ನೀಡಿತು. ಅನಾರೋಗ್ಯದಿಂದ ಜೀವಶವದಂತಿದ್ದ ಅವರಿಂದು ಲವಲವಿಕೆಯಿಂದ ಓಡಾಡುವಂತಾಗಿದ್ದಾರೆ. ಇದಕ್ಕಿಂತ ದೊಡ್ಡ ಲಾಭ ಇನ್ಯಾವುದಿದೆ ನನಗೆ. ಸ್ಮಶಾನಮೌನದಂತಿದ್ದ ಮನೆಯಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಯಿತು. ಆ ನಂತರ ರಂಗಮನೆಯಲ್ಲಿ ನಿರಂತರ ಕಾರ್ಯಕ್ರಮ ಆಯೋಜಿಸಲು ತೊಡಗಿದೆ. ಪರಿಣಾಮ ಇಂದು ಅದೆಷ್ಟೋ ರಂಗಾಸಕ್ತರ ಬೆಲೆಕಟ್ಟಲಾಗದ ಪ್ರೀತಿಗೆ ಪಾತ್ರನಾಗಿದ್ದೇನೆ ’’ ಎನ್ನುತ್ತಾರೆ ಜೀವನ್ ರಾಂ.

ಇಂದು ‘ವನಜ ರಂಗಮನೆ ಪ್ರಶಸ್ತಿ 2018’ ಪ್ರದಾನ
ಜೀವನ್ರಾಂ ತಮ್ಮ ತಾಯಿ ವನಜಾಕ್ಷಿಯವರ ನೆನಪಿಗೆ ಯಕ್ಷಗಾನದ ನಿಷ್ಠಾವಂತ ಸಾಧಕರಿಗೆ ಐದು ವರ್ಷಗಳಿಂದ ವನಜ ರಂಗ ಮನೆ ಪ್ರಶಸ್ತಿಯನ್ನು ನೀಡುತ್ತಿದ್ದಾರೆ.
ಇಂದು ಸುಳ್ಯದ ರಂಗಮನೆಯಲ್ಲಿ ಈ ಪ್ರಶಸ್ತಿಯನ್ನು ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕರಾದ ಶ್ರೀಧರ ಹಂದೆಯವರಿಗೆ ನೀಡಿ ಪುರಸ್ಕರಿಸಲಾಗುತ್ತದೆ. ತಮ್ಮ ತಾಯಿಯ ನೆನಪನ್ನು ಬಿಚ್ಚಿಡುತ್ತಾ ಜೀವನ್ರಾಂ, ‘‘ಅಮ್ಮ ನಮ್ಮನ್ನಗಲಿ ಐದು ವರ್ಷವಾಯಿತು. ಅವಳು ಕಲಾವಿದೆಯಲ್ಲ, ಎಂದೂ ವೇದಿಕೆ ಏರಿದವಳಲ್ಲ. ಆದರೂ ಯಕ್ಷಗಾನ, ನಾಟಕವನ್ನು ಇನ್ನಿಲ್ಲದಂತೆ ಪ್ರೀತಿಸಿದವಳು. ನೆಲದ ಮೊದಲ ಪ್ರೇಕ್ಷಕಿಯಾಗಿ ರಾತ್ರಿಯಿಡೀ ಕುಳಿತು ಯಕ್ಷಗಾನ ನೋಡುತ್ತಿದ್ದಳು. ಮನೆಗೆ ಬರುತ್ತಿದ್ದ ಕಲಾವಿದರಿಗೆ ಹೊಟ್ಟೆ ತುಂಬಾ ಬಡಿಸುವುದೆಂದರೆ ಅವಳಿಗೆ ಸಂಭ್ರಮ. ಯಕ್ಷಗಾನ ಕಲಾವಿದನೊಂದಿಗೆ ಬದುಕು ಕಟ್ಟಿದವಳು. ರಂಗಮನೆಗೆ ಬರುತ್ತಿದ್ದ ಮಕ್ಕಳ ಪಾಲಿಗೆ ಅಮ್ಮನಂತಿದ್ದಳು. ಹಾಗಾಗಿ ಅವಳ ನೆನಪಿಗೆ ಈ ಪ್ರಶಸ್ತಿಯನ್ನು ಹಿರಿಯ, ನಿಷ್ಠಾವಂತ ಯಕ್ಷಗಾನ ಕಲಾವಿದರಿಗೆ ಐದು ವರ್ಷಗಳಿಂದ ನೀಡುತ್ತಿದ್ದೇವೆ.’’ ಎನ್ನುತ್ತಾರೆ.

Writer - ವಿಶ್ವನಾಥ ಪಂಜಿಮೊಗರು

contributor

Editor - ವಿಶ್ವನಾಥ ಪಂಜಿಮೊಗರು

contributor

Similar News

ಜಗದಗಲ
ಜಗ ದಗಲ