ವ್ಯಾಪಾರ ಸಮರ: ಅಮೆರಿಕದಿಂದ ಮಾಂಸ ಆಮದು ಸ್ಥಗಿತಗೊಳಿಸಲು ಚೀನಾ ಚಿಂತನೆ

Update: 2018-08-12 17:38 GMT

ಶಾಂೈ, ಆ.12: ಚೀನಾದ ವಿರುದ್ಧ ವ್ಯಾಪಾರ ಸಮರ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರದ ಹಿಂದಿನ ಮುಖ್ಯ ಉದ್ದೇಶ ಚೀನಾ ಅಮೆರಿಕದಿಂದ ವಸ್ತುಗಳನ್ನು ಖರೀದಿಸಬೇಕುಂಬುದೇ ಆಗಿದೆ. ಆದರೆ ಇದಕ್ಕೆ ಒಲ್ಲದ ಚೀನಾ ಅಮೆರಿಕದಿಂದ ಮಾಂಸ ಆಮದು ಮಾಡಿಕೊಳ್ಳವುದನ್ನೇ ನಿಲ್ಲಿಸಲು ಚಿಂತನೆ ನಡೆಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಸದ್ಯ ಅಮೆರಿಕದಿಂದ ಆಮದು ಮಾಡಲ್ಪಡುವ ದನ ಮತ್ತು ಹಂದಿ ಮಾಂಸಗಳ ಮೇಲಿನ ಶುಲ್ಕವನ್ನು ಹೆಚ್ಚುಗೊಳಿಸುವ ಮೂಲಕ ಚೀನಾದ ಆಮದುದಾರರು ಅಮೆರಿಕವನ್ನು ಹೊರತುಪಡಿಸಿ ಇತರ ದೇಶಗಳಿಂದ ಮಾಂಸ ಆಮದು ಮಾಡಿಕೊಳ್ಳುವಂತೆ ಮಾಡಲಾಗಿದೆ. ಈ ಬೆಳವಣಿಗೆಯು ಅಮೆರಿಕದಿಂದ ಆಮದು ಮಾಡಲ್ಪಡುವ ಇತರ ವಸ್ತುಗಳ ಮೇಲೂ ಮುಂದುವರಿಯುವ ನಿರೀಕ್ಷೆಯಿದೆ. ಚೀನಾದ ಈ ನಿರ್ಧಾರದಿಂದ ಮಾಂಸ ರಫ್ತು ಮಾಡುವ ಇತರ ದೇಶಗಳಿಗೆ ಲಾಭವಾಗಲಿದೆ. ಸದ್ಯ ನಡೆಯುತ್ತಿರುವ ವ್ಯಾಪಾರ ಸಮರದ ಪರಿಣಾಮ ಏನಾಗಬಹುದು ಎಂದು ಹೇಳುವುದು ಕಷ್ಟ. ಆದರೆ ಯುಎಸ್ ರಫ್ತುದಾರರು ಚೀನಾದ ವ್ಯಾಪಾರವನ್ನು ಮಾತ್ರ ಕಳೆದುಕೊಳ್ಳುವುದು ನಿಶ್ಚಿತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಶುಲ್ಕ ಏರಿಕೆಗೂ ಮುನ್ನ ಅಮೆರಿಕ ಚೀನಾಕ್ಕೆ 140 ಮಿಲಿಯನ್ ಡಾಲರ್ ಮೊತ್ತದ ಪೋರ್ಕ್, ಬೀಫ್ ಹಾಗೂ ಇತರ ಉಪ-ಉತ್ಪನ್ನಗಳನ್ನು ರಫ್ತು ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸುಲಭವಾಗಿ ಪಡೆಯಬಹುದಾದ ಮಾಂಸ, ಸೋಯಬೀನ್, ಗೋಧಿ ಮತ್ತು ಪೆಟ್ರೋಕೆಮಿಕಲ್ಸ್‌ಗಳನ್ನು ಅಮೆರಿಕದಿಂದ ಆಮದು ಮಾಡುವುದನ್ನು ನಿಲ್ಲಿಸುವ ಬಗ್ಗೆ ಚಿಂತಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಅಷ್ಟುಮಾತ್ರವಲ್ಲದೆ, ಚೀನಾ ಅಮೆರಿಕದಿಂದ ಬೋಯಿಂಗ್ ವಿಮಾನ ಮತ್ತು ಕಾರುಗಳ ಖರೀದಿಯ ಮೇಲೂ ನಿರ್ಬಂಧ ಹೇರುವ ಸಾಧ್ಯತೆಯಿದ್ದು ಅವುಗಳ ಬದಲಿಗೆ ಯೂರೋಪ್ ಮತ್ತು ಜಪಾನ್‌ನಿಂದ ಏರ್‌ಬಸ್ ಜೆಟ್‌ಗಳು ಮತ್ತು ಆಟೊಗಳನ್ನು ಖರೀದಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News