ಆ.13: ನೂತನ ಪಾಕಿಸ್ತಾನ ಸಂಸತ್‌ನ ಮೊದಲ ಸಭೆ

Update: 2018-08-12 17:43 GMT

ಇಸ್ಲಾಮಾಬಾದ್, ಆ.12: ಪಾಕಿಸ್ತಾನದಲ್ಲಿ ಹೊಸದಾಗಿ ಚುನಾಯಿತಗೊಂಡಿರುವ ಸಂಸತ್‌ನ ಮೊದಲ ಸಭೆಯು ಸೋಮವಾರ ನಡೆಯಲಿದ್ದು ನೂತನ ಸರಕಾರಕ್ಕೆ ಅಧಿಕಾರವನ್ನು ಹಸ್ತಾಂತರಿಸುವ ಮತ್ತು ಬದಲಾವಣೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರಪತಿ ಮಮ್ನೂನ್ ಹುಸೇನ್ ಈಗಾಗಲೇ ರಾಷ್ಟ್ರೀಯ ಶಾಸನ ಸಭೆಯ ಪ್ರಥಮ ಅಧಿವೇಶನಕ್ಕೆ ಸಮಯ ನಿಗದಿಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾನೂನಿನ ಪ್ರಕಾರ, ಹಿಂದಿನ ಶಾಸನಸಭೆಯ ಸ್ಪೀಕರ್ ಅಯಾಝ್ ಸಾದಿಕ್ ನೂತನವಾಗಿ ಆಯ್ಕೆಯಾಗಿರುವ ಸಂಸದರಿಗೆ ಪ್ರಮಾಣ ವಚನ ಬೋಧನೆ ಮಾಡಲಿದ್ದಾರೆ. ನಂತರ ಸಭಾಪತಿ ಮತ್ತು ಉಪಸಭಾಪತಿಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಸದ್ಯ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷವು ಚುನಾವಣೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು 116 ಸ್ಥಾನಗಳನ್ನು ಬಾಚಿಕೊಂಡಿದೆ. ಒಂಬತ್ತು ಸ್ವತಂತ್ರ ಅಭ್ಯರ್ಥಿಗಳ ಬೆಂಬಲವನ್ನು ಪಡೆದುಕೊಂಡಿರುವ ಪಿಟಿಐಯ ಸಂಖ್ಯಾಬಲ 125ಕ್ಕೆ ತಲುಪಿತ್ತು. ಇದೀಗ ಚುನಾವಣಾ ಆಯೋಗ ಮಹಿಳೆಯರಿಗಾಗಿ ಮೀಸಲಿಡಲಾಗಿರುವ 60 ಸ್ಥಾನಗಳ ಪೈಕಿ 28 ಸ್ಥಾನಗಳನ್ನು ಪಿಟಿಐಗೆ ನೀಡಿದೆ. ಜೊತೆಗೆ ಅಲ್ಪಸಂಖ್ಯಾತರಿಗಾಗಿ ಮೀಸಲಿಡಲಾಗಿರುವ ಹತ್ತು ಸ್ಥಾನಗಳ ಪೈಕಿ ಐದು ಸ್ಥಾನಗಳನ್ನು ಪಿಟಿಐಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಪಿಟಿಐ ಪಕ್ಷದ ಸಂಖ್ಯಾಬಲ 158ಕ್ಕೆ ತಲುಪಿದೆ. ಆದರೂ ಬಹುಮತಕ್ಕೆ ಇನ್ನೂ ಅದಕ್ಕೆ 14 ಸ್ಥಾನಗಳ ಅಗತ್ಯವಿದೆ. 342 ಸದಸ್ಯಬಲದ ಪಾಕಿಸ್ತಾನ ರಾಷ್ಟ್ರೀಯ ಶಾಸನಸಭೆಯಲ್ಲಿ ಬಹುಮತಕ್ಕೆ 172 ಸ್ಥಾನಗಳನ್ನು ಪಡೆಯುವ ಅಗತ್ಯವಿದೆ. ತಮ್ಮ ಪಕ್ಷಕ್ಕೆ ಬಹುಮತವಿದೆ. ಹಾಗಾಗಿ ಇಮ್ರಾನ್ ಖಾನ್ ಮುಂದಿನ ಪ್ರಧಾನಿಯಾಗಿಯೂ ಅಸದ್ ಕೈಝರ್ ಸಭಾಪತಿಯಾಗಿಯೂ ಅಧಿಕಾರ ಸ್ವೀಕರಿಸುವುದು ಖಚಿತ ಎಂದು ಪಿಟಿಐ ವಕ್ತಾರ ಫವದ್ ಚೌದರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News