ಬಿಜೆಪಿ ವಿರುದ್ಧದ ಹೋರಾಟಕ್ಕೆ ಸೂಕ್ತ ಮೈತ್ರಿ ರೂಪಿಸುವುದು ಕಾಂಗ್ರೆಸ್ ಕರ್ತವ್ಯ-ಬಿ.ಕೆ.ಹರಿಪ್ರಸಾದ್

Update: 2018-08-12 18:30 GMT

ಎಲ್ಲ ವಿರೋಧ ಪಕ್ಷಗಳು ಹಿಂಜರಿದ ಬಳಿಕ ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆಯಾದವರು ಪಕ್ಷದ ಹಿರಿಯ ನಾಯಕ
ಬಿ.ಕೆ. ಹರಿಪ್ರಸಾದ್. ‘‘ಇದು ಕಠಿಣ ಹೋರಾಟ ಎಂದು ತಿಳಿದಿದ್ದರೂ, ಪ್ರಜಾಪ್ರಭುತ್ವವನ್ನು ಉಳಿಸುವ ತತ್ವಕ್ಕೆ ಈ ಚುನಾವಣೆಯಲ್ಲಿ ಹೋರಾಡಲು ನಿರ್ಧರಿಸಿತು’’ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಶ್ರೀಪರ್ಣಾ ಚಕ್ರವರ್ತಿಯವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ:

♦ಇದು ಸೋಲುವ ಚುನಾವಣೆ ಎಂದು ಖಚಿತವಾಗಿ ಗೊತ್ತಿದ್ದರೂ ನಿಮ್ಮನ್ನು ಕಣಕ್ಕೆ ಇಳಿಸಲಾಯಿತು. ಇಷ್ಟಾಗಿಯೂ ನಿಮ್ಮ ಪಕ್ಷ ಚುನಾವಣಾ ಹೋರಾಟಕ್ಕೆ ನಿರ್ಧರಿಸಿತು. ಇದರ ಮಹತ್ವ ಏನು?
-ಇದು ಸೋಲುವ ಯುದ್ಧವಲ್ಲ, ಆದರೆ ಕಠಿಣ ಸಮರ. ನಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ. ಕೆಲವರು ಪ್ರಬಲರು ಎಂಬ ಕಾರಣಕ್ಕಾಗಿ ನಾವು ಸ್ಪರ್ಧೆಯಿಂದ ಹಿಮ್ಮೆಟ್ಟುವುದಿಲ್ಲ. ಈ ಸರಕಾರಕ್ಕೆ ಸ್ವಲ್ಪವಾದರೂ ಒಮ್ಮತ ರೂಪಿಸುವ ಪ್ರಜ್ಞೆ ಇದ್ದಿದ್ದರೆ ಕಳೆದ ನಾಲ್ಕು ವರ್ಷಗಳಿಂದ ಯಾವುದರಲ್ಲೂ ಒಮ್ಮತ ಇಲ್ಲ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಸರಕಾರದ ಬಹುತೇಕ ನಿರಂಕುಶವಾದಿ ಪ್ರವೃತ್ತಿ ನಮ್ಮನ್ನು ಪ್ರಜಾಪ್ರಭುತ್ವ ಬಲಗೊಳಿಸುವ ತೀರ್ಮಾನ ಕೈಗೊಳ್ಳಲು ಸಜ್ಜುಗೊಳಿತು.
♦ನಿಮ್ಮ ಹೆಸರು ಹೇಗೆ ನಿರ್ಧರಿಸಲಾಯಿತು?
-ರಾಜ್ಯಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿದ್ದು, ಸಣ್ಣ ಪಕ್ಷಗಳಿಗೆ ಹೋರಾಡಬೇಕೇ ಅಥವಾ ಬೇಡವೇ ಎಂಬ ಆಯ್ಕೆಯ ಅವಕಾಶವನ್ನು ಕಲ್ಪಿಸುವುದು ನಮ್ಮ ಹೊಣೆಗಾರಿಕೆ. ಕಾಂಗ್ರೆಸ್ ಪಕ್ಷ, ದ್ರಾವಿಡ ಮುನ್ನೇಟ್ರ ಕಳಗಂ ಮತ್ತು ತೃಣಮೂಲ ಕಾಂಗ್ರೆಸ್‌ಗೆ ಅವಕಾಶ ನೀಡಿತು. ನಾವು ಕಣಕ್ಕೆ ಇಳಿಯುವುದಿಲ್ಲ ಎಂದು ಈ ಪಕ್ಷಗಳು ಸ್ಪಷ್ಟಪಡಿಸಿದ ಬಳಿಕ, ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿತು. ಬಳಿಕ ಕಾಂಗ್ರೆಸ್ ಪಕ್ಷ ನನ್ನನ್ನು ಕಣಕ್ಕೆ ಇಳಿಸಲು ನಿರ್ಧರಿಸಿತು.
♦ಪರಿಗಣಿಸಲ್ಪಟ್ಟ ಇತರ ಅಭ್ಯರ್ಥಿಗಳು ಯಾರು?
-ಡಿಎಂಕೆಯ ತಿರುಚಿ ಶಿವ, ಎನ್‌ಸಿಪಿಯ ವಂದನಾ ಚವ್ಹಾಣ್ ಮತ್ತು ತೃಣಮೂಲ ಕಾಂಗ್ರೆಸ್‌ನ ಸುಖೇಂದು ಶೇಖರ್ ರಾಯ್ ಅವರ ಉಮೇದುವಾರಿಕೆಯನ್ನೂ ಪರಿಗಣಿಸಲಾಗಿತ್ತು.
♦ಶರದ್ ಪವಾರ್ ಅವರಲ್ಲದೇ ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಜತೆ ಮಾತನಾಡಿದವರು ಯಾರು? ಕಾಂಗ್ರೆಸ್ ಮುಖಂಡರು ಅವರೊಂದಿಗೆ ಚರ್ಚಿಸಿದ್ದರೇ?
-ಹೌದು. ಪಿ.ಚಿದಂಬರಂ, ಕಪಿಲ್ ಸಿಬಲ್ ಮತ್ತು ಕಮಲನಾಥ್ ಅವರು ಪಟ್ನಾಯಕ್ ಅವರನ್ನು ಭೇಟಿ ಮಾಡಿದ್ದರು. ವಿಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ಸ್ಥಿತಿಯಲ್ಲಿ ನಮ್ಮ ಪಕ್ಷ ಇಲ್ಲ ಎಂದು ಬಿಜೆಡಿ ಸ್ಪಷ್ಟಪಡಿಸಿತ್ತು.
♦ನಿಮ್ಮ ಹೆಸರು ಘೋಷಣೆಯಾದ ಬಳಿಕವೇ ಅವರನ್ನು ಭೇಟಿ ಮಾಡಲಾಗಿತ್ತೇ?
- ಹೌದು. ಒಡಿಶಾದಲ್ಲಿ ಪಟ್ನಾಯಕ್ ನಮಗೆ ಅವಕಾಶ ಕಲ್ಪಿಸಲು ಇಚ್ಛಿಸಲಿಲ್ಲ. ಜೆಡಿಯು ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಅವರು ಸ್ಪಷ್ಟ ಸುಳಿವು ನೀಡಿದ್ದಾರೆ.
♦ಇತರ ಪಕ್ಷಗಳ ಬಗ್ಗೆ ಏನು ಹೇಳುತ್ತೀರಿ?
- ತೆಲಂಗಾಣ ರಾಷ್ಟ್ರೀಯ ಸಮಿತಿ ಎನ್‌ಡಿಎ ಭಾಗವಾಗಿತ್ತು. ಅವರು ಎನ್‌ಡಿಎ ಜತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದರು. ಅವರು ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆಯೇ ಇರಲಿಲ್ಲ. ಅವರು ಕಾಂಗ್ರೆಸ್ ಜತೆ ಕೈಜೋಡಿಸಲಾರರು.
ಆಮ್ ಆದ್ಮಿ ಪಕ್ಷವನ್ನು ತೆಗೆದುಕೊಂಡರೆ ಅದು ದಿಲ್ಲಿ ರಾಜಕೀಯದ ಮೇಲೆ ಅವಲಂಬಿತವಾಗಿದೆ. ಅವರ ಅಸ್ತಿತ್ವ ಇರುವುದೇ ದಿಲ್ಲಿಯಲ್ಲಿ. ಅದು ದಿಲ್ಲಿ ರಾಜಕೀಯದ ಪರಿಧಿಯಲ್ಲೇ ಇದೆ. ನಾವೇನೂ ಮಾಡುವಂತಿಲ್ಲ.
♦ಟಿಡಿಪಿ ಬೆಂಬಲಿಸಿದ್ದರಿಂದ ವಿರೋಧಿ ಬಣದ ಸಾಧ್ಯತೆಗಳಿಗೆ ಇಂಬು ಸಿಕ್ಕಿದಂತಾಗಿದೆಯೇ?
-ಈ ಬಗ್ಗೆ ಯಾರೂ ಯೋಚಿಸುತ್ತಲೇ ಇಲ್ಲ. ಟಿಡಿಪಿ, ಎನ್‌ಡಿಎಯ ಪ್ರಮುಖ ಪಾಲುದಾರ ಪಕ್ಷ. ಅದರಿಂದ ಹೊರಬಂದು ಅವರು ಈಗ ವಿರೋಧ ಪಕ್ಷಗಳ ಜತೆ ಕೈಜೋಡಿಸಿದ್ದಾರೆ.
♦ಅಂದರೆ ಕಾಂಗ್ರೆಸ್ ಪಕ್ಷ ಏಕೈಕ ದೊಡ್ಡ ವಿರೋಧ ಪಕ್ಷವಾಗಿ ರೂಪುಗೊಂಡಿದೆ..
-ಸಹಜವಾಗಿಯೇ. ಕಾಂಗ್ರೆಸ್ ಎಲ್ಲ ರಾಜ್ಯ ಹಾಗೂ ಗ್ರಾಮಗಳಲ್ಲಿ ಅಸ್ತಿತ್ವ ಹೊಂದಿದೆ. ಮತಗಳ ಲೆಕ್ಕಾಚಾರದಲ್ಲಿ ಇಲ್ಲದಿರಬಹುದು. ಆದರೆ ಖಂಡಿತವಾಗಿ ಸಂಘಟನಾತ್ಮಕವಾಗಿ ಹೊಂದಿದೆ. ನಾವು ಬಿಜೆಪಿ ಜತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನಾವು ನಿಲುವನ್ನು ತೆಗೆದುಕೊಳ್ಳಲೇಬೇಕು ಮತ್ತು ನಾವು ರಾಜ್ಯಸಭೆಯಲ್ಲಿ ಅವರನ್ನು ಎದುರಿಸುವ ನಿರ್ಧಾರ ಕೈಗೊಂಡೆವು. ನೀವು ಹೇಳಿದಂತೆ, ನಮಗೆ ಅಗತ್ಯ ಸಂಖ್ಯೆ ಇಲ್ಲ ಎನ್ನುವುದು ನಮಗೆ ಚೆನ್ನಾಗಿ ತಿಳಿದಿತ್ತು. ಆದರೆ ಹಾಗೆಂದ ಮಾತ್ರಕ್ಕೆ ಸುಲಭವಾಗಿ ಅವರಿಗೆ ಗೆಲ್ಲಲು ಬಿಡುತ್ತೇವೆ ಎಂಬ ಅರ್ಥವಲ್ಲ.
ನಿನ್ನೆ ಮಾತನಾಡಿದ ವ್ಯಕ್ತಿ, ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣವನ್ನು ಆಗಸ್ಟ್ 9ನ್ನು ಉಲ್ಲೇಖಿಸಿಯೇ ಆರಂಭಿಸಿದರು. ಇದು ಸ್ವತಂತ್ರ ಭಾರತಕ್ಕೆ, ಪ್ರಜಾಪ್ರಭುತ್ವಕ್ಕೆ ಮತ್ತು ಸಂವಿಧಾನಕ್ಕೆ ಅಡಿಗಲ್ಲು ಹಾಕಿದ ದಿನ. ಆ ಅಡಿಗಲ್ಲಿನಲ್ಲಿ ಪ್ರಜಾಪ್ರಭುತ್ವ ಈ ದೇಶದಲ್ಲಿ 70 ವರ್ಷಗಳ ಸುದೀರ್ಘ ಕಾಲ ಬೆಳೆದು ನಿಂತಿದೆ. ಪ್ರಜಾಪ್ರಭುತ್ವದ ವಿಶಿಷ್ಟತೆ ಎಂದರೆ, ಆಗಸ್ಟ್ 9ರ ಕ್ರಾಂತಿ ದಿವಸವನ್ನು ವಿರೋಧಿಸಿದ ವ್ಯಕ್ತಿಗಳು ಕೂಡಾ ಇಲ್ಲಿ ಅತ್ಯುನ್ನತ ಹುದ್ದೆಯನ್ನು ಏರಬಹುದು. ಅವರು ಇದನ್ನು ಮರೆತಿದ್ದಾರೆ.
♦ವಿರೋಧ ಪಕ್ಷ ಕಾಂಗ್ರೆಸ್ ಸುತ್ತವೇ ರೂಪುಗೊಳ್ಳಬೇಕು ಎನ್ನುವುದು ಈ ಹೊಸ ಸಮೀಕರಣದ ಅರ್ಥವೇ?
-ಖಂಡಿತ, ಪ್ರಬಲ ರಾಜಕೀಯ ಪಕ್ಷವಾಗಿ ಹೌದು. ಬಿಜೆಪಿಯನ್ನು, ಅದರಲ್ಲೂ ಮುಖ್ಯವಾಗಿ ಮೋದಿಯನ್ನು ಎದುರಿಸಲು ಸೂಕ್ತ ಮೈತ್ರಿ ಹೆಣೆಯಬೇಕಾದ ಹೊಣೆ ಕಾಂಗ್ರೆಸ್ ಪಕ್ಷದ್ದು.
ಕೃಪೆ: deccanchronicle.com

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ