80ನೇ ಎಟಿಪಿ ವರ್ಲ್ಡ್ ಟೂರ್ ಪ್ರಶಸ್ತಿ ಜಯಿಸಿದ ನಡಾಲ್

Update: 2018-08-13 06:52 GMT

ಟೊರಾಂಟೊ, ಆ.13: ಸ್ಪೇನ್‌ನ ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್ 80ನೇ ಎಟಿಪಿ ವರ್ಲ್ಡ್ ಟೂರ್ ಪ್ರಶಸ್ತಿ ಜಯಿಸಿದ್ದಾರೆ.

 ಇಲ್ಲಿ ರವಿವಾರ ನಡೆದ ರೋಜರ್ಸ್ ಕಪ್‌ನ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಶ್ರೇಯಾಂಕರಹಿತ ಗ್ರೀಕ್‌ನ ಶ್ರೇಯಾಂಕರಹಿತ ಸ್ಟೆಫನೊಸ್ ಸಿಟ್ಸಿಪಾಸ್ ಅವರನ್ನು 6-2, 7-6(4) ಸೆಟ್‌ಗಳಿಂದ ಮಣಿಸುವುದರೊಂದಿಗೆ ನಡಾಲ್ ಈ ಸಾಧನೆ ಮಾಡಿದ್ದಾರೆ.

ನಡಾಲ್ ನಾಲ್ಕನೇ ಬಾರಿ ರೋಜರ್ಸ್ ಕಪ್ ಜಯಿಸಿದ್ದು, ಈ ವರ್ಷ ಐದನೇ ಬಾರಿ ಪ್ರಶಸ್ತಿ ಜಯಿಸಿದ್ದಾರೆ. 32ರ ಹರೆಯದ ನಡಾಲ್ ಈ ಹಿಂದೆ ಟೊರೊಂಟೊದಲ್ಲಿ 2008ರಲ್ಲಿ ರೋಜರ್ಸ್ ಕಪ್ ಪ್ರಶಸ್ತಿ ಜಯಿಸಿದ್ದಾರೆ. 2005 ಹಾಗೂ 2013ರಲ್ಲಿ ಮಾಂಟ್ರಿಯಲ್ ಮಾಸ್ಟರ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ವಿಶ್ರಾಂತಿ ಪಡೆದು ಯುಎಸ್ ಓಪನ್‌ಗೆ ತಯಾರಿ ನಡೆಸುವ ಉದ್ದೇಶದಿಂದ ಈ ವಾರ ನಡೆಯುವ ಸಿನ್ಸಿನಾಟಿ ಮಾಸ್ಟರ್ಸ್ ಟೂರ್ನಿಯಿಂದ ದೂರವುಳಿಯಲು ನಡಾಲ್ ನಿರ್ಧರಿಸಿದ್ದಾರೆ.

ಹಾಲೆಪ್‌ಗೆ ಮಹಿಳಾ ಸಿಂಗಲ್ಸ್ ಕಿರೀಟ

ವಿಶ್ವದ ನಂ.1 ಆಟಗಾರ್ತಿ ಸಿಮೊನಾ ಹಾಲೆಪ್ ಅಮೆರಿಕದ ಸ್ಲೋಯಾನೆ ಸ್ಟೀಫನ್ಸ್‌ರನ್ನು 7-6(6), 3-6, 6-4 ಸೆಟ್‌ಗಳಿಂದ ಮಣಿಸುವ ಮೂಲಕ ರೋಜರ್ಸ್ ಕಪ್‌ನಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ರವಿವಾರ ನಡೆದ ಫೈನಲ್‌ನಲ್ಲಿ ಸ್ಟೀಫನ್ಸ್‌ರನ್ನು ಮಣಿಸಿರುವ ರೊಮಾನಿಯಾದ ಆಟಗಾರ್ತಿ ಹಾಲೆಪ್ ಮೂರು ವರ್ಷಗಳಲ್ಲಿ ಎರಡನೇ ಬಾರಿ ಮಾಂಟ್ರಿಯಲ್ ಪ್ರಶಸ್ತಿ ಜಯಿಸಿದ್ದಾರೆ. ಈ ವರ್ಷ ಮುರನೇ ಟ್ರೋಫಿ ತನ್ನದಾಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News