ಐದನೇ ಏಕದಿನ: ಧನಂಜಯಗೆ 6 ವಿಕೆಟ್, ಲಂಕೆಗೆ ಭರ್ಜರಿ ಜಯ

Update: 2018-08-13 18:12 GMT

ಕೊಲಂಬೊ, ಆ.13: ಅಕಿಲಾ ಧನಂಜಯ ಆರು ವಿಕೆಟ್ ಗೊಂಚಲು ಹಾಗೂ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಅಜೇಯ ಅರ್ಧಶತಕ(97)ಕೊಡುಗೆ ನೆರವಿನಿಂದ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 178 ರನ್‌ಗಳಿಂದ ಜಯ ಸಾಧಿಸಿದೆ. ಆತಿಥೇಯರು ಸರಣಿಯಲ್ಲಿ ಸತತ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದರೂ ದಕ್ಷಿಣ ಆಫ್ರಿಕ ತಂಡ 5 ಪಂದ್ಯಗಳ ಏಕದಿನ ಸರಣಿಯನ್ನು 3-2 ಅಂತರದಿಂದ ವಶಪಡಿಸಿಕೊಳ್ಳುವುದನ್ನು ತಡೆಯಲು ಸಾಧ್ಯವಾಗಿಲ್ಲ.

ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಮ್ಯಾಥ್ಯೂಸ್(ಔಟಾಗದೆ 97, 97 ಎಸೆತ, 11 ಬೌಂಡರಿ, 1 ಸಿಕ್ಸರ್), ನಿರೊಶನ್ ಡಿಕ್ವೆಲ್ಲಾ(43,65ಎಸೆತ), ಕುಶಾಲ್ ಮೆಂಡಿಸ್(38)ಹಾಗೂ ಧನಂಜಯ ಡಿಲ್ವಾ(ಔಟಾಗದೆ 30)ಸಾಹಸದಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 299 ರನ್ ಗಳಿಸಿತ್ತು.

ಗೆಲ್ಲಲು 300 ರನ್ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕ ತಂಡಕ್ಕೆ ಧನಂಜಯ(29ಕ್ಕೆ6)ದುಃಸ್ವಪ್ನವಾಗಿ ಕಾಡಿದರು. ಆಫ್ರಿಕ ತಂಡ 24.4 ಓವರ್‌ಗಳಲ್ಲಿ ಕೇವಲ 121 ರನ್‌ಗೆ ಆಲೌಟಾಯಿತು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ ಧನಂಜಯ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 2 ಬಾರಿ ಆರು ವಿಕೆಟ್ ಗೊಂಚಲು ಪಡೆದ ಕೇವಲ ನಾಲ್ಕನೇ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕ ಬ್ಯಾಟಿಂಗ್‌ನಲ್ಲಿ ನಾಯಕ ಕ್ವಿಂಟನ್ ಡಿಕಾಕ್ ಸರ್ವಾಧಿಕ ರನ್(54,57 ಎಸೆತ, 7 ಬೌಂಡರಿ, 1 ಸಿಕ್ಸರ್)ಗಳಿಸಿದ್ದಾರೆ. ಮರ್ಕರಮ್(20) ಹಾಗೂ ಡುಮಿನಿ(12) ಎರಡಂಕೆಯ ಸ್ಕೋರ್ ಗಳಿಸಿದ್ದಾರೆ. ಧನಂಜಯ ಸ್ಪಿನ್ ದಾಳಿಗೆ ದಕ್ಷಿಣ ಆಫ್ರಿಕದ ಅಗ್ರ ಕ್ರಮಾಂಕದ ಐವರು ದಾಂಡಿಗರ ಪೈಕಿ ನಾಲ್ವರು ದಾಂಡಿಗರಾದ ಡಿಕಾಕ್, ಏಡೆನ್ ಮರ್ಕರಮ್, ರೀಝಾ ಹೆಂಡ್ರಿಕ್ಸ್ ಹಾಗೂ ಹೆನ್ರಿಕ್ ಕ್ಲಾಸೆನ್ ಬೇಗನೆ ವಿಕೆಟ್‌ಗಳನ್ನು ಒಪ್ಪಿಸಿದರು. ಆಫ್ರಿಕದ ಅಗ್ರ ಐವರು ದಾಂಡಿಗರಲ್ಲಿ ಡಿಕಾಕ್ ಹೊರತುಪಡಿಸಿ ಉಳಿದ ನಾಲ್ವರು ಒಟ್ಟು 23 ರನ್ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಸೋತಿರುವ ದಕ್ಷಿಣ ಆಫ್ರಿಕ ಇದೀಗ ಏಕದಿನ ಸರಣಿ ಜಯಿಸಿದೆ. ಮಂಗಳವಾರ ಪ್ರೇಮದಾಸ ಸ್ಟೇಡಿಯಂನಲ್ಲಿ ಟ್ವೆಂಟಿ-20 ಪಂದ್ಯವನ್ನಾಡುವ ಮೂಲಕ ಶ್ರೀಲಂಕಾ ಪ್ರವಾಸವನ್ನು ಕೊನೆಗೊಳಿಸಲಿದೆ.

►►ಧನಂಜಯ ಜೀವನಶ್ರೇಷ್ಠ ಸಾಧನೆ

ಐಸಿಸಿ ಏಕದಿನ ರ‍್ಯಾಂಕಿಂಗ್

ದುಬೈ, ಆ.13: ಐಸಿಸಿ ಏಕದಿನ ರ‍್ಯಾಂಕಿಂಗ್ನಲ್ಲಿ ಶ್ರೀಲಂಕಾದ ಸ್ಪಿನ್ನರ್ ಅಕಿಲಾ ಧನಂಜಯ 20 ಸ್ಥಾನ ಭಡ್ತಿ ಪಡೆದು 21ನೇ ರ‍್ಯಾಂಕಿಂಗ್ಗೆ ತಲುಪಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ 29ಕ್ಕೆ 6 ವಿಕೆಟ್ ಸಹಿತ ಒಟ್ಟು 14 ವಿಕೆಟ್‌ಗಳನ್ನು ಪಡೆದಿದ್ದ ಧನಂಜಯ ರ‍್ಯಾಂಕಿಂಗ್ನಲ್ಲಿ ಭಾರೀ ಪ್ರಗತಿ ಸಾಧಿಸಿದ್ದಾರೆ.

ಧನಂಜಯರ ಸಹ ಆಟಗಾರ ತಿಸಾರ ಪೆರೇರ 4 ಸ್ಥಾನ ಭಡ್ತಿ ಪಡೆದು 68ನೇ ಸ್ಥಾನ ತಲುಪಿದ್ದಾರೆ. ಬ್ಯಾಟ್ಸ್ ಮನ್‌ಗಳ ಪೈಕಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಹಾಗೂ ವಿಕೆಟ್‌ಕೀಪರ್-ದಾಂಡಿಗ ನಿರೊಶನ್ ಡಿಕ್ವೆಲ್ಲಾ ರ‍್ಯಾಂಕಿಂಗ್ನಲ್ಲಿ ಏರಿಕೆ ಕಂಡಿದ್ದಾರೆ.

ಮ್ಯಾಥ್ಯೂಸ್ ದ.ಆಫ್ರಿಕ ವಿರುದ್ಧ ಸರಣಿಯಲ್ಲಿ ಒಟ್ಟು 235 ರನ್ ಗಳಿಸಿದ್ದು 2 ಸ್ಥಾನ ಭಡ್ತಿ ಪಡೆದು 25ನೇ ರ‍್ಯಾಂಕಿಂಗ್ ತಲುಪಿದ್ದಾರೆ. ಡಿಕ್ವೆಲ್ಲಾ 4 ಸ್ಥಾನ ಏರಿಕೆ ಕಂಡು 35ನೇ ಸ್ಥಾನದಲ್ಲಿದ್ದಾರೆ. ಸರಣಿಯಲ್ಲಿ ಒಟ್ಟು 227 ರನ್ ಗಳಿಸಿದ್ದ ದ.ಆಫ್ರಿಕದ ಜೆಪಿ ಡುಮಿನಿ 11 ಸ್ಥಾನ ಭಡ್ತಿ ಪಡೆದು 40ನೇ ಸ್ಥಾನಕ್ಕೇರಿದ್ದಾರೆ. ಶ್ರೀಲಂಕಾ ವಿರುದ್ಧ ಸರಣಿ ಜಯಿಸಿದ ಹೊರತಾಗಿಯೂ ಏಕದಿನ ಟೀಮ್ ರ‍್ಯಾಂಕಿಂಗ್ನಲ್ಲಿ ದಕ್ಷಿಣ ಆಫ್ರಿಕ 4ನೇ ಸ್ಥಾನಕ್ಕೆ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News