ಡಿಜಿಟಲ್ ಹಿಂಸೆ ಕೊನೆಯಿಲ್ಲವೇ?

Update: 2018-08-13 18:36 GMT

ಮಾನ್ಯರೇ...

ಇತ್ತೀಚೆಗೆ ಸರಕಾರಿ ನಾಡ ಕಚೇರಿಗಳಲ್ಲಿನ ಡಿಜಿಟಲ್ ಹಿಂಸೆಗಳನ್ನು ಕಾಣುವಾಗ ಬೇಸರವಾಗುತ್ತಿದೆ. ಸರಕಾರದ ಯೋಜನೆಗಳನ್ನೇ ನಂಬಿಕೊಂಡು ಬಂದಿರುವ ಬಡವರ್ಗದ ಜನರು, ಸರಕಾರವು ಕೆಲವು ಯೋಜನೆಗಳನ್ನು ಘೋಷಣೆ ಮಾಡಿದಾಗ ಕಡತಗಳನ್ನು ಹಿಡಿದುಕೊಂಡು ಸರಕಾರಿ ಕಚೇರಿಗಳಲ್ಲಿ ತಮ್ಮ ಸಮಯ, ಶಕ್ತಿ, ಸಹನೆಗಳನ್ನು ವ್ಯಯಿಸಿಯೂ ದಾಖಲೆಗಳನ್ನು ಸರಕಾರಕ್ಕೆ ಆನ್‌ಲೈನ್ ಮೂಲಕ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಕಾರಣ ಡಿಜಿಟಲೀಕರಣದ ವೈಫಲ್ಯ.

ರೇಶನ್ ಕಾರ್ಡ್, ಆಧಾರ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಇತ್ಯಾದಿಗಳು ಆನ್‌ಲೈನ್ ಮೂಲಕ ಸುಲಭವಾಗಿ ಸಲ್ಲಿಸುವ ಹಾಗೂ ಪಡೆಯುವ ಪದ್ಧತಿಯಿದೆ. ತಂತ್ರಜ್ಞಾನದಲ್ಲಿ ಜಗತ್ತು ಮುಂದುವರಿದ ಈ ಕಾಲದಲ್ಲಿಯೂ ನಮ್ಮ ನಾಡ ಕಚೇರಿಯಲ್ಲಿ ಸೇವೆ ನೀಡುವ ನೆಮ್ಮದಿ ಕೇಂದ್ರ, ಜನ ಸ್ನೇಹಿ ಕೇಂದ್ರಗಳು ಪರದಾಡುವ ದೃಶ್ಯವು ರೇಜಿಗೆ ಹುಟ್ಟಿಸುತ್ತಿದೆ. ಕಂಪ್ಯೂಟರ್ ಕೈ ಕೊಟ್ಟಿದೆ, ಸರ್ವರ್ ಬ್ಯುಸಿ, ಸರ್ವರ್ ದುರಸ್ತಿಯಲ್ಲಿದೆ, ವಿದ್ಯುತ್ ಇಲ್ಲ, ಫಿಂಗರ್ ಜನರೇಟ್‌ಆಗುತ್ತಿಲ್ಲ... ಇತ್ಯಾದಿ ಸಬೂಬುಗಳನ್ನು ನೀಡಿ ಜನರನ್ನು ಸತಾಯಿಸುತ್ತಿರುವುದು ಸರಕಾರಿ ಕಚೆೇರಿಗಳ ವೈಫಲ್ಯಗಳಿಗೆ ಹಿಡಿದ ಕನ್ನಡಿಯಾಗಿದೆ. ಈ ಡಿಜಿಟಲ್ ಹಿಂಸೆಯಿಂದಾಗಿ ಮಕ್ಕಳ ಪೋಷಕರು ತಮ್ಮ ಕೆಲಸ ಕಾರ್ಯಗಳಿಗೆ ರಜೆ ಹಾಕಿಯೂ ಕೆಲಸ ಪೂರ್ಣಗೊಳ್ಳದೆ ಪರದಾಡಬೇಕಾಗಿದೆ. ಹಾಗೆಯೇ ಮಹಿಳೆಯರು, ಹಿರಿಯ ನಾಗರಿಕರು ಕೂಡ ಸಾಲುಗಳಲ್ಲಿ ನಿಂತು ಸುಸ್ತಾಗಿ ಕೆಲಸವಾಗದೆ ವಾಪಸಾಗುವುದು ನಿತ್ಯದ ಗೋಳು. ಸರಕಾರವು ಕಡತಗಳನ್ನು ಆಥವಾ ವ್ಯವಹಾರಗಳನ್ನು ಡಿಜಟಲೀಕರಣಗೊಳಿಸುವ ಮೊದಲು ಅದಕ್ಕೆ ಪೂರಕ ಆಧುನಿಕ ತಂತ್ರಜ್ಞಾನ, ಸಲಕರಣೆಗಳಂತಹ ವ್ಯವಸ್ಥೆಯನ್ನು ಕಲ್ಪಿಸಬೇಕು. ಜನಪ್ರತಿನಿಧಿಗಳು ಇನ್ನೂ ಈ ಡಿಜಿಟಲ್ ದೌರ್ಜನ್ಯದ ಬಗ್ಗೆ ಮಾಹಿತಿಹೊಂದಿಲ್ಲ ಹಾಗೂ ಪರಿಹರಿಸಲು ಖಂಡಿತವಾಗಿಯೂ ಪ್ರಯತ್ನಿಸಿಲ್ಲವೆಂಬುದಕ್ಕೆ ಈಗ ಕಾರ್ಯಾಚರಿಸುತ್ತಿರುವ ಡಿಜಿಟಲ್ ಹಿಂಸಾ ಕೇಂದ್ರಗಳೇ ಪ್ರತ್ಯಕ್ಷ ಸಾಕ್ಷಿ.

 -ನವಾಝ್ ತುಂಬೆ

Writer - -ನವಾಝ್ ತುಂಬೆ

contributor

Editor - -ನವಾಝ್ ತುಂಬೆ

contributor

Similar News