ಭಾರತದ ಕರೆನ್ಸಿ ನೋಟುಗಳು ಚೀನಾದಲ್ಲಿ ಮುದ್ರಣಗೊಳ್ಳಲಿವೆ ಎಂಬ ವರದಿ ನಿರಾಧಾರ: ಕೇಂದ್ರ

Update: 2018-08-14 16:45 GMT

ಹೊಸದಿಲ್ಲಿ,ಆ.14: ಚೀನಾದಲ್ಲಿ ಭಾರತೀಯ ಕರೆನ್ಸಿ ನೋಟುಗಳು ಮುದ್ರಣಗೊಳ್ಳುತ್ತಿವೆ ಎಂಬ ವರದಿಗಳು ಸಂಪೂರ್ಣವಾಗಿ ನಿರಾಧಾರವಾಗಿವೆ. ಭಾರತೀಯ ಕರೆನ್ಸಿ ನೋಟುಗಳು ಭಾರತ ಸರಕಾರದ ಮತ್ತು ಆರ್‌ಬಿಐನ ಕರೆನ್ಸಿ ಮುದ್ರಣಾಲಯಗಳಲ್ಲಿ ಮಾತ್ರ ಮುದ್ರಣಗೊಳ್ಳುತ್ತಿವೆ ಎಂದು ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರಗಳ ವಿಭಾಗದ ಕಾರ್ಯದರ್ಶಿ ಸುಭಾಷಚಂದ್ರ ಗರ್ಗ್ ಅವರು ಸೋಮವಾರ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಚೀನಾ ಈವರೆಗೂ ಈ ವರದಿಗಳನ್ನು ನಿರಾಕರಿಸಿಲ್ಲ.

‘ಈ ಸುದ್ದಿಯು ನಿಜವಾಗಿದ್ದರೆ ಅದು ರಾಷ್ಟ್ರೀಯ ಭದ್ರತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಪಾಕಿಸ್ತಾನಿ ರೂಪಾಯಿಯನ್ನು ಉಲ್ಲೇಖಿಸಬೇಕಿಲ್ಲ. ಅದು ನಕಲು ಮಾಡಲು ಸುಲಭವಾಗಿದೆ ’ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಟ್ವೀಟಿಸಿದ್ದನ್ನು ಚೀನಿ ಸರಕಾರಿ ಮಾಧ್ಯಮಗಳು ಪ್ರಕಟಿಸಿವೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆಯೂ ತರೂರ್ ಸರಕಾರವನ್ನು ಕೇಳಿಕೊಂಡಿದ್ದರು.

 ಆದರೆ ಚೀನಾದ ವಾಣಿಜ್ಯ ಸಚಿವಾಲಯದ ಅಧೀನದಲ್ಲಿರುವ ಚೀನಾ ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಸಹಕಾರ ಅಕಾಡೆಮಿಯ ಉಪ ನಿರ್ದೇಶಕ ಬಾಯ್ ಮಿಂಗ್ ಅವರು ತರೂರ್ ವ್ಯಕ್ತಪಡಿಸಿರುವ ಭೀತಿಯನ್ನು ತಳ್ಳಿಹಾಕಿದ್ದಾರೆ.

 ಇದು ಅತ್ಯಂತ ಹಾಸ್ಯಾಸ್ಪದ ಹೇಳಿಕೆಯಾಗಿದೆ ಎಂದು ಬೀಜಿಂಗ್‌ನ ಪತ್ರಿಕೆಯೊಂದಕ್ಕೆ ತಿಳಿಸಿರುವ ಅವರು,ಚೀನಾ ತನ್ನ ಪ್ರಭಾವವನ್ನು ವಿಸ್ತರಿಸಲು ಅಥವಾ ಭದ್ರತೆಯಲ್ಲಿನ ಲೋಪದೋಷಗಳನ್ನು ಬಹಿರಂಗಗೊಳಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿಲ್ಲ ಎಂದು ಸುಳಿವು ನೀಡಿದರು.

ಯಾವುದೇ ದೇಶದ ಕರೆನ್ಸಿಯನ್ನು ಆ ದೇಶದ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದಿರುವ ಮಿಂಗ್,‘ಚೀನಾದೊಂದಿಗೆ ಸಹಕಾರವು ಇನ್ನೊಂದು ದೇಶದ ಹಿತಾಸಕ್ತಿಗಳ ಮೇಲೆ ಪರಿಣಾಮವನ್ನುಂಟು ಮಾಡುವುದಿಲ್ಲ. ಚೀನಾಕ್ಕೆ ವಿಧೇಯವಾಗಿರುವುದಕ್ಕೆ ಇತರ ದೇಶಗಳು ಋಣದಲ್ಲಿರಲು ಅದು ಅವಕಾಶ ನೀಡಿಲ್ಲ. ನಮಗೆ ಆ ಸಾಮರ್ಥ್ಯವಿಲ್ಲ ಮತ್ತು ಅದನ್ನು ಮಾಡಲು ನಾವು ಬಯಸುವುದೂ ಇಲ್ಲ. ಪರಸ್ಪರ ಲಾಭವನ್ನಷ್ಟೇ ನಾವು ನೋಡುತ್ತೇವೆ ’ಎಂದಿದ್ದಾರೆ.

 ಈ ವಾದವು ‘ಚೀನಾ ಬೆದರಿಕೆ ಸಿದ್ಧಾಂತ’ದ ಪ್ರತಿರೂಪವಾಗಿದೆ,ಆದರೆ ಈ ಬಾರಿ ಅದು ಕರೆನ್ಸಿ ಕ್ಷೇತ್ರಕ್ಕೆ ವಿಸ್ತರಿಸಿದೆ ಎಂದು ಹೇಳಿದ್ದಾರೆ.

 ಚೀನಾ ಯಾವುದೇ ದೇಶಕ್ಕಾಗಿ ಕರೆನ್ಸಿ ನೋಟುಗಳನ್ನು ಮುದ್ರಿಸಿದರೂ ಅದು ಆ ದೇಶದ ಭದ್ರತಾ ಹಿತಾಸಕ್ತಿಗಳಿಗೆ ಧಕ್ಕೆಯನ್ನುಂಟು ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ ನೋಟುಗಳ ಮುದ್ರಣಗಳ ಹೇಳಿಕೆಯ ಕುರಿತು ಈವರೆಗಿನ ಚೀನಾದ ಏಕೈಕ ಹೇಳಿಕೆಯು ಅದು ಭಾರತಕ್ಕಾಗಿ ನೋಟುಗಳನ್ನು ಮುದ್ರಿಸುತ್ತಿದೆಯೇ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.

ಚೈನಾ ಬ್ಯಾಂಕ್‌ನೋಟ್ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೋರೇಷನ್ ಭಾರತ ಸೇರಿದಂತೆ ಹಲವಾರು ದೇಶಗಳ ನೋಟುಗಳನ್ನು ಮುದ್ರಿಸುತ್ತಿದೆ ಎಂದು ಹಾಂಗ್‌ಕಾಂಗ್‌ನ ಸೌಥ್ ಚೈನಾ ಮಾರ್ನಿಂಗ್ ಪೋಸ್ಟ್ ರವಿವಾರ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News