ಕ್ಸಿನ್‌ಜಿಯಾಂಗ್‌ನಲ್ಲಿ ಮರುಶಿಕ್ಷಣ ಶಿಬಿರಗಳಿಲ್ಲ: ವಿಶ್ವಸಂಸ್ಥೆಗೆ ಚೀನಾದ ಪ್ರತಿಕ್ರಿಯೆ

Update: 2018-08-14 17:01 GMT

ಬೀಜಿಂಗ್, ಆ. 14: ಲಕ್ಷಾಂತರ ಉಯಿಘರ್ ಮುಸ್ಲಿಮರನ್ನು ಮರುಶಿಕ್ಷಣ ಶಿಬಿರಗಳಲ್ಲಿ ಇರಿಸಲಾಗಿದೆ ಎಂಬ ವರದಿಗಳನ್ನು ಚೀನಾ ನಿರಾಕರಿಸಿದೆ. ತನ್ನ ವಾಯುವ್ಯದ ಕ್ಸಿನ್‌ಜಿಯಾಂಗ್ ಉಯಿಘರ್ ಸ್ವಾಯತ್ತ ವಲಯದಲ್ಲಿ ‘ಇಂಥ ಯಾವುದೇ ಸಂಗತಿ’ಗಳು ನಡೆಯುತ್ತಿಲ್ಲ ಎಂದು ಅದು ಹೇಳಿದೆ.

 ಸಣ್ಣಪುಟ್ಟ ಅಪರಾಧಗಳನ್ನು ಮಾಡಿದವರಿಗೆ ಜೀವನೋಪಾಯ ಗಳಿಸುವ ಕಲೆಗಳನ್ನು ಕಲಿಸುವುದಕ್ಕಾಗಿ ಚೀನಾ ‘ವೃತ್ತಿಪರ ಶಿಕ್ಷಣ ಮತ್ತು ಉದ್ಯೋಗ ಕೇಂದ್ರ’ಗಳನ್ನು ಸ್ಥಾಪಿಸಿದೆ ಎಂದು ಚೀನಾದ ಅಧಿಕಾರಿಗಳು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಗೆ ತಿಳಿಸಿದ್ದಾರೆ.

ಈ ವಲಯದಲ್ಲಿ ಹೇರಲಾಗಿರುವ ಬುರ್ಖಾ ನಿಷೇಧವನ್ನೂ ಚೀನಾ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಇದು ಸ್ಥಳೀಯ ಪದ್ಧತಿಗಳಿಗೆ ವಿರುದ್ಧವಾಗಿದೆ ಹಾಗೂ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಕ್ಸಿನ್‌ಜಿಯಾಂಗ್ ವಲಯದ ಲಕ್ಷಾಂತರ ಉಯಿಘರ್ ಮುಸ್ಲಿಮರನ್ನು ಮರುಶಿಕ್ಷಣ ಕೇಂದ್ರಗಳಿಗೆ ಕಳುಹಿಸಲಾಗಿದೆ ಎಂಬ ಹಲವಾರು ವರದಿಗಳಿಗೆ ಚೀನಾದ ಮೊದಲ ಅಧಿಕೃತ ಪ್ರತಿಕ್ರಿಯೆ ಇದಾಗಿದೆ.

 ಕಳೆದ ವಾರ, ಜನಾಂಗೀಯ ತಾರತಮ್ಯ ನಿರ್ಮೂಲನೆ ಸಮಿತಿಯ ಉಪಾಧ್ಯಕ್ಷೆ ಗೇ ಮೆಕ್‌ಡೋಗಲ್, ಕ್ಸಿನ್‌ಜಿಯಾಂಗ್ ಉಯಿಘರ್ ಸ್ವಾಯತ್ತ ವಲಯವು ‘ಬೃಹತ್ ಬಂಧನ ಕೇಂದ್ರ’ವಾಗಿ ಪರಿವರ್ತನೆಗೊಳ್ಳುತ್ತಿರುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News