ವಿಯೆನ್ನಾ ‘ಜಗತ್ತಿನ ಜೀವಿಸಲು ಅತ್ಯುತ್ತಮ ನಗರ’

Update: 2018-08-14 17:11 GMT

ಲಂಡನ್, ಆ. 13: ಆಸ್ಟ್ರಿಯ ರಾಜಧಾನಿ ವಿಯೆನ್ನಾ ಆಸ್ಟ್ರೇಲಿಯದ ಮೆಲ್ಬರ್ನ್ ನಗರವನ್ನು ಹಿಂದಿಕ್ಕಿ ‘ಜಗತ್ತಿನ ಜೀವಿಸಲು ಅತ್ಯುತ್ತಮ ನಗರ’ವಾಗಿದೆ.

ಸೋಮವಾರ ಬಿಡುಗಡೆ ಮಾಡಲಾದ ನೂತನ ವಾರ್ಷಿಕ ಸಮೀಕ್ಷೆಯಲ್ಲಿ ವಿಯೆನ್ನಾ ವಿಜಯಿಯಾಗಿ ಹೊರಹೊಮ್ಮಿದೆ. ಈ ಸ್ಥಾನವನ್ನು ಮೆಲ್ಬರ್ನ್ ಸತತ 7 ವರ್ಷಗಳ ಕಾಲ ತನ್ನ ಹಿಡಿತದಲ್ಲಿ ಹೊಂದಿತ್ತು.

ಎಕನಾಮಿಸ್ಟ್ ಇಂಟಲಿಜನ್ಸ್ ಯೂನಿಟ್ ಸಿದ್ಧಪಡಿಸಿದ ನೂತನ ಪಟ್ಟಿಯಲ್ಲಿ ಯುರೋಪಿಯನ್ ನಗರವೊಂದು ಅಗ್ರಸ್ಥಾನ ಪಡೆದಿರುವುದು ಇದೇ ಮೊದಲ ಬಾರಿಯಾಗಿದೆ.

ಜೀವನ ಮಟ್ಟ, ಅಪರಾಧ, ಸಾರಿಗೆ ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಲಭ್ಯತೆ ಹಾಗೂ ರಾಜಕೀಯ ಮತ್ತು ಆರ್ಥಿಕ ಸ್ಥಿರತೆ ಮುಂತಾದ ಮಾನದಂಡಗಳನ್ನು ಪರಿಗಣಿಸಿ ಪ್ರತಿ ವರ್ಷ 140 ನಗರಗಳಿಗೆ ಅಂಕಗಳನ್ನು ನೀಡಲಾಗುತ್ತದೆ.

ಈ ಬಾರಿ ವಿಯೆನ್ನಾ 100ರಲ್ಲಿ 99.1 ಅಂಕಗಳನ್ನು ಗಳಿಸಿದರೆ, ಮೆಲ್ಬರ್ನ್ 98.4 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನಿಯಾಗಿದೆ. ಜಪಾನ್‌ನ ಒಸಾಕ ನಗರ 3ನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯ, ಕೆನಡ ದೇಶಗಳ ಪ್ರಾಬಲ್ಯ

ಮೊದಲ 10ರ ಪಟ್ಟಿಯಲ್ಲಿ ಆಸ್ಟ್ರೇಲಿಯ ಮತ್ತು ಕೆನಡ ದೇಶಗಳು ಪ್ರಾಬಲ್ಯ ಸಾಧಿಸಿವೆ. ಪಟ್ಟಿಯಲ್ಲಿ ಆಸ್ಟ್ರೇಲಿಯದ ನಗರಗಳಾದ ಮೆಲ್ಬರ್ನ್, ಸಿಡ್ನಿ (5ನೇ ಸ್ಥಾನ) ಮತ್ತು ಅಡಿಲೇಡ್ (10ನೇ ಸ್ಥಾನ)ಗಳು ಸ್ಥಾನ ಗಳಿಸಿದರೆ, ಕೆನಡದ ಕ್ಯಾಲ್ಗರಿ (4ನೇ ಸ್ಥಾನ), ವ್ಯಾಂಕೂವರ್ (6ನೇ) ಮತ್ತು ಟೊರಾಂಟೊ (ಜಂಟಿ 7ನೇ ಸ್ಥಾನ)ಗಳು ಕಾಣಿಸಿಕೊಂಡಿವೆ.

ಜಪಾನ್ ರಾಜಧಾನಿ ಟೋಕಿಯೊ ಕೂಡ ಜಂಟಿ 7ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News