ಭಾರತಮಾತಾ ಕಿ ಜೈ ಅಂದರೆ?

Update: 2018-08-14 18:35 GMT

ಭಾರತಮಾತೆ ದೇಶದ ಯಾವುದೇ ಒಂದು ಜನಾಂಗದ ಅಥವಾ ಸಿದ್ಧಾಂತದ ಮಾತೆ ಅಲ್ಲ. ಭಾರತಮಾತೆ ಭಾರತೀಯರನ್ನು ಮಾತ್ರ ಹಡೆದಿಲ್ಲ. ಸಾಗರವನ್ನು, ಹಳ್ಳ ಕೊಳ್ಳ ನದಿಗಳನ್ನು, ಹಿಮಾಲಯವನ್ನು, ಬೆಟ್ಟ ಗುಡ್ಡ, ಮರುಭೂಮಿ, ಫಲವತ್ತಾದ ಭೂಮಿ, ಸಸ್ಯಲೋಕ, ಪಕ್ಷಿಲೋಕ ಮತ್ತು ಪ್ರಾಣಿಲೋಕವನ್ನೂ ಹಡೆದಿದ್ದಾಳೆ. ಅವಳು ಬಹುರತ್ನಾ ವಸುಂಧರಾ ಆಗಿದ್ದಾಳೆ.

ನಮಿಸುವೆ ಭಾರತಿ ತಾಯಿಗೆ ಸಿರಬಾಗಿ ತಲೆಬಾಗಿ ಮಮತೆಯ ಮೂರುತಿ ನೀನೆಂದಾ 

ಪುಣ್ಯ ಬೇಕು ಈ ಭೂಮಿಯಲಿ ಹುಟ್ಟಲು ಭಾಗ್ಯವಂತರು ನಾವೆಂದಾ ॥

ಮಹ್ಮದ್ ಶರಣರು ಪ್ರೀತಿ ಮಾಡುವ ದಿಕ್ಕದು ಭಾರತ ದೇಶೆಂದಾ 
ಅರಬ್ ದೇಶದಲಿ ಹುಟ್ಟಿದೆ ಮನಸಿಲ್ಲಾ ನನ್ನ ಮನಸು ಭಾರತವೆಂದಾ 
ಅಲೆನಬಿ ಅನ್ಸಾರಿಗಳೆಲ್ಲ ನೆಲೆಸಿದ ಈ ದೇಶ ಬಲು ಛೆಂದಾ ॥

ಮಾವಿಯಾ ಎಜೀದಾ ಕ್ರೂರಿ ನರಹಂತಕರ ಭಯದಿ ಓಡಿದರು ಜನರೆಲ್ಲಾ 
ಆಶ್ರಯ ಕೊಟ್ಟಿತು ಭಾರತ ಭೂಮಿಗೆ ಸಜ್ದಾಮಾಡಿರಿ ಮರಿಬ್ಯಾಡೆಂದಾ 
ಈ ಹಿಂದ್‌ನ ಭೂಮಿ ಬಲು ಛೆಂದಾ ॥

ಅಕ್ಕ ಅಲ್ಲಮರು ಬಸವ ಅಮೀನರು ಹುಟ್ಟಿದ ದ್ರಾವಿಡ ನಾಡೆಂದ 
ತಾಯಿಯ ಮಮತೆಯ ಸರ್ವಜ್ಞ ಭೂಮಿಗೆ ತಲೆ ಬಾಗಿರಿ ಮರಿಬ್ಯಾಡೆಂದಾ 
ಈ ಕರುಣ ಭೂಮಿಯೆ ಗುಣವೆಂದ ॥

ಸಾಲ್ಗುಂದಿಪುರ ಜನ್ಮಭೂಮಿಯ ಈ ಭವ್ಯ ಭಾರತ ದೇಶೆಂದ 
ಗುರುಪೀರಾ ಖಾದರಿ ಹುಟ್ಟಿದ ಭೂಮಿಗೆ ಸಿದ್ಧಪರ್ವತದ ಕೂಸೆೆಂದ 
ಈ ಪುಣ್ಯಭೂಮಿಯೆ ಸ್ವರ್ಗೆಂದಾ ॥
                            -ಗುರು ಖಾದರಿಪೀರಾ

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸಾಲಗುಂದಾ ಗ್ರಾಮದ ಕನ್ನಡದ ಮೊದಲ ಸೂಫಿ ಕವಿ ಗುರು ಖಾದರಿಪೀರಾ (1822-1896) ಅವರು 175 ವರ್ಷಗಳಷ್ಟು ಹಿಂದೆ ಬರೆದ ಕವನವಿದು. ಆಗ ಭಾರತ ಇನ್ನೂ ಬ್ರಿಟಿಷ್ ಸರಕಾರದ ನೇರ ಆಡಳಿತಕ್ಕೆ ಒಳಪಟ್ಟಿದ್ದಿಲ್ಲ. ಈಸ್ಟ್ ಇಂಡಿಯಾ ಕಂಪೆನಿ ಸರಕಾರ ಇಡೀ ದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ತಲ್ಲೀನವಾಗಿತ್ತು. ಇಂಥ ಸಂದರ್ಭದಲ್ಲಿ ಈ ಸೂಫಿಸಂತ ದೇಶಪ್ರೇಮ ವ್ಯಕ್ತಪಡಿಸಿದು್ದ ನಮಗಿಂದು ದಾರಿದೀಪವಾಗಬೇಕಿದೆ.
19ನೇ ಶತಮಾನದಲ್ಲಿ ಭಾರತ ಅನೇಕ ಮಹಾರಾಜರು, ರಾಜರು ಮತ್ತು ಪಾಳೇಯಪಟ್ಟುಗಳಿಂದ ಕಿಕ್ಕಿರಿದು ತುಂಬಿತ್ತು. ಆ ಕಾಲದಲ್ಲೇ ಈ ಸೂಫಿಸಂತ ಭಾರತದ ಬಗ್ಗೆ ವ್ಯಕ್ತಪಡಿಸಿದ ರೀತಿ ಅನನ್ಯವಾಗಿದೆ. ಭಾರತಮಾತೆ ಅವರಿಗೆ ಮಮತೆಯ ಮೂರ್ತಿಯಾಗಿ ಕಾಣುತ್ತಿದ್ದಾಳೆ. ಇಂಥ ತಾಯಿ ಯನ್ನು ಪಡೆದ ನಾವು ಭಾಗ್ಯವಂತರು ಎಂದು ಅವರು ಹರ್ಷೋದ್ಗಾರ ತೆಗೆಯುತ್ತಾರೆ. ಭವ್ಯ ಭಾರತ ದೇಶಕ್ಕೂ ತಮ್ಮ ಪುಟ್ಟ ಹಳ್ಳಿ ಸಾಲಗುಂದಿಪುರಕ್ಕೂ ಸಂಬಂಧ ಕಲ್ಪಿಸುವ ರೀತಿ ಭಾವಪೂರ್ಣವಾಗಿದೆ. ತಮ್ಮ ಜನ್ಮಭೂಮಿ ಯಾದ ಸಾಲಗುಂದಿಪುರದ ಭವ್ಯಭಾರತವನ್ನು ಪುಣ್ಯಭೂಮಿ ಎಂದು ಕೊಂಡಾಡುತ್ತಾರೆ.
ಅಕ್ಕ ಮಹಾದೇವಿ, ಅಲ್ಲಮಪ್ರಭುಗಳು, ಬಸವಣ್ಣನವರು ಮತ್ತು ವಿಜಯಪುರದ ಮಹಾನ್ ಸೂಫಿ ಖ್ವಾಜಾ ಅಮೀನುದ್ದೀನ್‌ಅವರಂಥ ಮಹಾಮಹಿಮರು ಜನ್ಮತಾಳಿದ ಈ ಭೂಮಿಗೆ ತಲೆಬಾಗಲು ಮರೆಯಬೇಡಿರೆಂದು ಖಾದರಿಪೀರಾ ಅವರು ಮನವಿ ಮಾಡುತ್ತಾರೆ.
 ಅಲಿ ಮತ್ತು ಫಾತಿಮಾರ ಮಕ್ಕಳಾದ ಹಸನ್ ಮತ್ತು ಹುಸೈನ್ ನೇತೃತ್ವದಲ್ಲಿ ಜನ ಯಜೀದನ ಸರ್ವಾಧಿಕಾರಿ ಸೈನ್ಯದ ವಿರುದ್ಧ ಪ್ರಜಾಪ್ರಭುತ್ವಕ್ಕಾಗಿ ಇರಾಕ್‌ನ ಕರ್ಬಲಾ ಪ್ರದೇಶದಲ್ಲಿ ಹೋರಾಡಿದರು. ಆ ಯುದ್ಧದಲ್ಲಿ ಹುಸೇನ್ ಹುತಾತ್ಮರಾದರು. ಯುದ್ಧದಲ್ಲಿ ಯಜೀದನ ಸೈನ್ಯ ಮುನ್ನಡೆ ಸಾಧಿಸಿತು. ಆ ವಿಷಮ ಸಂದರ್ಭದಲ್ಲಿ ಅನೇಕರು ಯಜೀದನ ಕ್ರೂರ ಸೈನ್ಯದಿಂದ ತಪ್ಪಿಸಿಕೊಂಡು ಭಾರತದ ಕಡೆಗೆ ಧಾವಿಸಿದರು. ಭಾರತ ಅವರಿಗೆ ಆಶ್ರಯ ಕೊಟ್ಟಿತು. ಅಂಥ ಭಾರತ ಭೂಮಿಗೆ ತಲೆ ಹಚ್ಚಿ ನಮಸ್ಕರಿಸಿರಿ ಎಂದು ಖಾದರಿ ಪೀರಾ ಅವರು ಇತಿಹಾಸವನ್ನು ನೆನಪಿಸುತ್ತ ಹೇಳುತ್ತಾರೆ.
 ಮುಹಮ್ಮದ್ ಪೈಗಂಬರರು ಪ್ರೀತಿಸಿದ ಭಾರತ ದೇಶವಿದು. ‘‘ಅರಬ್ ದೇಶದಲಿ ಹುಟ್ಟಿದೆ ಮನಸಿಲ್ಲಾ ನನ್ನ ಮನಸು ಭಾರತವೆಂದಾ ’’ ಎಂದು ಪೈಗಂಬರರು ಹೇಳಿರುವುದಾಗಿ ಅವರು ಪೈಗಂಬರರ ಹದೀಸ್ (ವಚನ) ಆಧಾರದ ಮೇಲೆ ತಿಳಿಸಿದ್ದಾರೆ. ಇಂಥ ಭಾರತ ದೇಶವನ್ನು ಸರ್ವರೂ ಗೌರವಿಸಬೇಕು ಎಂದು ಅವರು ಸೂಚಿಸಿದ್ದಾರೆ.
19ನೇ ಶತಮಾನದ ಕೊನೆಯ ಅವಧಿಯಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ‘ಭಾರತಮಾತಾ’ ಪರಿಕಲ್ಪನೆ ಮೂಡಿ ಬಂದಿತು. 1873ರಲ್ಲಿ ಕಿರಣಚಂದ್ರ ಬ್ಯಾನರ್ಜಿ ಅವರ ನಾಟಕ ‘ಭಾರತಮಾತಾ’ ಮೊದಲಬಾರಿಗೆ ಪ್ರದರ್ಶನಗೊಂಡಿತು. 1882ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಬರೆದ ‘ಆನಂದಮಠ’ ಕಾದಂಬರಿಯಲ್ಲಿ ‘ವಂದೇ ಮಾತರಂ’ ಸ್ತುತಿ ಪ್ರಕಟವಾಯಿತು. ನಂತರ ಅಬನೀಂದ್ರನಾಥ ಟಾಗೋರ್ ಅವರು ಭಾರತಮಾತೆಯ ಚಿತ್ರ ಬಿಡಿಸಿದರು. ತದನಂತರ ತಮಿಳು ಕವಿ ಸುಬ್ರಹ್ಮಣ್ಯ ಭಾರತಿ ಅವರು ಭಾರತಮಾತೆಯ ಕುರಿತು ಬರೆದರು. ‘‘ಭಾರತಮಾತೆಗೆ ಜಯವಾಗಲಿ ಎಂದರೆ ಭಾರತದ ಜನಸಮುದಾಯಕ್ಕೆ ಜಯವಾಗಲಿ’’ ಎಂದು ಜವಾಹರಲಾಲ ನೆಹರೂ ಅವರು ವಾಖ್ಯಾನಿಸಿದರು. ಆದರೆ ಇವರೆಲ್ಲರಿಗಿಂತ ಮೊದಲೇ ಕನ್ನಡದಲ್ಲಿ ಗುರು ಖಾದರಿಪೀರಾ ಅವರು ಬರೆದದ್ದು ಹೆಮ್ಮೆಯ ವಿಚಾರವಾಗಿದೆ.

 ಮೊದಲ ಹುತಾತ್ಮ:
18ನೇ ಶತಮಾನದಲ್ಲೇ ಫಕೀರ ಮಜ್ನು ಶಾ ಎಂಬ ಸೂಫಿಸಂತ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ವಿರುದ್ಧ ಹೋರಾಟ ಪ್ರಾರಂಭಿಸಿದ. ತನ್ನ 300 ಅನುಯಾಯಿಗಳನ್ನು ಒಗ್ಗೂಡಿಸಿ ಕ್ರಿಸ್ತ ಶಕ 1763ರಲ್ಲೇ ಬ್ರಿಟಿಷರ ವಿರುದ್ಧ ಬಂಡಾಯದ ಧ್ವಜ ಹಾರಿಸಿದ. ಆಗ ಆತನ ಬಲಗೈ ಬಂಟನಾಗಿದ್ದವನು ಭವಾನಿ ಪಾಠಕ್ ಎಂಬ ಸನ್ಯಾಸಿ. ಮಜ್ನು ಶಾ ಮತ್ತು ಭವಾನಿ ಪಾಠಕ್‌ಅವರು ಒಂದಾಗಿ ರೈತರಲ್ಲಿ ಸ್ವಾತಂತ್ರ್ಯದ ಪ್ರಜ್ಞೆ ತುಂಬಿದರು. ಸಂಸ್ಕೃತಿ, ಧರ್ಮ ಮತ್ತು ಭಾವೆಕ್ಯದ ಮಹತ್ವವನ್ನು ತಿಳಿಸಿದರು.
 ಮಹಾನ್ ಕಮಾಂಡರ್ ಇನ್ ಚೀಫ್ ಮಜ್ನು ಶಾ ಸಮರ್ಥ ಸಂಘಟಕನಾಗಿದ್ದ. ಶಸ್ತ್ರಾಸ್ತ್ರಗಳಿಂದ ಸುಸಜ್ಜಿತವಾಗಿದ್ದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ವಿರುದ್ಧ ಹೋರಾಡುತ್ತ ಮುನ್ನಡೆದ. ಭವಾನಿ ಪಾಠಕ್, ದೇವಿ ಚೌಧುರಾಣಿ, ಚಿರಾಗ್ ಅಲಿ, ಕೃಪಾನಾಥ, ನೂರುಲ್ ಮುಹಮ್ಮದ್, ಪೀತಾಂಬರ ಮತ್ತು ಮಜ್ನು ಶಾ ತಮ್ಮ ಮೂಸಾ ಶಾ ಮುಂತಾದವು ಆತನ ವೀರಸಂಗಾತಿಗಳಾಗಿದ್ದರು.
ಮಜ್ನು ಶಾ ಕ್ರಿಸ್ತ ಶಕ 1766ರಲ್ಲಿ ಮೆಕೆಂಜಿ ನೇತೃತ್ವದ ಬ್ರಿಟಿಷ್ ಸೈನ್ಯವನ್ನು ಸೋಲಿಸಿದ. 1769ರಲ್ಲಿ ನಡೆದ ಯುದ್ಧದಲ್ಲಿ ಕಮಾಂಡರ್ ಕೇಥ್‌ನ ಹತ್ಯೆಯಾಯಿತು. 1771ರಲ್ಲಿ ಲೆಫ್ಟಿನೆಂಟ್ ಟೇಲರ್‌ನ ಸೈನ್ಯಕ್ಕೆ ಚಳ್ಳೆಹಣ್ಣು ತಿನ್ನಿಸಿದ. 1776ರಲ್ಲಿ ನಡೆದ ಯುದ್ಧದಲ್ಲಿ ಮತ್ತೆ ಬ್ರಿಟಿಷ್ ಸೈನ್ಯವನ್ನು ಸೋಲಿಸಿದ. ಆಗ ನೂರಾರು ಮಂದಿ ಬ್ರಿಟಿಷ್ ಸೈನಿಕರು ಸತ್ತು ಲೆಫ್ಟಿನೆಂಟ್ ರಾಬರ್ಟ್‌ಸನ್ ತೀವ್ರ ಗಾಯಗೊಂಡ. 1786ನೇ ಡಿಸೆಂಬರ್ 29ರಂದು ಮಜ್ನು ಶಾ, ಬಗುರಾ ಜಿಲ್ಲೆಯ ಮುಂಗ್ರಾ ಗ್ರಾಮದಲ್ಲಿ ಅನಿರೀಕ್ಷಿತವಾಗಿ ಪ್ರತ್ಯಕ್ಷಗೊಂಡು ಬ್ರೆನ್‌ನ ಸೈನ್ಯವನ್ನು ಚಕಿತಗೊಳಿಸಿದ. ಆ ಸಂದರ್ಭದಲ್ಲಿ ಮಜ್ನು ಶಾ ಗಾಯಗೊಂಡ. ಆದರೆ ಎದೆಗುಂದದೆ ಬಿಚ್ಚುಗತ್ತಿಯೊಂದಿಗೆ ತನ್ನ ಕುದುರೆ ಓಡಿಸಿದ. ನಂತರ ತೀವ್ರಗಾಯಗಳಿಂದಾಗಿ ಬಂಗಾಲದ ಮಾಖನಪುರದಲ್ಲಿನ ಗ್ರಾಮವೊಂದರಲ್ಲಿ ಅಸುನೀಗಿದ. ಮಿಡ್ನಾಪುರದಲ್ಲಿ ಆ ಸ್ವಾತಂತ್ರ್ಯವೀರನ ಸಮಾಧಿ ಅನಾಥವಾಗಿ ಉಳಿದಿದೆ. ಆತನ ವೀರಮರಣದ ನಂತರ ತಮ್ಮ ಮೂಸಾ ಶಾ ಹೋರಾಟವನ್ನು ಮುಂದುವರಿಸಿದ. ಹೀಗೆ ಇವರೆಲ್ಲ ಭಾರತಮಾತೆಯನ್ನು ಪ್ರೀತಿಸಿದರು.
 ಎರಡು ನೂರು ವರ್ಷಗಳ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಸಹಸ್ರಾರು ಹಿಂದೂಗಳು ಮುಸ್ಲಿಮರಲ್ಲದೆ ಇತರ ಧರ್ಮಗಳ ಜನರೂ ಹುತಾತ್ಮರಾಗಿದ್ದಾರೆ. ಆರೆಸ್ಸೆಸ್ 1925ರಲ್ಲೇ ಜನ್ಮ ತಾಳಿದರೂ ಆ ಸಂಘಟನೆಯ ಇತಿಹಾಸದಲ್ಲಿ ಒಬ್ಬ ಹುತಾತ್ಮನ ಹೆಸರು ಕೂಡ ಕಂಡುಬರುವುದಿಲ್ಲ! ಆರೆಸ್ಸೆಸ್ ಮೂಲದ ಜನಸಂಘ ಮತ್ತು ಅದರ ಹೊಸ ರೂಪವಾದ ಭಾರತೀಯ ಜನತಾ ಪಕ್ಷಗಳು ಸ್ವಾತಂತ್ರ್ಯಾನಂತರ ಜನ್ಮತಾಳಿವೆ. ಇವರಿಗೆಲ್ಲ ತ್ಯಾಗಬಲಿದಾನಗಳ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲ
ಭಗತ್ ಸಿಂಗ್ ಹಾಗೂ ಅವರ ಸಂಗಾತಿಗಳಾದ ರಾಜಗುರು ಮತ್ತು ಸುಖದೇವ ಅವರನ್ನು 1931ನೇ ಮಾರ್ಚ್ 23ರಂದು ಬ್ರಿಟಿಷ್ ಸರಕಾರ ಗಲ್ಲಿಗೇರಿಸಿತು. ಈ ಹುತಾತ್ಮರಾರೂ ಇವರ ಗುಂಪಿಗೆ ಸೇರಿದವರಲ್ಲ. ಗಲ್ಲಿಗೇರುವ ಕೆಲವೇ ಕ್ಷಣಗಳ ಮೊದಲು ಭಗತ್ ಸಿಂಗ್ ಅವರು ಕಾಮ್ರೇಡ್ ಲೆನಿನ್ ಅವರ ‘ದ ಸ್ಟೇಟ್ ಆ್ಯಂಡ್ ರೆವಲ್ಯೂಶನ್’ ಪುಸ್ತಕವನ್ನು ಓದುವುದರಲ್ಲಿ ತಲ್ಲೀನರಾಗಿದ್ದರು!
 ಸಂಘ ಪರಿವಾರದವರು ತ್ರಿವರ್ಣ ಧ್ವಜ ಹಿಡಿದ ಭಾರತ ಮಾತೆಯ ಬಗ್ಗೆ ಚಿಂತಿಸುವುದಿಲ್ಲ. ಭಾರತ ಮಾತೆಯ ಕೈಯಲ್ಲಿ ತಮ್ಮ ಸಂಘಟನೆಯ ಭಗವಾಧ್ವಜ ಕೊಟ್ಟು ಜೈ ಎನ್ನುತ್ತಾರೆ. ರಾಷ್ಟ್ರವಾದ ಹಿಟ್ಲರ್ ಮತ್ತು ಮುಸ್ಸೊಲೋನಿ ಅಂಥವರನ್ನು ಸೃಷ್ಟಿಸುತ್ತದೆ. ರಾಷ್ಟ್ರಪ್ರೇಮ ಗಾಂಧೀಜಿ ಮತ್ತು ಖಾನ್ ಅಬ್ದುಲ್ ಗಫ್ಫಾರ್ ಖಾನ್ ಅಂಥವರನ್ನು ಸೃಷ್ಟಿಸುತ್ತದೆ. ರಾಷ್ಟ್ರವಾದಿಗಳು ಮತ್ತೊಂದು ಧರ್ಮವನ್ನು, ಜನಾಂಗವನ್ನು ಮತ್ತು ದೇಶವನ್ನು ದ್ವೇಷಿಸುವುದರಲ್ಲಿ ಪರಿಣತಿ ಪಡೆಯುತ್ತಾರೆ. ಬಹುತ್ವದ ರಕ್ಷಕರಾದ ರಾಷ್ಟ್ರಪ್ರೇಮಿಗಳು ತಮ್ಮ ದೇಶದ ಬಗ್ಗೆ ಪ್ರೀತಿಯನ್ನೂ ಮತ್ತೊಂದು ದೇಶದ ಬಗ್ಗೆ ಗೌರವವನ್ನೂ ಹೊಂದಿರುತ್ತಾರೆ. ಹಿಂದೂ ರಾಷ್ಟ್ರೀಯತೆ ಮತ್ತು ಮುಸ್ಲಿಂ ರಾಷ್ಟ್ರೀಯತೆಯ ಚಿಂತನೆಗಳು ಭಾರತ ರಾಷ್ಟ್ರೀಯತೆಗೆ ಮಾರಕವಾಗಿವೆ ಎಂಬುದರ ಬಗ್ಗೆ ರಾಷ್ಟ್ರಪ್ರೇಮಿಗಳಿಗೆ ಅರಿವಿದೆ.
‘‘ಮಾನವೀಯತೆಯ ಆದರ್ಶಗಳಿಗಿಂತ ದೇಶ ದೊಡ್ಡದು ಎಂಬುದನ್ನು ಕಲಿಸುವ ಶಿಕ್ಷಣದ ವಿರುದ್ಧ ಹೋರಾಡುವುದರ ಮೂಲಕ ನನ್ನ ದೇಶಬಾಂಧವರು ತಮ್ಮ ನಿಜವಾದ ಭಾರತವನ್ನು ಪಡೆಯುವರು’’ ಎಂದು ರವೀಂದ್ರನಾಥ್ ಟಾಗೋರರು ಹೇಳಿದ್ದಾರೆ.

 
ಅಸದುದ್ದೀನ್ ಉವೈಸಿ:
ತರುಣ ಪೀಳಿಗೆಯಲ್ಲಿ ದೇಶಾಭಿಮಾನ ಮೂಡಿಸುವುದಕ್ಕಾಗಿ ಭಾರತ ಮಾತಾ ಕಿ ಜೈ ಘೋಷಣೆಯನ್ನು ಜನಪ್ರಿಯಗೊಳಿಸುವ ಕುರಿತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ರ ಕರೆಯನ್ನು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸದುದ್ದೀನ್ ಉವೈಸಿ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಉದಗೀರ್‌ನಲ್ಲಿ ಕಳೆದ ಫೆಬ್ರುವರಿ 13ರಂದು ನಡೆದ ರ್ಯಾಲಿವೊಂದರಲ್ಲಿ ತಿರಸ್ಕರಿಸಿದರು. ಅವರು ಮೋಹನ್ ಭಾಗವತ್‌ಗೆ ಉತ್ತರ ಕೊಡಲು ಹೋಗಿ ಭಾರತದ ಅಸ್ಮಿತೆಯನ್ನೇ ಕಡೆಗಣಿಸಿದರು. ಆ ಮೂಲಕ ದೇಶದಲ್ಲಿ ತಪ್ಪು ಸಂದೇಶ ರವಾನೆ ಮಾಡಿದರು. ಭಾರತಮಾತೆ ಸಂವಿಧಾನದಲ್ಲಿ ಇರಲಿಕ್ಕಿಲ್ಲ. ಆದರೆ ಜನಮಾನಸದಲ್ಲಿ ಆತ್ಮಗೌರವದ ಪ್ರತಿಮೆಯಾಗಿ ರೂಪುಗೊಂಡಿದ್ದಾಳೆ. ಭಾರತಮಾತೆ ಒಂದು ಮೂರ್ತಿ ಅಲ್ಲ, ಒಂದು ಚಿತ್ರವಲ್ಲ, ಈ ನೆಲದ ಚರಾಚರವೆಲ್ಲದರ ಒಟ್ಟುರೂಪ ಎಂಬ ಕಾವ್ಯಸತ್ಯವನ್ನು ಉವೈಸಿಗೆ ತಿಳಿಸಿ ಹೇಳುವವರು ಯಾರು?
 ಭಾರತಮಾತೆ ದೇಶದ ಯಾವುದೇ ಒಂದು ಜನಾಂಗದ ಅಥವಾ ಸಿದ್ಧಾಂತದ ಮಾತೆ ಅಲ್ಲ. ಭಾರತಮಾತೆ ಭಾರತೀಯರನ್ನು ಮಾತ್ರ ಹಡೆದಿಲ್ಲ. ಸಾಗರವನ್ನು, ಹಳ್ಳ ಕೊಳ್ಳ ನದಿಗಳನ್ನು, ಹಿಮಾಲಯವನ್ನು, ಬೆಟ್ಟ ಗುಡ್ಡ, ಮರುಭೂಮಿ, ಫಲವತ್ತಾದ ಭೂಮಿ, ಸಸ್ಯಲೋಕ, ಪಕ್ಷಿಲೋಕ ಮತ್ತು ಪ್ರಾಣಿಲೋಕವನ್ನೂ ಹಡೆದಿದ್ದಾಳೆ. ಅವಳು ಬಹುರತ್ನಾ ವಸುಂಧರಾ ಆಗಿದ್ದಾಳೆ.
ನದಿಗಳು ಬತ್ತುತ್ತಿವೆ, ರಸಗೊಬ್ಬರ ಮತ್ತು ಕೀಟನಾಶಕಗಳಿಂದ ಭೂಮಿ ವಿಷಮಯವಾಗುತ್ತಿದೆ, ಅರಣ್ಯಗಳು ನಾಶವಾಗುತ್ತಿವೆ, ಪಕ್ಷಿಗಳು ಸಾಯುತ್ತಿವೆ, ವನ್ಯಜೀವಿಗಳಿಗೆ ವನವೇ ಇಲ್ಲದಂತಾಗುತ್ತಿದೆ. ವಾಯು ಮಲಿನಗೊಂಡಿದ್ದು ಜನಸಮುದಾಯ ವಿವಿಧ ರೋಗಗಳಿಂದ ಬಳಲುತ್ತಿದೆ. ಅಂತರ್ಜಲ ಕುಸಿಯುತ್ತಿದೆ. ಜಲಮಾಲಿನ್ಯ, ವಾಯುಮಾಲಿನ್ಯ, ಭೂಮಾಲಿನ್ಯ, ಆಕಾಶಮಾಲಿನ್ಯ ಹೀಗೆ ಎಲ್ಲ ತೆರನಾದ ಅವ್ಯವಸ್ಥೆಯಿಂದಾಗಿ ಭೂಮಿಯ ತಾಪಮಾನ ಹೆಚ್ಚುತ್ತಿದೆ. ಈಗಾಗಲೇ 1.5 ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಇದು 5 ಸೆಲ್ಸಿಯಸ್‌ನಷ್ಟು ಹೆಚ್ಚಾದರೆ ಜಗತ್ತು ಸರ್ವನಾಶದ ಕಡೆಗೆ ಮುನ್ನುಗ್ಗುವುದರಲ್ಲಿ ಸಂಶಯವಿಲ್ಲ. ಆಗ ವಿಶ್ವಮಾತೆಯ ಮಗಳಾದ ಭಾರತಮಾತೆಯ ಪಾಡೇನಾಗಬಹುದು?
 ಕೋಮುವಾದಿಗಳಿಂದಾಗಿ ಭಾರತ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಅವಕಾಶವಾ ದಿಗಳು, ಕೋಮುವಾದಿಗಳು, ಮೂಲಭೂತವಾದಿಗಳು, ಆತಂಕವಾದಿಗಳು ಮತ್ತು ಉಗ್ರಗಾಮಿಗಳಿಂದಾಗಿ ಅಮಾಯಕ ಹಿಂದೂ, ಮುಸ್ಲಿಂ ಮತ್ತು ಇನ್ನಿತರ ಧರ್ಮಗಳ ಜನಸಮುದಾಯ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿ ತಲುಪುತ್ತಿದೆ! ಇಂಥ ಸಂದರ್ಭದಲ್ಲಿ ಭಾರತಮಾತಾ ಕಿ ಜೈ ಎಂದು ಘೋಷಿಸುವುದೆಂದರೆ, ನಮ್ಮ ದೇಶವನ್ನು ಬಹುರಾಷ್ಟ್ರೀಯ ಕಂಪೆನಿಗಳ ಸುಲಿಗೆಯಿಂದ, ಅರಣ್ಯಗಳ್ಳರಿಂದ, ಭ್ರಷ್ಟಾಚಾರಿಗಳಿಂದ, ಭೂಗಳ್ಳರಿಂದ, ಜಾತಿವಾದಿಗಳಿಂದ, ಕೋಮುವಾದಿಗಳಿಂದ, ಉಗ್ರಗಾಮಿಗಳಿಂದ ಮತ್ತು ಮತಾಂಧರಿಂದ ರಕ್ಷಿಸುವುದು ಎಂದೇ ಅರ್ಥವಾಗುತ್ತದೆ.
 (I am firmly persuaded that without the help of practical Islam, theories of Vedantism, however fine and wonderful they may be, are entirely valueless to the vast mass of mankind... For our own motherland a junction of the two great systems, Hinduism and Islam- Vedanta brain and Islam body- is the only hope. I see in my mind’s eye the future perfect India rising out of this chaos and strife, glorious and invincible, with Vedanta brain and Islam body.)   -Collected Works of Vivekananda Volume VI- Page 16
 ರಾಷ್ಟ್ರವಾದ ಮತ್ತು ಕೋಮುವಾದ ಒಂದೇ ನಾಣ್ಯದ ಎರಡು ಮುಖಗಳು. ಅಂತೆಯೆ ಕೋಮುವಾದಿಗಳು ರಾಷ್ಟ್ರವಾದದ ಬಗ್ಗೆ ಬಹಳ ಮಾತನಾಡುತ್ತಾರೆ. ಅವರ ಹುಸಿ ರಾಷ್ಟ್ರವಾದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲೇ ಬಯಲಾಗಿದೆ. ಅವರು ಸ್ವಾಮಿ ವಿವೇಕಾನಂದರ ಬಗ್ಗೆ ಬಹಳ ಮಾತನಾಡುತ್ತಾರೆ. ಆದರೆ ‘‘ಇಸ್ಲಾಮಿನ ವಾಸ್ತವದ ಸಹಾಯವಿಲ್ಲದೆ ವೇದಾಂತದ ಸಿದ್ಧಾಂತಗಳು ನಿರುಪಯುಕ್ತ. ನಮ್ಮ ಮಾತೃಭೂಮಿಗಾಗಿ ಇಸ್ಲಾಮಿನ ದೇಹ ಮತ್ತು ವೇದಾಂತದ ಮೆದುಳು ಅವಶ್ಯವಿದೆ. ಎರಡು ಮಹಾನ್ ವ್ಯವಸ್ಥೆಗಳಾದ ಹಿಂದೂ ಮತ್ತು ಇಸ್ಲಾಂ ಕೂಡಿದಾಗ ಮಾತ್ರ ಭವಿಷ್ಯದಲ್ಲಿ ಭಾರತ ಪರಿಪೂರ್ಣತೆಯನ್ನು ಸಾಧಿಸುವುದು’’ ಎಂದು ಸ್ವಾಮಿ ವಿವೇಕಾನಂದ ಅವರು ಹೇಳಿದ್ದಾರೆ. ಕೋಮುವಾದಿಗಳು ಭಗತ್ ಸಿಂಗ್ ಬಗ್ಗೆ ಬಹಳ ಹೇಳುತ್ತಾರೆ. ಆದರೆ ಭಗತ್ ಸಿಂಗ್ ಅವರು ಕೋಮುವಾದಕ್ಕೆ ತದ್ವಿರುದ್ಧವಾಗಿದ್ದರು. ‘ನಾನೇಕ ನಾಸ್ತಿಕ?’ ಎಂಬ ಪುಸ್ತಿಕೆಯನ್ನೂ ಅವರು ಬರೆದಿದ್ದಾರೆ. ಭಗತ್ ಸಿಂಗ್ ದೃಷ್ಟಿಯಲ್ಲಿ ಭಾರತ ಎಂದರೆ ಅನ್ನ, ಬಟ್ಟೆ ಮತ್ತು ಹಸಿವಿನಿಂದ ಬಳಲುತ್ತಿರುವ ಕೆಟ್ಯಂತರ ಜನರು.
 ಆರೆಸ್ಸೆಸ್ ಸ್ಥಾಪಕ ಡಾ. ಹೆಡಗೇವಾರ್ ಅವರು ಡಾ. ಬಿ.ಎಸ್. ಮೂಂಜೆ ಅವರನ್ನು ಫ್ಯಾಶಿಸ್ಟ್ ಇಟಲಿಗೆ ಕಳುಹಿಸಿದರು. 1931ರಲ್ಲಿ ಇಟಲಿಯ ಫ್ಯಾಶಿಸ್ಟ್ ಸರ್ವಾಧಿಕಾರಿ ಮುಸ್ಸೊಲೋನಿಯನ್ನು ಡಾ. ಮೂಂಜೆ ಭೇಟಿ ಮಾಡಿದರು. ಫ್ಯಾಶಿಸ್ಟ್ ಪಾರ್ಟಿ ದೇಶದ ಯುವಕರಿಗೆ ಕೊಡುತ್ತಿದ್ದ ತರಬೇತಿಯಿಂದ ಮೂಂಜೆ ಬಹಳ ಪ್ರಭಾವಿತರಾದರು. ನಂತರ ಆ ತರಬೇತಿಯನ್ನೇ ಆರೆಸ್ಸೆಸ್‌ನಲ್ಲಿ ಭಟ್ಟಿ ಇಳಿಸಿದರು! ಇಂಥವರಿಗೆ ವಿವೇಕಾನಂದರಂಥವರಾಗಲಿ, ಭಗತ್ ಸಿಂಗ್‌ರಂಥವರಾಗಲಿ ಅರ್ಥವಾಗಲು ಸಾಧ್ಯವೇ?
 ಭಾರತದ ಪ್ರಜಾಪ್ರಭುತ್ವಕ್ಕೆ ಫ್ಯಾಶಿಸ್ಟ್ ಶಕ್ತಿಗಳು ಮಾರಕವಾಗಿವೆ ಎಂಬುದನ್ನು ಭಾರತೀಯರು ಎಷ್ಟು ಬೇಗ ಅರ್ಥ ಮಾಡಿಕೊಳ್ಳುವರೊ ಅಷ್ಟು ಬೇಗ ಭಾರತಕ್ಕೆ ಒಳಿತಾಗುವುದು.
ಬೋಲೋ ಭಾರತ ಮಾತಾ ಕಿ ಜೈ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News

ಜಗದಗಲ
ಜಗ ದಗಲ