ಭಾರತ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರಮೇಶ್ ಪೊವಾರ್ ಆಯ್ಕೆ

Update: 2018-08-14 18:47 GMT

ಮುಂಬೈ, ಆ.14: ಭಾರತದ ಮಾಜಿ ಆಫ್ ಸ್ಪಿನ್ನರ್ ರಮೇಶ್ ಪೊವಾರ್‌ರನ್ನು ಭಾರತದ ಮಹಿಳಾ ತಂಡದ ಪ್ರಧಾನ ಕೋಚ್ ಆಗಿ ಬಿಸಿಸಿಐ ಶುಕ್ರವಾರ ಆಯ್ಕೆ ಮಾಡಿದೆ.

ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ತುಷಾರ್ ಅರೋಥೆ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪೊವಾರ್‌ನ್ನು ಈ ಹಿಂದೆಯೇ ಭಾರತ ಮಹಿಳಾ ತಂಡ ಹಂಗಾಮಿ ಕೋಚ್ ಆಗಿ ನೇಮಿಸಲಾಗಿತ್ತು. ಬಿಸಿಸಿಐ ಪೊವಾರ್‌ನ್ನು ಭಾರತ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಪೊವಾರ್ 2018ರ ನವೆಂಬರ್ 30ರ ತನಕ ಪೂರ್ಣಕಾಲಿಕ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಅಮಿತಾಭ್ ಚೌಧರಿ ತಿಳಿಸಿದ್ದಾರೆ.

ಪೊವಾರ್ ಸೆಪ್ಟಂಬರ್‌ನಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡಕ್ಕೆ ಕೋಚಿಂಗ್ ನೀಡಲಿದ್ದಾರೆ. ಅಕ್ಟೋಬರ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ದ್ವಿಪಕ್ಷೀಯ ಸರಣಿ ಹಾಗೂ ನವೆಂಬರ್‌ನಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆಯುವ ಐಸಿಸಿ ಟ್ವೆಂಟಿ-20 ಮಹಿಳಾ ವಿಶ್ವಕಪ್‌ನಲ್ಲಿ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ಪೊವಾರ್ ಭಾರತದ ಮಹಿಳಾ ತಂಡದ ಕೋಚ್ ಆಗಿ ಆಯ್ಕೆಯಾಗಿರುವ ಮೂರನೇ ಅಭ್ಯರ್ಥಿ. ತುಷಾರ್‌ಗಿಂತ ಮೊದಲು ಪೂರ್ಣಿಮಾ ರಾವ್ ತಂಡದ ಕೋಚ್ ಆಗಿದ್ದರು. ರಾವ್ ಅವರನ್ನು 2017ರ ಮಹಿಳಾ ವಿಶ್ವಕಪ್ ಆರಂಭವಾಗಲು ಕೆಲವೇ ತಿಂಗಳು ಬಾಕಿ ಇರುವಾಗ ಹುದ್ದೆಯಿಂದ ಕೆಳಗಿಳಿಸಲಾಗಿತ್ತು.

ಪೊವಾರ್ ಭಾರತದ ಪರ 2004ರಿಂದ 2007ರ ತನಕ 31 ಏಕದಿನ ಪಂದ್ಯಗಳನ್ನು ಆಡಿದ್ದು 34 ವಿಕೆಟ್‌ಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News