ಪಾನವಿರೋಧ ಚಳವಳಿಯ ಕಂಪು ಹರಡಿದ ಕಂಪಲಾಪುರ

Update: 2018-08-15 07:05 GMT

ಪಿರಿಯಾಪಟ್ಟಣ: ಈಚಲ ಪೇಟೆಯಲ್ಲಿ ಮಹಾತ್ಮಾ ಗಾಂಧೀಜಿಯ ಪಾನ ವಿರೋಧ ಚಳವಳಿ ಮಾಡಿದ ಸ್ವಾತಂತ್ರ ಪೂರ್ವದ ಹೋರಾಟದಿಂದ ಹಲವರು ಪ್ರೇರಣೆಗೊಂಡರು ಎಂದು ಮೂಟೆ ರಾಮಣ್ಣ ನೆನಪಿನ ಬುತ್ತಿ ಬಿಚ್ಚಿಟ್ಟರು. ತಾಲೂಕಿನ ಕಂಪಲಾಪುರಕ್ಕೆ ಹೊಂದಿಕೊಂಡಂತೆ ಇರುವ ಹೈಟೆಕ್ ತಂಬಾಕು ಹರಾಜು ಮಾರುಕಟ್ಟೆ ಸ್ವಾತಂತ್ರಪೂರ್ವದಲ್ಲಿ ಈಚಲಪೇಟೆಯಾಗಿತ್ತು.

ಇಲ್ಲಿ ಗಾಂಧೀಜಿ ಈಚಲ ಮರಗಳನ್ನು ನಾಶಪಡಿಸುವ ಮೂಲಕ ಪಾನ ವಿರೋಧ ಚಳವಳಿನಡೆಸಿದರು. ತಾಲೂಕಿನ ಹಲವರು ಗಾಂಧೀಜಿಯ ದಿಟ್ಟತನಕ್ಕೆ ಮನಸೋತು ಹೋರಾಟದಲ್ಲಿ ಪಾಲ್ಗೊಂ ಡಿದ್ದು ಸ್ವತಃ ನೋಡಿದ್ದೇನೆಂದು ರಾಮಣ್ಣ ವಿವರಿಸುತ್ತಾರೆ. ತಾಲೂಕಿನ ಎಸ್.ಎಸ್.ತಿಮ್ಮಶೆಟ್ಟಿ, ಶಿವಯ್ಯ, ಮಲ್ಲಪ್ಪ, ರಾಮಕೃಷ್ಣಯ್ಯ, ಟಿ.ವೆಂಕಟರಾಮು, ಪುಟ್ಟರಾಜಪ್ಪಮತ್ತು ಪಿ.ಟಿ.ಕೆಂಪೇಗೌಡ ಇವರಿಬ್ಬರು ಪಿರಿಯಾಪಟ್ಟಣದವರಾಗಿದ್ದು, ಎಚ್.ಎಂ.ಚೆನ್ನ ಬಸಪ್ಪ, ಇವರ ಮಗ ಎಚ್.ಸಿ. ವಿಶ್ವನಾಥ್ ನಂದಿನಾಥಪುರ, ಆರ್.ಎಸ್.ಸಣ್ಣಪ್ಪಾಜಿ, ಆರ್.ಸೂರ್ಯನಾರಾಯಣ, ಬಿ.ಎಸ್.ಶ್ರೀಕಂಠಯ್ಯ, ಬಿ.ಪಿ.ಸೂರ್ಯನಾರಾಯಣ್ ರಾವ್ , ಉಳಿದ ರಾಚಯ್ಯ ಸಿದ್ದಪ್ಪ ಸೋದರರು ಹಾಗೂ ತಮ್ಮಣ್ಣಾಚಾರ್ ಕೆ.ಆರ್.ವೀರಣ್ಣಯ್ಯ, ಕೆ.ವಿ.ನಾರಾಯಣ್ ರಾವ್ ಸೇರಿದಂತೆ 5 ಮಂದಿ ಕಂಪಲಾಪುರ ಗ್ರಾಮದವರಾಗಿದ್ದು ಸ್ವಾತಂತ್ರ ಹೋರಾಟದಲ್ಲಿ ತೊಡಗಿದ್ದರು.

ಕೆ.ವಿ.ನಾರಾಯಣ ರಾವ್ ಅವರು, 1930ರಲ್ಲಿ ಗಾಂಧೀಜಿ ಕಣ್ಣಾನೂರಿಗೆ ಹೋಗುವ ಮಾರ್ಗಮಧ್ಯದಲ್ಲಿ ಮಾಡಿದ ಭಾಷಣದಿಂದ ಪ್ರಭಾವಿತರಾಗಿ ಕಾಂಗ್ರೆಸ್ ಮುಖಂಡ ಎಚ್.ಕೆ.ವೀರಣ್ಣೇಗೌಡರೊಂದಿಗೆ ಗುರುತಿಸಿಕೊಂಡು 1937ರಲ್ಲಿ ತಾಲೂಕಿನಾದ್ಯಂತ ಹೋರಾಟಕ್ಕಿಳಿದರು. ಸ್ವಇಚ್ಚೆಯಿಂದ ಕಾಂಗ್ರೆಸ್ ಸದಸ್ಯರಾಗಿದ್ದ ಅಮೀರ ಸಾಹೇಬ್ ಮತ್ತು ಅವರ ಅಳಿಯಂದಿರಾದ ಜವಳಿ ವ್ಯಾಪಾರಿಗಳಾದ ಬುಡಾನ್ ಸಾಹೇಬ್, ಪುಟ್ಟರಂಗಪ್ಪ ಒಟ್ಟಾಗಿ ಸ್ವಾತಂತ್ರ ಚಳವಳಿಗೆ ಜಾರಿದರು. ರಾಚಯ್ಯ ಮತ್ತು ಸಿದ್ದಪ್ಪಸೋದರರು ಒಡನಾಡಿಗಳಾಗಿದ್ದು, ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಪಿರಿಯಾಪಟ್ಟಣ ತಾಲೂಕಿನ 14ಕ್ಕೂ ಹೆಚ್ಚು ಮಂದಿ ತೆರೆಮರೆಯಲ್ಲಿ ಹೋರಾಟ ನಡೆಸಿರುವ ಮಹನೀಯರ ಸಾಲಿನಲ್ಲಿರುವುದು ಹೆಮ್ಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News