ಸ್ವಾತಂತ್ರ್ಯಕ್ಕಾಗಿ ಜೀವನ ಮುಡಿಪಾಗಿಟ್ಟ ಕುಳಾಲು-ಅಗರಿ ಮನೆತನ

Update: 2018-08-15 07:11 GMT

ಮಹಾತ್ಮಾ ಗಾಂಧೀಜಿ ಅಸಹಕಾರ ಚಳವಳಿ ಹಮ್ಮಿಕೊಂಡಿದ್ದಾಗ ಮದ್ರಾಸ್‌ನಿಂದ ರೈಲಿನಲ್ಲಿ 1920ರಲ್ಲಿ ಮಂಗಳೂರಿಗೆ ಪ್ರಪ್ರಥಮವಾಗಿ ಆಗಮಿಸಿದ್ದರು. 1920ರ ಆ.19ರಂದು ನಗರದ ನೆಹರೂ ಮೈದಾನದಲ್ಲಿ 10 ಸಾವಿರ ಜನರು ಸೇರಿದ್ದ ಬೃಹತ್ ಕಾರ್ಯಕ್ರಮದಲ್ಲಿ ಗಾಂಧೀಜಿ ಅಸಹಕಾರ ಚಳವಳಿ, ಬ್ರಿಟಿಷರಿಂದ ಶಾಂತಿಯ ಮೂಲಕ ಸ್ವಾತಂತ್ರ್ಯವನ್ನು ಪಡೆಯುವ ಬಗ್ಗೆ ವಿಸ್ತೃತ ಭಾಷಣ ಮಾಡಿದ್ದರು. ಅದೇ ಬೃಹತ್ ಕಾರ್ಯಕ್ರಮದ ವೇದಿಕೆಯಲ್ಲಿ ಖಿಲಾಫತ್ ಚಳವಳಿಯ ನಾಯಕ ಮೌಲಾನಾ ಶೌಕತ್ ಅಲಿ ಅವರೂ ಇದ್ದರು. ಆ ದಿನವೇ ಈಗಿನ ಟ್ಯಾಗೋರ್ ಪಾರ್ಕ್ ಜಾಗದಲ್ಲಿ ಮತ್ತೊಂದು ಸಭೆಯಲ್ಲಿ ಗಾಂಧೀಜಿ ಭಾಗವಹಿಸಿದ್ದರು ಎನ್ನುತ್ತಾರೆ ಪ್ರೊ.ಜಿ.ಆರ್.ರೈ. ಸ್ವಾತಂತ್ರ್ಯದ ಬಳಿಕ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ ಇದೇ ಕೇಂದ್ರ ಮೈದಾನಕ್ಕೆ ಬಂದಿದ್ದರು. ನೆಹರೂ ಅವರ ಭಾಷಣಗಳನ್ನು ಸ್ವಾತಂತ್ರ್ಯ ಹೋರಾಟಗಾರ, ಯಕ್ಷಗಾನ ಪಟು ನಾರಾಯಣ ಎಸ್. ಕಿಲ್ಲೆ ಕನ್ನಡ, ತುಳು ಭಾಷೆಗಳಿಗೆ ಅನುವಾದಿಸುತ್ತಿದ್ದರು. ಎ.ಬಿ.ಮಲ್ಯ, ಶ್ರೀನಿವಾಸ್ ಮಲ್ಯ, ಕೆ.ಎಸ್.ಕಾರ್ನಾಡ್ ಅವರು ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಹೋರಾಡಿದ್ದರು.

ಮಂಗಳೂರು: ಸ್ವಾತಂತ್ರ್ಯ ಸಂಗ್ರಾಮದ ವೇಳೆಯಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಪಾಲ್ಗೊಂಡು ಬ್ರಿಟಿಷರ ದಾಸ್ಯದಿಂದ ಹೊರಬಂದು ಸ್ವಾತಂತ್ರ್ಯ ಪಡೆಯುವಲ್ಲಿ ಯಶಸ್ವಿಯಾದರು. ಇದರಲ್ಲಿ ಕುಳಾಲು- ಅಗರಿ ಮನೆತನದ ಏಳು ಮಂದಿ ತಮ್ಮ ಜೀವನವನ್ನೇ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟಿದ್ದಾರೆ.

ದೇಶಾದ್ಯಂತ ಮಹಾತ್ಮಾ ಗಾಂಧೀಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಅಸಹಕಾರ ಚಳವಳಿಯಲ್ಲಿ ತುಳುನಾಡಿನ ಸ್ವಾತಂತ್ರ್ಯ ಹೋರಾಟಗಾರರು ಮುಂಚೂಣಿಯಲ್ಲಿದ್ದರು. ಅದರಲ್ಲಿ ಕುಳಾಲು- ಅಗರಿ ಮನೆತನವೂ ಒಂದಾಗಿತ್ತು. ಈ ಪೈಕಿ ಕುಳಾಲು ಅಣ್ಣಪ್ಪ ರೈ ಭಂಡಾರಿ, ಅಗರಿ ಲಕ್ಕಪ್ಪ ರೈ, ರಾಮ ರೈ, ಮೂಡುಬಿದಿರೆ ಕಾಂತ ರೈ ಸೇರಿದಂತೆ ಒಟ್ಟು 7 ಮಂದಿ ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಹೋರಾಡಿ, ಜೈಲುವಾಸವನ್ನೂ ಅನುಭವಿಸಿದ್ದರು. ಜೈಲುವಾಸ ಎನ್ನುವುದು ಆಗ ಪ್ರತಿಷ್ಠೆಯ ವಿಷಯವಾಗಿತ್ತು. ಸೆರೆಮನೆಯಿಂದ ಬಿಡುಗಡೆ ಯಾದಾಗ ಅಂತಹವರನ್ನು ಊರಿನ ವತಿಯಿಂದ ಸನ್ಮಾನ ಮಾಡಲಾಗುತ್ತಿತ್ತು. ತಮ್ಮ ಗ್ರಾಮಗಳಲ್ಲದೇ ಸುತ್ತಮುತ್ತಲಿನ ಗ್ರಾಮಗಳಲ್ಲೂ ಅಂತಹವರನ್ನು ಸನ್ಮಾನಿಸಲಾಗುತ್ತಿತ್ತು. ಸನ್ಮಾನದ ಬಳಿಕ ಮತ್ತೆ ಸ್ವಾತಂತ್ರ್ಯದ ಕುರಿತ ಭಾಷಣ, ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಯಥೇಚ್ಛವಾಗಿ ನಡೆಯುತ್ತಿದ್ದವು. ಜಾತ್ರೆ, ಉತ್ಸವಗಳಲ್ಲಿ ಇವರಿಗೆ ವಿಶೇಷ ಮನ್ನಣೆಯಿತ್ತು. ಶಾಲಾ- ಕಾಲೇಜುಗಳಲ್ಲಿಯೂ ವಿದ್ಯಾರ್ಥಿ ಸಂಘಟನೆಗಳಿದ್ದವು. ಸ್ವಾತಂತ್ರ್ಯ ಹೋರಾಟಗಾರರು ಎಲ್ಲ ಶಾಲಾ- ಕಾಲೇಜುಗಳಿಗೂ ಭೇಟಿ ನೀಡಿ ಸ್ವಾತಂತ್ರ್ಯದ ಅರಿವು ಮೂಡಿಸುತ್ತಿದ್ದರು.

ಮಹಾತ್ಮಾ ಗಾಂಧೀಜಿ ದೇಶಾದ್ಯಂತ ಸುತ್ತಾಡಿ ಸ್ವಾತಂತ್ರ್ಯಕ್ಕಾಗಿ ಶಾಂತಿ ಮೂಲಕ ಹೋರಾಡಿದರೆ, ಅವಿಭಜಿತ ದ.ಕ ಜಿಲ್ಲೆಯ ಕುಳಾಲು- ಅಗರಿ ಮನೆತನದ ಏಳು ಮಂದಿ ಸ್ವಾತಂತ್ರ್ಯ ಹೋರಾಟಗಾರರು ಜಿಲ್ಲೆಯಲ್ಲಿ, ಜಿಲ್ಲೆಯ ಸುತ್ತಮುತ್ತಲಿನ ಊರುಗಳಲ್ಲಿ ಸುತ್ತಾಡಿ ಸ್ವಾತಂತ್ರ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಅವರು ಒಮ್ಮೆ ಮನೆಯನ್ನು ತೊರೆದರೆ ತಿಂಗಳವರೆಗೂ ಊರಿನ ಕಡೆಗೆ ಸುಳಿಯುತ್ತಿರಲ್ಲಿಲ್ಲ. ಸ್ವಾತಂತ್ರ್ಯ ಸಂಗ್ರಾಮ, ಉಪ್ಪಿನ ಚಳವಳಿ, ಅಸಹಕಾರ ಚಳವಳಿ, ದೇಶಿ ಉತ್ಪನ್ನಗಳ ಬಳಕೆ ಬಗ್ಗೆ ಊರೂರುಗಳಲ್ಲಿ, ಶಾಲಾ-ಕಾಲೇಜು, ಜನಸಂದಣಿ ಇರುವ ಪ್ರದೇಶದಲ್ಲಿ ಸಭೆ ಸೇರುತ್ತಿದ್ದರು. ತಾವು ಬಂಟ್ಸ್ ಹಾಸ್ಟೆಲ್‌ನಲ್ಲಿದ್ದಾಗ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆವು ಎಂದು ಪ್ರೊ.ಗುತ್ತು ಪೆರುವಾಯಿ ರಘುನಾಥ ರೈ (ಪ್ರೊ.ಜಿ.ಆರ್.ರೈ) ರೋಮಾಂಚನಗೊಂಡು ತಮ್ಮ ನೆನಪುಗಳನ್ನು ಬಿಚ್ಚಿಟ್ಟರು.

ಮತ್ತೊಮ್ಮೆ ಕೇಂದ್ರ ಮೈದಾನದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹೋರಾಟಗಾರರು ಸಭೆ ಸೇರಿದ್ದರು. ಸಹಸ್ರಾರು ಜನರು ಪಾಲ್ಗೊಂಡಿದ್ದರು. ಬ್ರಿಟಿಷ್ ಪೊಲೀಸ್ ಅಧಿಕಾರಿಯ ಅಟ್ಟಹಾಸದಿಂದಾಗಿ ಈ ವೇಳೆ ಉಂಟಾದ ಸಂಘರ್ಷದಲ್ಲಿ ಕಾರ್ಕಳದ ಮಾರಪ್ಪ ಪಕ್ಕಳ ಎಂಬವರು ಲಾಠಿಯ ಪೆಟ್ಟುತಿಂದು ಹುತಾತ್ಮರಾದರು. ‘ಮಹಾಯುದ್ಧದ ವೇಳೆ ಬ್ರಿಟನ್, ಫ್ರಾನ್ಸ್, ರಶ್ಯಾ, ಯುರೋಪ್, ಜರ್ಮನಿ, ಜಪಾನ್, ಇಟಲಿ ಕೂಡಿ ಈ ಲೋಕ ಕಂಟಕರಾಗಿ ಬರುತಿವೆ ನೋಡಿ’ ಎಂದು ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶಿಕ್ಷಕ ನರ್ಕಳ ಮಾರಪ್ಪ ಶೆಟ್ಟರು ಹಾಡನ್ನು ಬರೆದಿದ್ದರು. ಅದು ಆಗಿನ ಸಂದರ್ಭದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿತ್ತು.

ತುಳುನಾಡಿನಲ್ಲಿ 1947 ಆ.15ರ ದಿನ: ಅದು ಆ.15, 1947ರ ದಿನ. ಅಂದು ದೇಶಾದ್ಯಂತ ಸ್ವಾತಂತ್ರೋತ್ಸವದ ಮೊದಲ ದಿನ. ಅವಿಭಜಿತ ದ.ಕ.ದಲ್ಲಿ ಎಲ್ಲ ಶಾಲಾ- ಕಾಲೇಜುಗಳಲ್ಲಿಗೂ ರಜೆಯನ್ನು ಘೋಷಿಸಲಾಗಿತ್ತು. ಬಸ್, ಲಾರಿ, ಕಾರು ಮತ್ತಿತರ ವಾಹನಗಳಲ್ಲಿ ವಿದ್ಯಾರ್ಥಿಗಳು ಊರೂರಿಗೆ ತೆರಳಿ ತಿರುಗಾಡಿ ಸಂತೋಷ ಹಂಚಿಕೊಂಡರು.

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News