ಬ್ರಿಟಿಷರ ವಿರುದ್ಧದ ಹೋರಾಟದ ಕಥೆ ಹೇಳುವ ಫಿರಂಗಿ

Update: 2018-08-15 08:51 GMT

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸಮೀಪದ ಗೂಡಿನಬಳಿ ಎಂಬ ಊರಿನಲ್ಲಿ ಅಳಿದು ಉಳಿದಿರುವ ಫಿರಂಗಿಯೊಂದು ಬ್ರಿಟಿಷರ ವಿರುದ್ಧದ ಸ್ವಾತಂತ್ರ ಹೋರಾಟದ ಕಥೆೆಯನ್ನು ಹೇಳುತ್ತದೆ. ಪಾಣೆಮಂಗಳೂರು ಹಳೇ ಸೇತುವೆಯ ಒಂದು ಪಾರ್ಶ್ವದಲ್ಲಿರುವ ಈ ಗೂಡಿನಬಳಿ ಊರು ನೇತ್ರಾವತಿ ನದಿಯ ತಟದಲ್ಲಿದೆ. ಸೇತುವೆಯ ಒಂದಷ್ಟು ದೂರದಲ್ಲಿ ಇರುವ ಫಿರಂಗಿಯೊಂದು ಇಲ್ಲಿನ ಆಕರ್ಷಣೆಯಾಗಿದ್ದು, ಈ ಫಿರಂಗಿಯನ್ನು ಕೇಂದ್ರೀಕರಿಸಿ ಇಲ್ಲಿನ ಹಿರಿಯರು ಬ್ರಿಟಿಷರ ವಿರುದ್ಧದ ಹಾಗೂ ಸ್ವಾತಂತ್ರ ಹೋರಾಟದ ಒಂದೊಂದು ಕಥೆಯನ್ನು ಹೇಳುತ್ತಾರೆ. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ನೇತ್ರಾವತಿ ನದಿಯ ಮೂಲಕ ಸಂಚಾರಿಸುವ ಬ್ರಿಟಿಷರ ದೋಣಿ ಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಟಿಪ್ಪು ಸುಲ್ತಾನ್, ಬ್ರಿಟಿಷರೇ ನಿರ್ಮಿಸಿದ್ದ ಪಾಣೆಮಂಗ ಳೂರು ಸೇತುವೆಗೆ ತಾಗಿಕೊಂಡೇ ಫಿರಂಗಿ ಗೋಪುರ ನಿರ್ಮಿಸಿದ್ದರು. ಆದರೆ ಟಿಪ್ಪು ಸುಲ್ತಾನರ ಮರಣದ ನಂತರ ಕಾಲ ಕ್ರಮೇಣ ಈ ಫಿರಂಗಿ ಗೋಪುರವು ಶಿಥಿಲಗೊಂಡು ನಾಶವಾಗಿ ಹೋಗಿದ್ದು ಗೋಪುರದ ಹಲವು ವಸ್ತುಗಳು ಕಂಡವರ ಪಾಲಾಗಿದೆ ಎನ್ನಲಾಗುತ್ತಿದೆ. ಆದರೆ ಗೋಪುರದೊಂದಿಗೆ ನಾಶವಾಗಿ ಹೋಗಬೇಕಾಗಿದ್ದ ಈ ಭಾಗದ ಸ್ವಾತಂತ್ರ ಹೋರಾಟದ ಕಥೆಗಳನ್ನು ಇಲ್ಲಿ ಅಳಿದು ಉಳಿದಿರುವ ಫಿರಂಗಿಯೊಂದು ಜೀವಂತವಾಗಿಸಿದೆ. ಗೋಪುರ ನಾಶವಾದರೂ ಕಟ್ಟೆಯೊಂದರ ಮೆಲೆ ನಿಂತಿದ್ದ ಫಿರಂಗಿಯೂ ಕೆಲವು ವರ್ಷಗಳ ಹಿಂದೆ ಟೆಲಿಫೋನ್ ಕೇಬಲ್ ಹಾಕಲು ನೆಲ ಅಗೆಯುವ ಸಂದರ್ಭದಲ್ಲಿ ಧರೆಗುರುಳಿತ್ತು. ಹಲವು ಸಮಯದಿಂದ ಅನಾಥವಾಗಿ ಬಿದ್ದಿದ್ದ ಈ ಫಿರಂಗಿಯನ್ನು ಬಂಟ್ವಾಳದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಆಡಳಿತ ಮಂಡಳಿಯವರು ಕ್ರೇನ್ ಮೂಲಕ ಕೊಂಡೊಯ್ಯಲು ರಾತ್ರೋ ರಾತ್ರಿ ಬಂದಾಗ ಊರಿನ ಯುವಕರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಕೊಂಡೊಯ್ಯಲು ಸಾಧ್ಯವಾಗದೆ ಫಿರಂಗಿಯನ್ನು ಬಿಟ್ಟು ಹೋಗಿದ್ದರು. ಆ ಬಳಿಕ ತಾಲೂಕಿನ ಖ್ಯಾತ ಉದ್ಯಮಿಯೊಬ್ಬರು ಈ ಫಿರಂಗಿಯನ್ನು ಸ್ವಾಧೀನಪಡಿಸಲು ವಿಫಲ ಯತ್ನ ಮಾಡಿದ್ದರು ಎನ್ನಲಾಗಿದೆ. ಈ ಎರಡು ಘಟನೆಯ ಬಳಿಕ ಅನಾಥವಾಗಿ ಬಿದ್ದಿದ್ದ ಫಿರಂಗಿಯ ಇತಿಹಾಸವನ್ನು ಅರಿತ ಊರಿನ ಸಂಘಟನೆಯೊಂದರ ಕಾರ್ಯಕರ್ತರು ಕಟ್ಟೆಯೊಂದನ್ನು ನಿರ್ಮಿಸಿ ಹಿರಿಯರ ಸಲಹೆಯಂತೆ ಮೂಲ ಸ್ಥಿತಿಯಲ್ಲಿ ಈ ಫಿರಂಗಿಯನ್ನು ಇಟ್ಟಿದ್ದಾರೆ. ಫಿರಂಗಿಯ ಪಕ್ಕದಲ್ಲೇ ಧ್ವಜಸ್ಥಂಬವೊಂದನ್ನು ನಿರ್ಮಿಸಿ ಎಲ್ಲಾ ವರ್ಷದ ಆಗಸ್ಟ್ 15ರಂದು ಧ್ವಜಾರೋಹಣ ಮಾಡಲಾಗುತ್ತದೆ. ಈ ಮೂಲಕ ಅಳಿದು ಹೋಗುತ್ತಿದ್ದ ಈ ಭಾಗದ ಸ್ವಾತಂತ್ರ ಹೋರಾಟದ ಕಥೆಗಳನ್ನು ತಮ್ಮ ಪರಿಶ್ರಮದಿಂದ ಇಲ್ಲಿನ ಯುವಕರು ಜೀವಂತ ಇಡುವಂತೆ ಮಾಡಿದ್ದಾರೆ.

Writer - ಇಮ್ತಿಯಾಝ್ ಶಾ ತುಂಬೆ

contributor

Editor - ಇಮ್ತಿಯಾಝ್ ಶಾ ತುಂಬೆ

contributor

Similar News