5ನೇ ತರಗತಿಯಲ್ಲೇ ಸ್ವಾತಂತ್ರ್ಯದ ಕನವರಿಕೆ

Update: 2018-08-15 08:09 GMT

ಮೈಸೂರು: ಲೋಕ ಜ್ಞಾನದ ಅರಿವಿಲ್ಲದ ಎಳೆಯತನ, ಕೇವಲ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕನ ಎದೆಯೊಳಗೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದು ಅಂದಿನ ಬೊಂಬಾಯಿ ನಗರದಲ್ಲಿ ಆರಂಭವಾದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ’. ಯದುವಂಶದ ಆಡಳಿತದಲ್ಲಿದ್ದ ಮೈಸೂರು ಸಂಸ್ಥಾನದಲ್ಲಿ ಈ ಬಾಲಕ ಇದ್ದರೂ ಆ ಚಳವಳಿಯ ಕಾವು, ಇಲ್ಲಿನ ಸುಬ್ಬರಾಯನ ಕೆರೆಯಲ್ಲಿ ಹಿರಿಯರ ನಡುವೆ ನಡೆಯುತ್ತಿದ್ದ ಚರ್ಚೆಗಳಲ್ಲಿ ಎದ್ದು ಕಾಣುತ್ತಿತ್ತು. ಅದನ್ನು ಕೇಳುತ್ತಾ, ನೋಡುತ್ತಾ ಬೆಳೆದ ಆ ಹುಡುಗ, ಸ್ವಾತಂತ್ರ್ಯ ನಂತರ ಮೈಸೂರು ಸ್ವಾತಂತ್ರಾ ಚಳವಳಿಯಲ್ಲಿ ಪಾಲ್ಗೊಂಡು ಯಶಸ್ವಿಯಾದ. ಆ ಬಾಲಕನ ಹೆಸರು ಡಾ. ಎಂ.ಜಿ.ಕೃಷ್ಣಮೂರ್ತಿ. ಅವರು ತಮ್ಮ ಸ್ವಾತಂತ್ರ್ಯ ಹೋರಾಟದ ಅನುಭವವನ್ನು ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಂಡಿದ್ದಾರೆ.

‘ಆಗ ನಾನಿನ್ನು ಸಣ್ಣ ಹುಡುಗ, 5ನೇ ತರಗತಿ ಓದುತ್ತಿದ್ದೆ. ಸ್ವಾತಂತ್ರ್ಯ ಹೋರಾಟದ ಚಳವಳಿಗಳ ಬಗ್ಗೆ ನಮ್ಮ ಗ್ರಾಮದ ಹಿರಿಯರು ಹೇಳುತ್ತಿದ್ದರು. ಆಗ ಪ್ರಭಾವಿತನಾದ ನಾನು ಸ್ವಾತಂತ್ರ್ಯ ಹೋರಾಟದ ಚಳವಳಿಗಳಲ್ಲಿ ಭಾಗವಹಿಸಬೇಕೆಂಬ ಇರಾದೆ ಹೊಂದಿದೆ. ಅಷ್ಟರಲ್ಲಿ ಬೊಂಬಾಯಿ ನಗರದ ಶಿವಾಜಿನಗರದ ಮೈದಾನದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಅವರ ಸಂಗಡಿಗರು ‘ಬ್ರಿಟಷರೇ ಭಾರತ ಬಿಟ್ಟು ತೊಲಗಿ’ ಎಂಬ ನಿರ್ಣಯ ಕೈಗೊಂಡು ದೇಶಾದ್ಯಂತ ಸಂಚಲನ ಮೂಡಿಸಿದರು. ಆಗ ನಾನು ಮೈಸೂರಿನ ನಮ್ಮ ಅಜ್ಜಿಯ ಮನೆಯಲ್ಲಿ ಇದ್ದೆ. ಒಂದು ಕಡೆ ವಿಶ್ವದ ಎರಡನೇ ಮಹಾಯುದ್ಧ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸ್ವಾತಂತ್ರ್ಯ ಚಳವಳಿಯ ಹೋರಾಟ. ಮೈಸೂರಿನ ಸುಬ್ಬರಾಯನ ಕೆರೆಯಲ್ಲಿ ಸ್ವಾತಂತ್ರ್ಯ ಚಳವಳಿಯ ಹೋರಾಟ ರೂಪುರೇಷೆಗಳು ಚರ್ಚೆಗಳು ನಡೆಯುತ್ತಿದ್ದವು. ಅಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಅಗರಂ ರಂಗಯ್ಯ, ತಗಡೂರು ರಾಮಚಂದ್ರರಾಯರು, ಹೆಜ್ಜಿಗೆ ಲಿಂಗಣ್ಣ, ಸಾಹುಕಾರ್ ಚೆನ್ನಯ್ಯ, ಸೇರಿದಂತೆ ಇನ್ನೂ ಅನೇಕರು ಒಟ್ಟಿಗೆ ಸೇರಿ ಸಭೆ ನಡೆಸಿ ಚರ್ಚೆ ಮಾಡುತ್ತಿದ್ದರು. ಆಗ ನಾನು ಆ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದೆ’ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

‘ತಂಬುಚೆಡ್ಡಿ ಚೆಟ್ಟ ಕಟ್ಟಿ, ಆಕಾರ್ಟ್ ಬಾಯಿಕಟ್ಟಿ ಕೆ.ಸಿ.ರೆಡ್ಡಿ ಪಟ್ಟ ಕಟ್ಟಿ’

‘1947 ಆಗಸ್ಟ್ 15ರಂದು ಸ್ವಾತಂತ್ರ್ಯ ಬಂತು. ಆಗ ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಮೈಸೂರು ಪ್ರಾಂತಕ್ಕೆ ಸ್ವಾತಂತ್ರ್ಯ ಕೊಡಲು ಇಷ್ಟ ವಿದ್ದರೂ ಅವರ ಆಡಳಿತದಲ್ಲಿ ದಿವಾನರಾಗಿದ್ದ ತಂಬುಚೆಡ್ಡಿ ಪೆರುಮಾಳ್ ಚೆಟ್ಟಿ ಮತ್ತು ಆಕಾರ್ಟ್ ರಾಮಸ್ವಾಮಿ ಅವರು ಪ್ರಜಾಡಳಿತಕ್ಕೆ ಅಡ್ಡಗಾಲು ಹಾಕಿದ್ದರು. ಹಾಗಾಗಿ ಮೈಸೂರು ಚಲೋ ಆಂದೋಲನ ಶುರುವಾಯಿತು. 1947 ಸೆಪ್ಟಂಬರ್ 25ರಂದು ನಾನು ಸೇರಿದಂತೆ ಸಾವಿ ರಾರು ಜನರನ್ನು ಪೊಲೀಸರು ಬಂಧಿಸಿ ಅಕ್ಟೋಬರ್ 7ರಂದು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ಹಲವಾರು ಹೋರಾಟಗಳನ್ನು ಮಾಡಿದ ನಾವು ‘ತಂಬುಚೆಡ್ಡಿ ಚೆಟ್ಟ ಕಟ್ಟಿ, ಆಕಾರ್ಟ್ ಬಾಯಿಕಟ್ಟಿ ಕೆ.ಸಿ.ರೆಡ್ಡಿ ಪಟ್ಟ ಕಟ್ಟಿ’ ಎಂಬ ಸ್ಲೋಗನ್‌ನೊಂದಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಯಶ ಕಂಡೆವು’ಎಂದು ಡಾ.ಕೃಷ್ಣಮೂರ್ತಿ ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News