ನಿಮ್ಮ ಸಂದುಗಳಲ್ಲಿಯ ನೋವಿನ ಬಗ್ಗೆ ನಿರ್ಲಕ್ಷ್ಯ ಬೇಡ: ಈ ಅಪಾಯಗಳ ಬಗ್ಗೆ ತಿಳಿದುಕೊಳ್ಳಿ

Update: 2018-08-15 13:26 GMT

ಶರೀರದ ಸಂದುಗಳು ಅಥವಾ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ ಮತ್ತು ಅವುಗಳಿಗೆ ಕಾರಣಗಳೂ ಸಾಮಾನ್ಯವಾಗಿವೆ. ಯಾರಾದರೂ ಸಂದುಗಳಲ್ಲಿ ನೋವಿನ ಬಗ್ಗೆ ದೂರಿಕೊಂಡಾಗ ನಮ್ಮ ತಲೆಯಲ್ಲಿ ಮೂಡುವುದು ಸಂಧಿವಾತದ ಕಲ್ಪನೆ ಮಾತ್ರ. ಆದರೆ ಸಂದುಗಳಲ್ಲಿಯ ನೋವು ಇನ್ನೂ ಬಹಳಷ್ಟನ್ನು ಸೂಚಿಸುತ್ತದೆ ಎನ್ನುವುದು ನಿಮಗೆ ಗೊತ್ತೇ? ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದಕ್ಕೆ ಕೇವಲ ಸಂಧಿವಾತವಲ್ಲ, ಹಲವು ಇತರ ಕಾರಣಗಳೂ ಇವೆ. ಅಂತಹ ಕೆಲವು ಕಾರಣಗಳಿಲ್ಲಿವೆ....

ಔಷಧಿಗಳಿಗೆ ಅಲರ್ಜಿ

ನೀವು ಅನಾರೋಗ್ಯದಿಂದಿದ್ದಾಗ ಗುಣಮುಖರಾಗಲು ಔಷಧಿಗಳನ್ನು ಸೇವಿಸುತ್ತೀರಿ. ಆದರೆ ಅಲರ್ಜಿಯನ್ನುಂಟು ಮಾಡುವ ಕೆಲವು ಔಷಧಿಗಳು,ನಿರ್ದಿಷ್ಟವಾಗಿ ಪೆನ್ಸಿಲಿನ್‌ನಂತಹ ಆ್ಯಂಟಿಬಯಾಟಿಕ್‌ಗಳು ಅಥವಾ ಪ್ರತಿಜೀವಕಗಳು ಒಳ್ಳೆಯದಕ್ಕಿಂತ ಕೆಡುಕನ್ನೇ ಮಾಡುವ ಸಾಧ್ಯತೆಗಳಿರುತ್ತವೆ. ಈ ಔಷಧಿಗಳು ಪ್ರತಿವರ್ತಿಸಿ ಸಂದುಗಳಲ್ಲಿ ನೋವಿಗೆ ಕಾರಣವಾಗಬಹುದು.

 ಸಂಧಿವಾತ

ಶರೀರದಲ್ಲಿ ಯೂರಿಕ್ ಆ್ಯಸಿಡ್ ಸಂಗ್ರಹಗೊಂಡು ಹರಳುಗಳ ರೂಪವನ್ನು ತಾಳಿ ಕೀಲುಗಳಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ. ಇದನ್ನೇ ನಾವು ಸಂಧಿವಾತ ಎಂದು ಹೇಳುತ್ತೇವೆ. ಸಾಮಾನ್ಯವಾಗಿ ಸಂಧಿವಾತ ರೋಗಿಗಳು ಕಾಲುಗಳ ಹೆಬ್ಬೆರಳಿನ ನೋವಿನಿಂದ ಬಳಲುತ್ತಾರೆ,ಆದರೆ ಇದು ನೋವು ಕಾಣಿಸಿಕೊಳ್ಳುವ ಶರೀರದ ಮೊದಲ ಭಾಗವಾಗಿದೆಯಷ್ಟೇ. ನೋವು ಶರೀರದ ಇತರ ಭಾಗಗಳಿಗೂ ವ್ಯಾಪಿಸಬಲ್ಲುದು.

ದುಗ್ಧಗ್ರಂಥಿಗಳ ಊತ

 ನಮ್ಮ ಶರೀರವು ಅನಾರೋಗ್ಯಮುಕ್ತವಾಗಿರಲು ಬಲವಾದ ನಿರೋಧಕ ಶಕ್ತಿಯನ್ನು ಹೊಂದಿರಬೇಕಾಗುತ್ತದೆ. ಆದರೆ ಸಾರ್ಕೊಯ್ಡೋಸಿಸ್ ಅಥವಾ ಶರೀರದ ವಿವಿಧ ಭಾಗಗಳಲ್ಲಿರುವ ದುಗ್ಧಗ್ರಂಥಿಗಳಲ್ಲಿ ಉರಿಯೂತದೀಂದ ನರಳುತ್ತಿದ್ದರೆ ರೋಗ ನಿರೋಧಕ ಜೀವಕೋಶಗಳು ವಿವಿಧ ಅಂಗಗಳಲ್ಲಿ ಗೊಂಚಲು ರೂಪ ತಳೆಯತೊಡಗುತ್ತವೆ ಮತ್ತು ಜ್ವರ,ಬಳಲಿಕೆ ಮತ್ತು ಉಬ್ಬಸದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸ್ಥಿತಿಯಿಂದ ಬಳಲುತ್ತಿರುವ ಶೇ.25ರಷ್ಟು ರೋಗಿಗಳು ಸಾರ್ಕೊಯ್ಡೋಸಿಸ್ ಸಂಧಿವಾತವನ್ನು ಅನುಭವಿಸುತ್ತಾರೆ.

ಫೈಬ್ರೊಮ್ಯಾಲ್ಗಿಯಾ

ಶರೀರದ ವಿವಿಧ ಮಾಂಸಖಂಡಗಳಲ್ಲಿ ಮತ್ತು ನಾಜೂಕಾದ ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುವ ಸ್ಥಿತಿಯನ್ನು ಫೈಬ್ರೊಮ್ಯಾಲ್ಗಿಯಾ ಎಂದು ಕರೆಯಲಾಗುತ್ತದೆ. ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಈ ಕಾಯಿಲೆಗೆ ಗುರಿಯಾಗುತ್ತಾರೆ ಮತ್ತು ಒತ್ತಡ ಸೇರಿದಂತೆ ಹಲವಾರು ಕಾರಣಗಳಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ಕೇಂದ್ರ ನರಮಂಡಲದಲ್ಲಿ ಉರಿಯೂತವಿದ್ದಾಗ ಶರೀರದಲ್ಲಿ ನೋವಿನ ಸಂಕೇತಗಳು ರವಾನೆಯಾಗುತ್ತವೆ. ಪರಿಣಾಮವಾಗಿ ಮಾಂಸಖಂಡಗಳಲ್ಲಿ ಮತ್ತು ಸಂದುಗಳು ಸೇರಿದಂತೆ ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಮೂಳೆ ಕ್ಯಾನ್ಸರ್

ಮೂಳೆ ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಳು ಕಡಿಮೆಯಿದ್ದರೂ ಅದು ಯಾರಲ್ಲಿಯೂ ಕಾಣಿಸಿಕೊಳ್ಳಬಹುದು ಎಂಬ ಕಟುಸತ್ಯವನ್ನು ಕಡೆಗಣಿಸುವಂತಿಲ್ಲ. ಮೂಳೆಗಳಲ್ಲಿ ನೋವು ಈ ಕ್ಯಾನ್ಸರ್‌ನ ಲಕ್ಷಣವಾಗಿದೆ. ಈ ನೋವು ವ್ಯಕ್ತಿಯು ಹೆಚ್ಚು ಚಟುವಟಿಕೆಯಿಂದಿದ್ದಾಗ ಅಥವಾ ರಾತ್ರಿಯಲ್ಲಿ ತೀವ್ರಗೊಳ್ಳುತ್ತದೆ. ಇದು ಸಂಧಿವಾತದಂತಹುದೇ ಲಕ್ಷಣಗಳನ್ನು ಹೊಂದಿದೆ. ಎರಡು ವಾರಗಳಿಗೂ ಹೆಚ್ಚು ಕಾಲ ನೋವು ಕಾಡುತ್ತಿದ್ದರೆ ವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News