ಫ್ಲೆಕ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ಸಿಎಂ ಕುಮಾರಸ್ವಾಮಿ

Update: 2018-08-15 13:49 GMT

ಬೆಂಗಳೂರು, ಆ.15: ಕರ್ನಾಟಕವನ್ನು ಬೆಂಗಳೂರು ರೀತಿಯಲ್ಲಿ ಫ್ಲೆಕ್ಸ್ ಮುಕ್ತ ಮಾಡಬೇಕು ಎಂಬುದು ನಮ್ಮ ಗುರಿಯಾಗಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳು ತಿಂಗಳಿಗೆ ಒಂದು ದಿನ ಹೋಬಳಿಗಳ ವಾಸ್ತವ್ಯ ಮಾಡಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

72 ನೇ ಸ್ವಾತಂತ್ರೋತ್ಸವದ ಅಂಗವಾಗಿ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು ಫ್ಲೆಕ್ಸ್ ಮುಕ್ತವಾಗಬೇಕೆಂಬುದು ಬೆಂಗಳೂರಿಗರ ಆಸೆ. ಅದರಂತೆ ಫ್ಲೆಕ್ಸ್ ಮುಕ್ತಗೊಳಿಸಲು ಬಿಬಿಎಂಪಿ ನಿರಂತರ ಶ್ರಮಿಸುತ್ತಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಫ್ಲೆಕ್ಸ್‌ಗಳನ್ನು ತೆರವು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಸಂಚಾರ ವ್ಯವಸ್ಥೆಯನ್ನು ಸುಗಮ ಮಾಡುವ ನಿಟ್ಟಿನಲ್ಲಿ ಮೆಟ್ರೋ ಎರಡನೆ ಹಂತ ಯೋಜನೆ, ಪೆರಿಫೆರಲ್ ರಿಂಗ್ ರೋಡ್, ಉಪ ನಗರ ರೈಲು ಯೋಜನೆಗಳನ್ನು ಶೀಘ್ರದಲ್ಲಿಯೇ ಸಾಕಾರಗೊಳಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಕೆರೆಗಳ ಸಂರಕ್ಷಣೆ, ತ್ಯಾಜ್ಯ ವಸ್ತುಗಳ ವೈಜ್ಞಾನಿಕ ವಿಲೇವಾರಿ ಕುರಿತು ದೂರದೃಷ್ಟಿ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ತಿಂಗಳಿಗೊಮ್ಮೆ ಪ್ರತಿ ತಾಲೂಕಿನಲ್ಲಿ ಸಮೀಕ್ಷಾ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ತಿಂಗಳಿಗೆ ಒಂದು ದಿನ ಹೋಬಳಿಯಲ್ಲಿ ವಾಸ್ತವ್ಯ ಮಾಡಬೇಕು. ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಸಭೆ ನಡೆಸಬೇಕೆಂದು ಸಿಎಂ ಸೂಚಿಸಿದರು.

ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಲ್ಲೇ ನಡೆಸಲು ಪ್ರಧಾನಿ, ರಕ್ಷಣಾ ಸಚಿವರಿಗೆ ಪತ್ರ ಬರೆದಿದ್ದೇನೆ ಹಾಗೂ ಕರ್ನಾಟಕದ ಸಂಸದರ ಗಮನಕ್ಕೆ ತರಲಾಗಿದೆ. ವಸತಿ ಕುಟುಂಬಗಳನ್ನು ಗುರುತಿಸಬೇಕು. ಶಾಲಾ-ಕಾಲೇಜುಗಳ ಕಟ್ಟಡ, ಹಾಗೂ ಶಿಕ್ಷಕರ ಕೊರತೆ ಮೇಲೆ ನಿಗಾ ವಹಿಸಬೇಕು. ಘನತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಬೇಕು. ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕುಟುಂಬಗಳಿಗೆ ಮಿಂಚಿನ ವೇಗದಲ್ಲಿ ಪರಿಹಾರ ನೀಡಬೇಕು ಎಂದು ಹೇಳಿದರು.

ರಾಜ್ಯದಲ್ಲಿನ ಸರಕಾರಿ ನೌಕರರು ತಾಯಿ ಹೃದಯದಿಂದ ಕೆಲಸ ಮಾಡಬೇಕು. ಪ್ರತಿಯೊಬ್ಬರನ್ನು ಪ್ರಭು ಎಂದು ಭಾವಿಸಬೇಕು. ಹೊರ ರಾಜ್ಯ, ದೇಶದಲ್ಲಿರುವ ಕನ್ನಡಿಗರು ಕನ್ನಡ ನೆಲಕ್ಕಾಗಿ ಅಳಿಲು ಸೇವೆ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದ ಕುಮಾರಸ್ವಾಮಿ, ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರಕಾರದ ಸಂಪೂರ್ಣ ಸಹಕಾರವನ್ನು ರಾಜ್ಯ ಬಯಸುತ್ತದೆ ಎಂದು ತಿಳಿಸಿದರು.

ಚೀನಾದೊಂದಿಗೆ ಸಕಾರಾತ್ಮಕ ಸ್ಪರ್ಧೆ ಪರಿಕಲ್ಪನೆಯಲ್ಲಿ ಸ್ಥಳೀಯವಾಗಿ ದೊರೆಯುವ ಕಚ್ಛಾವಸ್ತುಗಳಿಗೆ ಅನುಗುಣವಾಗಿ ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಪ್ರತಿಷ್ಠಿತ ಬೆಂಗಳೂರು ಟೆಕ್ ಸಮಿಟ್ ನ.29ರಿಂದ ಮೂರು ದಿನ ನಡೆಯಲಿದ್ದು, ಉದ್ದಿಮಿದಾರರು ಬಂಡವಾಳ ಹೂಡಲು ಉತ್ಸುಕರಾಗಿದ್ದಾರೆ. ವಿವಿಧ ಜಿಲ್ಲೆಗಳಲ್ಲೂ ಕೈಗಾರಿಕೆ ಸ್ಥಾಪಿಸುವ ಸರಕಾರದ ಆಶಯಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದರು.

ಪ್ರತಿ ಮನೆಗೆ ವಿದ್ಯುತ್: 370 ಮೆಗಾವ್ಯಾಟ್ ಸಾಮರ್ಥ್ಯದ ಯಲಹಂಕ ಅನಿಲ ವಿದ್ಯುತ್ ಸ್ಥಾವರವು ಈ ವರ್ಷ ಚಾಲನೆಗೊಳ್ಳಲಿದ್ದು, 37 ಹೊಸ ಉಪಕೇಂದ್ರಗಳು ಹಾಗೂ 800 ಕಿ.ಮೀ. ಪ್ರಸರಣಾ ಮಾರ್ಗಗಳನ್ನು ರಚಿಸಲಾಗುವುದು. ಎಲ್ಲಾ ವರ್ಗದ ಗ್ರಾಹಕರಿಗೆ ದಿನವಿಡಿ ವಿದ್ಯುತ್ ಒದಗಿಸಲು ಅಗತ್ಯವಿರುವ ವಿತರಣಾ ಜಾಲದ ಬಲವರ್ಧನೆ ಮಾಡಲಾಗುವುದು. ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ 7 ಗಂಟೆ ವಿದ್ಯುತ್ ಪೂರೈಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕ್ರೀಡಾಪಟುಗಳಾದ ಅಶ್ವಿನಿ ಪೊನ್ನಪ್ಪ, ಪಿ.ಗುರುರಾಜ್, ಕಮಾಂಡರ್ ಸಿ.ಎ.ಆರ್.ಯೋಗೇಶ್ ಕುಮಾರ್, ಗೋಪಾಲರೆಡ್ಡಿಯನ್ನು ಸನ್ಮಾನಿಸಲಾಯಿತು. ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಮೊದಲನೆ ವಿಭಾಗದಲ್ಲಿ ಬಿಎಸ್‌ಎಫ್ ತಂಡ, ಸಿಎಆರ್ ತಂಡ, 2 ನೆ ವಿಭಾಗದಲ್ಲಿ ಅಬಕಾರಿ ತಂಡ, ಅರಣ್ಯ ಇಲಾಖೆ ತಂಡ, 3 ನೆ ವಿಭಾಗದಲ್ಲಿ ಭಾರತ ಸೇವಾ ದಳ ತಂಡ, ಸಿವಿಲ್ ಡಿಫೆನ್ಸ್ ತಂಡ, 4 ನೆ ವಿಭಾಗದಲ್ಲಿ ಮಿತ್ರ ಅಕಾಡೆಮಿ, ಲಾರೆನ್ಸ್ ಪಬ್ಲಿಕ್ ಶಾಲೆ, 5 ನೆ ವಿಭಾಗದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಶಾಲೆ ಹಾಗೂ ಲಿಟಿಲ್ ಲಾ ಪಬ್ಲಿಕ್ ಶಾಲೆ, 6 ನೆ ವಿಭಾಗದಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ಹಾಗೂ ಪ್ರೆಸಿಡೆನ್ಸಿ ಶಾಲೆಗಳಿಗೆ ಪ್ರಶಸ್ತಿ ನೀಡಲಾಯಿತು. ಗೋವಾ ಪೊಲೀಸ್ ತಂಡಕ್ಕೆ ಹಾಗೂ ಅಂಧರ ಶಾಲೆಗಳಾದ ಸಮರ್ಥನಂ ಮತ್ತು ರಮಣ ಮಹರ್ಶಿ ಶಾಲೆಗಳಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು.

ಹಸಿರು ಕರ್ನಾಟಕ ಯೋಜನೆಗೆ ಚಾಲನೆ
ಹಸಿರು ಕರ್ನಾಟಕ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಚಾಲನೆ ನೀಡಿದರು. ಸಮಾರಂಭದಲ್ಲಿ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ 30 ರೈತರಿಗೆ ಸಸಿ ನೀಡುವ ಮೂಲಕ ಮುಖ್ಯಮಂತ್ರಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಹಸಿರಾಗಿಸೋಣ ಎಂಬ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಶಿಕ್ಷಣ ಮಾರಾಟದ ವಸ್ತುವಾಗಬಾರದು ಎಂಬ ಉದ್ದೇಶದಿಂದ ಎಲ್ಲಾ ಸರಕಾರಿ ಶಾಲೆಗಳ ಆಧುನೀಕರಣಕ್ಕೆ ಚಾಲನೆ ನೀಡಲಾಗಿದ್ದು, ಈ ಶಾಲೆಗಳ ಬಗ್ಗೆ ಪೋಷಕರಲ್ಲಿ ಆತ್ಮವಿಶ್ವಾಸ ತುಂಬಲಾಗುವುದು. ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ವಸತಿ ಕಾಲೇಜುಗಳನ್ನು ಆರಂಭಿಸಲು ಚಿಂತಿಸಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಕೌಶಲ್ಯ ಆಧಾರಿತ ವಿಶ್ವವಿದ್ಯಾಲಯ ತೆರೆಯುವ ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

ನಮ್ಮದು ಅತ್ಯಂತ ಮಾನವೀಯ ಮುಖವುಳ್ಳ ಸರಕಾರ. ವಿಕಲಚೇತನರು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತಿತರರ ಶೋಷಿತ ವರ್ಗದವರಿಗೆ ಆಸರೆ ನೀಡಲು ಸರಕಾರ ಬದ್ಧವಾಗಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ವಾಯು ಮಾಲಿನ್ಯ, ಶಬ್ದಮಾಲಿನ್ಯಕ್ಕೆ ತುರ್ತು ಪರಿಹಾರದ ಅಗತ್ಯವಿದ್ದು, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಏಕೀಕೃತ ಭೂ ಸಾರಿಗೆ ಪ್ರಾಧಿಕಾರವನ್ನು ಸ್ಥಾಪಿಸಲು ಕ್ರಮ ವಹಿಸಲಾಗುತ್ತಿದೆ
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News