ಪಿಎಮ್‌ಯುವೈ ಸಂಖ್ಯೆಗಳ ಹಿಂದಿರುವ ಕಠಿಣ ವಾಸ್ತವವೇನು?

Update: 2018-08-15 18:30 GMT

ದೇಶದ 27.72 ಕೋಟಿ ಕುಟುಂಬಗಳ ಪೈಕಿ 25.68 ಕೋಟಿ ಕುಟುಂಬಗಳಿಗೆ (ಸುಮಾರು ಶೇ. 93) ಎಲ್‌ಪಿಜಿ ಸಂಪರ್ಕ ಇದೆಯಾದರೂ, ಕೇವಲ 22.43 ಕೋಟಿ ಮನೆಗಳಿಗೆ (ಶೇ. 80) ಸಕ್ರಿಯ ಅನಿಲ ಸಂಪರ್ಕ ಇದೆ. ಅಂದರೆ, ಸುಮಾರು ಶೇ. 13 (3.75 ಕೋಟಿ) ಗೃಹ ಎಲ್‌ಪಿಜಿ ಬಳಕೆದಾರರು ಸಕ್ರಿಯ ಬಳಕೆದಾರರಲ್ಲ!

ಪ್ರಧಾನ ಮಂತ್ರಿ ಉಜ್ವಲಯೋಜನೆ(ಪಿಎಮ್‌ಯುವೈ), ನರೇಂದ್ರಮೋದಿ ಸರಕಾರದ ಮುಖ್ಯಯೋಜನೆಗಳಲ್ಲೊಂದು. 2016ರ ಮೇ 1ರಂದು ಆರಂಭಿಸಲಾದ ಈ ಯೋಜನೆ ತನ್ನ ಅತ್ಯಂತ ದೊಡ್ಡ ಯಶೋಗಾಥೆೆಗಳಲ್ಲಿ ಒಂದು ಎಂದು ಸರಕಾರ ಹೇಳುತ್ತದೆ. ‘‘ಮುಂದಿನ ಮೂರು ವರ್ಷಗಳಲ್ಲಿ ಬಿಪಿಎಲ್ ಕುಟುಂಬಗಳಿಗೆ, ಪ್ರತಿ ಸಂಪರ್ಕಕ್ಕೆ 1,600 ರೂಪಾಯಿ ಸಹಾಯಧನದೊಂದಿಗೆ 5ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು ನೀಡುವುದು’’ ಯೋಜನೆಯ ಗುರಿಯಾಗಿತ್ತು. ಇತ್ತೀಚೆಗಿನ ದಾಖಲೆಗಳ ಪ್ರಕಾರ ‘‘ 5,14,07,565 ಸಂಪರ್ಕಗಳನ್ನು’’ ನೀಡಲಾಗಿದೆ.

ಯಾವುದೇ ಮಾನದಂಡದಿಂದ ಅಳೆದರೂ ಇದು ದೊಡ್ಡ ಸಂಖ್ಯೆಯೇ ಸರಿ. ಆದರೆ ಸ್ವಲ್ಪ ಸೂಕ್ಷ್ಮವಾಗಿ ಪರಿಶೀಲಿಸಿದರೆ ಯೋಜನೆಯು ಬಿಪಿಎಲ್ ಕುಟುಂಬಗಳಿಗೆ ನಿರಂತರವಾಗಿ, ಕೈಗೆಟಕುವ ಬೆಲೆಯಲ್ಲಿ ಅಡುಗೆ ಅನಿಲ ಪೂರೈಸುವಲ್ಲಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
2009ರ ಅಕ್ಟೋಬರ್‌ನಲ್ಲಿ, ಆಗ ಅಧಿಕಾರದಲ್ಲಿದ್ದ ಯುಪಿಎ ಸರಕಾರವು ಬಡವರಿಗೆ ಎಲ್‌ಪಿಜಿ ನೀಡುವುದಕ್ಕಾಗಿ, ಅನಿಲ ವಿತರಕರನ್ನು ಪ್ರೋತ್ಸಾಹಿಸಲು ರಾಜೀವ್ ಗಾಂಧಿ ಗ್ರಾಮೀಣ ಎಲ್‌ಪಿಜಿ ವಿತರಕ ಯೋಜನೆಯನ್ನು (ಆರ್‌ಜಿಜಿಎಲ್‌ವಿ) ಆರಂಭಿಸಿತ್ತು. ಅನಿಲ ಸಂಪರ್ಕ ಪಡೆಯುವವರಿಗೆ ‘ಒಮ್ಮೆ ಮಾತ್ರ ನೀಡುವ’ ಹಣಕಾಸು ನೆರವು ನೀಡಲು ಸರಕಾರದ ತೈಲ ಮಾರಾಟ ಕಂಪೆನಿಗಳ (ಒಎಮ್‌ಸಿ) ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‌ಆರ್) ನಿಧಿಗಳ ಮೂಲಕ ವ್ಯವಸ್ಥೆಮಾಡಿತ್ತು. ಆ ಯೋಜನೆಯ ಪ್ರಕಾರ ಬಿಪಿಎಲ್ ಕುಟುಂಬಗಳಿಗೆ 2016ರ ಮಾರ್ಚ್ 31ರ ವೇಳೆಗೆ ಒಟ್ಟು 61,32,322 ಉಚಿತ ಎಲ್‌ಪಿಜಿ ಸಂಪರ್ಕಗಳನ್ನು ನೀಡಲಾಗಿತ್ತು. ಆಗ ಕೂಡ ಮೊದಲ ಸಿಲಿಂಡರ್ ಮತ್ತು ರೆಗ್ಯುಲೇಟರನ್ನು ಉಚಿತವಾಗಿಯೇ ನೀಡಲಾಗಿತ್ತು. ಹೀಗಾಗಿ ಪಿಎಂಯುವೈ ಯೋಜನೆಯಲ್ಲಿ ಹೊಸತೇನು ಇಲ್ಲ. ಒಂದೇ ವ್ಯತ್ಯಾಸವೆಂದರೆ ಸ್ಟೌ/ ಹಾಟ್ ಪ್ಲೇಟ್ ಮತ್ತು ಹೋಸ್ ಪೈಪ್ ಕೊಳ್ಳಲು ಕಂತುಗಳ ಆಯ್ಕೆಯನ್ನು ಈ ಯೋಜನೆಯಲ್ಲಿ ನೀಡಲಾಗಿದೆ.


ಪಿಎಮ್‌ಯುವೈಯಂತಹದೇ ಯೋಜನೆಗಳನ್ನು ವಿವಿಧ ರಾಜ್ಯಗಳು ಕೂಡ ಅನುಷ್ಠಾನ ಗೊಳಿಸಿ ಬಿಪಿಎಲ್ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಗಳನ್ನು ನೀಡಿವೆ. ಆಂಧ್ರಪ್ರದೇಶದ ದೀಪಂ ಯೋಜನೆ (35,04,653 ಸಂಪರ್ಕಗಳು) ತಮಿಳುನಾಡಿನಲ್ಲಿ 29,38,907 ಉಚಿತ ಬಿಪಿಎಲ್ ಸಂಪರ್ಕಗಳು, ತೆಲಂಗಾಣದಲ್ಲಿ 22,25,078 ಮತ್ತು ಪುದುಚೇರಿಯಲ್ಲಿ 85,437 ಸಂಪರ್ಕಗಳು ಹೀಗೆ ಒಟ್ಟು 87,54,075 ಉಚಿತ ಎಲ್ ಪಿಜಿ ಸಂಪರ್ಕಗಳನ್ನು ಅದಾಗಲೇ ನೀಡಲಾಗಿತ್ತು.
ಪಿಎಂಯುವೈ ಯೋಜನೆ ಆರಂಭವಾಗುವ ಮೊದಲೇ ನೀಡಲಾಗಿದ್ದ ಈ ಎಲ್ಲಾ ಸಂಪರ್ಕಗಳನ್ನು ಈ ಯೋಜನೆ ಯೊಳಗಡೆಯೇ ಸೇರಿಸಿಕೊಂಡು ಮೋದಿ ಸರಕಾರ ಇದೆಲ್ಲವೂ ತನ್ನ ಸಾಧನೆ ಎಂದು ಹೇಳಿಕೊಳ್ಳುತ್ತಿದೆ.
ಮೋದಿ ಸರಕಾರವು ಕರ್ನಾಟಕ ರಾಜ್ಯ ಸರಕಾರದ ಅನಿಲ ಸಂಪರ್ಕ ಯೋಜನೆಯನ್ನು ಪಿಎಂಯುವೈ ಯೋಜನೆಯ ಒಂದು ಭಾಗವಾಗಿ ಅನುಷ್ಠಾನಗೊಳಿಸುವಂತೆ ಹೇಳಿದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೆ ಮಾಡಲು ನಿರಾಕರಿಸಿದ್ದರು.
ರಾಜ್ಯ ಸರಕಾರದ ಯೋಜನೆಯ ರಾಜಕೀಯ ಲಾಭವನ್ನು ಮೋದಿಯ ಬಿಜೆಪಿ ಸರಕಾರ ಪಡೆದುಕೊಳ್ಳತ್ತದೆಯೆಂದು ಇದಕ್ಕೆ ಕಾರಣವಾಗಿತ್ತು.
ಒಟ್ಟಿನಲ್ಲಿ ಪಿಎಂಯುವೈ ಯೋಜನೆಯಲ್ಲಿ ಎರಡು ಮುಖ್ಯ ಅಂಶಗಳು ಕಾಣಿಸುತ್ತಿವೆ.
1. ಬಿಪಿಎಲ್ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಗಳನ್ನು ನೀಡುವುದು ಮೋದಿ ಸರಕಾರ ಆರಂಭಿಸಿದ ಹೊಸ ಯೋಜನೆಯೇನೂ ಅಲ್ಲ.
2. ಮೋದಿ ಸರಕಾರವು ಅದಾಗಲೇ ಇದ್ದ ಬಿಪಿಎಲ್ ಸಂಪರ್ಕ ಸಂಖ್ಯೆಗಳನ್ನು (ಸುಮಾರು 1.7 ಕೋಟಿ) ತನ್ನ ಪಿಎಂಯುವೈ ಯೋಜನೆಯ ಸಂಖ್ಯೆಗಳಿಗೆ ಸೇರಿಸಿಕೊಂಡು ‘‘5 ಕೋಟಿ ಸಂಪರ್ಕದ ಗುರಿ’’ ಎಂದು ಪ್ರಚಾರ ಮಾಡಿದೆ.

ಸಂಖ್ಯೆಗಳನ್ನು ಮೀರಿ ವಾಸ್ತವದ ಕಡೆಗೆ ಕಣ್ಣು ಹಾಯಿಸಿದಾಗ...
ತೋರಿಕೆಗೆ 26 ತಿಂಗಳುಗಳಲ್ಲಿ 3.6 ಕೋಟಿ ಹೊಸ ಬಿಪಿಎಲ್ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ಎಂಬುದು ದೊಡ್ಡ ಸಾಧನೆಯೇ ಸರಿ. ಆದರೆ ಯೋಜನೆಯ ಉದ್ದೇಶ ನಿಜವಾಗಿ ಈಡೇರಿದೆಯೇ? ಎಂದು ಕೇಳಿದರೆ ಇಲ್ಲ ಎನ್ನಬೇಕಾಗುತ್ತದೆ. ಎಲ್‌ಪಿಜಿ ಸಂಪರ್ಕಗಳ ಸಂಖ್ಯೆ ಏರಿದೆಯಾದರೂ ಅನಿಲದ ಸಕ್ರಿಯ ಬಳಕೆದಾರರ ಸಂಖ್ಯೆ ಬೇರೆಯೇ ಆದ ಒಂದು ಕತೆಯನ್ನು ಹೇಳುತ್ತದೆ. ದೇಶದ 27.72 ಕೋಟಿ ಕುಟುಂಬಗಳ ಪೈಕಿ 25.68 ಕೋಟಿ ಕುಟುಂಬಗಳಿಗೆ (ಸುಮಾರು ಶೇ. 93) ಎಲ್‌ಪಿಜಿ ಸಂಪರ್ಕ ಇದೆಯಾದರೂ, ಕೇವಲ 22.43 ಕೋಟಿ ಮನೆಗಳಿಗೆ (ಶೇ. 80) ಸಕ್ರಿಯ ಅನಿಲ ಸಂಪರ್ಕ ಇದೆ. ಅಂದರೆ, ಸುಮಾರು ಶೇ. 13 (3.75 ಕೋಟಿ) ಗೃಹ ಎಲ್‌ಪಿಜಿ ಬಳಕೆದಾರರು ಸಕ್ರಿಯ ಬಳಕೆದಾರರಲ್ಲ! ಅಂದರೆ ಸಂಪರ್ಕ ಪಡೆದವರೆಲ್ಲರೂ ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುತ್ತಿಲ್ಲ. ಪರಿಣಾಮವಾಗಿ ಪಿಎಂಯುವೈ ಗಿರಾಕಿಗಳು ಅನಿಲ ವಿತರಕರ ಪಾಲಿಗೆ ಒಂದು ದೊಡ್ಡ ಹೊರೆಯಾಗಿದ್ದಾರೆ.
ಇಲ್ಲಿ ನಿಜವಾಗಿ ಏನಾಗುತ್ತಿದೆ? ಸರಕಾರದ ತೈಲ ಮಾರ್ಕೆಟ್ ಕಂಪೆನಿಗಳು (ಒಎಮ್‌ಸಿ) ಸರಕಾರದ ತೈಲಸಂಪರ್ಕ ಯೋಜನೆಯ ಅಡಿಯಲ್ಲಿ ಗರಿಷ್ಠ ಸಂಖ್ಯೆಯ ಜನರನ್ನು ನೋಂದಾಯಿಸಿಕೊಳ್ಳುವಂತೆ ತಮ್ಮ ವಿತರಕರ ಮೇಲೆ ಒತ್ತಡ ಹಾಕಿದವು. ಸ್ಟವ್ ಮತ್ತು ಹೋಸ್ ಪೈಪ್‌ನ ಮೊತ್ತವನ್ನು ಕಂತುಗಳಲ್ಲಿ ಪಾವತಿಸುವ ಸೌಲಭ್ಯ ಹಾಗೂ ಆರಂಭಿಕ ಪಾವತಿ ರೂ. 1,600ರಿಂದ ವಿನಾಯಿತಿ ನೀಡಿದ್ದರಿಂದ ಬಡಕುಟುಂಬಗಳ ಮನೆಗೆ ಗ್ಯಾಸ್ ಸಂಪರ್ಕ ದೊರಕಿತು. ಈ ಮೊತ್ತವನ್ನು ಪ್ರತಿ ರೀಫಿಲ್ ಸಿಲಿಂಡರಿನ ಸಹಾಯಧನ (ಸಬ್ಸಿಡಿ) ಮೊತ್ತದಲ್ಲಿ ಹೊಂದಿಸಿಕೊಳ್ಳುವುದರಿಂದ, ಬಡಕುಟುಂಬಗಳು ಈ ಮೊತ್ತ ಪಾವತಿಯಾಗುವ ಅವಧಿಯವರೆಗೆ ಗ್ಯಾಸ್ ಸಿಲಿಂಡರ್‌ಗೆ ಮಾರುಕಟ್ಟೆ ದರವನ್ನೇ ನೀಡಿ ಅದನ್ನು ಕೊಂಡುಕೊಳ್ಳಬೇಕಾಯಿತು. ಅಂದರೆ ಗ್ರಾಮೀಣ ಪಶ್ಚಿಮ ಬಂಗಾಲದಲ್ಲಿ ಒಂದು ಸಿಲಿಂಡರ್‌ನ ರೀಫಿಲ್ ಪಡೆಯಬೇಕಾದರೆ 817.50 ರೂ. ತೆರಬೇಕಾಗುತ್ತದೆ. ಇದು ಆ ಕುಟುಂಬಕ್ಕೆ ತೀರಾ ದುಬಾರಿಯಾದ ಮೊತ್ತ. ಆರು ಸಿಲಿಂಡರ್‌ಗಳ ಪೂರೈಕೆಯಾಗುವ ವರೆಗೆ ಬಿಪಿಎಲ್ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಸಿಲಿಂಡರ್ ಸಿಗುವುದಿಲ್ಲವಾದ್ದರಿಂದ ಒಎಮ್‌ಸಿಗಳು ನಷ್ಟ ಅನುಭವಿಸುತ್ತಿದೆ. ಬಿಪಿಎಲ್ ಗ್ರಾಹಕರು ಈ ದುಬಾರಿ ಮೊತ್ತ ತೆರಲಾಗದೆ ಸಿಲಿಂಡರ್‌ಗಳನ್ನು ಪಡೆದುಕೊಳ್ಳುತ್ತಿಲ್ಲ.
ಹೀಗೆ, ಮೋದಿ ಸರಕಾರ ಮತ್ತು ಬಿಜೆಪಿ, ತಾವು ಬಿಡುಗಡೆ ಮಾಡಿರುವ ಎಲ್‌ಪಿಜಿ ಸಂಪರ್ಕಗಳ ಸಂಖ್ಯೆಗಳನ್ನು ಜಾಹೀರಾತು ಮಾಡಿ ಸಂಭ್ರಮಿಸುತ್ತಿರುವಾಗ ಆ ಸಂಖ್ಯೆಗಳ ಹಿಂದಿರುವ ಕಠಿಣ ವಾಸ್ತವದ ಚರ್ಚೆ ನಡೆಯುತ್ತ್ತಿಲ್ಲ.

ಕೃಪೆ: thewire.in

Writer - ರವಿ ನಾಯರ್

contributor

Editor - ರವಿ ನಾಯರ್

contributor

Similar News

ಜಗದಗಲ
ಜಗ ದಗಲ