ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳನ್ನು ಹಿಡಿಯುವ ನಿರರ್ಥಕ ಪ್ರಯತ್ನಗಳು

Update: 2018-08-15 18:30 GMT

ಆರ್ಥಿಕ ಅಪರಾಧಗಳನ್ನು ಎಸಗಿ ದೇಶದಿಂದ ಪರಾರಿಯಾಗಿರುವವರನ್ನು ಹಿಡಿಯಲು ರೂಪಿಸಿರುವ ಕಾಯ್ದೆಯು ಭ್ರಷ್ಟಾಚಾರದ ನಿಗ್ರಹದ ಹೆಸರಿನಲ್ಲಿ ಹಮ್ಮಿಕೊಂಡಿರುವ ಒಂದು ನಿರರ್ಥಕ ಕಸರತ್ತಾಗಿದೆ.

ವಿಜಯ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗಳು ದೇಶದಿಂದ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದರ ವಿರುದ್ಧ ಒಂದು ದೇಶವ್ಯಾಪಿ ಅಸಮಾಧಾನವು ಹುಟ್ಟಿಕೊಂಡಿತಷ್ಟೆ. ಈ ಹಿನ್ನೆಲೆಯಲ್ಲಿ, ಭಾರತದಲ್ಲಿನ ಕಾನೂನು ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳಲು ಪರದೇಶಗಳಿಗೆ ಪರಾರಿಯಾಗಿರುವ ಅಪರಾಧಿಗಳನ್ನು ವಾಪಸ್ ಕರೆತರುವ ಸಲುವಾಗಿ ಕೇಂದ್ರದ ಎನ್‌ಡಿಎ ಸರಕಾರವು 2018ರ ಜುಲೈ 13ರಂದು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯನ್ನು ಜಾರಿಗೆ ತಂದಿದೆ. ಇದರ ಹಿಂದೆ ಬರಲಿರುವ ಚುನಾವಣೆಗಳಲ್ಲಿ ತನ್ನ ಮುಖವನ್ನು ಉಳಿಸಿಕೊಳ್ಳುವ ಪ್ರಯತ್ನವೂ ಇದೆ ಎನ್ನುವುದು ಸ್ಪಷ್ಟ. ಈ ಕಾಯ್ದೆಯಲ್ಲಿ ಅಪರಾಧ ಸಾಬೀತಾಗುವ ಪ್ರಮೇಯವಿಲ್ಲದೆ ಆರೋಪಿಗಳ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾದ ಅವಕಾಶಗಳಿರುವುದರಿಂದ ಈ ಕಾಯ್ದೆಯು ಇಂತಹ ಅಪರಾಧಗಳನ್ನು ಎಸಗದಂತೆ ಅಪರಾಧಿಗಳು ಹಿಂದೆಸರಿಯುವಂತೆ ಮಾಡುತ್ತದೆ ಎಂದು ಸರಕಾರವು ಕೊಚ್ಚಿಕೊಳ್ಳುತ್ತಿದೆ. ಆದರೆ ಹಾಗೆ ಆಗಬಹುದಾದ ಸಾಧ್ಯತೆಗಳು ಮಾತ್ರ ತುಂಬಾ ವಿರಳವಾಗಿದೆ. ಕಾಯ್ದೆಯು ಭಾವೀ ಅಪರಾಧಿಗಳಲ್ಲಿ ಶಿಕ್ಷಾಭೀತಿಯನ್ನು ಮೂಡಿಸುವಷ್ಟು ಪರಿಣಾಮಕಾರಿಯೂ ಆಗಿಲ್ಲ. ಮೇಲಾಗಿ ದೋಷಾರೋಪಕ್ಕೆ ಗುರಿಯಾಗಿರುವವರು ಸಿವಿಲ್ ಕೇಸುಗಳಲ್ಲಿ ಆಸ್ತಿಪಾಸ್ತಿಗಳ ಮೇಲೆ ತಮ್ಮ ಹಕ್ಕುದಾರಿಕೆಯನ್ನು ಪ್ರತಿಪಾದಿಸುವ ಹಕ್ಕನ್ನು ನಿರಾಕರಿಸುವ ವಿವೇಚನಾ ಅಧಿಕಾರವನ್ನು ನ್ಯಾಯಾಧೀಶರಿಗೆ ಕೊಡುವ ಈ ಕಾಯ್ದೆಯ ಅಂಶವು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿರುವುದರಿಂದ ಅದನ್ನು ಸಾಂವಿಧಾನಿಕವಾಗಿಯೂ ಪ್ರಶ್ನಿಸಬಹು ದಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಆಳವಾದ ಬಿಕ್ಕಟ್ಟುಗಳಿಗೆ ತೋರಿಕೆಯ ಶಾಸನಗಳನ್ನು ಮಾಡುವುದರ ಮೂಲಕ ಪ್ರತಿಕ್ರಿಯಿಸುವ ಸರಕಾರಗಳ ಪ್ರವೃತ್ತಿಯ ಹಿಂದಿನ ತಿಳವಳಿಕೆಯು ಆತಂಕಕಾರಿಯಾಗಿದೆ.
  ಆರ್ಥಿಕ ಅಪರಾಧಗಳನ್ನು ಮಾಡಿ ಪರಾರಿಯಾಗುವವರನ್ನು ಹಣಿಯಲು ಬೇಕಾದ ಹಲವಾರು ಕ್ರಮಗಳು ಈಗಾಗಲೇ ಭಾರತದ ಕಾನೂನುಗಳಲ್ಲಿ ಅಸ್ತಿತ್ವದಲ್ಲಿವೆ. ಹಾಗಿದ್ದಲ್ಲಿ ಅಂತಹ ಅಪರಾಧಗಳನ್ನು ತಡೆಗಟ್ಟಲು ಇಲ್ಲದಿದ್ದ ಯಾವ ಅಧಿಕಾರದ ಕೊರತೆಯನ್ನು ಈ ಶಾಸನವು ಪೂರೈಸುತ್ತಿದೆ? ಕಾನೂನು ವ್ಯವಹಾರಗಳ ಇಲಾಖೆಯ ಪ್ರಕಾರ 2002ರ ಕಪ್ಪುಹಣವನ್ನು ಬಿಳಿ ಮಾಡುವ (ಮನಿ ಲಾಂಡರಿಂಗ್) ಅಪರಾಧವನ್ನು ತಡೆಗಟ್ಟುವ ಕಾಯ್ದೆಯ ರೀತಿ ಅಸ್ತಿತ್ವದಲ್ಲಿರುವ ಇತರ ಆರ್ಥಿಕ ಅಪರಾಧಗಳನ್ನು ತಡೆಗಟ್ಟುವ ಕಾಯ್ದೆಗಳು ಈಗಲೂ ಅಪರಾಧವನ್ನು ಎಸಗಿದವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ನೀಡುವುದು ನಿಜವಾದರೂ, ಅವು ದೇಶ ತೊರೆದು ಓಡಿಹೋಗುವ ಅವಕಾಶವನ್ನು ತಡೆಗಟ್ಟುವ ಅವಕಾಶವನ್ನು ಹೊಂದಿರಲಿಲ್ಲ. ಇದೀಗ ಈ ಹೊಸ ಕಾಯ್ದೆಯಲ್ಲಿ ಆ ಅವಕಾಶವನ್ನು ಮಾಡಲಾಗಿದೆ ಎನ್ನುವುದು ಸರಕಾರದ ಸಮರ್ಥನೆ. ಆದರೆ ಅದನ್ನು ಹೇಗೆ ಸಾಧಿಸಬಹುದೆಂಬುದನ್ನು ಈ ಕಾಯ್ದೆಯು ಸ್ಪಷ್ಟಪಡಿಸುವುದಿಲ್ಲ. ಪೂರ್ವಾನ್ವಯವಾಗಿ ಜಾರಿಯಾಗಲಿರುವ ಈ ಹೊಸ ಕಾನೂನು, ಅದರ ಅನುಪಸ್ಥಿತಿಯಲ್ಲಿ ನಡೆಯುತ್ತಲೇ ಹೋದ ಮಹಾಮೋಸಗಳ ಸರಣಿಯನ್ನು ತಡೆಗಟ್ಟಬಲ್ಲ ಶಕ್ತಿಯನ್ನು ಹೊಂದಿಲ್ಲ. ಇಂತಹ ಅಪರಾಧಗಳನ್ನು ಎಸಗುವ ಮೋದಿಗಳು ಮತ್ತು ಮಲ್ಯಾಗಳು ರಾಜಕೀಯ ನಾಯಕರೊಂದಿಗೆ ಆತ್ಮೀಯ ಸಂಬಂಧಗಳನ್ನಿಟ್ಟುಕೊಂಡಿರುವಂಥ ಪ್ರಭಾವಶಾಲಿಗಳೇ ಆಗಿರುತ್ತಾರೆ. ಆದ್ದರಿಂದ ಮುಂದೆಯೂ ಸಹ ಇಂತಹ ಕಾನೂನುಗಳು ನಿಜಕ್ಕೂ ಪ್ರಭಾವಶಾಲಿಯಾಗಿರುತ್ತವೆಯೇ ಎಂಬುದು ಅನುಮಾನವೇ. ಆರ್ಥಿಕ ಅಪರಾಧಗಳ ಮೂಲಕ ಗಳಿಸಿಕೊಂಡ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆಂಬ ಭೀತಿಯೊಂದೇ ಅಂಥವರನ್ನು ಭಾರತದ ಕಾನೂನಿಗೆ ಶರಣಾಗುವಂತೆ ಮಾಡುತ್ತದೆ ಎಂದು ಊಹಿಸುವುದು ಅವಿವೇಕತನವಷ್ಟೆ.
ತಮ್ಮ ಪಕ್ಷಪಾತಿತನವನ್ನು ಮುಚ್ಚಿಕೊಳ್ಳಲು ಈ ಹಿಂದಿನ ಸರಕಾರಗಳು ಸಹ ಪದೇ ಪದೇ ಈ ರೀತಿಯ ಹೊಸ ಹೊಸ ಕಾನೂನುಗಳನ್ನು ಮಾಡುವ ಆಟವನ್ನು ಆಡಿದ್ದಾರೆ. ತಮ್ಮ ವೋಟ್‌ಬ್ಯಾಂಕ್ ಆಗಿರುವ ದೇಶದ ಬಡಜನತೆ ಎದುರು ಸರಕಾರದ ಸದುದ್ದೇಶವನ್ನು ಪ್ರದರ್ಶಿಸಲು ಇಂತಹ ಕಾನುನುಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಈ ಕಾನೂನುಗಳು ಜಾರಿಯಾಗಲು ಬೇಕಾದ ವಿಧಿ-ವಿಧಾನಗಳನ್ನು ಮಾತ್ರ ಈ ಎಲ್ಲಾ ರಾಜಕೀಯ ಪಕ್ಷಗಳ ಆಶ್ರಯದಾತರಾಗಿರುವ ದೊಡ್ಡ ದೊಡ್ಡ ಉದ್ಯಮಪತಿಗಳ ಹಿತಾಸಕ್ತಿಗಳನ್ನು ಮುಕ್ಕಾಗದೆ ನೋಡಿಕೊಳ್ಳುವ ರೀತಿ ರೂಪಿಸಲಾಗುತ್ತದೆ. ವಿದೇಶಾಂಗ ಇಲಾಖೆ ಮತ್ತು ದೇಶದ ತನಿಖಾ ಸಂಸ್ಥೆಗಳ ನಡುವಿನ ಗುಪ್ತ ಸಹಕಾರದ ಕಾರಣದಿಂದಾಗಿಯೇ ನೀರವ್ ಮೋದಿಯ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆಯು ವಿಳಂಬಗೊಂಡು ಅವರು ಪರಾರಿಯಾಗುವುದನ್ನು ತಡೆಗಟ್ಟಲಾಗಲಿಲ್ಲ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಲೇ ಬೇಕು. ವಿಜಯ ಮಲ್ಯರ ಪ್ರಕರಣದಲ್ಲಿ ಅವರು ಅಪರಾಧ ಮಾರ್ಗದಿಂದ ಗಳಿಸಿದ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಮಾಡಿದಾಗ ಅದನ್ನು ಕೊಂಡುಕೊಳ್ಳಲು ಯಾರೂ ಬರದಂತೆ ನೋಡಿಕೊಳ್ಳಲಾಯಿತು. ಈ ಹೊಸ ಕಾನೂನಿನಲ್ಲಿ ಇಂತಹ ವ್ಯವಸ್ಥಿತ ಅಡೆತಡೆಗಳನ್ನು ಮೀರಬಲ್ಲ ಯಾವುದೇ ಅವಕಾಶಗಳಿಲ್ಲ. ವಾಸ್ತವವಾಗಿ ಸರಕಾರಕ್ಕೆ ಮತ್ತು ಜನರಿಗೆ ಮೋಸ ಮಾಡಿ ಪರಾರಿಯಾಗುವುದನ್ನು ತಡೆಗಟ್ಟಲು ವಿಫಲವಾಗಿರುವುದರಲ್ಲಿ ಸರಕಾರವು ವಹಿಸಿದ ಸಕ್ರಿಯ ಪಾತ್ರವನ್ನು ಸಾರ್ವಜನಿಕರ ಕಣ್ಣಿನಿಂದ ಮರೆಮಾಚುವ ಸಲುವಾಗಿಯೇ ಹೊಸ ಕಾನೂನುಗಳನ್ನು ಸೃಷ್ಟಿಸುವ ತಂತ್ರದ ಮೊರೆ ಹೋಗಲಾಗುತ್ತದೆ. ಈ ಕಾನೂನೂ ಸಹ ಈಗಾಗಲೇ ಅಸ್ತಿತ್ವದಲ್ಲಿರುವ ಹಲವಾರು ಭ್ರಷ್ಟಾಚಾರ ವಿರೋಧಿ ಕಾನೂನುಗಳ ಕಂತೆಗೆ ಮತ್ತೊಂದು ಸೇರ್ಪಡೆಯಷ್ಟೆ.
ಹೀಗೆ ತಲೆಮರೆಸಿಕೊಂಡು ಪರಾರಿಯಾಗಿರುವ ಅಪರಾಧಿ ಉದ್ಯಮಿಗಳು ಕೊಡದೇ ಬಾಕಿ ಉಳಿಸಿಕೊಂಡಿರುವ ಸಾಲಗಳಿಂದಾಗಿಯೇ ಸಾರ್ವಜನಿಕ ಬ್ಯಾಂಕುಗಳ ನಿಷ್ಕ್ರಿಯ ಆಸ್ತಿ ಅರ್ಥಾತ್ ವಸೂಲಾಗದ ಸಾಲದ ಮೊತ್ತ ಹೆಚ್ಚಾಗುತ್ತಿದೆ. ಈ ಬಿಕ್ಕಟ್ಟಿನ್ನು ಬಗೆಹರಿಸಲು ರೂಪುಗೊಂಡ ನೀತಿಗಳು ಜಡವಾಗಿವೆ. ಸಾರ್ವಜನಿಕ ಬ್ಯಾಂಕುಗಳಲ್ಲಿ ಹೆಚ್ಚುತ್ತಲೇ ಇರುವ ಅಸಾಧಾರಣ ಮೊತ್ತದ ವಸೂಲಾಗದ ಸಾಲಗಳ ವಿದ್ಯಮಾನವನ್ನು ಅಲ್ಪಕಾಲಿಕ ಬೆಳವಣಿಗೆಯೆಂದು ಇನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಬ್ಯಾಂಕುಗಳ ನಿರ್ದೇಶಕರನ್ನು ನೇಮಕ ಮಾಡುವಲ್ಲಿ, ಉನ್ನತ ಅಧಿಕಾರಿಗಳನ್ನು ನೇಮಕ ಮಾಡುವಲ್ಲಿ, ಮತ್ತು ಸಮರ್ಥ ನಿರ್ವಹಣೆಯ ಹೆಸರಿನಲ್ಲಿ ಬಂಡವಾಳ ಹೂಡಿಕೆಯ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಸರಕಾರವು ಈ ಬ್ಯಾಂಕುಗಳಲ್ಲಿ ತನಗಿರುವ ಶೇರುದಾರನ ಹಕ್ಕನ್ನು ಬಳಸಿಕೊಂಡು ಹೇಗೆ ಬೇಕಾಬಿಟ್ಟಿಯಾಗಿ ತೀರ್ಮಾನವನ್ನು ತೆಗೆದುಕೊಂಡಿದೆ ಎಂಬುದಕ್ಕೆ ಈ ಪ್ರಕರಣಗಳು ನಿದರ್ಶನವಾಗಿದೆ. ಅಷ್ಟು ಮಾತ್ರವಲ್ಲದೆ ಇದು ರಿಸರ್ವ್ ಬ್ಯಾಂಕಿನ ಹಣಕಾಸು ಮತ್ತು ಬ್ಯಾಂಕುಗಳ ನಿಯಂತ್ರಣ ಅಧಿಕಾರವನ್ನು ಪರೋಕ್ಷವಾಗಿ ಉಲ್ಲಂಘಿಸುತ್ತದೆ. ಏಕೆಂದರೆ ರಾಜಕೀಯ ಉದ್ದೇಶಗಳಿಂದ ನೇಮಿಸಲ್ಪಟ್ಟ ಬ್ಯಾಂಕುಗಳ ಉನ್ನತಾಧಿಕಾರಿಗಳು ರಿಸರ್ವ್ ಬ್ಯಾಂಕಿನ ನಿಯಮಾವಳಿಗಳನ್ನು ಉಲ್ಲಂಘಿಸಿ ಸರಕಾರದ ಹಿತಾಸಕ್ತಿಗೆ ಪೂರಕವಾಗಿ ಬಗ್ಗುತ್ತಾರೆ. ಸಾರ್ವಜನಿಕ ಹಣದ ಭಾರೀ ದುರ್ಬಳಕೆಯ ವಿರುದ್ಧ ವ್ಯಕ್ತವಾಗುತ್ತಿರುವ ತೀಕ್ಷ್ಣವಾದ ಪ್ರತಿರೋಧದ ಹಿನ್ನೆಲೆಯಲ್ಲಿ ತನ್ನ ನೀತಿನಿರೂಪಣಾ ದೋಷವನ್ನು ಮುಚ್ಚಿಟ್ಟುಕೊಳ್ಳಲು ಮತ್ತು 2019ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಎರಡೂ ಶಾಸನಗಳನ್ನು ಒಂದಾದ ನಂತರ ಒಂದೆಂಬಂತೆ ಅಲ್ಪಾವಧಿಯಲ್ಲಿ ಜಾರಿ ಮಾಡಿದೆ. ಬ್ಯಾಂಕಿಂಗ್ ನಿಯಮಾವಳಿಗಳ ತಿದ್ದುಪಡಿ ಸುಗ್ರೀವಾಜ್ಞೆಯನ್ನು 2018ರ ಮೇ ತಿಂಗಳಲ್ಲಿ ಜಾರಿ ಮಾಡಿದರೆ ಅದಾದ ಎರಡೇ ತಿಂಗಳಲ್ಲಿ ಈ ಹೊಸ ಕಾನೂನನ್ನು ಜಾರಿ ಮಾಡಿದೆ. ಆದರೆ ದೇಶದ ಬ್ಯಾಂಕಿಂಗ್ ಮತ್ತು ಹಣಕಾಸು ನಿರ್ವಹಣೆಯಲ್ಲಿ ಬಂದಿರುವ ಮೂಲಭೂತ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡಾಗ ಸರಕಾರವು ಜಾರಿ ಮಾಡಿರುವ ಈ ಎರಡೂ ಕಾನೂನುಗಳು ಎಷ್ಟು ಅಸಂಬದ್ಧವಾಗಿವೆ ಎಂದು ಅರ್ಥವಾಗುತ್ತದೆ. ದೇಶದಲ್ಲಿ ನಡೆಯುತ್ತಿರುವ ಹಣಕಾಸು ಭ್ರಷ್ಟಾಚಾರವು ಯಾವುದೋ ಒಂದು ಸರಕಾರವು ಸೃಷ್ಟಿಸಿರುವುದಲ್ಲ; ಇದು ಉದಾರೀಕರಣದ ಯುಗದಲ್ಲಿ ಜಾರಿ ಮಾಡಲಾದ ನವಉದಾರವಾದಿ ನೀತಿಗಳ ಮುಂದುವರಿದ ಭಾಗವೇ ಆಗಿದೆ. ಉದಾರೀಕರಣ ಮತ್ತು ನಿಯಂತ್ರಣಮುಕ್ತ ನೀತಿಗಳ ಕಾರಣದಿಂದಾಗಿ ಖಾಸಗಿ ಕ್ಷೇತ್ರ ಚಾಲಿತ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಸರಕಾರವು ಭಿನ್ನ ಪಾತ್ರವನ್ನು ವಹಿಸುತ್ತಿದೆ. ಕಿರಿದಾಗುತ್ತಿರುವ ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸಲು ದೊಡ್ಡ ಉದ್ಯಮಪತಿಗಳಿಗೆ ಅನಿರ್ಬಂಧಿತ ಪರವಾನಿಗೆಯನ್ನು ನೀಡಲಾಗುತ್ತಿದೆ ಮತ್ತು ಪ್ರಭುತ್ವದ ನೀತಿಗಳಲ್ಲಿ ಖಾಸಗಿ ಹಿತಾಸಕ್ತಿಗಳು ಬೆರೆತುಹೋಗುವುದು ಸಾಮಾನ್ಯವಾಗುತ್ತಿವೆ. ಸರಕಾರದ ಇಂತಹ ಉದ್ಯಮ ಸ್ನೇಹಿ ನೀತಿಗಳಿಂದಾಗಿ ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸಿ ಕೆಲವೇ ಕೆಲವರ ಲಾಭಕ್ಕೆ ಅನುಕೂಲವಾಗುವಂತೆ ಸರಕಾರವೇ ಮುಂದೆ ನಿಂತು ಸಾರ್ವಜನಿಕ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಅಪಾರವಾದ ಭ್ರಷ್ಟಾಚಾರಗಳಿಗೂ ಎಡೆಮಾಡಿಕೊಟ್ಟ ಹಲವಾರು ಉದಾಹರಣೆಗಳು ಕಣ್ಣಮುಂದಿವೆ. ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿರುವ ಈ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಬಂಧಗಳನ್ನು ಅರ್ಥಮಾಡಿಕೊಳ್ಳದೆ ರೂಪಿಸುವ ಯಾವುದೇ ಭ್ರಷ್ಟಾಚಾರ ವಿರೋಧಿ ರಣತಂತ್ರಗಳು ಆಳವಾದ ಬೇರುಗಳನ್ನು ಹೊಂದಿರುವ ಈ ವಿದ್ಯಮಾನವನು್ನ ತಡೆಗಟ್ಟಲು ಸಾಧ್ಯವಿಲ್ಲ.
ಸದ್ಯಕ್ಕಂತೂ ಎಲ್ಲಾ ಭ್ರಷ್ಟಾಚಾರ ವಿರೋಧಿ ಆಂದೋಲನಗಳಲ್ಲೂ ಎದ್ದು ಕಾಣುವುದು ನೈತಿಕ ಹಳಹಳಿಯಷ್ಟೆ. ಆಳುವ ಸರಕಾರಗಳು ತತ್‌ಕ್ಷಣದ ಪ್ರತಿಕ್ರಿಯೆಯಲ್ಲಿ ರೂಪಿಸುವ ಕಾನೂನುಗಳು ಸಹ ಅದಕ್ಕೆ ತಕ್ಕನಾಗಿಯೇ ಇರುತ್ತವೆ. ಭ್ರಷ್ಟಾಚಾರದ ಬಗೆಗಿನ ನೈತಿಕ ಧೋರಣೆಯು ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಬಹುದಾದರೂ, ಭ್ರಷ್ಟಾಚಾರದ ಬುಡಮುಟ್ಟ ನಿರ್ಮೂಲನೆ ಮಾಡಬೇಕೆಂಬ ಅವರ ಉದ್ದೇಶಗಳನ್ನು ಸಾಧಿಸುವಲ್ಲಿ ವಿಫಲಗೊಳ್ಳುತ್ತವೆ. ಆದ್ದರಿಂದಲೇ ಪ್ರಾರಂಭದಲ್ಲಿ ಕಂಡುಬರುವ ಚಳವಳಿಯ ಅತ್ಯುತ್ಸಾಹಗಳು ಕ್ರಮೆೀಣ ಕಡಿಮೆಯಾಗುತ್ತಾ ಹೋಗುತ್ತವೆ.
ಕೃಪೆ: Economic and Political Weekly

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ