ತಲಾ 45 ಲಕ್ಷ ರೂ.ಗಳಿಗೆ 300 ಮಕ್ಕಳನ್ನು ಅಮೆರಿಕಕ್ಕೆ ಮಾರಿದ!

Update: 2018-08-16 06:54 GMT

ಮುಂಬೈ, ಆ.16: ಅಂತಾರಾಷ್ಟ್ರೀಯ ಮಕ್ಕಳ ಮಾರಾಟ ಜಾಲವನ್ನು ಬಯಲುಗೊಳಿಸಿದ ಮುಂಬೈ ಪೊಲೀಸರು, ಈ ದಂಧೆಯ ಸೂತ್ರಧಾರ ರಾಜುಭಾಯ್ ಗಮ್ಲೇವಾಲಾ ಎಂಬಾತನನ್ನು ಬಂಧಿಸಿದ್ದಾರೆ. ಈತ ಭಾರತದಿಂದ ಅಮೆರಿಕಕ್ಕೆ ಸುಮಾರು 300 ಮಕ್ಕಳನ್ನು ಮಾರಾಟ ಮಾಡಿದ್ದಾನೆ ಎನ್ನಲಾಗಿದೆ.

2007ರಿಂದ ಈ ದಂಧೆ ಆರಂಭಿಸಿದ ಆರೋಪಿ, ಅಮೆರಿಕದ ಗ್ರಾಹಕರಿಂದ ತಲಾ 45 ಲಕ್ಷ ರೂಪಾಯಿ ಪಡೆದು 300 ಮಕ್ಕಳನ್ನು ಮಾರಾಟ ಮಾಡಿದ್ದಾನೆ. ಕಳ್ಳ ಸಾಗಣೆಯಾದ ಮಕ್ಕಳ ನಂತರದ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ದಂಧೆಯ ಕೆಲ ಸದಸ್ಯರನ್ನು ಕಳೆದ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು.

ಗುಜರಾತ್‌ನ ಆರರಿಂದ ಹನ್ನೊಂದು ವರ್ಷ ವಯಸ್ಸಿನ ಬಡಕುಟುಂಬಗಳ ಮಕ್ಕಳನ್ನು ಈತ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ. "ಮಕ್ಕಳ ಆರೈಕೆ ಕಷ್ಟಕರ ಎಂಬ ಕಾರಣಕ್ಕಾಗಿ ಪೋಷಕರು ಹಾಗೂ ಪಾಲಕರು ಮಕ್ಕಳನ್ನು ಮಾರಾಟ ಮಾಡುತ್ತಿದ್ದರು" ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕದ ಗ್ರಾಹಕರಿಂದ ಬೇಡಿಕೆ ಬಂದ ತಕ್ಷಣ ಗಮ್ಲೇವಾಲಾ (50) ತನ್ನ ಗ್ಯಾಂಗ್‌ಗೆ ಸೂಚನೆ ನೀಡಿ ಮಕ್ಕಳನ್ನು ಮಾರಾಟ ಮಾಡಲು ಮುಂದಾಗುವ ಬಡ ಕುಟುಂಬಗಳನ್ನು ಪತ್ತೆ ಮಾಡುವಂತೆ ಸೂಚಿಸುತ್ತಿದ್ದ. ಜತೆಗೆ ಮಕ್ಕಳ ಪಾಸ್‌ಪೋರ್ಟ್ ಅನ್ನು ಬಾಡಿಗೆಗೆ ನೀಡುವ ಕುಟುಂಬಗಳನ್ನೂ ಪತ್ತೆ ಮಾಡುತ್ತಿದ್ದರು. ಮಕ್ಕಳ ಮುಖಚರ್ಯೆ ಹೊಂದುವ ಫೋಟೊ ಹೊಂದಿದ ಪಾಸ್‌ಪೋರ್ಟ್ ಆಯ್ಕೆ ಮಾಡಲಾಗುತ್ತಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ಮಗುವಿನ ಪೋಷಕರಿಗೆ ಹಣ ನೀಡಿ ಮಕ್ಕಳನ್ನು ಅಮೆರಿಕಕ್ಕೆ ಕರೆದೊಯ್ಯಲಾಗುತ್ತಿತ್ತು. ಪಾಸ್‌ಪೋರ್ಟ್‌ನಲ್ಲಿರುವ ಚಿತ್ರವನ್ನೇ ಹೋಲುವಂತೆ ಮಾಡುವ ಸಲುವಾಗಿ ಮಕ್ಕಳಿಗೆ ಮೇಕಪ್ ಮಾಡಲಾಗುತ್ತಿತ್ತು. ಮಕ್ಕಳನ್ನು ಒಯ್ಯುವ ವ್ಯಕ್ತಿ ಅಮೆರಿಕದಿಂದ ವಾಪಸ್ಸಾದ ತಕ್ಷಣ ಪಾಸ್‌ಪೋರ್ಟನ್ನು ಮೂಲ ವಾರಸುದಾರರಿಗೆ ನೀಡಲಾಗುತ್ತಿತ್ತು. ಆದರೆ ಪಾಸ್‌ಪೋರ್ಟ್‌ಗೆ ಹೇಗೆ ಇಮಿಗ್ರೇಶನ್ ಸ್ಟ್ಯಾಂಪ್ ಮಾಡಲಾಗುತ್ತಿತ್ತು ಎನ್ನುವುದು ಸ್ಪಷ್ಟವಾಗಿಲ್ಲ.

ವೆರ್ರೋವಾ ಸೆಲೂನ್‌ನಲ್ಲಿ ಇಬ್ಬರು ಮಕ್ಕಳಿಗೆ ಮೇಕಪ್ ಮಾಡುತ್ತಿರುವ ಬಗ್ಗೆ ಬಾಲಿವುಡ್ ತಾರೆ ಪ್ರೀತಿ ಸೂದ್‌ಗೆ ಸ್ನೇಹಿತರೊಬ್ಬರಿಂದ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ ಆಧಾರದಲ್ಲಿ ವಿಚಾರಣೆ ನಡೆಸಿದಾಗ ಈ ಪ್ರಕರಣ ಬಯಲಾಗಿದೆ.

ಸೂದ್ ನೀಡಿದ ಮಾಹಿತಿ ಆಧಾರದಲ್ಲಿ ನಿವೃತ್ತ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಒಬ್ಬರ ಪುತ್ರ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಪ್ರಕರಣದ ಬಗ್ಗೆ ಮತ್ತಷ್ಟು ತನಿಖೆ ನಡೆಸಿದ ಪೊಲೀಸರು ಇದೀಗ ಇಡೀ ಜಾಲ ಬಯಲುಗೊಳಿಸಿ, ಸೂತ್ರಧಾರನನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News