ವಾಜಪೇಯಿಯ ನೆಚ್ಚಿನ ಗುಲಾಬ್ ಜಾಮೂನ್ ತಪ್ಪಿಸಿದ ಮಾಧುರಿ ದೀಕ್ಷಿತ್ !

Update: 2018-08-16 17:47 GMT

ಹೊಸದಿಲ್ಲಿ, ಆ .16: ಅಟಲ್ ಬಿಹಾರಿ ವಾಜಪೇಯಿ ಖಾದ್ಯಪ್ರಿಯರು. ಅದರಲ್ಲೂ ಸಿಹಿತಿಂಡಿ, ಸಮುದ್ರಉತ್ಪನ್ನಗಳ ಖಾದ್ಯಗಳು ಎಂದರೆ ಪಂಚಪ್ರಾಣವಾಗಿತ್ತು. ಸಿಗಡಿಯಿಂದ ತಯಾರಿಸಿದ ಖಾದ್ಯ ಅತ್ಯಂತ ಅಚ್ಚುಮೆಚ್ಚಾಗಿತ್ತು.

  ಅಟಲ್‌ಗೆ ಪಥ್ಯಾಹಾರವನ್ನು ವೈದ್ಯರು ಶಿಫಾರಸು ಮಾಡಿದ್ದರೂ ಒಮ್ಮೆ ಸರಕಾರಿ ಔತಣಕೂಟವೊಂದರಲ್ಲಿ ಅವರು ಅಲ್ಲಿದ್ದ ಖಾದ್ಯ ಕೌಂಟರ್‌ನತ್ತ ತೆರಳಿ ತಮಗಿಷ್ಟ ಬಂದ (ಜಾಮೂನು) ಆಹಾರವನ್ನು ಸವಿಯಲು ಮುಂದಾಗಿದ್ದರು ಎಂದು ಹಿರಿಯ ಪತ್ರಕರ್ತ ರಶೀದ್ ಕಿದ್ವಾಯಿ ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

ಆಗ ತಕ್ಷಣ ಎಚ್ಚೆತ್ತ ಅಟಲ್ ಜೊತೆಗಿದ್ದವರು ಮಾಜಿ ಪ್ರಧಾನಿಗೆ ಹಿಂದಿ ಸಿನಿಮಾ ನಟಿ ಮಾಧುರಿ ದೀಕ್ಷಿತ್‌ರನ್ನು ಪರಿಚಯಿಸುತ್ತಾರೆ. ಇಬ್ಬರೂ ಲೋಕಾಭಿರಾಮವಾಗಿ ಸಿನೆಮ ಕ್ಷೇತ್ರದ ಕುರಿತು ಮಾತನಾಡುತ್ತಿದ್ದಾಗ ಅಲ್ಲಿದ್ದ ಸರ್ವರ್‌ಗಳು ಖಾದ್ಯ ಕೌಂಟರ್‌ನಲ್ಲಿದ್ದ , ವಾಜಪೇಯಿಯವರ ಪಥ್ಯಾಹಾರದ ಲಿಸ್ಟ್‌ನಲ್ಲಿ ನಿಷೇಧಿಸಲ್ಪಟ್ಟಿದ್ದ ವಸ್ತುಗಳನ್ನು ಅಲ್ಲಿಂದ ಸ್ಥಳಾಂತರಿಸಿದ್ದರು ಎಂದು ರಶೀದ್ ಹೇಳುತ್ತಾರೆ.

ಪ್ರವಾಸದಲ್ಲಿದ್ದಾಗ ವಾಜಪೇಯಿ ಸದಾ ಸ್ಥಳೀಯ ಖಾದ್ಯಗಳನ್ನು ಬಯಸುತ್ತಿದ್ದರು . ಕೋಲ್ಕತಾದಲ್ಲಿದ್ದರೆ ಪುಚ್ಕಾಸ್, ಹೈದರಾಬಾದ್‌ನಲ್ಲಿದ್ದರೆ ಬಿರಿಯಾನಿ ಮತ್ತು ಹಲೀಮ್, ಲಕ್ನೊದಲ್ಲಿದ್ದರೆ ಗಲೋಟಿ ಕಬಾಬ್. ಮಸಾಲಾ ಟೀಯೊಂದಿಗೆ ಪಕೋಡಾ ಮೆಲ್ಲುವುದು ಅವರಿಗೆ ಅತ್ಯಂತ ಪ್ರಿಯವಾಗಿತ್ತು . ಪ್ರತಿಯೊಂದು ಊಟವನ್ನೂ ಸವಿದು ತಿನ್ನುವುದು ಅವರ ಪದ್ದತಿಯಾಗಿತ್ತು ಎಂದು ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ. ಓರ್ವ ಅತ್ಯುತ್ತಮ ಬಾಣಸಿಗನಾಗಿದ್ದ ವಾಜಪೇಯಿ ಮನೆಗೆ ಬಂದ ಅತಿಥಿಗಳಿಗೆ ಆಹಾರ ಸಿದ್ಧಪಡಿಸಿ ಬಡಿಸುತ್ತಿದ್ದರು ಎಂದು ಹಿರಿಯ ಪತ್ರಕರ್ತೆಯೊಬ್ಬರು ತಿಳಿಸಿದ್ದಾರೆ. ಸಚಿವ ಸಂಪುಟದ ಸಭೆ ನಡೆಯುತ್ತಿದ್ದಾಗ ಮಸಾಲೆಯಲ್ಲಿ ಹುರಿದ ಕಡಲೆಕಾಯಿ ತಿನ್ನುವುದು ಅವರ ಖಯಾಲಿ. ಕಡಲೆಕಾಯಿಯ ಪ್ಲೇಟ್ ಕಾಲಿಯಾದ ತಕ್ಷಣ ಅದನ್ನು ತುಂಬಿಸುವಂತೆ ಸೂಚಿಸುತ್ತಿದ್ದರು. ಬಿಜೆಪಿ ನಾಯಕ ಲಾಲ್‌ಜಿ ಟಂಡನ್ ವಾಜಪೇಯಿವರಿಗೆ ಲಕ್ನೊದಿಂದ ಕಬಾಬ್‌ಗಳನ್ನು ತರುತ್ತಿದ್ದರೆ, ಕೇಂದ್ರ ಸಚಿವ ವಿಜಯ್ ಗೋಯೆಲ್ ಹಳೆದಿಲ್ಲಿ ಪ್ರದೇಶದಿಂದ ಬಟಾಟೆ ಚಿಪ್ಸ್ ಹಾಗೂ ಚಾಟ್ಸ್‌ಗಳನ್ನು ತರುತ್ತಿದ್ದರು.

ವೆಂಕಯ್ಯ ನಾಯ್ಡು ಆಂಧ್ರಪ್ರದೇಶದ ಸಿಗಡಿ ಮೀನುಗಳನ್ನು ತರುತ್ತಿದ್ದರು. ಅವರು ಪ್ರವಾಸದ ಸಂದರ್ಭ ತಾನು ಕಂಡ ಅತ್ಯಂತ ನಿರಾಳ ಪ್ರಧಾನಿಯಾಗಿದ್ದರು. ಟೆನ್ಷನ್ ಬದಿಗಿಡಿ, ಹೊಟ್ಟೆತುಂಬಾ ತಿನ್ನಿ ಎಂಬುದು ಅವರ ಸಿದ್ಧಾಂತವಾಗಿತ್ತು ಎಂದು ಪತ್ರಕರ್ತರೊಬ್ಬರು ತಿಳಿಸಿದ್ದಾರೆ. ಅಸ್ವಸ್ಥರಾಗಿದ್ದರೂ ಸಮೋಸ ಮತ್ತು ಗೋಡಂಬಿಗಳನ್ನು ಸದಾ ಇಷ್ಟಪಡುತ್ತಿದ್ದರು ವಾಜಪೇಯಿ. ಅವರೊಬ್ಬ ಸರಳ ವ್ಯಕ್ತಿಯಾಗಿದ್ದರು. ಆದ್ದರಿಂದಲೇ ಎಲ್ಲರೂ ಅವರನ್ನು ಮೆಚ್ಚುತ್ತಿದ್ದರು ಎಂದವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News