ವಾಜಪೇಯಿಯನ್ನು ಕಾಡಿದ 13

Update: 2018-08-16 18:47 GMT

ವಾಜಪೇಯಿಯವರನ್ನು 13 ಸಂಖ್ಯೆ ತೀವ್ರವಾಗಿ ಕಾಡಿತ್ತು. 3 ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿಜೆಪಿ ಮುಖಂಡ ಅಟಲ್ ವಾಜಪೇಯಿಯವರ ಮಟ್ಟಿಗಂತೂ ಇದು ಒಂದಲ್ಲ, ಎರಡು ಬಾರಿ ನಿಜವಾಗಿದೆ.
1996ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದಾಗ ಅಂದಿನ ರಾಷ್ಟ್ರಪತಿ ಶಂಕರ್‌ದಯಾಳ್ ಶರ್ಮ ಅವರು ಸರಕಾರ ರಚಿಸುವಂತೆ ವಾಜಪೇಯಿವರಿಗೆ ಆಹ್ವಾನ ನೀಡಿದರು. ಭಾರತದ 10ನೇ ಪ್ರಧಾನಿಯಾಗಿ ವಾಜಪೇಯಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಇತರ ಪಕ್ಷಗಳ ನೆರವು ಪಡೆದು ಬಹುಮತ ಸಾಬೀತು ಪಡಿಸಲು ಬಿಜೆಪಿ ವಿಫಲವಾದಾಗ 13 ದಿನಗಳ ಬಳಿಕ ವಾಜಪೇಯಿ ರಾಜೀನಾಮೆ ನೀಡಬೇಕಾಯಿತು. ಸಂಸತ್ತಿನಲ್ಲಿ ಪ್ರಭಾವೀ ಭಾಷಣ ಮಾಡಿದ ಬಳಿಕ ವಾಜಪೇಯಿ ಾಷ್ಟ್ರಪತಿಗೆ ರಾಜೀನಾಮೆ ಸಲ್ಲಿಸಿದರು.


ಬಳಿಕ 1996ರಿಂದ 1998ರ ಅವಧಿಯಲ್ಲಿ ಸಂಯುಕ್ತ ರಂಗದ ಎರಡು ಸರಕಾರ ಸ್ಥಾಪನೆಯಾಗಿ ಪತನವಾಯಿತು. ಆಗ ಸಂಸತ್ತನ್ನು ವಿಸರ್ಜಿಸಿ ಹೊಸ ಚುನಾವಣೆ ನಡೆಸಲಾಯಿತು. 1998ರಲ್ಲಿ ಮತ್ತೊಮ್ಮೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಈ ಹಂತದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸರಕಾರ ರಚನೆಯಾಗಿ ವಾಜಪೇಯಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಂಸತ್ತಿನಲ್ಲಿ ಎನ್‌ಡಿಎ ಬಹುಮತ ಸಾಬೀತುಪಡಿಸಿತು. ಆದರೆ ಈ ಸರಕಾರ 13 ತಿಂಗಳಲ್ಲೇ ಪತನಗೊಂಡಿತು. 1999ರ ಮಧ್ಯ ಭಾಗದಲ್ಲಿ ಜಯಲಲಿತಾ ನಾಯಕತ್ವದ ಎಐಎಡಿಎಂಕೆ ವಾಜಪೇಯಿ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆಯಿತು. ಆಗ ನಡೆದ ವಿಶ್ವಾಸಮತ ಯಾಚನೆಯಲ್ಲಿ ವಾಜಪೇಯಿ ಸರಕಾರ ಕೇವಲ ಒಂದು ಮತದ ಅಂತರದಿಂದ ವಿಫಲವಾಯಿತು. ಆದರೆ ವಿಕ್ಷಗಳೂ ಬಹುಮತ ಒಗ್ಗೂಡಿಸಲು ವಿಫಲವಾದಾಗ ಲೋಕಸಭೆಯನ್ನು ವಿಸರ್ಜಿಸಿ ಮತ್ತೊಮ್ಮೆ ಚುನಾವಣೆ ನಡೆಸಲಾಯಿತು.
ಹೊಸದಾಗಿ ನಡೆದ ಚುನಾವಣೆಯಲ್ಲಿ ಎನ್‌ಡಿಎ ಸ್ಪಷ್ಟ ಬಹುಮತ ಪಡೆಯಿತು ಮತ್ತು ವಾಜಪೇಯಿ ಮೂರನೇ ಬಾರಿಗೆ ಪ್ರಧಾನಿಯಾದರು. 2004ರಲ್ಲಿ ಪೂರ್ಣಾವಧಿ ಪೂರೈಸಿದ ವಾಜಪೇಯಿ ಸರಕಾರ, ಕೇಂದ್ರ ದಲ್ಲಿ ಪೂರ್ಣಾವಧಿ ಅಧಿಕಾರ ನಡೆಸಿದ ಪ್ರಪ್ರಥಮ ಕಾಂಗ್ರೆಸ್ಸೇತರ ಸರಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ