ಹಾಸಿಗೆ ಹುಣ್ಣುಗಳು: ಕಾರಣಗಳು ಮತ್ತು ಲಕ್ಷಣಗಳು

Update: 2018-08-17 09:42 GMT

 ಅನಾರೋಗ್ಯಪೀಡಿತರಾಗಿ ಹಾಸಿಗೆಗೆ ಅಂಟಿಕೊಂಡಿರುವ ರೋಗಿಗಳಿಗೆ ಈ ಹುಣ್ಣು ಒಂದು ಶಾಪ ಎಂದು ಹೇಳಬಹುದು. ಬೆಡ್‌ಸೋರ್ ಅಥವಾ ಹಾಸಿಗೆ ಹುಣ್ಣು ಚರ್ಮದ ಮೇಲೆ ಸುದೀರ್ಘ ಒತ್ತಡ,ಘರ್ಷಣೆ,ಗಾಯ ಅಥವಾ ಇವೆಲ್ಲವುಗಳ ಒಟ್ಟುಗೂಡಿಕೆಯಿಂದ ಉಂಟಾಗುವ ವೃಣವಾಗಿದೆ. ಇದು ಶರೀರದಲ್ಲಿ ಎಲುಬುಗಳಿರುವ ಜಾಗದಲ್ಲಿ ಚರ್ಮದಲ್ಲಿ ಉಂಟಾಗುವ ತೆರೆದ ಗಾಯವಾಗಿದೆ. ಸಾಮಾನ್ಯವಾಗಿ ಈ ವೃಣಗಳು ಬೆನ್ನು,ಪೃಷ್ಠ,ಬೆನ್ನುಮೂಳೆಯ ತುದಿ ಮತ್ತು ಕಣಕಾಲುಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಲಕ್ಷಣಗಳು

 ಹಾಸಿಗೆ ಹುಣ್ಣು ನಾಲ್ಕು ಹಂತಗಳನ್ನು ಹೊಂದಿದೆ ಮತ್ತು ಅದರ ಲಕ್ಷಣಗಳು ಪ್ರತಿ ಹಂತದಲ್ಲಿಯೂ ವಿಭಿನ್ನವಾಗಿರುತ್ತವೆ. ಚರ್ಮವು ತೆರೆದುಕೊಳ್ಳುವುದು ಮತ್ತು ಮುಟ್ಟಿದಾಗ ಚರ್ಮವು ನಿಸ್ತೇಜವಾಗದಿರುವುದು,ಪೀಡಿತ ಭಾಗದಲ್ಲಿ ಸೋಂಕು ಮತ್ತು ಸುತ್ತಲಿನ ಭಾಗಕ್ಕೆ ಹೋಲಿಸಿದರೆ ಬಿರುಸಾದ ಅಥವಾ ಮೃದುವಾದ ಚರ್ಮ ಇದರ ಸಾಮಾನ್ಯ ಲಕ್ಷಣಗಳಾಗಿವೆ.

ಮೊದಲ ಹಂತದಲ್ಲಿ ಹುಣ್ಣು ಇನ್ನೂ ತೆರೆದುಕೊಂಡಿರುವುದಿಲ್ಲ ಮತ್ತು ಚರ್ಮವು ಒಡೆದಿರುವುದಿಲ್ಲ. ಈ ಸ್ಥಿತಿಯು ಯಾತನಾದಾಯಕವಾಗಿರಬಹುದು. ಚರ್ಮದ ಸ್ವರೂಪವನ್ನು ಅವಲಂಬಿಸಿ ಚರ್ಮವು ಬಣ್ಣ ಕಳೆದುಕೊಳ್ಳಬಹುದು. ಮೊದಲ ಹಂತದಲ್ಲಿ ವೃಣದ ಜಾಗವು ಗಟ್ಟಿಯಾಗಿರಬಹುದು ಇಲ್ಲವೇ ಮೃದುವಾಗಿರಬಹುದು.

ಎರಡನೇ ಹಂತದಲ್ಲಿ ಚರ್ಮವು ತೆರೆದುಕೊಂಡು ಹುಣ್ಣು ಕಾಣಿಸಿಕೊಳ್ಳುತ್ತದೆ. ಹುಣ್ಣಿನ ಸುತ್ತಲಿನ ಜಾಗವು ಮೃದುವಾಗಿದ್ದು,ನೋನ್ನುಂಟು ಮಾಡುತ್ತದೆ. ಈ ಹಂತದಲ್ಲಿ ಹುಣ್ಣು ಕೀವಿನಿಂದ ತುಂಬಿರಬಹುದು ಮತ್ತು ಗಾಯದ ಸುತ್ತ ಮೃತ ಅಂಗಾಂಶಗಳು ಆವರಿಸಿಕೊಂಡಿರುತ್ತವೆ ಮತ್ತು ಚರ್ಮಕ್ಕೆ ಹಾನಿಯಾಗಿರುತ್ತದೆ.

ಮೂರನೇ ಹಂತದಲ್ಲಿ ಸ್ಥಿತಿಯು ಇನ್ನಷ್ಟು ಹದಗೆಡುತ್ತದೆ. ಹುಣ್ಣು ಚರ್ಮದ ಆಳಕ್ಕೆ ಹರಡಿಕೊಳ್ಳುತ್ತದೆ ಮತ್ತು ಕೊಬ್ಬಿನ ಪದರವು ಕುಳಿಯಂತೆ ಕಾಣಿಸುತ್ತದೆ. ಈ ಹಂತದಲ್ಲಿ ಹುಣ್ಣಿನಲ್ಲಿ ಕೀವಾಗಿರುತ್ತದೆ.ನಾಲ್ಕನೇ ಹಂತದಲ್ಲಿ ಹುಣ್ಣು ಇನ್ನೂ ಆಳಕ್ಕಿಳಿದು ಮೂಳೆಗಳು ಮತ್ತು ಸ್ನಾಯುಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಆಳದಲ್ಲಿರುವ ಅಂಗಾಂಶಗಳು,ನರಗಳು ಮತ್ತು ಕೀಲುಗಳಿಗೂ ಹಾನಿಯಾಗಬಹುದು.

ಕಾರಣಗಳು

ಹಾಸಿಗೆ ಹುಣ್ಣು ಅಥವಾ ಒತ್ತಡದ ಹುಣ್ಣು ಹೆಸರೇ ಸೂಚಿಸುವಂತೆ ಚರ್ಮದ ಮೇಲಿನ ಒತ್ತಡದಿಂದ ಉಂಟಾಗುತ್ತದೆ. ಬಹಳ ದಿನಗಳವರೆಗೆ ಶರೀರದ ಒಂದೇ ಭಾಗದ ಮೇಲೆ ಮಲಗಿದರೆ ಆ ಜಾಗದಲ್ಲಿಯ ಚರ್ಮವು ಒಡೆಯುತ್ತದೆ. ಕೀಲುಗಳು ಮತ್ತು ಮೃದ್ವಸ್ಥಿಗಳ ಬಳಿಯ ಚರ್ಮವು ಹೆಚ್ಚು ತೆಳುವಾಗಿರುವುದರಿಂದ ಹಿಮ್ಮಡಿ,ಪೃಷ್ಠ,ಬೆನ್ನುಮೂಳೆಯ ತುದಿಯ ಭಾಗ ಮತ್ತು ಕಣಕಾಲುಗಳು ಸುಲಭವಾಗಿ ಈ ಪಿಡುಗಿಗೆ ಗುರಿಯಾಗುತ್ತವೆ. ಚರ್ಮವನ್ನು ಒರಟಾದ ಮೇಲ್ಮೈಗೆ ಬಲವಾಗಿ ಉಜ್ಜಿದರೆ ಅದೂ ಹುಣ್ಣಿಗೆ ಕಾರಣವಾಗಬಹುದು.

ಹಾಸಿಗೆ ಹುಣ್ಣು ಯಾರಲ್ಲಿ ಕಾಣಿಸಿಕೊಳ್ಳುತ್ತದೆ?

ಹಾಸಿಗೆ ಅಥವಾ ಗಾಲಿಖುರ್ಚಿಗೆ ಅಂಟಿಕೊಂಡಿರುವವರು,ವೃದ್ಧರು,ಶಿಥಿಲ ಚರ್ಮವನ್ನು ಹೊಂದಿರುವವರು,ತಮ್ಮ ಶರೀರದ ಭಾಗಗಳನ್ನು ಚಲಿಸಲು ಇನ್ನೊಬ್ಬರ ನೆರವು ಅಗತ್ಯವಾಗಿರುವವರು,ಸಾಕಷ್ಟು ಪೌಷ್ಟಿಕಾಂಶಗಳನ್ನು ಸೇವಿಸದಿರುವವರು, ಸಾಕಷ್ಟು ನೀರು ಕುಡಿಯದವರು ಈ ಹುಣ್ಣುಗಳಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ರೋಗಿಗಳು,ವೃದ್ಧರು ಮತ್ತು ಇನ್ನೊಬ್ಬರ ನೆರವಿಲ್ಲದೆ ಶರೀರದ ಚಲನವಲನ ಅಸಾಧ್ಯವಾಗಿರುವವರಲ್ಲಿ ಹಾಸಿಗೆ ಹುಣ್ಣುಗಳಾಗುವುದನ್ನು ತಡೆಯಲು ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ.

ಹಾಸಿಗೆ ಹುಣ್ಣುಗಳನ್ನು ಹೇಗೆ ನಿರ್ಧರಿಸಲಾಗುತ್ತದೆ?

 ಹುಣ್ಣಿನ ಆಳ ಮತ್ತು ಗಾತ್ರ,ಚರ್ಮದ ಬಣ್ಣ,ಹುಣ್ಣಿನಿಂದ ಯಾವ ಅಂಗಾಂಶಗಳಿಗೆ ಹಾನಿಯಾಗಿದೆ,ಚರ್ಮದ ಹಾನಿಯ ಮತ್ತು ಮೃತ ಅಂಗಾಂಶಗಳ ಪ್ರಮಾಣ, ಹುಣ್ಣಿನಿಂದ ರಕ್ತ ಸೋರುತ್ತಿದೆಯೇ ಮತ್ತು ಕೆಟ್ಟ ವಾಸನೆ ಬರುತ್ತಿದೆಯೇ ಅಥವಾ ಸೋಂಕು ಉಂಟಾಗಿದೆಯೇ ಎಂಬ ಅಂಂಶಗಳನ್ನು ಪರೀಕ್ಷಿಸಿ ವೈದ್ಯರು ರೋಗನಿರ್ಣಯ ಮಾಡುತ್ತಾರೆ.

ಚಿಕಿತ್ಸೆ

ಹಾಸಿಗೆ ಹುಣ್ಣಿಗೆ ಚಿಕಿತ್ಸೆಯು ಅದು ಯಾವ ಹಂತದಲ್ಲಿದೆ ಎನ್ನುವುದನ್ನು ಅವಲಂಬಿಸಿರುತ್ತದೆ. ಅದಕ್ಕೆ ಶಸ್ತ್ರಚಿಕಿತ್ಸೆ ಅಥವಾ ಔಷಧಿ ಅಗತ್ಯವಾಗಬಹುದು.

 ವೈದ್ಯರು ಗಾಯದಿಂದ ಮೃತ ಅಂಗಾಂಶಗಳನ್ನು ತೆಗೆಯಲು ‘ಡಿಬ್ರೈಡ್‌ಮೆಂಟ್’ ಪ್ರಕ್ರಿಯೆಯನ್ನು ನಡೆಸಬಹುದು. ಗಾಯದ ಮೇಲೆ ಧೂಳು ಅಥವಾ ಕೊಳೆ ಇರದಂತೆ ಎಚ್ಚರಿಕೆ ವಹಿಸುವುದು ಅದು ಮಾಗಲು ಮುಖ್ಯವಾಗಿದೆ. ಹಾಸಿಗೆ ಹುಣ್ಣುಗಳನ್ನು ತಡೆಯಲು ವಾಟರ್ ಬೆಡ್‌ಗಳನ್ನು ಬಳಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News